‌ನಟ‌ ದರ್ಶನ್ ಗೆ ಶಾಕ್ ನೀಡಿದ ಕೋರ್ಟ್

ಬೆಂಗಳೂರು: ಹಾಸಿಗೆ, ದಿಂಬು ಕೇಳಿದ್ದ ನಟ ದರ್ಶನ್‌ಗೆ ಕೋರ್ಟ್‌ ಶಾಕ್‌ ಮೇಲೆ ಶಾಕ್ ನೀಡಿದೆ.

ತಿಂಗಳಿಗೊಮ್ಮೆ ಮಾತ್ರ ಬಟ್ಟೆ, ಹೊದಿಕೆ ಒದಗಿಸುವಂತೆ 57ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದೆ.

ಪರಪ್ಪನ ಅಗ್ರಹಾರದಲ್ಲಿರುವ ಕ್ವಾರಂಟೈನ್ ಸೆಲ್‌ನಿಂದ ಮುಖ್ಯ ಸೆಲ್‌ಗೆ ವರ್ಗಾವಣೆ ಕೋರಿದ ವಿಚಾರಕ್ಕೆ ಸಂಬಂಧಿಸಿದಂತೆ ಜೈಲಾಧಿಕಾರಿಗಳಿಗೆ ಕೋರ್ಟ್‌ ಅವಕಾಶ ನೀಡಿದೆ.

ರೇಣುಕಾಸ್ವಾಮಿ ಪ್ರಕರಣದ ಶೀಘ್ರ ವಿಚಾರಣೆ ಕೋರಿದ ಎಸ್‌ಪಿಪಿ ಅರ್ಜಿಯನ್ನು ಕೋರ್ಟ್‌ ಮಾನ್ಯ ಮಾಡಿದೆ.

ಅ.31 ರಂದು ದೋಷಾರೋಪ ನಿಗದಿಗೆ ಕೋರ್ಟ್ ಸೂಚನೆ ನೀಡುವ ಮೂಲಕ ದರ್ಶನ್‌ಗೆ ಮತ್ತೊಂದು ಶಾಕ್‌ ನೀಡಿದೆ.

ದರ್ಶನ್ ಮತ್ತು ಪವಿತ್ರ ಗೌಡ ಸೇರಿದಂತೆ 6 ಜನ ಆರೋಪಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ವಿಚಾರಣೆ ಹಾಜರಾದರೆ ಉಳಿದ ಆರೋಪಿಗಳು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು.

ನನ್ನನ್ನು ಕ್ವಾರಂಟೈನ್‌ ಸೆಲ್‌ನಲ್ಲೇ ಇರಿಸಲಾಗಿದೆ. ಬಿಸಿಲು ಬೀಳದ ಜಾಗದಲ್ಲಿ ವಾಕಿಂಗ್‌ಗೆ ಅವಕಾಶ ನೀಡಲಾಗಿದೆ. ಇದರಿಂದ ನನ್ನ ಆರೋಗ್ಯದಲ್ಲಿ ಮತ್ತಷ್ಟು ವ್ಯತ್ಯಾಸವಾಗಿದೆ. ಈ ಹಿಂದೆ ನ್ಯಾಯಾಲಯವು ನೀಡಿದ್ದ ಆದೇಶಕ್ಕೂ ಜೈಲಿನ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ.

ಜೈಲಿನಲ್ಲಿ ಕನಿಷ್ಠ ಮೂಲ ಸೌಲಭ್ಯಗಳನ್ನೂ ನೀಡುತ್ತಿಲ್ಲ. ಬ್ಯಾರಕ್‌ನಿಂದ ಹೊರಗೆ ಬರುವುದಕ್ಕೂ ಬಿಡುತ್ತಿಲ್ಲ. ಮೈಮೇಲೆ ಬಿಸಿಲು ಬಿದ್ದು ಹಲವು ದಿನಗಳೇ ಆಗಿವೆ. ಕೈಯಲ್ಲಿ ಫಂಗಸ್‌ ಕಾಣಿಸಿಕೊಂಡಿದೆ, ಬೆನ್ನು ನೋವಿನಿಂದ ಬಳಲುತ್ತಿದ್ದೇನೆ,ಆದ್ದರಿಂದ ದಿಂಬು, ಬೆಡ್ ಶೀಟ್, ಹಾಸಿಗೆ ನೀಡುವಂತೆ ದರ್ಶನ್‌ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.

