ಮತದಾನದ ಶಕ್ತಿಯೇ ನಮ್ಮ ಪ್ರಜಾಪ್ರಭುತ್ವದ ಅಡಿಪಾಯ-ಸಿದ್ದರಾಮಯ್ಯ

ನವದೆಹಲಿ: ಮತದಾನದ ಶಕ್ತಿಯೇ ನಮ್ಮ ಪ್ರಜಾಪ್ರಭುತ್ವದ ಅಡಿಪಾಯ ಎಂದು ಮುಖ್ಯ ಮಂತ್ರಿ ಸುದ್ದರಾಮಯ್ಯ ಹೇಳಿದರು.

ದೆಹಲಿಯಲ್ಲಿ ಮತಗಳ್ಳತನದ ಬಗ್ಗೆ ನಡೆದ ಲಿಯಲ್ಲಿ ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ,
ನಮ್ಮ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ನೀಡಿರುವ ಅತ್ಯಂತ ಪವಿತ್ರ ಹಕ್ಕು ಮತದಾನದ ಹಕ್ಕನ್ನು ರಕ್ಷಿಸಲು ಬಂದಿದ್ದೇವೆ ಎಂದು ತಿಳಿಸಿದರು.

ಒಬ್ಬ ರೈತ ತನ್ನ ಮಕ್ಕಳ ಭವಿಷ್ಯವನ್ನು ರೂಪಿಸಲು, ಒಬ್ಬ ಕಾರ್ಮಿಕ ತನ್ನ ಘನತೆಯನ್ನು ಕಾಯ್ದುಕೊಳ್ಳಲು, ಒಬ್ಬ ಯುವಕ ತನ್ನ ಕನಸುಗಳನ್ನು ಸಾಕಾರಗೊಳಿಸಲು ಮತ್ತು ಒಂದು ರಾಷ್ಟ್ರ ತನ್ನ ಸಾಮೂಹಿಕ ಇಚ್ಛೆಯನ್ನು ಘೋಷಿಸಲು ಇರುವ ಸಾಧನವೇ ಮತದಾನ ಎಂದು ಬಣ್ಣಿಸಿದರು.

ಇಂದು ಬಿಜೆಪಿ ಸರ್ಕಾರವು ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ದುರುಪಯೋಗ ಸೇರಿದಂತೆ ವಿವಿಧ ಮತಗಳ್ಳತನ ವಿಧಾನಗಳ ಮೂಲಕ ಈ ಪವಿತ್ರ ಶಕ್ತಿಯನ್ನು ಕಸಿಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಒಂದು ಬಾರಿಯಲ್ಲ, ಎರಡಲ್ಲ, ಪದೇ ಪದೇ ಕದಿಯಲಾಗುತ್ತಿದೆ. ಅದಕ್ಕಾಗಿ ಭಾರತದ ಜನತೆ ಇಲ್ಲಿಗೆ ಬಂದು ಸಾಕು, ಮತಳ್ಳತನವನ್ನು ನಿಲ್ಲಿಸಿ, ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಹೇಳುತ್ತಿದ್ದಾರೆ.ಇತಿಹಾಸ ನಮಗೆ ಕಲಿಸಿದ ಪಾಠವೆಂದರೆ, ಸರ್ವಾಧಿಕಾರವು ಬೀದಿಗಳಲ್ಲಿ ಬಂದೂಕುಗಳಿಂದ ಪ್ರಾರಂಭವಾಗುವುದಿಲ್ಲ. ಅದು ಸಂಸ್ಥೆಗಳ ದುರ್ಬಳಕೆ ಹಾಗೂ ನಿಧಾನವಾಗಿ ವ್ಯವಸ್ಥೆಗಳನ್ನು ಅಗತ್ಯಕ್ಕೆ ತಕ್ಕಂತೆ ತಿರುಚುವ ಮತ್ತು ಅಂತಿಮವಾಗಿ, ಚುನಾವಣೆಗಳ ಕಳ್ಳತನದಿಂದ ಪ್ರಾರಂಭವಾಗುತ್ತದೆ
ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ರಕ್ಷಿಸುವಂತೆ ನಟಿಸುತ್ತಲೇ, ಅದನ್ನು ಬುಡಮೇಲು ಮಾಡುವುದನ್ನೇ ಪ್ರಪಂಚದಾದ್ಯಂತದ ಸರ್ವಾಧಿಕಾರಿ ಆಡಳಿತಗಳು ಮೂಲ ತಂತ್ರವನ್ನಾಗಿಸಿದೆ ಇಂದು ಬಿಜೆಪಿ ಇದನ್ನೇ ಮಾಡುತ್ತಿದೆ ಎಂದು ಸಿಎಂ ಹೇಳಿದರು.

ಕದ್ದ ಮತಗಳಿಂದ ಅಧಿಕಾರಕ್ಕೆ ಬಂದ ಸರ್ಕಾರವು ಪ್ರಜಾಸತ್ತಾತ್ಮಕ ಸರ್ಕಾರವಲ್ಲ ಎಂಬುದು ಸುಸ್ಪಷ್ಟ. ಅದು ಜನರನ್ನು ಹೆದರಿಸುವ, ಜನಾದೇಶವನ್ನು ತಿರುಚುವ, ಮತ್ತು ವಂಚನೆಯ ಮೂಲಕ ಮಾತ್ರ ಬದುಕುಳಿಯುವ ಸರ್ಕಾರ. ಇದು, ಪ್ರಜಾಪ್ರಭುತ್ವಗಳು ಚುನಾವಣಾ ದೌರ್ಜನ್ಯಗಳ ಮಟ್ಟಕ್ಕೆ ಇಳಿಯುವ ರೀತಿಯಾಗಿದೆ. ಇಂದು ಬಿಜೆಪಿಯ ‘ಮತಗಳ್ಳತನ’ವು ಸ್ವಾತಂತ್ರ್ಯಾನಂತರದ ನಮ್ಮ ಗಣರಾಜ್ಯಕ್ಕೆ ಎದುರಾದ ಅತಿದೊಡ್ಡ ಬೆದರಿಕೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂತಹ ಕ್ಲಿಷ್ಟಕರ ಸಮಯದಲ್ಲಿ , ಅಸಾಧಾರಣ ಧೈರ್ಯದಿಂದ ನಿಂತಿರುವ ಏಕೈಕ ನಾಯಕ ರಾಹುಲ್ ಗಾಂಧಿಯವರು. ರಾಹುಲ್ ಗಾಂಧಿಯವರು ಹೊಂದಿಕೆಯಾಗದ ಮತದಾರರ ಪಟ್ಟಿಗಳನ್ನು, ಬೂತ್ ಮಟ್ಟದಲ್ಲಿ ತಿರುಚಿದ ಅಂಶಗಳನ್ನು ಮತ್ತು ವ್ಯವಸ್ಥಿತ, ಸಂಘಟಿತ ಮತಗಳ್ಳತನ’ವನ್ನು ತನಿಖೆಯ ಮೂಲಕ ಬಯಲು ಮಾಡಿದರು ಎಂದು ಸಿದ್ದು ಹೇಳಿದರು.

