ಜೋರ್ಡಾನ್ ಗೆ ಬಂದ ಮೋದಿ:ಆತ್ಮೀಯವಾಗಿ ಸ್ವಾಗತಿಸಿದ ಜಾಫರ್ ಹಸನ್

ಜೋರ್ಡಾನ್: ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಷ್ಟ್ರಗಳ ಪ್ರವಾಸದಲ್ಲಿ ಸೋಮವಾರ ಜೋರ್ಡಾನ್ ರಾಜಧಾನಿ ಅಮ್ಮನ್‌ನಲ್ಲಿ ಬಂದಿಳಿದರು,ಈ ವೇಳೆ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯಿತು.

ಮೋದಿ‌ ಅವರ ಪ್ರವಾಸದಲ್ಲಿ ಇಥಿಯೋಪಿಯಾ ಮತ್ತು ಒಮಾನ್ ಕೂಡ ಸೇರಿವೆ.
ಜೋರ್ಡಾನ್ ಪ್ರಧಾನಿ ಜಾಫರ್ ಹಸನ್ ಅವರು ಪ್ರಧಾನಿ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು.

ಜೋರ್ಡಾನ್ ಭೇಟಿಯು ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 75 ನೇ ವಾರ್ಷಿಕೋತ್ಸವದೊಂದಿಗೆ ಹೊಂದಿಕೆಯಾಗಿದೆ, ಇದು ದ್ವಿಪಕ್ಷೀಯ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯ ಮೈಲಿಗಲ್ಲಾಗಿದೆ.

ರಾಜ ಅಬ್ದುಲ್ಲಾ II ಇಬ್ನ್ ಅಲ್ ಹುಸೇನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಡಿಸೆಂಬರ್ 15 ರಿಂದ 16 ರವರೆಗೆ ಜೋರ್ಡಾನ್‌ನಲ್ಲಿ ಇರಲಿದ್ದಾರೆ.

ಈ ಸಮಯದಲ್ಲಿ ಅವರು ಭಾರತ-ಜೋರ್ಡಾನ್ ಸಂಬಂಧಗಳ ಸಂಪೂರ್ಣ ಶ್ರೇಣಿಯನ್ನು ಪರಿಶೀಲಿಸಲು ಮತ್ತು ಪ್ರಾದೇಶಿಕ ಅಭಿವೃದ್ಧಿಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಭಾರತ ಮತ್ತು ಜೋರ್ಡಾನ್ ಆರೋಗ್ಯ, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಾಮರ್ಥ್ಯ ವೃದ್ಧಿಯಲ್ಲಿ ಸಹಕರಿಸುತ್ತಿವೆ.

2021 ರಲ್ಲಿ ಉದ್ಘಾಟನೆಯಾದ ಭಾರತ-ಜೋರ್ಡಾನ್ ಮಾಹಿತಿ ತಂತ್ರಜ್ಞಾನದ ಶ್ರೇಷ್ಠತಾ ಕೇಂದ್ರವು ತರಬೇತಿಯನ್ನು ಗುರಿಯಾಗಿರಿಸಿಕೊಂಡ ಒಂದು ಪ್ರಮುಖ ಉಪಕ್ರಮವಾಗಿದೆ ಎಂದು ಬಿಂಬಿಸಲಾಗಿದೆ.

ಜೋರ್ಡಾನ್ ಗೆ ಬಂದ ಮೋದಿ:ಆತ್ಮೀಯವಾಗಿ ಸ್ವಾಗತಿಸಿದ ಜಾಫರ್ ಹಸನ್ Read More

ಡಿಸೆಂಬರ್ ನಲ್ಲಿ ಭಾರತಕ್ಕೆ ಪುಟಿನ್ ಭಾರತ ಭೇಟಿ

ನವದೆಹಲಿ: ಡಿಸೆಂಬರ್ ತಿಂಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಬರಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ,ಅವರು 23 ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಡಿಸೆಂಬರ್ 4 ರಂಸು ಭಾರತಕ್ಕೆ ಆಗಮಿಸಲಿದ್ದಾರೆ.

ಭಾರತ ಭೇಟಿಯ ಸಮಯದಲ್ಲಿ ಪುಟಿನ್ ಪ್ರಧಾನಿ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡೂ ದೇಶಗಳ ಮೇಲೆ ಭಾರೀ ಸುಂಕ ವಿಧಿಸಿರುವುದರಿಂದ ಪುಟಿನ್ ಅವರ ಭಾರತ ಭೇಟಿ ಕುತೂಹಲ ಕೆರಳಿಸಿದೆ.