‌ನಟ‌ ದರ್ಶನ್ ಗೆ ಶಾಕ್ ನೀಡಿದ ಕೋರ್ಟ್ Read More

ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು 57ನೇ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.

ಪವಿತ್ರಾ ಗೌಡ ಪರ ವಕೀಲರು ತಾಂತ್ರಿಕ ಕಾರಣ ನೀಡಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಕುರಿತು ಆ.30ರಂದು ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸಿತ್ತು. ಈ ವೇಳೆ ಪವಿತ್ರಗೌಡ ಪರ ಹಿರಿಯ ವಕೀಲ ಬಾಲನ್ ವಾದ ಮಂಡಿಸಿ, ಪವಿತ್ರಗೌಡ ವಿರುದ್ಧ ಆರೋಪಪಟ್ಟಿಯನ್ನು ಬಿಎನ್‌ಎಸ್ ಬದಲು ಸಿಆರ್‌ಪಿಸಿ ಅಡಿಯಲ್ಲಿ ಸಲ್ಲಿಕೆ ಮಾಡಿದ್ದಾರೆ. ಇದು ಕಾನೂನು ಬಾಹಿರವಾಗಿರುವುದರಿಂದ ಕಡ್ಡಾಯ ಜಾಮೀನಿಗೆ ನಮ್ಮ ಕಕ್ಷಿದಾರರು ಅರ್ಹರು, ಹೀಗಾಗಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.

ವಾದ-ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಾಲಯ ಸೆ.2ಕ್ಕೆ ಆದೇಶವನ್ನು ಕಾಯ್ದಿರಿಸಿತ್ತು. ಇದೀಗ ಎ1 ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.

ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ Read More

ಸಿಎಂ ಪತ್ನಿಗೆ ರಿಲೀಫ್, ಸಂಭ್ರಮ:ಕೋರ್ಟ್ ತೀರ್ಪು ಬಿಜೆಪಿಗೆ ಮುಖಭಂಗ-ಹೆಚ್.ವಿ.ರಾಜೀವ್

ಮೈಸೂರು: ನ್ಯಾಯಾಲಯವು ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಪತ್ನಿಗೆ ರಿಲೀಫ್ ನೀಡಿರುವುದನ್ನು ಸ್ವಾಗತಿಸಿ ಸಿಎಂ ತವರು ಮೈಸೂರಿನಲ್ಲಿ ಕೈ ನಾಯಕರು ಸಿಹಿ ಹಂಚಿ‌ ಸಂಭ್ರಮಿಸಿದರು.

ಸಿಹಿ ವಿತರಿಸುತ್ತಿದ್ದ ವೇಳೆ ಅದೇ ಮಾರ್ಗದಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಗೊ. ಮಧುಸೂದನ್ ಅವರಿಗೆ ಸಿಹಿ ನೀಡಿದರು.ಈ‌ ವೇಳೆ ಗೊ. ಮಧುಸೂದನ್ ಅವರು ಸಿದ್ದರಾಮಯ್ಯ ವರಿಗೆ ಸೂಪರ್ ಜೈ ಹೇಳಿದ್ದಾರೆ ಅದಕ್ಕೆ ಕೈ ನಾಯಕರು ಖುಷಿ ಪಟ್ಟಿದ್ದಾರೆ.