ಕರ್ನಾಟಕದ ಮಹದೇವಪುರ ಮತ್ತು ಆಳಂದ ವಿಧಾನಸಭಾ ಕ್ಷೇತ್ರಗಳಲ್ಲಿ, ‘ವೋಟ್ ಚೋರಿ’ ಕೇವಲ ಆರೋಪವಾಗಿರದೇ, ಜೀವಂತ ವಾಸ್ತವ ಎಂದು ರಾಹುಲ್ ಗಾಂಧಿಯವರು ಗಂಭೀರ ಅಕ್ರಮಗಳನ್ನು ಉದಾಹರಣೆಗಳಾಗಿ ಎತ್ತಿ ತೋರಿಸಿದ್ದಾರೆ ಎಂದು ತಿಳಿಸಿದರು.

ನಿನ್ನೆ ಒಂದು ವಿಶೇಷ ತನಿಖಾ ತಂಡ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ಇದರಲ್ಲಿ ಮಾಜಿ ಬಿಜೆಪಿ ಶಾಸಕರು ಮತ್ತು ಅವರ ಪುತ್ರ ಸೇರಿದಂತೆ ಏಳು ವ್ಯಕ್ತಿಗಳು ಆಳಂದ ಕ್ಷೇತ್ರದಲ್ಲಿ ಸುಮಾರು 6,000 ಮತದಾರರ ಹೆಸರುಗಳನ್ನು ತೆಗೆದುಹಾಕಲು ಪ್ರಯತ್ನಿಸಿದ ಆರೋಪವಿದೆ. ಇದು “ಮತಗಳತನ’ ವಿರುದ್ಧದ ಹೋರಾಟದಲ್ಲಿ ಮಹತ್ವದ ಕಾನೂನು ಹೆಜ್ಜೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಇಂದು ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಕೋಟ್ಯಂತರ ಭಾರತೀಯರು ನಮ್ಮ ಪ್ರಜಾಪ್ರಭುತ್ವವನ್ನು ಕದಿಯಲು ನಾವು ಬಿಡುವುದಿಲ್ಲ ಎಂದು ಹೇಳುವ ಮನವಿಪತ್ರದ ಮೇಲೆ ಸಹಿ ಹಾಕಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಿಮ್ಮ ಮತವನ್ನು ರಕ್ಷಿಸಿ,
ನಿಮ್ಮ ಪ್ರಜಾಪ್ರಭುತ್ವವನ್ನು ರಕ್ಷಿಸಿ,
ನಿಮ್ಮ ಭವಿಷ್ಯವನ್ನು ರಕ್ಷಿಸಿ ಎಂದು ದೇಶದ ಜನರಿಗೆ ಕರೆ ನೀಡಿದರು
ಮತಗಳ್ಳತನದ ಹಿಂಬಾಗಿಲಿನ ಮೂಲಕ ಫ್ಯಾಸಿಸಂ ಭಾರತವನ್ನು ಪ್ರವೇಶಿಸಲು ಬಿಡುವುದಿಲ್ಲ ಎಂದು ನಾವು ಘೋಷಿಸಬೇಕಿದೆ.

ನಾವು ಕೋಟ್ಯಂತರ ಭಾರತೀಯರ ಸಹಿಯನ್ನು ಇಲ್ಲಿ ಹಸ್ತಾಂತರಿಸುತ್ತಿದ್ದೇವೆ, ಇದು ಕದ್ದ ಯಾವುದೇ ಚುನಾವಣೆಗಿಂತ ಬಲವಾದ ನೈತಿಕ ಜನಾದೇಶವಾಗಿದೆ ಎಂದು ತಿಳಿಸಿದರು.
ಒಂದು ರಾಷ್ಟ್ರವಾಗಿ, ಒಂದು ಜನರಾಗಿ, ಒಂದು ಪ್ರಜಾಪ್ರಭುತ್ವವಾಗಿ ಏಳೋಣ.
ಮತಗಳ್ಳತನ’ ಭಾರತಕ್ಕೆ ಬೆದರಿಕೆಯೊಡ್ಡಿದಾಗ, ಜನರು ಅದರ ವಿರುದ್ಧ ತಿರುಗಿ ನಿಂತು ಗೆದ್ದರು ಎಂದು ಇತಿಹಾಸದಲ್ಲಿ ದಾಖಲಾಗಲಿ ಸಿಎಂ ಆಶಿಸಿದರು.

ಮತದಾನದ ಶಕ್ತಿಯೇ ನಮ್ಮ ಪ್ರಜಾಪ್ರಭುತ್ವದ ಅಡಿಪಾಯ-ಸಿದ್ದರಾಮಯ್ಯ Read More

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರೂಪು-ರೇಷೆ ರೂಪಿಸಿ ಯದುವೀರ್‌

ನವದೆಹಲಿ: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇದನ್ನು ಸರಿದಾರಿಗೆ ತರಲು ಸೂಕ್ತ ಕಾನೂನು ರೂಪು-ರೇಷೆ ರೂಪಿಸಲು ಸಂಬಂಧಪಟ್ಟ ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಒತ್ತಾಯಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಚಳಿಗಾಲದ ಸಂಸತ್‌ ಅಧಿವೇಶನದ ಶುಕ್ರವಾರದ ಕಲಾಪದಲ್ಲಿ ಮಾತನಾಡಿದ ಯದುವೀರ್, ಮೈಸೂರಿನಲ್ಲಿ ಎಂಡಿಎಂಎ ವಶ ಹಾಗೂ ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆದಿರುವುದು, ಪೊಲೀಸ್‌ ಠಾಣೆ ಮೇಲೆ ದಾಳಿ ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು.