ಡಿಸೆಂಬರ್ ನಲ್ಲಿ ಭಾರತಕ್ಕೆ ಪುಟಿನ್ ಭಾರತ ಭೇಟಿ Read More

ಭವಿಷ್ಯದಲ್ಲಿ ಭಾರತದ ಆರ್ಥಿಕ ಪ್ರಗತಿ ಉಜ್ವಲ- ಉಲ್ಲಾಸ್ ಕಾಮತ್ ವಿಶ್ವಾಸ

ಮೈಸೂರು: ಮುಂದಿನ ಇಪ್ಪತ್ತು ವರ್ಷಗಳಲ್ಲಿ ಭಾರತ ಆರ್ಥಿಕತೆಯಲ್ಲಿ ವಿಶ್ವದ ಇತರೆ ರಾಷ್ಟ್ರಗಳಿಗಿಂತಲೂ ಉತ್ತಮ ಪ್ರಗತಿ ಸಾಧಿಸಲಿದೆ ಎಂದು ಬೆಂಗಳೂರಿನ ಸಾಮಿ-ಸಬಿನ್ಸಾ ಗ್ರೂಪ್ ನಿರ್ದೇಶಕ ಕೆ. ಉಲ್ಲಾಸ್ ಕಾಮತ್ ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರಿನ ವಿಪ್ರ ಪ್ರೊಫೆಷನಲ್‌ ಫೋರಂ ವತಿಯಿಂದ ವಿಜಯನಗರದ ಜೆಸಿಎಸಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಪಿಎಫ್‌ ಬಿಸಿನೆಸ್‌ ಕಾನ್‌ಕ್ಲೇವ್‌ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವದ ಒಟ್ಟು ಜಿಡಿಪಿ ಅಂದಾಜು 100 ಥ್ರಿಲಿಯನ್‌ಗಳಿದ್ದು, ವಿಶ್ವದ ಹಿರಿಯಣ್ಣ ಎಂದು ಕರೆಯಲ್ಪಡುವ ಅಮೆರಿಕಾದ ಜಿಡಿಪಿ ೩೦ ಥ್ರಿಲಿಯನ್‌ ಇದೆ ಎಂದು ಹೇಳಿದರು ‌

ಆ ಮೂಲಕ ವಿಶ್ವದ ಆರ್ಥಿಕತೆಯ ಮೂರನೇ ಒಂದು ಭಾಗ ಅಮೆರಿಕಾ ಹೊಂದಿದೆ. ಭಾರತದ ಜನಸಂಖ್ಯೆಯ ಶೇ.25ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿದ್ದರೂ ಅಮೆರಿಕಾದ ಆರ್ಥಿಕತೆ ಭಾರತಕ್ಕಿಂತ ಅತ್ಯಂತ ಉತ್ತಮವಾಗಿದೆ,
ಆನಂತರದ ಸ್ಥಾನಗಳಲ್ಲಿ ಚೀನಾ, ಜಪಾನ್‌ ಹಾಗೂ ಭಾರತ ಇದೆ. ಭಾರತ ಆರ್ಥಿಕತೆಯಲ್ಲಿ ವಿಶ್ವದ ನಾಲ್ಕನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ನಮಗಿಂತ ಮುಂದಿರುವ ರಾಷ್ಟ್ರಗಳು ಆರ್ಥಿಕತೆಯಲ್ಲಿ ಸಾಕಷ್ಟು ಮಂಚೂಣಿಯಲ್ಲಿವೆ. ಈ ನಿಟ್ಟಿನಲ್ಲಿ ಭಾರತ ಮತ್ತು ಅಮೆರಿಕಾ ರಾಷ್ಟ್ರಗಳ ನಡುವಿನ ಸಂಬಂಧ ಉತ್ತಮವಾಗಿರಬೇಕಿದ್ದು, ಅವರಿಗೆ ನಮ್ಮ ಅಗತ್ಯತೆ ಇದೆ ಹಾಗೂ ನಮಗೂ ಅವರ ಅವಶ್ಯತೆ ಇದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ರವಿ ಹೆಗ್ಗಡೆ ಮಾತನಾಡಿ, ಕೃತಕ ಬುದ್ದಿಮತ್ತೆ(ಎಐ)ನಿಂದ ದೊಡ್ಡಮಟ್ಟದ ಪರಿಣಾಮ ಬೀರಲಿದ್ದು, ಇಡೀ ವಿಶ್ವವನ್ನೇ ಬದಲಿಸಲಿದೆ. ಪ್ರಮುಖವಾಗಿ ಎಐನಿಂದ ಬ್ರಾಹ್ಮಣ ಸಮುದಾಯದ ಮೇಲೆ ಗಂಭೀರವಾದ ಪರಿಣಾಮ ಉಂಟಾಗಲಿದೆ. ಬ್ರಾಹ್ಮಣರು ಮಾಡುವ ಕೆಲಸವನ್ನು ಎಐ ತಾನೇ ಮಾಡುತ್ತಿದೆ. ಉದಾಹರಣೆಗೆ ಬ್ರಾಹ್ಮಣರು ಹೇಳುವ ಮಂತ್ರವನ್ನು ಇಂದು ಎಐ ಹೇಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಪಿಎಫ್ ಅಧ್ಯಕ್ಷ ಹಾಗೂ ಜಿಎಸ್‌ಎಸ್‌ ಸಮೂಹ ಸಂಸ್ಥೆಗಳ ಮುಖ್ಯಸ್ಥ ಯೋಗಾತ್ಮ ಡಿ. ಶ್ರೀಹರಿ ಅವರು ಮಾತನಾಡಿ, ವಿಪಿಎಫ್‌ ಮೈಸೂರಿನಲ್ಲಿ ತನ್ನ ವಿಂಗ್ ಆರಂಭಿಸಿದೆ. ನಾವು ಎರಡು ಕಾರಣಗಳಿಂದ ಒಂದಾಗುತ್ತಿದ್ದು, ಯಾರಿಗಾದರೂ ತೊಂದರೆ ಎದುರಾದರೆ ನೆರವಿಗೆ ಧಾವಿ ಸುತ್ತೇವೆ. ಮಾಧ್ಯಮ ಕ್ಷೇತ್ರದಲ್ಲಿರುವವರು ನಮ್ಮ ಸಂಪರ್ಕದಲ್ಲಿದ್ದು, ದೊಡ್ಡವರು ಚಿಕ್ಕವರೆಂಬ ತಾರ ತಮ್ಯ ಇಲ್ಲದೆ, ಎಲ್ಲರೂ ಒಂದಾಗಿ ಮುನ್ನಡೆಯುತ್ತಿದ್ದೇವೆ. ವಿಪಿಎಫ್‌ ಪ್ರಸ್ತುತ ಮೈಸೂರಿನಲ್ಲಿ ಆರಂಭಿಸಿ ದ್ದು ಮುಂದೆ ಮೈಸೂರಿನ ಅಕ್ಕಪಕ್ಕದ ನಾಲ್ಕು ಜಿಲ್ಲೆಗಳಲ್ಲೂ ಕಾರ್ಯಕ್ರಮ ಆಯೋಜನೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದ ಚೇರ್ಮೇನ್ ಸಮಾರ್ಥ್ ವಿದ್ಯಾ ಮಾತನಾಡಿ ವಿಫಿಎಫ್ ಘಟಕ ಸ್ಥಾಪನೆ ಮೂಲಕ ಸಮು ದಾಯದ ಜನರನ್ನು ಒಗ್ಗೂಡಿಸಿ ಸಂಕಷ್ಟದಲ್ಲಿರುವವರ ನೆರವಿಗೆ ನಿಲ್ಲುವ ಪ್ರಯತ್ನ ಮೊದಲ ಬಾರಿಗೆ ಯಶಸ್ಸು ಕಂಡಿದ್ದೇವೆ ಎಂದು ಹೇಳಿದರು ‌

