ಅಶೃತರ್ಪಣದೊಂದಿಗೆಎಸ್‌.ಎಂ ಕೃಷ್ಣ ಅವರಿಗೆ ವಿದಾಯ

ಮಂಡ್ಯ: ದೂರದೃಷ್ಟಿಯ ಕನಸುಗಾರ, ಮಾಜಿ ಮುಖ್ಯಮಂತ್ರಿ ಎಸ್‌.ಎಂ ಕೃಷ್ಣ ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ.

ಡಿ 11 ರಂದು ಸಂಜೆ ಕೃಷ್ಣ ಅವರ ಹುಟ್ಟೂರು ಮಂಡ್ಯ ಜಿಲ್ಲೆ, ಮದ್ದೂರು ತಾಲೂಕು, ಸೋಮನಹಳ್ಳಿಯ ಹೊರವಲಯದ ಕೆಫೆ ಕಾಫಿ ಡೇ ಆವರಣದಲ್ಲಿ ಒಕ್ಕಲಿಗ ಸಂಪ್ರದಾಯಂತೆ ಹಾಗೂ ಕುಶಾಲತೋಪು ಸಿಡಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಇದಕ್ಕೂ ಮೊದಲು ಪೊಲೀಸ್ ತಂಡ ರಾಷ್ಟ್ರಗೀತೆ ನಮನ ಸಲ್ಲಿಸಿತು, ನಂತರ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕೃಷ್ಣ ಅವರ ಪತ್ನಿ ಪ್ರೇಮಾ ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು.

ನಂತರ ಭಾನುಪ್ರಕಾಶ್ ಶರ್ಮಾ ಹಾಗೂ ಇತರ 15 ವೈದಿಕರ ತಂಡ ಮಂತ್ರ ಘೋಷಗಳೊಂದಿಗೆ ಅಂತಿಮ ವಿಧಿವಿಧಾನ ನೆರವೇರಿಸಿದರು,ಆನಂತರ ಎಸ್‌.ಎಂ ಕೃಷ್ಣ ಅವರ ಮೊಮ್ಮಗ ಅಮರ್ಥ್ಯ ಹೆಗ್ಡೆ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

ಚಿತೆಗೆ ಅರಣ್ಯ ಇಲಾಖೆಯಿಂದ 1 ಸಾವಿರ ಕೆಜಿ ಶ್ರೀಗಂಧದ ಕಟ್ಟಿಗೆ ಪೂರೈಸಲಾಗಿತ್ತು. ಬಾಳೆ ಎಲೆಯಲ್ಲಿ ಪಾರ್ಥಿವ ಶರೀರ ಮುಚ್ಚಿ, 50 ಕೆಜಿ ತುಪ್ಪ ಬಳಸಿ ಚಿತೆಗೆ ಅಗ್ನಿಸ್ಪರ್ಶ ಮಾಡಲಾಯಿತು.

ಅಂತಿಮ ವಿಧಿ ವಿಧಾನದ ಇಡೀ ಉಸ್ತುವಾರಿಯನ್ನು ಉಪಮುಖ್ಯ ಡಿ.ಕೆ. ಶಿವಕುಮಾರ್ ವಹಿಸಿಕೊಂಡಿದ್ದರು.

ಸಿಎಂ ಸಿದ್ದರಾಮಯ್ಯ,ಡಿಸಿಎಂ,ಡಿ.ಕೆ.
ಶಿವಕುಮಾರ್,ಗೃಹಸಚಿವ ಜಿ.ಪರಮೇಶ್ವರ್,ಸ್ಪೀಕರ್ ಯು.ಟಿ.ಖಾದರ್, ವಿಪಕ್ಷ ನಾಯಕ ಆರ್.ಅಶೋಕ್, ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ, ಹೆಚ್.ಡಿ ಕುಮಾರಸ್ವಾಮಿ, ಮಾಜಿ ಮುಖ್ಯ ಮಂತ್ರಿಗಳಾದ ಬಿ.ಎಸ್‌ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು, ಸಂಸದರು, ಮಾಜಿ ಶಾಸಕರು, ನಿರ್ಮಲಾನಂದನಾಥ ಸ್ವಾಮೀಜಿ ಸೇರಿ ಪ್ರಮುಖ ಮಠಗಳ ಪೀಠಾಧಿಪತಿಗಳು ಹಾಜರಿದ್ದು, ಅಂತಿಮ ನಮನ ಸಲ್ಲಿಸಿದರು.

ಮಂಡ್ಯ, ರಾಮನಗರ ಜಿಲ್ಲೆ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಬಹಳಷ್ಟು ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಪಾರ್ಥಿವ ಶರೀರದ ಜೊತೆಗೆ ವಾಹನದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಸಾಗಿಬಂದರು ಸೋಮನಹಳ್ಳಿಗೆ ಸಾಗುವ ಮಾರ್ಗದಲ್ಲಿ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ ಸೇರಿದಂತೆ ಮಧ್ಯದಲ್ಲಿ ಕೆಲ ಸಮಯ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಅವಕಾಶ ನೀಡಲಾಗಿತ್ತು.

ದಾರಿಯುದ್ದಕ್ಕೂ ಸ್ಥಳೀಯ ಶಾಸಕರು ಮುಖಂಡರು,ಅಭಿಮಾನಿಗಳು, ಸಾರ್ವಜನಿಕರು ಚಿರಶಾಂತಿ ವಾಹನಕ್ಕೆ ಹೂಗಳನ್ನು ಹಾಕಿ ಅಂತಿಮ ನಮನ ಸಲ್ಲಿಸಿದರು.