ಕಳೆದ ಬಾರಿಯ ಕಲಾಪದಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿದ್ದೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈಗಾಗಲೇ ಹಲವಾರು ಪ್ರಕರಣಗಳು ವರದಿಯಾಗಿದ್ದು, ಈ ಬಗ್ಗೆ ಕರ್ನಾಟಕ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ನನ್ನ ಕ್ಷೇತ್ರದ ಪ್ರಮುಖ ನಗರವಾದ ಮೈಸೂರಿನಲ್ಲಿ ಬೃಹತ್‌ ಎಂಡಿಎಂಎ ತಯಾರಿಕಾ ಘಟಕವನ್ನು ಪತ್ತೆ ಹಚ್ಚಲಾಗಿತ್ತು. ಇದನ್ನು ಕೂಡ ಪತ್ತೆ ಹಚ್ಚಿದ್ದು ನೆರೆ ರಾಜ್ಯದ ಪೊಲೀಸರು. ನಮ್ಮ ಪರಿಸ್ಥಿತಿ ಹೀಗಿದೆ. ಇಂತಹ ನಿರಂತರ ಘಟನೆಗಳಿಂದ ಸ್ಥಳೀಯ ಆರ್ಥಿಕತೆ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಎಂದು ಸಂಸದರು ತಿಳಿಸಿದರು.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪಾರಂಪರಿಕ ಹಾಗೂ ಐತಿಹಾಸಿಕ ನಗರವಾದ ಹಂಪಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ, ಇದರಿಂದ ಸ್ಥಳೀಯ ವ್ಯಾಪಾರ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಯದುವೀರ್‌ ಹೇಳಿದರು.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವಾಲಯವು ಪ್ರವಾಸೋದ್ಯಮ ಕ್ಷೇತ್ರಕ್ಕಾಗಿ ಹೆಚ್ಚಿನ ಭದ್ರತೆ ಹಾಗೂ ಸೌಲಭ್ಯ ಒದಗಿಸುವ ರೀತಿಯಲ್ಲಿ ನೀತಿ ರೂಪಿಸಬೇಕಾದ ಅಗತ್ಯವಿದೆ ಈ‌ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರವಾಸೋದ್ಯಮ ತಾಣಗಳಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲು ಸಹ ಕ್ರಮ ಕೈಗೊಳ್ಳಬೇಕು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂಬ ಭರವಸೆ ಇದೆ ಎಂದು ಯದುವೀರ್‌ ಒಡೆಯರ್‌ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರೂಪು-ರೇಷೆ ರೂಪಿಸಿ ಯದುವೀರ್‌ Read More

ಮುಸ್ಲಿಮರ ತುಷ್ಟೀಕರಣಕ್ಕಾಗಿ ಕಾಂಗ್ರೆಸ್‌ ವಂದೇ ಮಾತರಂ ಹಾಡನ್ನು ಒಡೆಯಿತು:ಮೋದಿ

ನವದೆಹಲಿ: ಮುಸ್ಲಿಮರ ತುಷ್ಟೀಕರಣಕ್ಕಾಗಿ ಕಾಂಗ್ರೆಸ್‌ ವಂದೇ ಮಾತರಂ ಹಾಡನ್ನು ಒಡೆದು ತುಂಡು ಮಾಡಿತು ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ.

ವಂದೇ ಮಾತರಂ ಹಾಡಿಗೆ 150 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಸೋಮವಾರ ಚರ್ಚೆ ಆರಂಭಿಸಿದ ಮೋದಿ, ವಂದೇ ಮಾತರಂ ವಿರುದ್ಧ ಜಿನ್ನಾ ನಡೆಸಿದ ಪ್ರತಿಭಟನೆಯನ್ನು ನೆಹರು ಬೆಂಬಲಿಸಿದರು. ಕೊನೆಗೆ ಕಾಂಗ್ರೆಸ್ ಮುಸ್ಲಿಂ ಲೀಗ್‌ಗೆ ತಲೆಬಾಗಿ ತುಂಡು ಮಾಡಿತು ಎಂದು ವಾಗ್ದಾಳಿ ನಡೆಸಿದರು.

ವಂದೇ ಮಾತರಂ ವಿರುದ್ಧ ಮುಸ್ಲಿಂ ಲೀಗ್ ನೆಹರು ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿತು. ಮೊಹಮ್ಮದ್ ಅಲಿ ಜಿನ್ನಾ ಅದರ ವಿರುದ್ಧ ಘೋಷಣೆಗಳನ್ನು ಕೂಗಿದರು. ಆಗಿನ ಕಾಂಗ್ರೆಸ್ ಮುಖ್ಯಸ್ಥ ಜವಾಹರಲಾಲ್ ನೆಹರು ಜಿನ್ನಾ ಹೇಳಿಕೆಗಳನ್ನು ಖಂಡಿಸಲು ಹೋಗಲೇ ಇಲ್ಲ, ವಂದೇ ಮಾತರಂ ಬಗ್ಗೆ ತಮ್ಮ ಮತ್ತು ಪಕ್ಷದ ನಿಷ್ಠೆಯನ್ನು ವ್ಯಕ್ತಪಡಿಸುವ ಬದಲು ಜಿನ್ನಾ ವಿರೋಧಿಸಿದ ಕೇವಲ ಐದು ದಿನಗಳ ನಂತರ ವಂದೇ ಮಾತರಂ ಪರಿಶೀಲಿಸಲು ಆರಂಭಿಸಿದರು.

ಜಿನ್ನಾ ವಂದೇ ಮಾತರಂಗೆ ವಿರೋಧ ವ್ಯಕ್ತಪಡಿಸಿದ ನಂತರ ಪಂಡಿತ್ ಜವಾಹರಲಾಲ್ ನೆಹರು ಅವರು ಸುಭಾಷ್ ಚಂದ್ರ ಬೋಸ್ ಅವರಿಗೆ ಪತ್ರ ಬರೆದು, ವಂದೇ ಮಾತರಂನ ಹಿನ್ನೆಲೆಯನ್ನು ತಾವು ಓದಿರುವುದಾಗಿ ಮತ್ತು ಅದು ಮುಸ್ಲಿಮರನ್ನು ಕೆರಳಿಸಬಹುದು, ಕಿರಿಕಿರಿಯಾಗಬಹುದು ಎಂದು ಭಾವಿಸಿರುವುದಾಗಿ ಹೇಳಿದರು.