ಮುಡಾ ಪ್ರಕರಣ ಸಿಎಂ ಪತ್ನಿಗೆ ರಿಲೀಫ್ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಎಚ್ ವಿ ರಾಜೀವ್ ಸ್ನೇಹ ಬಳಗದ ವತಿಯಿಂದ 101 ಗಣಪತಿ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಭಾವಚಿತ್ರ ಹಿಡಿದು ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಸತ್ಯಮೇವ ಜಯತೆ ಎಂದು ಘೋಷಣೆ ಕೂಗಿ ಸಾರ್ವಜನಿಕರಿಗೆ ಸಿಹಿ ವಿತರಿಸಿ,
ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇವೆ ಎಂದು ಕೂಗಿದರು.

ಈ ವೇಳೆ ಮಾತನಾಡಿದ ಮೂಡ ಮಾಜಿ ಅಧ್ಯಕ್ಷ ಹೆಚ್ ವಿ ರಾಜೀವ್ ಅವರು, ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ ಆರ್. ಅಂಬೇಡ್ಕರ್ ಅವರು ದೇಶಕ್ಕೆ ರಚಿಸಿಕೊಟ್ಟ ಸಂವಿಧಾನದ ಅಡಿಯಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಬಲಿಷ್ಠವಾಗಿದೆ ಪಾರದರ್ಶಕವಾಗಿದೆ ಎಂಬುದಕ್ಕೆ ಪಾರ್ವತಮ್ಮ ಅವರು ಭೂ ಪರಿಹಾರ ಪಡೆದುಕೊಂಡ ಪ್ರಕ್ರಿಯೆಗೆ ಮೂಡ ಸರಿಯಾಗಿ ಕಾರ್ಯನಿರ್ವಹಿಸಿದೆ ಎಂದು ಹೈಕೋರ್ಟ್, ಸುಪ್ರಿಂ ಕೋರ್ಟ್ ನೀಡಿದ ತೀರ್ಪು ನಿದರ್ಶನವಾಗಿದೆ ಎಂದು ಹೇಳಿದರು.

2014ರಲ್ಲಿ ಟ್ರಾನ್ಸ್ ಪರೆನ್ಸಿ ಭೂ ಕಾಯ್ದೆ ಬಂದ ನಂತರ ಮಾರುಕಟ್ಟೆಯ ಬೆಲೆಗಿಂತ ಮೂರು ಪಟ್ಟು ಪರಿಹಾರವನ್ನ ಭೂಮಾಲೀಕರಿಗೆ ನೀಡಬೇಕು ಎಂದು ಕಾಯ್ದೆಯ ನೀತಿ ಜಾರಿಯಾಗಿದೆ, ಬದಲಿ ನಿವೇಶನಕ್ಕೂ ಸಾಕಷ್ಟು ಮಂದಿ ಅರ್ಜಿ ಸಲ್ಲಿಸಿದ್ದರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿ ಇದ್ದ ಜನಪ್ರತಿನಿಧಿಗಳ ಸಮಿತಿ ಮೂಡ ನಿವೇಶನ ಭೂಪರಿಹಾರ ಮತ್ತು ಬದಲಿ ನಿವೇಶನಕ್ಕೆ ಒಪ್ಪಿಗೆ ನೀಡಲಾಗಿತ್ತು, ಆದರೆ ಬಿಜೆಪಿ ಕೇಂದ್ರ ಸರ್ಕಾರ ಇಡಿ ಸಂಸ್ಥೆಯನ್ನ ದುರ್ಬಳಕೆ ಮಾಡಿಕೊಂಡು ಏಕಾಏಕಿ ವ್ಯವಸ್ಥೆಯನ್ನೆ ಅತಂತ್ರ ಮಾಡಲು ಹೊರಟಿತ್ತು ಎಂದು ದೂರಿದರು.