ಉದ್ಯಮಿಗಳಾದ ಕೇಶವ್,ಜಿ.ಎಸ್.ಎಸ್.ಎಸ್ ಭರತ್,ಜಯಸಿಂಹ, ವೆಂಕಟೇಶ್,ಭಾಷ್ಯಂ ಎಸ್,ಶ್ರೀನಿವಾಸ್ ವರದರಾಜನ್,ಅನಂತನಾಗರಾಜ್,ರಾಧಕೃಷ್ಣ ಎಸ್ ಹಾಗೂ ವಿಪಿಎಫ್ ಸಮಿತಿ ಉಪಾಧ್ಯಕ್ಷರಾದ ಡಾ. ಮುರುಳಿ,ಎಸ್. ,ಕೆ.ಆರ್. ಸತ್ಯನಾರಾಯಣ್, ಕಾರ್ಯದರ್ಶಿ ಸುಧೀಂದ್ರ ಎ,ಜಂಟಿ ಕಾರ್ಯದರ್ಶಿಗಳಾದ ಶ್ರೀವತ್ಸ, ಮಂಜುನಾಥ್,ಸಮರ್ಥ್,ಖಜಾಂಚಿ ಸತ್ಯಪ್ರಕಾಶ್ ಸಿ.ಎಸ್., ನಿರ್ದೇಶಕರಾದ ಚಂದ್ರಶೇಖರ್ ಹೆಚ್.ಎನ್, ಜಿ.ಎಸ್ ಗಣೇಶ್,ಡಾ ಕಾರ್ತಿಕ್ ಪಂಡಿತ್, ಶಿವಪ್ರಸಾದ್, ಪಿ.ಎಸ್,ನಾರಾಯಣ್ ಡಿ.,ಪ್ರಭಕಾರ್ ರಾವ್. ಕೆ, ಡಾ.ಸವಿತಾ ಎಲ್, ಶಿವಶಂಕರ್ ಕೆ.ಎಸ್ ಉಪಸ್ಥಿತರಿದ್ದರು.

ಭವಿಷ್ಯದಲ್ಲಿ ಭಾರತದ ಆರ್ಥಿಕ ಪ್ರಗತಿ ಉಜ್ವಲ- ಉಲ್ಲಾಸ್ ಕಾಮತ್ ವಿಶ್ವಾಸ Read More

7 ವರ್ಷಗಳ ನಂತರ ಚೀನಾಗೆ ಮೋದಿ ಭೇಟಿ

ಬೀಜಿಂಗ್: ಏಳು ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚೀನಾಕ್ಕೆ ಭೇಟಿ ನೀಡಿದ್ದಾರೆ.