ವಂದೇ ಮಾತರಂ ಪರಿಶೀಲನೆಗೆ ಒಳಪಡಿಸಿದ ನಂತರ ದೇಶದ ದುರ್ಭಾಗ್ಯ ಎಂಬಂತೆ ಕಾಂಗ್ರೆಸ್ ಮುಸ್ಲಿಂ ಲೀಗ್‌ ಒತ್ತಡಕ್ಕೆ ತಲೆಬಾಗಿ ಹಾಡನ್ನು ಕತ್ತರಿಸಿತು, ಕಾಂಗ್ರೆಸ್ ತುಷ್ಟೀಕರಣದ ಒತ್ತಡದಲ್ಲಿ ವಂದೇ ಮಾತರಂ ಅನ್ನು ವಿಭಜಿಸಿತು ಎಂದು ಮೋದಿ ಪುಂಕಾನುಪುಂಕವಾಗಿ‌ ಕಿಡಿಕಾರಿದರು.

ಮುಸ್ಲಿಮರ ತುಷ್ಟೀಕರಣಕ್ಕಾಗಿ ಕಾಂಗ್ರೆಸ್‌ ವಂದೇ ಮಾತರಂ ಹಾಡನ್ನು ಒಡೆಯಿತು:ಮೋದಿ Read More

ದೆಹಲಿ ಕೆಂಪು ಕೋಟೆಯ ಮೆಟ್ರೊ ನಿಲ್ದಾಣದ ಬಳಿ ಕಾರು ಸ್ಫೋಟ:8 ಬಲಿ

ನವದೆಹಲಿ: ರಾಷ್ಟ್ರ ರಾಜ್ಯದಾನಿ ದೆಹಲಿಯ ಕೆಂಪು ಕೋಟೆ ಸಮೀಪ ಕಾರೊಂದು ಸ್ಪೋಟಗಂಡಿದ್ದು ಇಡೀ ರಾಷ್ಟ್ರ ಬೆಚ್ಚಿಬಿದ್ದಿದೆ.

ಕೆಂಪುಕೋಟೆ ಸಮೀಪ ಲಾ ಕಿಲಾ ಮೆಟ್ರೊ ನಿಲ್ದಾಣದ ಗೇಟ್‌ ನಂ.1ರಲ್ಲಿ ನಿಲ್ಲಿಸಿದ್ದ ಕಾರ್‌ ಸ್ಫೋಟಗೊಂಡಿದ್ದು,‌8 ಮಂದಿ ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸ್ಥಳಕ್ಕೆ 9 ಅಗ್ನಿಶಾಮಕ ವಾಹನಗಳು ಹಾಗೂ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಬೆಂಕಿಯ‌ ಜ್ವಾಲೆ ಬಹಳ ಎತ್ತರದವರೆಗೆ ಚುಮ್ಮಿದೆ ದಟ್ಟ‌ ಹೊಗೆ ಆವರಿಸಿದೆ.ಇಡೀ ದೆಹಲಿಯ‌ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

‘ಲಾ ಕಿಲಾ ಮೆಟ್ರೊ ನಿಲ್ದಾಣದ ಬಳಿ ಸ್ಫೋಟ ಸಂಭವಿಸಿದೆ,ಸ್ಪೋಟದ ತೀವ್ರ ತೆಗೆ ಅಕ್ಕಪಕ್ಕದಲ್ಲಿದ್ದ ಕಾರುಗಳು, ಇತರ ವಾಹನಗಳಿಗೂ ಬೆಂಕಿ ತಗುಲಿದೆ ಅಕ್ಕ,ಪಕ್ಕದ ಕಟ್ಟಡದ‌ ಗಾಜುಗಳು ಒಡೆದಿದೆ.ಸ್ಥಳದಲ್ಲಿ ಏನಾಗುತ್ತಿದೆ ಎಂಬ ಅರಿವಿಲ್ಲದೆ ಜನ ಗಾಬರಿಯಿಂದ‌ ಓಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು,ಕೆಂಪುಕೋಟೆ ಸುತ್ತಮುತ್ತ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಕಾರು ಸ್ಫೋಟವಾದ ಬೆನ್ನಲ್ಲೇ ದೆಹಲಿಯಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದೆ.

ಸಾವಿನ‌ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಕೆಂಪು ಕೋಟೆಯ ಮೆಟ್ರೊ ನಿಲ್ದಾಣದ ಬಳಿ ಕಾರು ಸ್ಫೋಟ:8 ಬಲಿ Read More

ಹೈಕೋರ್ಟ್​ ಆದೇಶ ಎತ್ತಿ ಹಿಡಿದ ಸುಪ್ರೀಂ:ಮಾಲೂರು ಮರು ಮತ ಎಣಿಕೆಗೆ ಆದೇಶ

ನವದೆಹಲಿ: ಕರ್ನಾಟಕದ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ವಿಚಾರದಲ್ಲಿ ಹೈಕೋರ್ಟ್​ ಮರುಮತ ಎಣಿಕೆಗೆ ಸೂಚನೆ ನೀಡಿದ್ದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ಕರ್ನಾಟಕದ ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ 2023ರ ವಿಧಾನಸಭೆ ಚುನಾವಣೆಯಲ್ಲಿ ನಡೆದಿರುವ ಕೆಲವು ತಪ್ಪುಗಳನ್ನು ಗಮನಿಸಿ, ರಾಜ್ಯ ಹೈಕೋರ್ಟ್ ಮರು ಮತ ಎಣಿಕೆಗೆ ಆದೇಶ ನೀಡಿತ್ತು.

ಆದರೆ, ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಲಾಗಿತ್ತು, ಇದೀಗ ಸುಪ್ರೀಂ ಕೋರ್ಟ್ ಕೂಡ ರಾಜ್ಯ ಹೈಕೋರ್ಟ್​ ಆದೇಶವನ್ನು ಎತ್ತಿಹಿಡಿದಿದೆ. ಮರು ಮತ ಎಣಿಕೆ ಬಗ್ಗೆ ಕಠಿಣ ಸೂಚನೆ ಹೊರಡಿಸಿದೆ.

ಶಾಸಕ ಕೆ.ವೈ‌ ನಂಜೇಗೌಡ ಮತ್ತು ಮಾಜಿ ಶಾಸಕ ಮಂಜುನಾಥಗೌಡ ಮಧ್ಯೆ ಚುನಾವಣೆ ಪ್ರಾರಂಭವಾದಾಗಿನಿಂದಲೂ ಇರಿಸುಮುರಿಸು ಇತ್ತು,ಫಲಿತಾಂಶ ಬಂದಾಗ ಕೇವಲ 248 ಮತಗಳಿಂದ ಗೆದ್ದಿರುವುದಕ್ಕೆ ಭಾರೀ ಆಕ್ಷೇಪಗಳು ಕೇಳಿಬಂದಿದ್ದವು. ಮರು ಮತಎಣಿಕೆ ಬಗ್ಗೆ ಭಾರೀ ಚರ್ಚೆ ನಡೆದಿತ್ತು, ಇದೀಗ ಸುಪ್ರೀಂ ಕೋರ್ಡ್​ ಕೂಡ ಇದನ್ನೇ ಹೇಳಿದೆ.