ಅಶೃತರ್ಪಣದೊಂದಿಗೆಎಸ್‌.ಎಂ ಕೃಷ್ಣ ಅವರಿಗೆ ವಿದಾಯ Read More

ಬುಧವಾರ‌ ಸೋಮನಹಳ್ಳಿಯಲ್ಲಿ ಕೃಷ್ಣ ಅಂತ್ಯಕ್ರಿಯೆ

ಬೆಂಗಳೂರು: ಮಾಜಿ ಮುಖ್ಯ ಮಂತ್ರಿ ಎಸ್‌ಎಂ ಕೃಷ್ಣ ಅವರ ಅಂತ್ಯಕ್ರಿಯೆಯ ಬುಧವಾರ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ನಡೆಯಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ತಿಳಿಸಿದ್ದಾರೆ.

ನಾಳೆ ಬೆಳಗ್ಗೆ ಬೆಂಗಳೂರಿನಿಂದ ಪಾರ್ಥಿವ ಶರೀರವನ್ನು ಸೋಮನಹಳ್ಳಿಗೆ ತರಲಾಗುತ್ತದೆ.ಅಲ್ಲಿನ ಶಾಲೆಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ, ಮಧ್ಯಾಹ್ನದ ನಂತರ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂತಾಪ: ಎಸ್.ಎಂ ಕೃಷ್ಣ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ,ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ,ಮುಖ್ಯ ಮಂತ್ರಿ ಸಿದ್ದರಾಮಯ್ಯ,ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್,ಸ್ಪೀಕರ್ ಯು.ಟಿ.ಖಾದರ್,ಸಭಾಪತಿ ಬಸವರಾಜ ಹೊರಟ್ಟಿ, ‌ರಾಜ್ಯದ ಸಚಿವರು,ವಿಧಾನಸಭೆ ಮತ್ತು ವಿಧಾನ ಪರಿಷತ್ ಶಾಸಕರು,
ಕೇಂದ್ರ ಸಚಿವರುಗಳಾದ ಹೆಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ ಜೋಶಿ,ಶೋಭಾ ಕರಂದ್ಲಾಜೆ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

ಬುಧವಾರ‌ ಸೋಮನಹಳ್ಳಿಯಲ್ಲಿ ಕೃಷ್ಣ ಅಂತ್ಯಕ್ರಿಯೆ Read More

ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಮಂಡ್ಯಾದಲ್ಲಿ ಪ್ರತಿಭಟನೆ

ಮಂಡ್ಯ: ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ,ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಿಂದೂ ಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಖಂಡಿಸಿ ಮಂಡ್ಯದಲ್ಲಿ ಬಜರಂಗದಳ ಹಾಗೂ ವಿಶ್ವ ಹಿಂದು ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಿ, ಜೈಶ್ರೀರಾಮ್, ನಾವೆಲ್ಲ ಹಿಂದೂ ನಾವೆಲ್ಲರೂ ಒಂದು ಎಂಬ ಘೋಷಣೆ ಕೂಗಿದರು‌.

ಬಾಂಗ್ಲಾದೇಶದಲ್ಲಿ ನಿರಂತರವಾಗಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ, ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ, ಅಲ್ಲಿನ ಸರ್ಕಾರ ಹಿಂದೂಗಳಿಗೆ ರಕ್ಷಣೆ ಕೊಡದೆ ನಿರ್ಲಕ್ಷ್ಯ ತೋರಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ದೌರ್ಜನ್ಯ ನಡೆಸಿದ ಮುಸ್ಲಿಂರ ವಿರುದ್ಧ ಕ್ರಮ ತೆಗೆದುಕೊಂಡು, ತಕ್ಷಣವೇ ಹಿಂದೂಗಳಿಗೆ ರಕ್ಷಣೆ ಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಜಿಹಾದಿ ಮನೋಭಾವ ಉಳ್ಳ ಧರ್ಮಿಯರು ಕೊರೋನಾದಂತಹ ಸಂದರ್ಭದಲ್ಲಿ ಜಾತಿ ಧರ್ಮ ಭೇದ ಭಾವವನ್ನೆಲ್ಲ ಮರೆತು ಆಶ್ರಯವನ್ನು ನೀಡಿದ ಇಸ್ಕಾನ್ ಸೇವೆಯನ್ನು ಮರೆತು ಸ್ವಾಮಿಯನ್ನು ಬಂಧಿಸಿ ಹಿಂದುಗಳ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂದು ಕಿಡಿಕಾರಿದರು.

ಅಲ್ಲಿನ ಸರ್ಕಾರ ಹಿಂದುಗಳ ವಿರುದ್ಧವಾಗಿ ನಿಂತಿದೆ ಇದನ್ನೆಲ್ಲಾ ನಾವು ಸಹಿಸಿಕೊಂಡು ಕುಳಿತರೆ ನಮ್ಮ ಸಮಾಜ, ನಮ್ಮ ಧರ್ಮವನ್ನ ಉಳಿಸಲು ಯಾರಿಂದಲೂ ಸಾಧ್ಯವಿಲ್ಲ ಆದಕಾರಣ ನಾವು ಒಗ್ಗಟ್ಟಾಗಿ ನಮ್ಮ ಧರ್ಮವನ್ನ ನಾವು ಸಂರಕ್ಷಿಸಬೇಕು ಎಂದು ಸಂಘಟನೆಗಳು ಕರೆ ನೀಡಿದವು.

ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಮಂಡ್ಯಾದಲ್ಲಿ ಪ್ರತಿಭಟನೆ Read More

ಡಾ ಶೋಭಿತ್ ರಂಗಪ್ಪ ಅವರಿಗೆ ರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು: ಮಂಡ್ಯದ ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ.ಶೋಭಿತ್ ರಂಗಪ್ಪ ಅವರಿಗೆ ರಾಷ್ಟ್ರೀಯ ಮನ್ನಣೆ ದೊರೆತಿದೆ.