ಶನಿವಾರ ಟಿಯಾಂಜಿನ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರಿಗೆ ಅಲ್ಲಿನ ಆಡಳಿತದಿಂದ ಭವ್ಯ ಸ್ವಾಗತ ನೀಡಲಾಯಿತು. ಪ್ರಧಾನಿ ಮೋದಿ 2018ರಲ್ಲಿ ಚೀನಾ ಪ್ರವಾಸ ಕೈಗೊಂಡಿದ್ದರು.

ವಾಷಿಂಗ್ಟನ್‌ನ ಸುಂಕ ನೀತಿಗಳಿಂದ ಉಂಟಾದ ಭಾರತ-ಅಮೆರಿಕ ಸಂಬಂಧಗಳಲ್ಲಿನ ಹಠಾತ್ ಕುಸಿತದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಚೀನಾದ ಈ ಭೇಟಿ ಹೆಚ್ಚು ಮಹತ್ವ ಪಡೆದಿದೆ.

ಎರಡು ದಿನಗಳ ಜಪಾನ್ ಭೇಟಿ ಮುಗಿಸಿದ ಪ್ರಧಾನಿ ಮೋದಿ ಅವರು, ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ನಡೆಯಲಿರುವ ಶಾಂಘೈ ಸಹಕಾರ ಒಕ್ಕೂಟ ಎಸ್‌ಸಿ ಒ ದ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.ಈ ಹಿನ್ನೆಲೆಯಲ್ಲಿಯೇ ಅವರು ಇಲ್ಲಿಗೆ ಆಗಮಿಸಿದ್ದಾರೆ.

ಅಮೆರಿಕದ ಸುಂಕ ಸಂಘರ್ಷ ಪ್ರಪಂಚದಾದ್ಯಂತದ ಬಹುತೇಕ ಎಲ್ಲಾ ಪ್ರಮುಖ ಆರ್ಥಿಕತೆಗಳ ಮೇಲೆ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಭಾನುವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಪ್ರಧಾನಿ ಮೋದಿಯವರ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಮಾತುಕತೆಯಲ್ಲಿ, ಮೋದಿ ಮತ್ತು ಕ್ಸಿ ಭಾರತ-ಚೀನಾ ಆರ್ಥಿಕ ಸಂಬಂಧಗಳನ್ನು ಪರಿಶೀಲಿಸುವ ನಿರೀಕ್ಷೆಯಿದೆ.

7 ವರ್ಷಗಳ ನಂತರ ಚೀನಾಗೆ ಮೋದಿ ಭೇಟಿ Read More

ವಾಡಿಕೆಗೂ ಮೊದಲೇ ಮುಂಗಾರು:ಕೇರಳ ಕರಾವಳಿಗೆ ಪ್ರವೇಶ

ನವದೆಹಲಿ: ವಾಡಿಕೆಗೂ ಮೊದಲೇ ಕೇರಳ ಕರಾವಳಿಗೆ ಮುಂಗಾರು ಪ್ರವೇಶ ಮಾಡಿದ್ದು ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಮಳೆ ಸುರಿಯುತ್ತಿದೆ.

ಭಾರತೀಯ ಹವಾಮಾನ ಇಲಾಖೆ ಮೇ 27ಕ್ಕೆ ಮುಂಗಾರು ಮಾರುತಗಳು ಕೇರಳ ಕರಾವಳಿ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹೇಳಿತ್ತು. ಆದರೆ 3 ದಿನದ ಮೊದಲೇ ಮುಂಗಾರು ಪ್ರವೇಶವಾಗಿದ್ದು ರೈತರು ಖುಷಿಯಾಗಿದ್ದಾರೆ.

ಸಾಮಾನ್ಯವಾಗಿ ಭಾರತದಲ್ಲಿ ಜೂನ್ 1 ರಂದು ಮುಂಗಾರು ಮಳೆ ಪ್ರವೇಶಿಸುತ್ತದೆ. ಆದರೆ ಈ ಬಾರಿ ನೈಋತ್ಯ ಮಾನ್ಸೂನ್ ಕೇರಳದಲ್ಲಿ ಸಾಮಾನ್ಯ ದಿನಾಂಕಕ್ಕಿಂತ 8 ದಿನಗಳು ಮುಂಚಿತವಾಗಿ ಪ್ರಾರಂಭವಾಗಿರುವುದು ವಿಶೇಷ.

ಈ ಹಿಂದೆ 2009 ರಲ್ಲಿ ಮೇ 23ಕ್ಕೆ ಮುಂಗಾರು ಮಳೆ ಪ್ರವೇಶವಾಗಿತ್ತು. 2023 ರಲ್ಲಿ ಜೂನ್‌ 9, 2024ರಲ್ಲಿ ಮೇ 30 ರಂದು ಮುಂಗಾರು ಪ್ರವೇಶವಾಗಿದ್ದನ್ನು ಸ್ಮರಿಸಬಹುದು.

ವಾಡಿಕೆಗೂ ಮೊದಲೇ ಮುಂಗಾರು:ಕೇರಳ ಕರಾವಳಿಗೆ ಪ್ರವೇಶ Read More

ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ಇತ್ಯರ್ಥಪಡಿಸಿದ್ದು ನಾನೇ:ಟ್ರಂಪ್

ವಾಷಿಂಗ್ಟನ್ : ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸಂಘರ್ಷವನ್ನು ನಾನೇ ಇತ್ಯರ್ಥಪಡಿಸಿದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.