ಇಂದಿನಿಂದ ನಾಲ್ಕು ವಾರಗಳ ಒಳಗೆ ಮರು ಎಣಿಕೆ ನಡೆಸುವಂತೆ ಸುಪ್ರೀಂ ಕೋರ್ಟ್​ ಸೂಚನೆ ನೀಡಿದೆ. ಈ ನಿರ್ಧಾರವು ಕಾಂಗ್ರೆಸ್ ಅಭ್ಯರ್ಥಿ ಕೆ.ವೈ. ನಂಜೇಗೌಡರ ಭವಿಷ್ಯ ಅಡಗಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ, ಬಿಜೆಪಿಯ ಮಾಜಿ ಶಾಸಕ ಮಂಜುನಾಥಗೌಡ ಬಣ ಗೆಲುವಿನ ನಿರೀಕ್ಷೆಯಲ್ಲಿದೆ.

ಮಾಜಿ ಶಾಸಕರಾಗಿದ್ದ ಮಂಜುನಾಥ್ ಗೌಡರು, ಚುನಾವಣೆಯ ನಂತರ ಮೂರು ದಿನಗಳಲ್ಲಿ ರಾಜ್ಯ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು,ಮತ ಎಣಿಕೆಯ ಸಮಯದಲ್ಲಿ ದಾಖಲೆಯ ದೋಷಗಳು, ತಪ್ಪು ಎಣಿಕೆ, ಮತ್ತು ಅನಧಿಕೃತ ವ್ಯಕ್ತಿಗಳ ಪ್ರವೇಶ ಇದೆ ಎಂದು ಆರೋಪ ಮಾಡಿದ್ದರು.

ಜೊತೆಗೆ, ಎಣಿಕೆಯ ವೀಡಿಯೋ ದಾಖಲೆಗಳನ್ನು ಚುನಾವಣಾ ಅಧಿಕಾರಿಗಳು ಒದಗಿಸಲಾಗಲಿಲ್ಲ ಎಂದು ಆರೋಪಿಸಿದ್ದರು. ಹೈಕೋರ್ಟ್ ಈ ಅರ್ಜಿಯನ್ನು ಪರಿಗಣಿಸಿ, ಚುನಾವಣೆಯನ್ನು ರದ್ದುಗೊಳಿಸಿ ಮರು ಎಣಿಕೆಗೆ ಆದೇಶಿಸಿತು. ಜೊತೆಗೆ, ನಂಜೇಗೌಡರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿ, ನಾಲ್ಕು ವಾರಗಳ ತಡೆಯಾಜ್ಞೆ ನೀಡಿತು.

ಹೈಕೋರ್ಟ್‌ನ ನ್ಯಾಯಾಧೀಶ ಆರ್. ದೇವದಾಸ್ ಅವರ ನೇತೃತ್ವದ ತೀರ್ಪು ವಿಭಾಗವು, ಚುನಾವಣಾ ಸಂಬಂಧಿತ ಕಾನೂನುಗಳನ್ನು ಉಲ್ಲಂಘಿಸಲಾಗಿದೆ ಎಂದು ತೀರ್ಪು ನೀಡಿತು.

ಚುನಾವಣಾ ಆಯುಕ್ತರಿಗೆ ಮತಗಳನ್ನು ಮರು ಎಣಿಕೆ ಮಾಡಿ, ಹೊಸ ಫಲಿತಾಂಶವನ್ನು ಘೋಷಿಸುವಂತೆ ಸೂಚಿಸಿತು. ಆದರೆ, ನಂಜೇಗೌಡರ ವಾದವನ್ನು ಗಮನಿಸಿ, ಈ ಆದೇಶವನ್ನು 30 ದಿನಗಳ ಕಾಲ ನಿಲ್ಲಿಸಿತು. ಈ ಸಮಯದಲ್ಲಿ ನಂಜೇಗೌಡರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬಹುದು ಎಂದು ಅವಕಾಶ ನೀಡಿತು. ಇದರಿಂದ,ಅವರಿಗೆ ಶಾಸಕ ಸ್ಥಾನವು ತಾತ್ಕಾಲಿಕವಾಗಿ ಉಳಿಸಿಕೊಳ್ಳಲು ಸಾಧ್ಯವಾಗಿತ್ತು.

ಸುಪ್ರೀಂ ಕೋರ್ಟ್ ಇದೀಗ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ಇಂದಿನಿಂದ ನಾಲ್ಕು ವಾರಗಳ ಒಳಗೆ ಮರು ಮತ ಎಣಿಕೆ ನಡೆಸುವಂತೆ ಚುನಾವಣಾ ಆಯುಕ್ತರಿಗೆ ಸೂಚನೆ ನೀಡಿದೆ. ಜೊತೆಗೆ, ಹೈಕೋರ್ಟ್‌ನ ಅಸಿಂಧು ಆದೇಶದ ತಡೆಯಾಜ್ಞೆಯನ್ನು ಮುಂದುವರೆಸಿದೆ. ಮರು ಎಣಿಕೆಯ ನಂತರ ಮಾತ್ರ ಶಾಸಕ ಸ್ಥಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದೂ ಆದೇಶಿಸಿದೆ.

ಎಣಿಕೆಯ ವೀಡಿಯೋ ದಾಖಲೆಗಳ ಕೊರತೆಯಿಂದಾಗಿ ಉಂಟಾದ ಗೊಂದಲವನ್ನು ತಪ್ಪಿಸಲು, ಭವಿಷ್ಯದಲ್ಲಿ ಇಂತಹ ದೋಷಗಳನ್ನು ತಡೆಯುವಂತೆಯೂ ಸೂಚಿಸಿದೆ.

ಹೈಕೋರ್ಟ್​ ಆದೇಶ ಎತ್ತಿ ಹಿಡಿದ ಸುಪ್ರೀಂ:ಮಾಲೂರು ಮರು ಮತ ಎಣಿಕೆಗೆ ಆದೇಶ Read More

ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್ ಪ್ರಮಾಣ‌ವಚನ ಸ್ವೀಕಾರ

ನವದೆಹಲಿ: ದೇಶದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್ ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.

ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ರಾಜನಾಥ್‌ ಸಿಂಗ್‌, ನಿರ್ಗಮಿತ ರಾಜ್ಯಪಾಲರಾದ ಜಗದೀಪ್‌ ಧನ್ಕರ್‌ ಸೇರಿದಂತೆ ನೂರಾರು ಗಣ್ಯರ ಸಮ್ಮುಖದಲ್ಲಿ ಶುಕ್ರವಾರ ಬೆಳಗ್ಗೆ 10ಗಂಟೆಗೆ ಸಿ.ಪಿ ರಾಧಾಕೃಷ್ಣನ್ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸಿದರು.

ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ‌ ಬಳಿಕ ಜಗದೀಪ್‌ ಧನಕರ್‌ ಮೊದಲ ಬಾರಿ ಕಾರ‍್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ವಿಶೇಷ.

ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ, ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಪಂಜಾಬ್ ರಾಜ್ಯಪಾಲ ಮತ್ತು ಚಂಡೀಗಢ ಆಡಳಿತಾಧಿಕಾರಿ ಗುಲಾಬ್ ಚಂದ್ ಕಟಾರಿಯಾ, ಜಾರ್ಖಂಡ್‌ ರಾಜ್ಯಪಾಲ ಸಂತೋಷ್ ಗಂಗ್ವಾರ್ ಮತ್ತು ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಸೇರಿದಂತೆ ಹಲವರು ಕಾರ್ಯಕ್ರಮ ದಲ್ಲಿ ಪಾಲ್ಗೊಂಡಿದ್ದರು.

ಉಪರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಸಿ.ಪಿ ರಾಧಾಕೃಷ್ಣನ್ ಗೆಲುವು ಸಾಧಿಸಿದ್ದರು. ಪ್ರತಿಸ್ಪರ್ಧಿ ಸುರ್ದಶನ್‌ ರೆಡ್ಡಿ ಪರಾಭವಗೊಂಡಿದ್ದರು.

ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್ ಪ್ರಮಾಣ‌ವಚನ ಸ್ವೀಕಾರ Read More

ಸುಪ್ರೀಂ ಮಹತ್ವದ ಆದೇಶ:ನಟ ದರ್ಶನ್‌,ಪವಿತ್ರ ಗೌಡ ಜಾಮೀನು ರದ್ದು

ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ ಏಳು ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದು ಮಾಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿ ಶಾಕ್ ನೀಡಿದೆ.

ಗುರುವಾರ ಈ ಕೇಸ್‌ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್.ಮಹಾದೇವನ್ ಅವರಿದ್ದ ಪೀಠವು ಈ ಮಹತ್ವದ ಆದೇಶ ನೀಡಿತು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಸೇರಿ ಇತರೆ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ 2024 ಡಿಸೆಂಬರ್‌ನಲ್ಲಿ ಜಾಮೀನು ನೀಡಿತ್ತು.

ಹೈಕೋರ್ಟ್‌ ಆದೇಶವನ್ನು ಪ್ರಶ್ನೆ ಮಾಡಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.

ಈ ಕುರಿತು ಇತ್ತೀಚೆಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ಜಾಮೀನು ನೀಡಿದ ನಡೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಎಲ್ಲಾ ಪ್ರಕರಣದಲ್ಲಿಯೂ ಇದೇ ರೀತಿ ಕೊಲೆ ಅಪರಾಧಿಗೆ ಜಾಮೀನು ನೀಡಬಹುದೆ ಎಂದು ಕಟುವಾಗಿ ಪ್ರಶ್ನೆ ಮಾಡಿತ್ತು.

ಆರೋಪಿಗಳಾದ ದರ್ಶನ್‌ ತೂಗುದೀಪ,
ಪವಿತ್ರಾ ಗೌಡ,ಆರ್‌ ನಾಗರಾಜು,ಎಂ ಲಕ್ಷ್ಮಣ್,ಅನು ಕುಮಾರ್‌ ಅಲಿಯಾಸ್‌ ಅನು,ಜಗದೀಶ್‌ ಅಲಿಯಾಸ್‌ ಜಗ್ಗ
ಪ್ರದೋಷ್‌ ರಾವ್‌ ಅವರುಗಳು ಮತ್ತೆ ಜೈಲು ಸೇರಬೇಕಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ,ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ಹಿಂಪಡೆಯಲಾಗಿದೆ ಎಂದು ಸುಪ್ರೀಂ ಸ್ಪಷ್ಟವಾಗಿ ತಿಳಿಸಿದೆ.

ಜಾಮೀನು ಮಂಜೂರು ವಿಚಾರಣೆಯ ಮೇಲೆ ಪರಿಣಾಮ ಬೀರುತ್ತದೆ, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು,
ಆರೋಪಿ ಎಷ್ಟೇ ದೊಡ್ಡವರಾಗಿರಲಿ, ಅವರು ಕಾನೂನಿಗಿಂತ ದೊಡ್ಡವರಲ್ಲ, ಯಾರೂ ಕಾನೂನಿಗಿಂತ ಮೇಲಿಲ್ಲ, ಯಾರೂ ಕಾನೂನಿಗಿಂತ ಕೆಳಗಿಲ್ಲ. ನಾವು ಕಾನೂನನ್ನು ಪಾಲಿಸುವಾಗ ಯಾರ ಅನುಮತಿಯನ್ನೂ ಕೇಳುವುದಿಲ್ಲ,ಎಲ್ಲಾ ಸಮಯದಲ್ಲೂ ಕಾನೂನನ್ನು ಕಾಪಾಡುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದೆ.

ನಟ ದರ್ಶನ್ ಗೆ ಐಶಾರಾಮಿ ಟ್ರೀಟ್‌ಮೆಂಟ್‌ ಬಗ್ಗೆಯೂ ಸುಪ್ರೀಂ ಕಿಡಿಕಾರಿದೆ.
ಒಂದು ವೇಳೆ ಆರೋಪಿಗಳಿಗೆ ಜೈಲಿನಲ್ಲೇ‌ ರಾಜಾತೀತ್ಯ ನೀಡಲಾಗುತ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದರೆ, ನಾವು ತೆಗೆದುಕೊಳ್ಳುವ ಮೊದಲ ಹೆಜ್ಜೆ ಜೈಲಿನ ಅಧೀಕ್ಷಕರು ಮತ್ತು ಸಂಬಂಧಪಟ್ಟ ಇತರ ಎಲ್ಲಾ ಅಧಿಕಾರಿಗಳನ್ನು ಅಮಾನತುಗೊಳಿಸುವುದು ಎಂದು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರು ಕಠಿಣವಾಗಿ ಎಚ್ಚರಿಸಿದ್ದಾರೆ.