ಈಗ ಬಿಜೆಪಿ ಷಡ್ಯಂತ್ರಕ್ಕೆ ನ್ಯಾಯಾಲಯದ ತೀರ್ಪು ಭಾರಿ ಮುಖಭಂಗವಾಗಿದೆ, ಬೆಂಗಳೂರು ಮೈಸೂರು ಕಾಲ್ನಡಿಗೆ ಇವೆಲ್ಲಾ ಹೈಡ್ರಾಮ ಎಂದು ಕರ್ನಾಟಕದ ಜನತೆಗೆ ಗೊತ್ತಾಗಿದೆ, ಈ ಕೂಡಲೇ ತಪ್ಪನ್ನ ಅರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಕರ್ನಾಟಕ ಬಿಜೆಪಿ ಸಮಿತಿ ರಾಜ್ಯದ ಜನೆತೆಯ ಕ್ಷಮೆ ಕೇಳಬೇಕು ಎಂದು ರಾಜೀವ್ ಆಗ್ರಹಿಸಿದರು.

ಸಂಭ್ರಮಾಚರಣೆಯಲ್ಲಿ ನಗರ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಶಿವಕುಮಾರ್, ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಬಸಪ್ಪ, ಕಂಸಾಳೆ ರವಿ, ಸೇವಾದಳ ಮೋಹನ್ ಕುಮಾರ್,ಯುವ ಕಾಂಗ್ರೆಸ್ ಮಲ್ಲೇಶ್ ಮಲ್ಲು, ಶ್ರೀಕಾಂತ್ ಯಾದವ್, ಹೇಮಂತ್,ಉಮೇಶ್, ಎಸ್ ಎನ್ ರಾಜೇಶ್ ಮತ್ತಿತರ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸಿಎಂ ಪತ್ನಿಗೆ ರಿಲೀಫ್, ಸಂಭ್ರಮ:ಕೋರ್ಟ್ ತೀರ್ಪು ಬಿಜೆಪಿಗೆ ಮುಖಭಂಗ-ಹೆಚ್.ವಿ.ರಾಜೀವ್ Read More

ಸಾವರ್ಕರ್‌ ಬಗ್ಗೆ ರಾಹುಲ್ ಟೀಕೆ:ಕೋರ್ಟ್ ತೀರ್ಪು ಸ್ವಾಗತಿಸಿದ ರಾಕೇಶ್‌ಭಟ್

ಮೈಸೂರು: ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ್ ಸಾವರ್ಕರ್ ಬಗ್ಗೆ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂದಿ ಟೀಕಿಸಿರುವ ಬಗ್ಗೆ ನ್ಯಾಯಾಲಯದ ತೀರ್ಪನ್ನು ವೀರ ಸಾವರ್ಕರ್ ಯುವ ಬಳಗ ಸ್ವಾಗತಿಸಿದೆ.

ರಾಹುಲ್ ಗಾಂಧಿಯವರು ಕೂಡಲೇ ದೇಶಭಕ್ತರ ಕ್ಷಮೆ ಯಾಚಿಸಬೇಕೆಂದು ವೀರ ಸಾವರ್ಕರ್ ಯುವ ಬಳಗ ಒತ್ತಾಯಿಸಿದೆ.

ಸಾವರ್ಕರ್ ಜೈಲಿನಿಂದ ಬ್ರಿಟಿಷರಿಗೆ ಬರೆದಿದ್ದ ಕ್ಷಮಾಪಣಾ ಪತ್ರದಲ್ಲಿ ಯುವರ್ ಫೈತ್ ಫುಲ್ ಸರ್ವೆಂಟ್ ಎಂಬ ಅಭಿವಂದನಾ ಪದ ಬಳಸಿದ್ದರು ಮತ್ತು ಪಿಂಚಣಿ ಪಡೆದಿದ್ದರು ಎಂಬ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶಕ್ಕಾಗಿ ತಮ್ಮ ಜೀವನದ ಬಹು ಪಾಲು ಜೈಲಿನಲ್ಲಿ ಸವೆಸಿದ್ದ ವೀರ ಸಾವರ್ಕರ್ ಒಬ್ಬ ಹೇಡಿ ಎಂದು ಟೀಕಿಸಿದ್ದರು.