ನಾವು ಪಾಕಿಸ್ತಾನ ಮತ್ತು ಭಾರತದೊಂದಿಗೆ ಏನು ಮಾಡಿದ್ದೇವೆ ಎಂಬುದನ್ನು ನೀವು ನೋಡಿದ್ದೀರಿ. ನಾನು ಅದನ್ನು ವ್ಯಾಪಾರದ ಮೂಲಕ ಇತ್ಯರ್ಥಪಡಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ಮತ್ತೆ ಹೇಳಿದ್ದಾರೆ.

ತಮ್ಮ ಓವಲ್​ ಕಚೇರಿಯಲ್ಲಿ ಬುಧವಾರ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಎರಡರೊಂದಿಗೂ ಅಮೆರಿಕ ದೊಡ್ಡ ಪ್ರಮಾಣದಲ್ಲಿ ವ್ಯವಹಾರ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಈ ಸಂಘರ್ಷದಲ್ಲಿ ಯಾರಾದರೂ ಕೊನೆಯದಾಗಿ ಗುಂಡು ಹಾರಿಸಬೇಕಾಗಿತ್ತು. ಆದರೆ ಗುಂಡಿನ ದಾಳಿ ಇನ್ನಷ್ಟು ಕೆಟ್ಟದಾಗುತ್ತಾ, ದೊಡ್ಡದಾಗುತ್ತಾ, ದೇಶಗಳ ಮಧ್ಯ ಆಳವಾದ ಕಂದಕಕ್ಕೆ ಕಾರಣವಾಗುತ್ತಿತ್ತು. ಹೀಗಾಗಿ ನಾವು ಅವರೊಂದಿಗೆ ಮಾತನಾಡಿದೆವು. ಆದರೆ ನಾನೇ ಇದನ್ನು ಸರಿ ಮಾಡಿದೆ ಎಂದು ಹೇಳಲು ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.

ಪಾಕಿಸ್ತಾನವು ಕೆಲವು ಅತ್ಯುತ್ತಮ ಜನರನ್ನು ಮತ್ತು ಕೆಲವು ಒಳ್ಳೆಯ ನಾಯಕರನ್ನು ಹೊಂದಿದೆ. ಇನ್ನು ಭಾರತ ಹಾಗೂ ನನ್ನ ಸ್ನೇಹಿತ ಮೋದಿ ಎಂದು ಟ್ರಂಪ್ ಹೇಳಿದರು.

ಈ ವೇಳೆ ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಮೋದಿ, ಪರಸ್ಪರ ಸ್ನೇಹಿತ ಎಂದು ಉತ್ತರಿಸಿದರು. ಈ ವೇಳೆ ಮತ್ತೆ ಮಾತು ಮುಂದುವರಿಸಿದ ಟ್ರಂಪ್​, ಅವರು ಒಬ್ಬ ಒಳ್ಳೆಯ ವ್ಯಕ್ತಿ ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಇತ್ಯರ್ಥಗೊಳಿಸಲು ನಾನು ಸಹಾಯ ಮಾಡಿದೆ ಎಂದು ಪದೇ ಪದೇ ಟ್ರಂಪ್ ಹೇಳಿಕೊಳ್ಳುತ್ತಿದ್ದು,​ ಅವರ ಈ ಹೇಳಿಕೆ ಭಾರತದಲ್ಲಿ ಪ್ರತಿಪಕ್ಷಗಳು, ಮೋದಿ ಸರ್ಕಾರ ವಿರುದ್ಧ ಮುಗಿ ಬೀಳುವಂತೆ ಮಾಡಿದೆ.

ಭಾರತ-ಪಾಕಿಸ್ತಾನ ನಡುವಿನ ಸಂಘರ್ಷ ಇತ್ಯರ್ಥಪಡಿಸಿದ್ದು ನಾನೇ:ಟ್ರಂಪ್ Read More

ಭಾರತದ ಬಗ್ಗೆ ಬೇಹುಗಾರಿಕೆ:ಯುಟ್ಯೂಬರ್ ಜ್ಯೋತಿ ಮಲ್ಹೋತ್ರ ಸೇರಿ 6 ಮಂದಿ ಅರೆಸ್ಟ್

ಚಂಡೀಗಢ: ಭಾರತದ ಬಗ್ಗೆ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಯುಟ್ಯೂಬರ್ ಜ್ಯೋತಿ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ.

ಹರಿಯಾಣದಲ್ಲಿ ಭಾರತದ ಬಗ್ಗೆ ಬೇಹುಗಾರಿಕೆ ನಡೆಸಿ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಮಾಹಿತಿ ನೀಡುತ್ತಿದ್ದ ಆರೋಪದ ಮೇಲೆ ಆರು ಜನರನ್ನು ಬಂಧಿಸಲಾಗಿದೆ.