ದರ್ಶನ್ ಸೇರಿ ಇತರ ಆರೋಪಗಳನ್ನು ವಶಕ್ಕೆ ಪಡೆಯುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ,ಜತೆಗೆ ಯಾವ ಜೈಲು ಎಂಬುದನ್ನೂ ನಿರ್ಧರಿಸಿದೆ.ಹಾಗಾಗಿ ಯಾವ ಕ್ಷಣದಲ್ಲಾದರೂ ದರ್ಶನ್,ಪವಿತ್ರ ಗೌಡ ಮತ್ತಿತರರನ್ನು ಪೊಲೀಸರು ವಶಕ್ಕೆ ಪಡೆಯಬಹುದು.

ಸುಪ್ರೀಂ ಮಹತ್ವದ ಆದೇಶ:ನಟ ದರ್ಶನ್‌,ಪವಿತ್ರ ಗೌಡ ಜಾಮೀನು ರದ್ದು Read More

ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ನವದೆಹಲಿ: ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧಂಕರ್ ಕೊಲೆ ಪ್ರಕರಣದ ಆರೋಪಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.

ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ರದ್ದುಗೊಳಿಸಿದ್ದಲ್ಲದೆ ಒಂದು ವಾರದೊಳಗೆ ಶರಣಾಗುವಂತೆ ಸುಶೀಲ್ ಕುಮಾರ್ ಗೆ ತಾಕೀತು ಮಾಡಿದೆ.

ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.

ಮಾರ್ಚ್ 4 ರಂದು ಸುಶೀಲ್ ಕುಮಾರ್​ಗೆ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್​​​ ನ್ಯಾಯಪೀಠ ರದ್ದುಗೊಳಿಸಿದೆ.

ಸುಶೀಲ್ ಕುಮಾರ್​ಗೆ ನೀಡಿದ್ದ ಜಾಮೀನು ಪ್ರಶ್ನಿಸಿ ಸಾಗರ್ ಅವರ ತಂದೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕರೋಲ್ ಮಾನ್ಯ ಮಾಡಿದ್ದಾರೆ.

2021 ಮೇ 4 ರಂದು ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧಂಕರ್(27) ಮೃತಪಟ್ಟಿದ್ದರು.

ಈ ಪ್ರಕರಣದ ಸಂಬಂಧ ಸುಶೀಲ್​ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಮೂರೂವರೆ ವರ್ಷಗಳ ಕಾಲ ಬಂಧನದಲ್ಲಿದ್ದ ನಂತರ ಈ ವರ್ಷದ ಮಾರ್ಚ್​ನಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ವಿಚಾರಣೆ ಆರಂಭವಾದ ಮೂರು ವರ್ಷಗಳಲ್ಲಿ 186 ಪ್ರಾಸಿಕ್ಯೂಷನ್ ಸಾಕ್ಷಿಗಳಲ್ಲಿ ಕೇವಲ 30 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ ಎಂದು ಗಮನಿಸಿದ ದೆಹಲಿ ಹೈಕೋರ್ಟ್ ಸುಶೀಲ್​ ಕುಮಾರ್‌ಗೆ ಜಾಮೀನು ನೀಡಿತ್ತು.

ಆದರೆ ಸುಶೀಲ್​ ಕುಮಾರ್‌ಗೆ ನೀಡಿದ ಜಾಮೀನನ್ನು ಪ್ರಶ್ನಿಸಿ ಸಾಗರ್ ಧಂಕರ್ ತಂದೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಶೀಲ್​ ಕುಮಾರ್ ಮಧ್ಯಂತರ ಜಾಮೀನಿನ ಮೇಲೆ ಹೊರ ಬಂದಾಗ, ಅವರು ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ್ದರು ಎಂದು ವಾದ ಮಂಡಿಸಲಾಯಿತು.

ಆಸ್ತಿ ವಿವಾದಕ್ಕೆ ಸಂಬಂಧಪಟ್ಟಂತೆ ಸಾಗರ್​ ಮೇಲೆ ಹಲ್ಲೆ: ಛತ್ರಸಾಲ್ ಕ್ರೀಡಾಂಗಣದ ಪಾರ್ಕಿಂಗ್ ಸ್ಥಳದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಧಂಕರ್ ಮತ್ತು ಅವರ ಇಬ್ಬರು ಸ್ನೇಹಿತರಾದ ಸೋನು ಮತ್ತು ಅಮಿತ್ ಕುಮಾರ್ ಮೇಲೆ ಸುಶೀಲ್​ ಕುಮಾರ್ ಮತ್ತು ಸಹಚರರು ಹಲ್ಲೆ ನಡೆಸಿದ್ದರೆಂದು ಆರೋಪಿಸಲಾಗಿತ್ತು

ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು Read More

5 ವರ್ಷ ಪೂರ್ತಿ ನಾನೇ ಮುಖ್ಯ ಮಂತ್ರಿ: ಸಿದ್ದರಾಮಯ್ಯ

ನವದೆಹಲಿ: ಐದು ವರ್ಷ ಪೂರ್ತಿ ನಾನೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಸಿಎಂ, 5 ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರುತ್ತೇನೆ, ಜುಲೈ 2 ರಂದೇ ಈ ಹೇಳಿಕೆಯನ್ನು ಸ್ಪಷ್ಟಪಡಿಸಿದ್ದೇನೆ, ಆ ದಿನ ಡಿ.ಕೆ ಶಿವಕುಮಾರ್ ಕೂಡ ಅಲ್ಲೇ ಇದ್ದರು ಎಂದು ಹೇಳಿದರು.

ಎರಡೂವರೆ ವರ್ಷದ ಬಳಿಕ ಯಾವುದೇ ಅಧಿಕಾರ ಹಂಚಿಕೆ ಮಾತುಕತೆ ನಡೆದಿಲ್ಲ. ನಾನೇ ಮುಖ್ಯಮಂತ್ರಿ ಗಾದಿಯಲ್ಲಿ ಇರುತ್ತೇನೆ ಎಂದು ಪುನರುಚ್ಛರಿಸಿದರು.