ಬಯೋಟೆಕ್ ರಿಸರ್ಚ್ ಸೊಸೈಟಿ ಆಫ್ ಇಂಡಿಯಾ ದಿಂದ ಆಣ್ವಿಕ ಮತ್ತು ವ್ಯವಸ್ಥಿತ ಜೀವಶಾಸ್ತ್ರದಲ್ಲಿ ಅವರ ಅತ್ಯುತ್ತಮ ಕೊಡುಗೆಗಾಗಿ 2023 ನೇ ಸಾಲಿನ ಎಸ್ ಬಿ ಎಸ್-ಎಂಕೆಯು ಜೀನೋಮಿಕ್ಸ್ ಪ್ರಶಸ್ತಿಯನ್ನು, ಆದಿಚುಂಚನಗಿರಿ ವಿಶ್ವವಿದ್ಯಾಲಯದ ನಿರ್ದೇಶಕ ಡಾ ಶೋಭಿತ್ ರಂಗಪ್ಪ ಅವರಿಗೆ ನೀಡಲಾಗಿದೆ.

ಈ ಪ್ರಶಸ್ತಿಯು ಪ್ರಸ್ತುತ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ, ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ಹೊಂದಿದೆ.

ಈ ಪ್ರಶಸ್ತಿ ಪ್ರದಾನ ಸಮಾರಂಭ ಪುಣೆಯ ಡಿ ವೈ ಪಾಟೀಲ್ ಬಯೋಟೆಕ್ನಾಲಜಿ ಮತ್ತು ಬಯೋ ಇನ್ಫರ್ಮ್ಯಾಟಿಕ್ಸ್ ಸಂಸ್ಥೆಯಲ್ಲಿ ನಡೆಯಿತು.

ನವದೆಹಲಿಯ ಏಮ್ಸ್‌ನ ನಿವೃತ್ತ ಪ್ರಾಧ್ಯಾಪಕ ಪ್ರೊ ಟಿ ಪಿ ಸಿಂಗ್ ಮತ್ತು ಇತರೆ ಪ್ರಸಿದ್ಧ ವಿಜ್ಞಾನಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.

ಬಿಆರ್ ಎಸ್ಐ ಭಾರತದ ಹೆಸರಾಂತ ವಿಜ್ಞಾನಿಗಳಿಂದ ಸ್ಥಾಪಿತವಾದ 20 ವರ್ಷದ ರಾಷ್ಟ್ರೀಯ ಸೊಸೈಟಿಯಾಗಿದೆ.

ಡಾ.ಶೋಭಿತ್ ಅವರು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಅವರು ಸುಮಾರು 100 ಸಂಶೋಧನಾ ಪ್ರಬಂಧಗಳನ್ನು ಮತ್ತು 8 ಪೇಟೆಂಟ್‌ಗಳನ್ನು ಕ್ಯಾನ್ಸರ್ ಸಂಶೋಧನೆಯಲ್ಲಿ ಪ್ರಕಟಿಸಿರುವುದು ವಿಶೇಷ.

ಡಾ ಶೋಭಿತ್ ರಂಗಪ್ಪ ಅವರಿಗೆ ರಾಷ್ಟ್ರೀಯ ಪ್ರಶಸ್ತಿ Read More

ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು

ಮಂಡ್ಯ: ಸಾಮಾನ್ಯವಾಗಿ ಹಸುಗಳು ಒಂದು ಕರುವಿಗೆ ಜನ್ಮ ನೀಡುತ್ತವೆ.ಎಲ್ಲೋ ಅಪರೂಕ್ಕೊಮ್ಮೆ ಎರಡು ಕರುಗಳಿಗೆ ಜನನ ನೀಡುತ್ತವೆ ಆದರೆ ಮಹಾತಾಯಿ ಗೋವು ಮೂರು ಕರುಗಳಿಗೆ ಜನ್ಮ ನೀಡಿ ಸುದ್ದಿಯಾಗಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದಲ್ಲಿ ಸೀಮೆ ಹಸು ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ.

ಆದಿ ಪರಾಶಕ್ತಿ ಡಿಂಕದಮ್ಮ ನೆಲೆಸಿರುವ ಪಾಂಡವಪುರ ತಾಲೂಕಿನ ಡಿಂಕಾ ಗ್ರಾಮದ ಮಾಲೀಕ ಕಂಠಿ ಶಿವಣ್ಣ (ಚಂದ್ರು) ಅವರು ಸಾಕಿದ ಸೀಮೆ ಹಸು.ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿದೆ.ಮೂರು ಹೆಣ್ಣು ಕರುಗಳು ಮತ್ತು ಹಸು ಆರೋಹ್ಯವಾಗಿವೆ.

ಈ ಅಪರೂಪದ ಸುದ್ದಿ ಎಲ್ಲೆಡೆ ಹರಡಿ ಹಸು ಕರುಗಳನ್ನು ನೋಡಲು ಗ್ರಾಮಸ್ಥರು ಮಾತ್ರವಲ್ಲದೆ ಅಕ್ಕಪಕ್ಕದ ಊರಿನ ಜನರು ಮುಗಿಬಿದ್ದಿದ್ದಾರೆ.

ಮೂರು ಹೆಣ್ಣು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು Read More

ದೇಶದ ಹಾಲು ಉತ್ಪಾದನೆಯಲ್ಲಿ ಕರ್ನಾಟಕ 2 ನೆ ಸ್ಥಾನದಲ್ಲಿ: ಸಿದ್ದರಾಮಯ್ಯ

ನವದೆಹಲಿ: ದೇಶದ ಹಾಲು ಉತ್ಪಾದನೆಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನವದೆಹಲಿಯಲ್ಲಿ ಗುರುವಾರ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲ ಹಾಗೂ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಯಮಿತದ ವತಿಯಿಂದ ನಂದಿನಿ ವಿವಿಧ ಶ್ರೇಣಿಯ ಹಾಲು ಬಿಡುಗಡೆ ಮಾಡಿ ಸಿಎಂ ಮಾತನಾಡಿದರು.