ಆಪರೇಷನ್ ಸಿಂಧೂರ್ ಪ್ರಾರಂಭವಾದಾಗಿನಿಂದ ಈ ಆರೋಪಿಗಳು ಪಾಕಿಸ್ತಾನಕ್ಕೆ ಮಾಹಿತಿಗಳನ್ನು ರವಾನಿಸುತ್ತಿದ್ದರು ಇವರೆಲ್ಲರೂ ಐಎಸ್ಐ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಶತ್ರುಗಳಿಗೆ ಮಾಹಿತಿ ನೀಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಕೈತಾಲ್, ಪಾಣಿಪತ್, ನುಹ್ ಮತ್ತು ಹಿಸಾರ್‌ನಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ. ಹಿಸಾರ್‌ನಿಂದ ಬಂಧಿತರಾದ
ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಆಕೆಯನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.

ಜ್ಯೋತಿ ಮಲ್ಹೋತ್ರಾ ಇದೇ ವರ್ಷ ಮಾರ್ಚ್ ನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಳೆಂದು ಗೊತ್ತಾಗಿದೆ,ಹಾಗಾಗಿ ಪೊಲೀಸರು ಆಕೆಯ ಪಾಸ್‌ಪೋರ್ಟ್ ವಶಪಡಿಸಿಕೊಂಡಿದ್ದಾರೆ.

ಇತರ ಇಬ್ಬರು ಆರೋಪಿಗಳು ಜ್ಯೋತಿಯ ಸಹಚರರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹರಿಯಾಣದ ಮಸ್ತ್‌ಗಢ್ ಚೀಕಾ ಗ್ರಾಮದ ದೇವೇಂದ್ರ ಸಿಂಗ್ (25) ಎಂಬ ಡಿಪ್ಲೊಮಾ ವಿದ್ಯಾರ್ಥಿಯನ್ನು ಸಹ ಬಂಧಿಸಲಾಗಿದೆ.

ಇದಕ್ಕೂ ಮೊದಲು, ಪಂಜಾಬ್‌ನಲ್ಲಿ ಪಾಲಕ್ ಶೇರ್ ಮಸಿಹ್ ಮತ್ತು ಸೂರಜ್ ಮಸಿಹ್ ಎಂಬ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿತ್ತು. ಅವರು ಭಾರತೀಯ ಮಿಲಿಟರಿ ನೆಲೆಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಐಎಸ್ಐ ಗೆ ರವಾನಿಸಿದ್ದರೆಂದು ಆರೋಪಿಸಲಾಗಿದೆ.

ಬಂಧಿತರೆಲ್ಲರೂ ಐಎಸ್ಐ ಜೊತೆ ಸಂಪರ್ಕದಲ್ಲಿದ್ದರು,ಅವರು ಭಾರತದ ರಕ್ಷಣಾ ವ್ಯವಸ್ಥೆ ಮತ್ತು ಮಿಲಿಟರಿ ಚಲನವಲನಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತದ ಬಗ್ಗೆ ಬೇಹುಗಾರಿಕೆ:ಯುಟ್ಯೂಬರ್ ಜ್ಯೋತಿ ಮಲ್ಹೋತ್ರ ಸೇರಿ 6 ಮಂದಿ ಅರೆಸ್ಟ್ Read More

ಆಪರೇಷನ್ ಸಿಂಧೂರ:ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ

ನವದೆಹಲಿ: ಪಹಲ್ಗಾಮ್ ದುಷ್ಕೃತ್ಯಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದ್ದು ಮುಂಜಾನೆ ಆಪರೇಷನ್ ಸಿಂಧೂರ ನಡೆಸಿ ಪಾಕಿಸ್ತಾನ ಹಾಗೂ ಉಗ್ರರಿಗೆ ಶಾಕ್ ನೀಡಿದೆ.

ನಿಷೇಧಿತ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಪ್ರಧಾನ ಕಚೇರಿಗಳನ್ನು ಆಪರೇಷನ್ ಸಿಂಧೂರ್’ ಅಡಿಯಲ್ಲಿ ಗುರಿಯಾಗಿಸಿ ದಾಳಿ ನಡೆಸಲಾಗಿದೆ.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಅಡಗುತಾಣಗಳ ಮೇಲೆ ಭಾರತೀಯ ಸೇನೆ ಬೆಳಗಿನ ಜಾವ ಸುಮಾರು 1.30ರಲ್ಲಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಸೇನೆ ನಡೆಸಿದ ಈ ಕಾರ್ಯಾಚರಣೆಯಲ್ಲಿ ನಿಷೇಧಿತ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಗುಂಪುಗಳಾದ
ಬಹಾವಲ್ಪುರದ ಮರ್ಕಜ್ ಸುಭಾನ್ ಅಲ್ಲಾ, ತೆಹ್ರಾ ಕಲಾನ್‌ನಲ್ಲಿರುವ ಸರ್ಜಲ್, ಕೋಟ್ಲಿಯ ಮರ್ಕಜ್ ಅಬ್ಬಾಸ್ ಮತ್ತು ಮುಜಫರಾಬಾದ್‌ನ ಸೈಯದ್ನಾ ಬಿಲಾಲ್ ಶಿಬಿರಗಳ ಮೇಲೆ ಕರಾರುವಾಕ್ ದಾಳಿ ಮಾಡಲಾಗಿದೆ.