ನಮ್ಮದು ಹೈಕಮಾಂಡ್‌ ಅಧಾರಿತ ಪಕ್ಷ. 2023ರ ಸಭೆಯಲ್ಲಿ ಎರಡೂವರೆ ವರ್ಷಗಳ ಅಧಿಕಾರಿ ಹಂಚಿಕೆಯ ಬಗ್ಗೆ ಯಾವುದೇ ಮಾತುಕತೆಯಾಗಿಲ್ಲ. ನಾವು ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ಅನುಸರಿಸಬೇಕೆಂದು ಹೈಕಮಾಂಡ್‌ ಹೇಳಿತ್ತು. ಅವರು ಏನೇ ಹೇಳಿದರೂ, ನಾವು ಅದನ್ನು ಅನುಸರಿಸಬೇಕು. ನಾನೂ ಅನುಸರಿಸುತ್ತೇನೆ, ಡಿ.ಕೆ ಶಿವಕುಮಾರ್ ಕೂಡ ಅನುಸರಿಸುತ್ತಾರೆ ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಕುರ್ಚಿ ಈಗ ಖಾಲಿ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರಲ್ಲವಾ ಟಾಂಗ್ ಕೊಟ್ಟರು.

ನಾಯಕತ್ವಕ್ಕೆ ಸಂಬಂಧಿಸಿದಂತೆ, ಸುರ್ಜೇವಾಲಾ ಅವರು ಯಾವುದೇ ಪ್ರಶ್ನೆಯನ್ನು ಕೇಳಿಲ್ಲ. ಡಿ.ಕೆ ಶಿವಕುಮಾರ್ ಅವರನ್ನು ಬೆಂಬಲಿಸುವ ಕೆಲವು ಶಾಸಕರು ಯಾವಾಗಲೂ ಇರುತ್ತಾರೆ, ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ಹೇಳಿದರು.

5 ವರ್ಷ ಪೂರ್ತಿ ನಾನೇ ಮುಖ್ಯ ಮಂತ್ರಿ: ಸಿದ್ದರಾಮಯ್ಯ Read More

ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಸೇರಿ 25 ಪ್ರಮುಖರಿಗೆ ಹೆಚ್ಚಿನ ಭದ್ರತೆ

ನವದೆಹಲಿ: ಆಪರೇಷನ್ ಸಿಂಧೂರದ ಬಳಿಕ ವಿದೇಶಾಂಗ ಸಚಿವ ಎಸ್.ಜೈಶಂಕರ್ ಸೇರಿ 25 ಪ್ರಮುಖರಿಗೆ ಭದ್ರತೆ ಹೆಚ್ಚಿಸಲಾಗಿದೆ.

ಅಷ್ಟೂ ಮಂದಿಗೂ ಬುಲೆಟ್ ಪ್ರೂಫ್ ಕಾರು, ಕಮಾಂಡೋ ಸೆಕ್ಯೂರಿಟಿಯನ್ನು ನೀಡಲಾಗಿದೆ.

ಏ.22ರಂದು ನಡೆದ ಪಹಲ್ಗಾಮ್ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಜೋರಾಗಿದ್ದು, ಕದನ ವಿರಾಮ ಘೋಷಣೆಯಾದ ಬಳಿಕ ವಿದೇಶಾಂಗ ಸಚಿವಾಲಯದ ವಿನಂತಿ ಮೇರೆಗೆ 25 ಪ್ರಮುಖರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರು ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

25 ವಿಐಪಿಗಳ ಪಟ್ಟಿಯನ್ನು ತಯಾರಿಸಲಾಗಿದ್ದು,ಈ ಪಟ್ಟಿಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಜೆ.ಪಿ ನಡ್ಡಾ, ಭೂಪೇಂದರ್ ಯಾದವ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಸುಧಾಂಶು ತ್ರಿವೇದಿ ಹಾಗೂ ಬಿಜೆಪಿಯ ಪ್ರಮುಖ ನಾಯಕ ಮುರಳಿ ಮನೋಹರ್ ಜೋಶಿ ಅವರ ಹೆಸರಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ Z ಸೆಕ್ಯೂರಿಟಿ ಹೊಂದಿರುವ ಜೈಶಂಕರ್ ಅವರಿಗೆ ಮತ್ತೆ ಭದ್ರತೆ ಹೆಚ್ಚಿಸಲಾಗಿದ್ದು, ಒಂದು ಬುಲೆಟ್ ಪ್ರೂಫ್ ಕಾರು, 4-6 ಕಮಾಂಡೋ ಸೇರಿ 22 ಸಿಬ್ಬಂದಿ, ಭದ್ರತೆಗೆ ಬೆಂಗಾವಲು ವಾಹನಗಳು, 33 ಸಿಆರ್‌ಪಿಎಫ್ ಕಮಾಂಡೋ ಹಾಗೂ ದಿನದ 24/7 ಭದ್ರತೆ ನೀಡಲಾಗಿದೆ. ಜೊತೆಗೆ ದೆಹಲಿಯಲ್ಲಿರುವ ಸರ್ಕಾರಿ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.

ಭದ್ರತೆಗಾಗಿ ಒದಗಿಸುತ್ತಿರುವ ಕಾರುಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಇರಿಸುವಂತೆ ಹಾಗೂ ಭದ್ರತಾ ಸಿಬ್ಬಂದಿಗೆ ಫೈರಿಂಗ್ ಹಾಗೂ ವೈದ್ಯಕೀಯ ತುರ್ತು ಪರಿಸ್ಥಿತಿಗಳ ಕುರಿತು ತರಬೇತಿ ನೀಡುವಂತೆ ಸೂಚಿಸಲಾಗಿದೆ.

ಮೇ 7ರಂದು ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ನಲ್ಲಿ ಪಾಕ್‌ನ 9 ಭಯೋತ್ಪಾದಕ ತಾಣಗಳ ಮೇಲೆ ದಾಳಿ ನಡೆಸಲಾಗಿತ್ತು.

ಪಾಕ್ ನಿಯಂತ್ರಣ ರೇಖೆ, ಜಮ್ಮು ಮತ್ತು ಕಾಶ್ಮೀರದಾದ್ಯಂತ ಅಪ್ರಚೋದಿತ ಶೆಲ್ ದಾಳಿ ನಡೆಸಿತು. ಮೇ 10ರಂದು, ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಿಸಿವೆ. ಇದರ ನಡುವೆ 25 ಮಂದಿಗೆ ಬಿಗಿ‌ ಭದ್ರತೆ ಹೆಚ್ಚಿಸಲಾಗಿದೆ.

ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಸೇರಿ 25 ಪ್ರಮುಖರಿಗೆ ಹೆಚ್ಚಿನ ಭದ್ರತೆ Read More