ದೆಹಲಿ ನಗರದಲ್ಲಿ ಕೆ.ಎಂ.ಎಫ್ ಮತ್ತು ಮಂಡ್ಯ ಹಾಲು ಒಕ್ಕೂಟ ಸೇರಿ ವಿವಿಧ ಶ್ರೇಣಿಯ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇಡೀ ದೇಶದಲ್ಲಿ ರೈತರ ಉಪಕಸುಬು ಪಶುಸಂಗೋಪನೆ. ಗುಜರಾತ್ ನಲ್ಲಿ ಕುರಿಯನ್ ಅವರು ಹಾಲು ಉತ್ಪಾದಕರ ಸಂಘವನ್ನು ಪ್ರಾರಂಭ ಮಾಡಿದರು ಎಂದು ತಿಳಿಸಿದರು.

ಹಿಂದೆ ಪಶುಸಂಗೋಪನಾ ಸಚಿವನಾಗಿದ್ದು, ಒಂದು ವರ್ಷ ಕಾಲ ಕರ್ನಾಟಕ ಹಾಲು ಮಹಾಮಂಡಲದ ಅಧ್ಯಕ್ಷನೂ ಆಗಿದ್ದೆ ಎಂದು ಸಿದ್ದರಾಮಯ್ಯ ಸ್ಮರಿಸಿದರು.

ಪಶುಸಂಗೋಪನಾ ಸಚಿವನಾಗಿದ್ದಾಗಲೇ ಹಾಲು ಉತ್ಪಾದಕರಿಗೆ ಶೋಷಣೆಯಾಗುತ್ತಿದ್ದುದ್ದನ್ನು ಮನಗಂಡು ಶಾಶ್ವತ ಮಾರುಕಟ್ಟೆ ಕಲ್ಪಿಸಲು ಹಾಲು ಉತ್ಪಾದಕರ ಸಂಘಗಳನ್ನು ರಚಿಸಲಾಯಿತು ಎಂದು ಹೇಳಿದರು.

ರಾಜ್ಯದಲ್ಲಿ ಪ್ರತಿದಿನ 92 ರಿಂದ 93 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ರೈತರಿಂದ ಲೀ. ಗೆ 32 ರೂ.ಗಳಿಗೆ ಹಾಲು ಖರೀದಿಸಲಾಗುತ್ತಿದ್ದು, ರಾಜ್ಯ ಸರ್ಕಾರ ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ 5 ರೂ. ಪ್ರೋತ್ಸಾಹಧನ ನೀಡುತ್ತಿದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲದಲ್ಲಿ 2 ರೂ. ಇದ್ದ ಪ್ರೋತ್ಸಾಹಧನ, ನಂತರ 3 ರೂ. ಆಯಿತು. ನಾನು ಮುಖ್ಯಮಂತ್ರಿಯಾದ ನಂತರ ಇದನ್ನು 5 ರೂ.ಗೆ ಹೆಚ್ಚಿಸಲು ಘೋಷಣೆ ಮಾಡಲಾಯಿತು ಎಂದು ಸಿಎಂ ತಿಳಿಸಿದರು.

ನಮ್ಮ ರಾಜ್ಯದಲ್ಲಿ ಅಂದಾಜು 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಆಂಧ್ರಪ್ರದೇಶ, ಮಹಾರಾಷ್ಟ್ರಕ್ಕೆ ಪ್ರತಿ ದಿನ ತಲಾ 2.5 ಲಕ್ಷ ಲೀ.ಟರ್ ಹಾಲು ಪೂರೈಕೆಯಾಗುತ್ತಿದೆ.ಈಗ ಆರಂಭಿಕ ಹಂತದಲ್ಲಿ 2.5 ಲಕ್ಷ ಲೀಟರ್ ಹಾಲು ನವದೆಹಲಿಗೆ ಪೂರೈಸುವ ಯೋಜನೆ ರೂಪಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಚಿವರುಗಳಾದ ವೆಂಕಟೇಶ್, ಚೆಲುವರಾಯಸ್ವಾಮಿ, ಬೈರತಿ ಸುರೇಶ್, ಕರ್ನಾಟಕ ಹಾಲು ಮಹಾಮಂಡಲದ ಅಧ್ಯಕ್ಷ ಭೀಮಣ್ಣ ನಾಯಕ್, ರಾಜ್ಯ ಸಭಾ ಸದಸ್ಯ ಈರಣ್ಣ ಕರಾಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ತಿಮ್ಮೇಗೌಡ ಮತ್ತಿತರರು ಉಪಸ್ಥಿತರಿದ್ದರು.

ದೇಶದ ಹಾಲು ಉತ್ಪಾದನೆಯಲ್ಲಿ ಕರ್ನಾಟಕ 2 ನೆ ಸ್ಥಾನದಲ್ಲಿ: ಸಿದ್ದರಾಮಯ್ಯ Read More

ಅತಿ ಚಿಕ್ಕ ವಯಸ್ಸಿನಲ್ಲೇ ಇಂಟರ್ ನ್ಯಾಷನಲ್ ರೆಕಾರ್ಡ್ಸ್ ‌ಮಾಡಿದ ಪುಟ್ಟ ವಿಹಿಕಾ

ಮೈಸೂರು: ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ನಾಣ್ನುಡಿಯಂತೆ ಸಕ್ಕರೆ ನಾಡಿನ ಅಕ್ಕರೆಯ ಈ ಪುಟ್ಟ ಪೋರಿ ವಿಹಿಕಾ ಸಿ.ಟಿ.ಎಳೆ ವಯಸಿನಲ್ಲೆ ದೇಶ ಗುರುತಿಸುವಷ್ಟು ಸಾಧನೆ ಮಾಡಿದ್ದಾಳೆ.