ಮುರ್ಡಿಕೆಯಲ್ಲಿರುವ ನಿಷೇಧಿತ ಲಷ್ಕರ್-ಎ-ತೈಬಾಗೆ ಸೇರಿದ
ಮರ್ಕಜ್ ತೈಬಾ, ಬರ್ನಾಲಾದಲ್ಲಿರುವ ಮರ್ಕಜ್ ಅಹ್ಲೆ ಹದೀಸ್ ಮತ್ತು ಮುಜಫರಾಬಾದ್‌ನ ಶ್ವಾವೈ ನಲ್ಲ ಶಿಬಿರ ಮತ್ತು ಕೋಟ್ಲಿಯಲ್ಲಿರುವ ನಿಷೇಧಿತ ಹಿಜ್ಬುಲ್ ಮುಜಾಹಿದ್ದೀನ್‌ನ ಶಿಬಿರಗಳು ಮತ್ತು ತರಬೇತಿ ಕೇಂದ್ರಗಳಾದ
ಮಕಾಜ್ ರಹೀಲ್ ಶಾಹಿದ್ ಮತ್ತು ಸಿಯಾಲ್‌ಕೋಟ್‌ನಲ್ಲಿರುವ ಮೆಹಮೂನಾ ಜೋಯಾ ಕೇಂದ್ರಗಳನ್ನು ಗುರಿಯಾಗಿಸಲಾಗಿದೆ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ನಾಗರಿಕರನ್ನು ಹತ್ಯೆ ಮಾಡಿದ ಎರಡು ವಾರಗಳ ನಂತರ ಆಪರೇಷನ್ ಸಿಂಧೂರ್ ಅಡಿಯಲ್ಲಿ ಮಿಲಿಟರಿ ದಾಳಿಗಳನ್ನು ನಡೆಸಲಾಗಿದ್ದು,ಹಲವಾರು ಉಗ್ರರು ಮೃತಪಟ್ಟಿದ್ದಾರೆ.

ಆಪರೇಷನ್ ಸಿಂಧೂರ:ಪಹಲ್ಗಾಮ್ ಕೃತ್ಯಕ್ಕೆ ಭಾರತದ ಪ್ರತೀಕಾರ Read More

ಪಾಕ್‌ಗೆ ಮತ್ತೊಂದು ಶಾಕ್‌ ನೀಡಿದ ಭಾರತ

ನವದೆಹಲಿ: ಪಾಕಿಸ್ತಾನ ವಿಮಾನಗಳಿಗೆ ಭಾರತವು ವಾಯುಸೀಮೆ ಬಂದ್‌ ಮಾಡುವ ಮೂಲಕ‌ ಶಾಕ್ ನೀಡಿದೆ.

ಭಾರತದ ವಿಮಾನಗಳಿಗೆ ತನ್ನ ವಾಯುಸೀಮೆಯನ್ನು ಬಳಸದಂತೆ ಪಾಕ್‌ ನಿರ್ಬಂಧ ಹೇರಿದ ನಂತರ ಭಾರತ ಈ ಕ್ರಮವನ್ನು ಕೈಗೊಂಡಿದೆ.

ಭಾರತ ಮತ್ತು ಪಾಕಿಸ್ತಾನ ಎರಡೂ ಮೇ 23ರ ಮಧ್ಯರಾತ್ರಿವರೆಗೆ ಪರಸ್ಪರ ತನ್ನ ವಾಯುಸೀಮೆಯನ್ನು ಬಳಕೆ ಮಾಡುವುದನ್ನು ನಿರ್ಬಂಧಿಸಿವೆ, ಎರಡು ದೇಶಗಳ ನಡುವಿನ ಪರಿಸ್ಥಿತಿ ಸುಧಾರಣೆಯಾಗದೇ ಇದ್ದರೆ ನಿರ್ಬಂಧ ಮತ್ತೆ ಮುಂದುವರಿಯಲಿದೆ.

ಈ ನಿರ್ಧಾರದಿಂದ ಪಾಕಿಸ್ತಾನ ನೋಂದಾಯಿತ ವಿಮಾನಗಳು ಮತ್ತು ಪಾಕಿಸ್ತಾನ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಅಥವಾ ಗುತ್ತಿಗೆ ಪಡೆದ ವಿಮಾನಗಳು, ಮಿಲಿಟರಿ ವಿಮಾನಗಳು ಭಾರತೀಯ ವಾಯುಪ್ರದೇಶವನ್ನು ಬಳಸುವಂತಿಲ್ಲ.

ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನಕ್ಕೆ ಇದರಿಂದ ದೊಡ್ಡ ಪೆಟ್ಟು ಬೀಳಲಿದೆ. ಪಾಕ್‌ ವಿಮಾನಗಳು ಇನ್ನು ಮುಂದೆ ಮಲೇಷ್ಯಾದ ಕೌಲಾಲಂಪುರಕ್ಕೆ ಹೋಗಬೇಕಾದರೆ ಚೀನಾ ವಾಯುಸೀಮೆಯನ್ನು ಬಳಸಿ ಥಾಯ್ಲೆಂಡ್‌ ಮೂಲಕ ಸಂಚರಿಸಬೇಕಿದೆ.