ಈ ಬಗ್ಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿತ್ತು, ಮೈಸೂರಿನಲ್ಲಿ ವೀರ ಸಾವರ್ಕರ್ ಬಳಗದಿಂದ ಎರಡು ಬಾರಿ ಪ್ರತಿಭಟನೆ ನಡೆಸಿ ರಾಹುಲ್ ಗಾಂಧಿ ಕ್ಷಮೆ ಯಾಚನೆಗೆ ಅಗ್ರಹಿಸಲಾಗಿತ್ತು.

ಆದರೂ ರಾಹುಲ್ ಗಾಂಧಿ ಟೀಕಿಸುವುದನ್ನು ಮುಂದುವರೆಸಿದ್ದರು. ತಮ್ಮ ನಾಯಕನ ಟೀಕೆಯಿಂದ ಪ್ರೇರಣೆಗೊಂಡ ಅವರ ಅನುಯಾಯಿಗಳು ಹಾಗೂ ಕಾಂಗ್ರೆಸಿನ ಕೆಲ ಮುಖಂಡರು ಅದನ್ನೇ ಮುಂದುವರೆಸಿದರು.

ಕೆಲ ಮೂಲಭೂತವಾದಿ ಮತಾಂಧ ಅನ್ಯ ಮತೀಯರು ಸಹ ಸಾಮಾಜಿಕ ಜಾಲ ತಾಣದಲ್ಲಿ ಸಾವರ್ಕರ್ ಬಗ್ಗೆ ವ್ಯಂಗ್ಯಚಿತ್ರಗಳನ್ನು ಬಳಸಿ ಹೇಡಿ ಮುಂತಾದ ಪದ ಬಳಕೆ ಮಾಡಿ ಟೀಕಿಸಿದ್ದಾರೆ.

ಈಗ ಸರ್ವೋಚ್ಚ ನ್ಯಾಯಾಲಯ ರಾಹುಲ್ ಗಾಂಧಿಗೆ ಛೀಮಾರಿ ಹಾಕಿದೆ. ನ್ಯಾಯಮೂರ್ತಿ ದೀಪಾಂಕರ್ ದತ್ತ ಮತ್ತು ಮನಮೋಹನ್ ಅವರಿದ್ದ ಪೀಠ ಸ್ಪಷ್ಟವಾಗಿ ತೀರ್ಪನ್ನು ನೀಡಿದ್ದಾರೆ.

ಮಹಾತ್ಮಾ ಗಾಂಧಿಯವರು ಕೂಡ ಬ್ರಿಟಿಷ್ ವೈಸರಾಯ್ ಗೆ ಬರೆದ ಪತ್ರಗಳಲ್ಲಿ ಯುವರ್ ಫೈತ್ ಫುಲ್ ಸರ್ವೆಂಟ್ ಎಂಬ ಅಭಿವಂದನಾ ಪದವನ್ನು ಬಳಸುತ್ತಿದ್ದರು, ಅವರನ್ನೂ ರಾಹುಲ್ ಗಾಂಧಿ ಟೀಕಿಸುತ್ತಾರಾ ಎಂದು ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷ
ರಾಕೇಶ್ ಭಟ್ ಪ್ರಶ್ನಿಸಿದ್ದಾರೆ‌.

ಅಂದಿನ ಕಾಲದಲ್ಲಿ ಬ್ರಿಟಿಷರಿಗೆ ಬರೆಯುತ್ತಿದ್ದ ಪತ್ರಗಳಲ್ಲಿ ಈ ರೀತಿ ಅಭಿನಂದನಾ ಪದ ಬಳಸುವುದು ಸಾಮಾನ್ಯವಾಗಿತ್ತು, ಕಲ್ಕತ್ತಾ ನ್ಯಾಯಾಧೀಶರು ಸಹ ಸರ್ವೋಚ್ಛ ನ್ಯಾಯಾಧೀಶರನ್ನು ಇದೇ ರೀತಿ ಸಂಭೋದಿಸುತ್ತಿದ್ದರು ಎಂಬುದನ್ನು ಸಹ ನ್ಯಾಯಾಲಯ ರಾಹುಲ್ ಗಾಂಧಿ ಪರ ವಾದ ಮಂಡಿಸಿದ ಕಾಂಗ್ರೆಸ್ ಮುಖಂಡರೂ ಆದ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಗ್ವಿ ಅವರಿಗೆ ಸ್ಪಷ್ಟವಾಗಿ ತಿಳಿಸಿದೆ.