ವಿಹಿಕಾಗೆ ಇನ್ನೂ 5 ವರ್ಷ 3 ತಿಂಗಳು ಅಷ್ಟೆ.ಈಗಾಗಲೇ ಇಂಟರ್ ನ್ಯಾಷನಲ್ ವರ್ಲ್ಡ್‌ ರೆಕಾರ್ಡ್ ಆಫ್ ಎಕ್ಸಲೆನ್ಸ್, ಬುಕ್‌ ಆಫ್ ರೆಕಾರ್ಡ್ಸ್ ಮಾಡಿ‌‌ದ್ದಾಳೆ.

ರೆಕಾರ್ಡ್ ಹೋಲ್ಡರ್ ವಿಹಿಕಾ ಸಿ.ಟಿ.
ಕತ್ತಿನ ಸುತ್ತ ಹುಲಾ ಹೂಪ್ ಸುತ್ತುತ್ತಲೇ ರಸಾಯನಶಾಸ್ತ್ರದ 118 ಕೋಷ್ಟಕ ಗಳನ್ನು ಕೇವಲ ಒಂದು ನಿಮಿಷದಲ್ಲಿ (ಒಂದು ನಿಮಿಷಕ್ಕೆ ಇನ್ನೂ ಕೆಲ ಸೆಂಟಿ ಸೆಕೆಂಡ್ಸ್ ಇರುವಾಗಲೇ) ಹೇಳುವ ಮೂಲಕ ವಿಶ್ವ ದಾಖಲೆ ಮಾಡಿದ್ದಾರೆ.

ವಿಹಿಕಾ ಸಿ.ಟಿ.ಅವರು 2024 ಜುಲೈ 26 ರಂದು ಈ ಸಾಧನೆ ಮಾಡಿದ್ದಾರೆ.ಆಗ ಅವಳಿಗೆ 5 ವರ್ಷ 1 ತಿಂಗಳು 23 ದಿನಗಳಾಗಿತ್ತು.

ವಿಹಿಕಾ ಎಸ್. ಟಿ. ಅವಳ ಕುತ್ತಿಗೆಯ ಸುತ್ತ ಹುಲಾ ಹೂಪ್ ಅನ್ನು ತಿರುಗಿಸುವಾಗ ಆವರ್ತಕ ಕೋಷ್ಟಕವನ್ನು ಪಠಿಸಿದ್ದು ವಿಶೇಷವಾಗಿತ್ತು. ಆಕೆ ಈ ಸಾಧನೆ ಮೂಲಕ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಗೆ ಭಾಜನರಾಗಿದ್ದಾರೆ.

ಅಷ್ಟೇ ಅಲ್ಲಾ ಈ ಮಗು ಇನ್ನೂ 3 ವರ್ಷ ಇದ್ದಾಗಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮಾಡಿದ್ದಾಳೆ.

ಇದೆಲ್ಲದರ ವಿವರವನ್ನು ವಿಹಿಕಾ ತಾಯಿ‌‌ ರಮ್ಯ ಮತ್ತು ಅಜ್ಜಿ ನೇತ್ರಾವತಿ ಅವರೊಂದಿಗೆ ಮೈಸೂರು ಜಿಲ್ಲಾ ಪತ್ರಕರ್ತರ‌ ಭವನಕ್ಕೆ ಆಗಮಿಸಿ ಮಾಧ್ಯಮದವರಿಗೆ ನೀಡಿದರು.

ವಿಹಿಕಾ ಸಿ.ಟಿ. ಜೂನ್ 3, 2019 ರಂದು ಜನಿಸಿದ್ದು, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಚಿಕ್ಕ ಅಂಕನ ಹಳ್ಳಿ ನಿವಾಸಿಗಳಾದ ತೇಜಸ್ವಿ-ರಮ್ಯ ಅವರ ಪುತ್ರಿ.

ಒಂದೂವರೆ ವರ್ಷದವಳಿದ್ದಾಗ ಹಣ್ಣು,ಕಾಯಿಗಳನ್ನು ಹೂಗಳನ್ನು ಗುರುತಿಸುತ್ತಿದ್ದಳು ಎಂದು ಆಕೆಯ ಪ್ರೀತಿಯ ಅಜ್ಜಿ ನೇತ್ರಾವತಿ ಅವರು ಹೇಳುತ್ತಾರೆ.

ಮೂರು ವರ್ಷದವಳಿದ್ದಾಗ 16 ಪ್ರಾಣಿಗಳು, ಮತ್ತು ರಾಷ್ಟ್ರೀಯ ಚಿಹ್ನೆಗಳು, 7 ಆಕಾರಗಳು, 8 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು,7 ತಾಲೂಕುಗಳನ್ನು ಹೇಳುತ್ತಿದ್ದಳು.

ಭಾರತೀಯ ಪ್ರತಿಜ್ಞೆ, 6 ಶ್ಲೋಕಗಳು, ವರ್ಷದಲ್ಲಿನ ತಿಂಗಳುಗಳು,14 ಕ್ರಿಯಾ ಪದಗಳು,12 ಗಾದೆಗಳು, A – Z ನಿಂದ ವರ್ಣಮಾಲೆಯ ಅಕ್ಷರಗಳು, 49 ಕನ್ನಡ ಅಕ್ಷರಗಳು ಮತ್ತು 4 ಪ್ರಾಸಗಳನ್ನು 3 ವರ್ಷ ಮತ್ತು 2 ತಿಂಗಳ ವಯಸ್ಸಿನಲ್ಲಿ ಅಂದರೆ 2022 ಆಗಸ್ಟ್ 25 ರಂದು ಹೇಳಿ ದೃಢಪಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮಾಡಿದ್ದಾಳೆ.