ಪಾಕ್‌ಗೆ ಮತ್ತೊಂದು ಶಾಕ್‌ ನೀಡಿದ ಭಾರತ Read More

ಭಾರತ ತಲುಪಿದ ತಹವ್ವೂರ್ ರಾಣಾಗೆ ಭಾರೀ ಭದ್ರತೆ

ಮುಂಬೈ: ಅಮೆರಿಕದಿಂದ ಗಡಿಪಾರಾಗಿದ್ದ ಮುಂಬೈ ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ಭಾರತಕ್ಕೆ ಕರೆತರಲಾಗಿದೆ,ಭಾರೀ ಭದ್ರತೆಯಲ್ಲಿ ಮುಂದಿನ ಪ್ರಕ್ರಿಯೆ ನಡೆಯುತ್ತಿದೆ.

ಎನ್ಐಎ,ಆರ್ ಎ ಡಬ್ಲ್ಯೂ,ಎಸ್‌ಡಬ್ಲ್ಯು‌ಎಟಿ ತಂಡಗಳು ಅಮೆರಿಕಕ್ಕೆ ತೆರಳಿ ನಿನ್ನೆ ವಿಶೇಷ ವಿಮಾನದಲ್ಲಿ ರಾಣಾ ಜೊತೆ ಭಾರತಕ್ಕೆ ಹೊರಟಿದ್ದರು. ಇಂದು ಮಧ್ಯಾಹ್ನ ಸಂಜೆ ರಾಣಾ ಇದ್ದ ವಿಮಾನ ದೆಹಲಿಯಲ್ಲಿ ಇಳಿಯಿತು.ಬಿಗಿ ಭದ್ರತೆಯಲ್ಲಿ ಮುಂದಿನ ಪ್ರಕ್ರಿಯೆಗಳು ನಡೆದಿವೆ.

ಆತನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸುವ ಸಾಧ್ಯತೆಯಿದೆ. ರಾಣಾ ನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ತುರ್ತು ತಡೆಹಿಡಿಯುವಂತೆ ಕೋರಿ ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ದೇಶದ ಸುಪ್ರೀಂ ಕೋರ್ಟ್ ವಜಾಗೊಳಿಸಿದ ನಂತರ ಭಾರತದ ತನಿಖಾಧಿಕಾರಿಗಳ ತಂಡ ಅಮೆರಿಕಕ್ಕೆ ಪ್ರಯಾಣ ಬೆಳೆಸಿತ್ತು.

ಅಧಿಕಾರಿಗಳ ಪ್ರಕಾರ, ರಾಷ್ಟ್ರ ರಾಜಧಾನಿಯ ತಿಹಾರ್ ಜೈಲಿನಲ್ಲಿರುವ ಹೈ ಸೆಕ್ಯುರಿಟಿ ಸೆಲ್‌ಗಳು ಹೆಚ್ಚಿನ ಅಪಾಯದ ಬಂಧಿತ ವ್ಯಕ್ತಿಗಾಗಿ ಸಿದ್ಧವಾಗಿವೆ.

ಎನ್‌ಐಎ ಇತ್ತೀಚೆಗೆ ರಾಣಾ ಪ್ರಕರಣವನ್ನು ಮುಂಬೈನಿಂದ ದೆಹಲಿಗೆ ವರ್ಗಾಯಿಸುವ ಬಗ್ಗೆ ನ್ಯಾಯಾಲಯದ ಆದೇಶವನ್ನು ಪಡೆದುಕೊಂಡಿದೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ ಏಜೆನ್ಸಿ ಅವರನ್ನು ಕಸ್ಟಡಿಗೆ ವಿಚಾರಣೆಗೆ ಒಳಪಡಿಸಬಹುದು. ಮುಂಬೈ ಭಯೋತ್ಪಾದನಾ ದಾಳಿ ಪ್ರಕರಣದಲ್ಲಿ ರಾಣಾ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ.

ರಾಣಾನನ್ನು NIA ಔಪಚಾರಿಕವಾಗಿ ಬಂಧಿಸಿ, ನಂತರ ಪ್ರಧಾನ ಕಚೇರಿಗೆ ಕರೆದೊಯ್ಯಲಾಗುವುದು. ಅಲ್ಲಿ ಕೆಲವು ದಾಖಲೆಗಳು ಸೇರಿದಂತೆ ಔಪಚಾರಿಕ ಪ್ರಕ್ರಿಯೆಗಳನ್ನು ಮಾಡಲಾಗುತ್ತದೆ. ಅವರನ್ನು 24 ಗಂಟೆಗಳ ಒಳಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.

ಆದರೆ,ರಾಣಾನನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅಥವಾ ದೈಹಿಕವಾಗಿ ಹಾಜರುಪಡಿಸಲಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಭಾರತ ತಲುಪಿದ ತಹವ್ವೂರ್ ರಾಣಾಗೆ ಭಾರೀ ಭದ್ರತೆ Read More