ಜೊತೆಗೆ ರಾಹುಲ್ ಗಾಂಧಿ ಅವರ ಅಜ್ಜಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗಲೇ ಸಾವರ್ಕರ್ ರವರನ್ನು ಹೊಗಳಿ ಪತ್ರ ಬರೆದಿದ್ದನ್ನು ರಾಹುಲ್ ಗಾಂಧಿಯವರಿಗೆ ಜ್ಞಾಪಿಸಿ,
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಈ ರೀತಿ ನಡೆಸಿಕೊಳ್ಳಬಾರದು ಎಂದು ಸಹ ತಿಳಿವಳಿಕೆ ನೀಡಿದೆ.

ದೇಶದದ್ಯಾಂತ ಸಾವರ್ಕರ್ ಹಾಗೂ ಅವರ ಸಹೋದರರ ತ್ಯಾಗದ ಬಗ್ಗೆ ಹೆಮ್ಮೆ ಪಟ್ಟು ಪ್ರೀತಿಸುವ ಜನರಿದ್ದಾರೆ. ಮತ್ತೊಮ್ಮೆ ಇಂತಹ ಹೇಳಿಕೆ ನೀಡಿದರೆ ನ್ಯಾಯಾಲಯ ಸ್ವಯಂ ಪ್ರೆರಣೆಯಿಂದ (suo moto) ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.

ಈ ತೀರ್ಪನ್ನು ವೀರ ಸಾವರ್ಕರ್ ಯುವ ಬಳಗ ಸ್ವಾಗತಿಸಿದೆ, ಜೊತೆಗೆ ರಾಹುಲ್ ಗಾಂಧಿಯನ್ನು ನ್ಯಾಯಾಲಯಕ್ಕೆ ಕರೆದು ಕ್ಷಮೆ ಕೇಳಿಸಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದೆ.

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಬಗ್ಗೆ ಯಾರೂ ತುಚ್ಚವಾಗಿ ಮಾತನಾಡಬಾರದು. ಅದರಲ್ಲಿಯೂ ರಾಜಕೀಯ ಕಾರಣಕ್ಕೆ ಒಂದು ವರ್ಗವನ್ನು ಓಲೈಸಲು ಇಂತಹ ಕೆಳ ಮಟ್ಟಕ್ಕೆ ಇಳಿಯಬಾರದು ಎಂದು ರಾಕೇಶ್ ಭಟ್ ಹೇಳಿದ್ದಾರೆ.

ಕಳೆದ ವರ್ಷ ಕೆಳ ನ್ಯಾಯಾಲಯದಿಂದಲೂ ರಾಹುಲ್ ಗಾಂಧಿ ಅರ್ಜಿ ತಿರಸ್ಕಾರವಾಗಿತ್ತು. ಹೀಗಾಗಿ ಈಗ ಸರ್ವೋಚ್ಚ ನ್ಯಾಯಾಲಯ ಹೇಳಿರುವುದನ್ನು ದೇಶದ ಎಲ್ಲಾ ನಾಯಕರು, ಅದರಲ್ಲಿಯೂ ಕಾಂಗ್ರೆಸ್ ನಾಯಕರು ಗಮನಿಸಬೇಕು ಎಂದು ಸಲಹೆ ನೀಡಿದ್ದಾರೆ.