ವಿಹಿಕಾ ಈಗ ಕರಾಟೆ‌ ಕಲಿಯುತ್ತಿದ್ದು ಎಲ್ಲೋ ಮತ್ತು ಆರೆಂಜ್ ಬೆಲ್ಟ್ ಪಡೆದಿದ್ದಾಳೆ.ಭಗವದ್ಗೀತೆಯ 35 ಶ್ಲೋಕಗಳನ್ನು ಹೇಳುತ್ತಾಳೆ,ವಿಷ್ಣು ಸಹಸ್ರನಾಮ ಕಲಿಯುತ್ತಿದ್ದಾಳೆ.

ಈ ಬಾಲೆ ಇನ್ನೂ ಎತ್ತರೆತ್ತರಕ್ಕೆ ಬೆಳೆಯಲಿ,ಹೆಚ್ಚು ದಾಖಲೆಗಳನ್ನು ಬರೆಯಲಿ ಎಂದು ವರ್ಷಿಣಿ ನ್ಯೂಸ್ ಹಾರೈಸುತ್ತದೆ.

ಅತಿ ಚಿಕ್ಕ‌‌ ವಯಸ್ಸಿನಲ್ಲಿ ವಿಶ್ವ ದಾಖಲೆ ಮಾಡಿರುವ ವಿಹಿಕಾಗೆ ಹೆಚ್.ಡಿ.ಕುಮಾರಸ್ವಾಮಿ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬೆಲವತ್ತ ರಾಮಕೃಷ್ಣ ಮತ್ತು ನಗರ ಅಧ್ಯಕ್ಷ ಕೆ.ಆರ್.ಮಿಲ್ ಆನಂದಗೌಡ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.

ಅತಿ ಚಿಕ್ಕ ವಯಸ್ಸಿನಲ್ಲೇ ಇಂಟರ್ ನ್ಯಾಷನಲ್ ರೆಕಾರ್ಡ್ಸ್ ‌ಮಾಡಿದ ಪುಟ್ಟ ವಿಹಿಕಾ Read More

ಸಾಕು ಪ್ರಾಣಿಗಳ ರಕ್ಷಣೆಗೆ ಪ್ರಾರ್ಥಿಸಿಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ

ಮಂಡ್ಯ: ಮಂಡ್ಯದ ಕಾರಸವಾಡಿ ಗ್ರಾಮದಿಂದ ಸುಮಾರು 200ಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯ ಮೂಲಕ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದಾರೆ.

ಮಾದಪ್ಪನ ಬೆಟ್ಡಕ್ಕೆ ಪಾದಯಾತ್ರೆ ಮಾಡಿದರೆ ಮನೆಯಲ್ಲಿರುವ ಹಸು ಕರು ಕುರಿಗಳನ್ನು ರೋಗ ರುಜನ ಗಳಿಂದ ಕಾಪಾಡುತ್ತಾನೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.

ಪಾದಯಾತ್ರೆ ಪ್ರಾರಂಭಿಸಿದ ಭಕ್ತರು ಮೊದಲು ಮಳವಳ್ಳಿಯ ದಾಸನಗೌಡ ದೊಡ್ಡಿಯಲ್ಲಿ ವಿಶ್ರಾಂತಿ ಪಡೆದು ನಂತರ ಅಂದರೆ ಬುಧವಾರ ಹನೂರು ಪಟ್ಟಣಕ್ಕೆ ತಲುಪಿದ್ದಾರೆ.

ನಾಳೆ‌ ನ.14‌ ರಂದು ತಾಳುಬೆಟ್ಟ ಸ್ವಾಮಿಯವರಿಗೆ ಪೂಜಿ ಸಲ್ಲಿಸಿ, 15 ರಂದು ಮುಂಜಾನೆ 5 ಗಂಟೆಗೆ ಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಸ್ವಾಮಿಯ ಸನ್ನಿಧಾನಕ್ಕೆ ತೆರಳಲಿದ್ದಾರೆ.

ಕಾರ್ತಿಕ ಸೋಮವಾರದ ಅಂಗವಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾರಸವಾಡಿ ಗ್ರಾಮಸ್ಥರು ಮಲೆ ಮಹದೇಶ್ವರನ ಬೆಟ್ಟಕ್ಕೆ ಪಾದಯಾತ್ರೆ ಹೊರಟಿರುವುದು ವಿಶೇಷ.

ಊರಿನ ಗ್ರಾಮ ದೇವರು ಬೋರಪ್ಪ ದೇವರಿಗೆ ಪೂಜೆಯನ್ನು ಸಲ್ಲಿಸಿ ನಂತರ ಪಾದಯಾತ್ರೆ ಹೊರಟರು.

ಬಹಳ ಹಿಂದಿನಿಂದಲೂ ಗ್ರಾಮಸ್ಥರು ಕಾರ್ತಿಕ ಸೋಮವಾರದ ಪ್ರಯುಕ್ತ ಮಲೆ ಮಾದಪ್ಪನ ದರ್ಶನಕ್ಕೆ ಪಾದಯಾತ್ರೆ ಮೂಲಕ ಹೋಗುವುದು‌ ವಾಡಿಕೆಯಾಗಿದೆ.

ದೇವರ ಸನ್ನಿಧಾನಕ್ಕೆ ಬಂದು ತಮ್ಮ ಕೈಯಲ್ಲಾದ ಸೇವೆ ಮಾಡುತ್ತೇವೆ ಎಂದು
ಹರಕೆ ಹೊತ್ತು ಅದೇ ರೀತಿ ಪ್ರತಿವರ್ಷವೂ ಸೇವೆಯನ್ನು ನೆರವೇರಿಸ್ಕೊಂಡು ಬರುತ್ತಿದ್ದಾರೆ.

ಕಾಲ್ನಡಿಗೆಯಲ್ಲಿ ಹೋಗಿ ದೈವ ದರ್ಶನವನ್ನು ಮಾಡಿಕೊಂಡು ಪುನಹ ಪಾದಯಾತ್ರೆಯ ಮೂಲಕ ತಮ್ಮ ಗ್ರಾಮವನ್ನು ಸೇರುತ್ತಾರೆ.

ಸಾಕು ಪ್ರಾಣಿಗಳ ರಕ್ಷಣೆಗೆ ಪ್ರಾರ್ಥಿಸಿಶ್ರೀ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ Read More

ಈ ಸರ್ಕಾರ ತೆಗೆಯುವ ತನಕ ವಿಶ್ರಮಿಸಲ್ಲ-ಗುಡುಗಿದ ದೇವೇಗೌಡರು

ಮಂಡ್ಯ: ಚನ್ನಪಟ್ಟಣ ಚುನಾವಣೆ ಪ್ರಚಾರದಲ್ಲಿ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಕಣ್ಣೀರಿನ ಬಗ್ಗೆ ಲಘುವಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕರನ್ನು ಮಾಜಿ ಪ್ರಧಾನಿ ದೇವೇಗೌಡರು ತೀವ್ರ ತರಾಡೆಗೆ ತೆಗೆದುಕೊಂಡರು.

ನಮ್ಮ ವಂಶ ಬಡತನದಿಂದ ಕಷ್ಟಸುಖ ಅರಿತು ಮೇಲೆ ಬಂದಿದೆ. ನಮ್ಮ ವಂಶಕ್ಕೆ ಈ ಕಣ್ಣೀರು ಬಳುವಳಿಯಾಗಿ ಬಂದಿದೆ ಎಂದು ತಿರುಗೇಟು ನೀಡಿದರು.

ಪಾಂಡವಪುರದ ಚಿನಕುರುಳಿ ಗ್ರಾಮದಲ್ಲಿ ಮಾತನಾಡಿದ‌ ಗೌಡರು,ನಮಗೆ ರೈತರ, ಬಡ ಜನರ ಕಷ್ಟ ಸುಖಗಳ ಅರಿವಿದೆ. ಅವರ ಕಷ್ಟಕ್ಕೆ ಸ್ಪಂದಿಸುವ ಹೃದಯ ಯಾರಿಗಿರುತ್ತೋ ಅವರಿಗೆ ಮಾತೃ ಹೃದಯ ಇರುತ್ತೆ. ಕಣ್ಣೀರಿನ ಬಗ್ಗೆ ವ್ಯಂಗ್ಯ ಮಾಡುವ ಜನರಿಗೆ ನಾನು ಇನ್ನೇನು ಹೇಳಲು ಬಯಸುವುದಿಲ್ಲ ಎಂದು ಹೇಳಿದರು.

ನಾನು ನನ್ನ ಕಡೆಯ ಉಸಿರು ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ, ಮೊಮ್ಮಗನಿಗಾಗಿ ಈಗ ನಾನು ರಾಜಕೀಯಕ್ಕೆ ಬಂದಿಲ್ಲ. ಒಂದು ಪ್ರಾದೇಶಿಕ ಪಕ್ಷ ಉಳಿಸಲು ನಾನು ಬಂದಿದ್ದೀನಿ. ಈ ಸರ್ಕಾರ ತೆಗೆಯುವವರೆಗೂ ನಾನು ನಿದ್ದೆ ಮಾಡಲ್ಲ ಎಂದು ಕಡಕ್ಕಾಗಿ ಹೇಳಿದರು.

ಮೊಮ್ಮಗ ನಿಖಿಲ್ ಗೆದ್ದ ಮೇಲೂ ನಾನು ಮನೆಯಲ್ಲಿ ಮಲಗಲ್ಲ‌. ಆಮೇಲೆ ಕೂಡ ಹೋರಾಡಿ ಪಕ್ಷ ಕಟ್ಟುತ್ತೇನೆ ಎಂದು ತಿಳಿಸಿದರು ‌

ಡಿ.ಕೆ ಶಿವಕುಮಾರ್ ಅವರು ಕಣ್ಣೀರು ಹಾಕಿರೋದು ಯಾವತ್ತಾದರೂ ನೋಡಿದ್ದೀರಾ,ಕೊತ್ವಾಲ್ ರಾಮಚಂದ್ರ‌ನಿಂದ 100 ರೂಪಾಯಿಗೆ ಕೆಲಸ ಶುರು ಮಾಡಿದ್ದು ಈ ಡಿಕೆಶಿ ಅದನ್ನು ನೆನಪಿಸಿಕೊಳ್ಳಲಿ ಎಂದು ಹೇಳಿದರು.

ಜವಾಹರ ಲಾಲ್ ನೆಹರು, ಇಂದಿರಾ ಗಾಂಧಿ ಅಂತಹವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಅಂತಹ ಪಕ್ಷದ ಅಧ್ಯಕ್ಷರಾಗಿರುವ ಡಿ.ಕೆ ಯಾವತ್ತಾದರೂ ಕಣ್ಣೀರು ಹಾಕಿದ್ದಾರಾ ಎಂದು ಪ್ರಶ್ನಿಸಿದರು.

ದೇವೇಗೌಡರು, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿನೂ ಕಣ್ಣೀರು ಹಾಕಿದ್ದಾರೆ. ದೇಶಕ್ಕೆ ಅನ್ನ ಕೊಡುವ ರೈತನಿಗೆ ನೋವಾದಾಗ ಹೃದಯ ಮರುಗುತ್ತದೆ. ಅಂತವರಿಗೆ ಕಣ್ಣೀರು ಬರುತ್ತದೆ. ನನ್ನ ಮೊಮ್ಮಗ ಕಣ್ಣೀರು ಹಾಕಿದರ ಬಗ್ಗೆ ಮಾತಾಡುತ್ತಾರೆ. ನಮ್ಮ ವಂಶವೇ ಕಣ್ಣೀರು ಹಾಕುತ್ತದೆ. ನಮ್ಮ ಅಪ್ಪನಿಂದಲೇ ನಮಗೆ ಕಣ್ಣೀರು ಹಾಕೋದು ಬಂದಿದೆ. ಬಡತನವನ್ನು ನಾವು ಅನುಭವಿಸಿದ್ದೇವೆ. ಬಡವರ ಬಗ್ಗೆ ನಮಗೆ ಬೇಗೆ, ನೋವು ಇದೆ ಎಂದರು.

ಡಿಸಿಎಂ ಅವರು ಚನ್ನಪಟ್ಟಣದಲ್ಲಿ 6 ತಿಂಗಳು ಪ್ರವಾಸ ಮಾಡಿದರು. ಅವರೇ ಪಾರ್ಟಿ ಅಧ್ಯಕ್ಷರು, ಅವರೇ ಬಿ ಫಾರಂ ಕೊಡೋದು. ಕನಕಪುರದ ಎಂಎಲ್ಎ, ಮಂತ್ರಿಯಾದವರು ನಾನೇ ನಿಲ್ತೀನಿ ಎಂದಿದ್ದರು. ಅವರ ತಲೆಯಲ್ಲಿ ಏನೇನೂ ಇದ್ಯೋ. ಹೆಚ್ಡಿಕೆ ವರ್ಸಸ್ ಡಿಕೆ ಅಂತ ದಿನ ಚರ್ಚೆಯಾಗ್ತಿದೆ. ರಾಮನಗರವನ್ನು ಜಿಲ್ಲೆ ಮಾಡಿದ್ದು ಕುಮಾರಸ್ವಾಮಿ. ರಾಮನಗರವನ್ನು ಬೆಂಗಳೂರಿಗೆ ಸೇರಿಸ್ತೀನಿ, ಜನರಿಗೆ ಅನುಕೂಲ ಆಗುತ್ತೆ ಎನ್ನುತ್ತಿದ್ದಾರೆ. ಅವರು ರಾಮನಗರವನ್ನು ಉದ್ಧಾರ ಮಾಡುತ್ತಾರಂತೆ ಎಂದು ದೊಡ್ಡಗೌಡರು ಟೀಕಿಸಿದರು.

ವಾಲ್ಮೀಕಿ ಸಮಾಜದ 80 ಕೋಟಿ ತೆಗೆದುಕೊಂಡು ತೆಲಂಗಾಣ ಎಲೆಕ್ಷನ್ ಗೆ ಖರ್ಚು ಮಾಡಿದರು. ಬಡಬಗ್ಗರ ಹಣವನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ನನಗೆ 92 ವರ್ಷ, ನಿಖಿಲ್ ಗೆದ್ದ ಬಳಿಕ ಮಲಗಲ್ಲ. ಈ ಸರ್ಕಾರವನ್ನು ತೆಗೆಯುವವರೆಗೂ ಮಲಗಲ್ಲ.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಶಾಸಕ ಮಂಜುನಾಥ್, ಚಿಕ್ಕ ಸೋಮಣ್ಣ ಮತ್ತಿತರರು ಹಾಜರಿದ್ದರು.

ಈ ಸರ್ಕಾರ ತೆಗೆಯುವ ತನಕ ವಿಶ್ರಮಿಸಲ್ಲ-ಗುಡುಗಿದ ದೇವೇಗೌಡರು Read More

ಬಿಜೆಪಿ ಸದಸ್ಯತ್ವ ಅಭಿಯಾನ:ಮಂಡ್ಯದಲ್ಲಿ ಅಶೋಕ್ ಸಮ್ಮುಖದಲ್ಲಿ ಸಭೆ

ಮಂಡ್ಯ: ಬಿಜೆಪಿ ಸದಸ್ಯತ್ವ ಅಭಿಯಾನದ ಪ್ರಯುಕ್ತ ಬಿಜೆಪಿ ಮಂಡ್ಯ ಕಚೇರಿಯಲ್ಲಿ ಸಭೆ ಹಮ್ಮಿಕೊಂಡು ಸುದೀರ್ಘ ಚರ್ಚೆ ನಡೆಸಲಾಯಿತು.ಪ್ರತಿಪಕ್ಷ ನಾಯಕ ಆರ್.ಅಶೋಕ್ ಅಗತ್ಯ ಸಲಹೆ ನೀಡಿದರು.

ಬಿಜೆಪಿ ಸದಸ್ಯತ್ವದ ಅಭಿಯಾನ ಶ್ರೀರಂಗಪಟ್ಟಣ ಕ್ಷೇತ್ರದ ತಾಲೂಕು ಮಾಜಿ ಅಧ್ಯಕ್ಷ ಟಿ ಶ್ರೀಧರ್ ಹಾಗೂ ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ ಅವರ ನೇತೃತ್ವದಲ್ಲಿ ಸಭೆ ನಡೆಯಿತು.

ಸಭೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಭಾಗವಹಿಸಿ ಅಗತ್ಯ ಸಲಹೆ ನೀಡಿದರು.

ಸದಸ್ಯತ್ವ ಗುರಿ ಮುಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಶೋಕ್ ಮಾರ್ಗದರ್ಶನ ನೀಡಿದರು.

ಜಿಲ್ಲಾ ಅದ್ಯಕ್ಷ ಇಂದ್ರೇಶ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಹೆಚ್. ಆರ್ ಅಶೋಕ್ ಕುಮಾರ್, ಮದ್ದೂರು ಸ್ವಾಮಿ, ಹಿಂಡುವಾಳು ಸಚಿನ್ ಮತ್ತಿತರರು ಭಾಗವಹಿಸಿದ್ದರು.

ಬಿಜೆಪಿ ಸದಸ್ಯತ್ವ ಅಭಿಯಾನ:ಮಂಡ್ಯದಲ್ಲಿ ಅಶೋಕ್ ಸಮ್ಮುಖದಲ್ಲಿ ಸಭೆ Read More