ಈಗಲಾದರೂ ರಾಹುಲ್ ಗಾಂಧಿ ದೇಶಭಕ್ತರ ಕ್ಷಮೆಯಾಚಿಸಲಿ ಎಂದು ಅಗ್ರಹಿಸಿದ್ದಾರೆ.

ನೆಹರು ಅವರನ್ನು ಜೈಲಿಗೆ ಹಾಕಿದಾಗ ಅವರ ತಂದೆ ಮೋತಿಲಾಲ್ ನೆಹರು ಸಹ ಕ್ಷಮಾಪಣೆ ಪತ್ರವನ್ನು ವೈಸಾರಾಯ್ ಬಳಿ ಕೊಂಡೊಯ್ದಿದ್ದರು, ಅದು ಜೈಲಿಗೆ ಹಾಕಿದ ಕೇವಲ ನಾಲ್ಕೇ ದಿನಕ್ಕೆ ಎಂಬುದನ್ನು ಸಾವರ್ಕರ್ ಟೀಕಿಸುವ ಕಾಂಗ್ರೆಸ್ ನಾಯಕರು ನೆನೆಸಿಕೊಳ್ಳಬೇಕು ಎಂದು‌ ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷ
ರಾಕೇಶ್ ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಸಾವರ್ಕರ್‌ ಬಗ್ಗೆ ರಾಹುಲ್ ಟೀಕೆ:ಕೋರ್ಟ್ ತೀರ್ಪು ಸ್ವಾಗತಿಸಿದ ರಾಕೇಶ್‌ಭಟ್ Read More

ವಿಜಯ ಮಲ್ಯಗೆ ಲಂಡನ್‌ ಹೈಕೋರ್ಟ್‌ನಲ್ಲಿ ಭಾರೀ ಹಿನ್ನಡೆ

ಲಂಡನ್‌: ಎಸ್‌ಬಿಐ ಸೇರಿ ಭಾರತೀಯ
ಬ್ಯಾಂಕ್‌ಗಳಿಗೆ ವಂಚಿಸಿ ಪರಾರಿಯಾಗಿದ ಉದ್ಯಮಿ ವಿಜಯ ಮಲ್ಯಗೆ ಲಂಡನ್‌ ಹೈಕೋರ್ಟ್‌ನಲ್ಲಿ ಭಾರೀ ಹಿನ್ನಡೆಯಾಗಿದೆ.

ಬ್ಯಾಂಕ್‌ಗಳ ಒಕ್ಕೂಟ ತಮ್ಮನ್ನು ದಿವಾಳಿ ಎಂದು ಪರಿಗಣಿಸಿದ್ದನ್ನು ಪ್ರಶ್ನಿಸಿ ಮಲ್ಯ ಪ್ರಶ್ನಿಸಿದ್ದ ಅರ್ಜಿಯನ್ನು ಲಂಡನ್ ಹೈಕೋರ್ಟ್ ತಿರಸ್ಕರಿಸಿದೆ. ಕಿಂಗ್‌ಫಿಶ‌ರ್ ಏರ್‌ಲೈನ್ಸ್ ಪತನಗೊಂಡ ಬಳಿಕ ಮಲ್ಯ ಲಂಡನ್‌ಗೆ ಪರಾರಿಯಾಗಿ ನೆಲೆಸಿದ್ದರೆಂದು ಆರೋಪಿಸಲಾಗಿದೆ.

ಬ್ಯಾಂಕ್‌ಗಳ ಒಕ್ಕೂಟಕ್ಕೆ 11,000 ಕೋಟಿ ರೂ. ಸಾಲ ಬಾಕಿ ಉಳಿಸಿದ್ದಾರೆಂಬ ಆರೋಪ ಮಲ್ಯ ಮೇಲಿದೆ. ಹೀಗಾಗಿ, ಮಲ್ಯ ಅವರನ್ನು ದಿವಾಳಿ ಎಂದು ಘೋಷಿಸಿ ಆಸ್ತಿ ವಶಪಡಿಸಿಕೊಳ್ಳಬೇಕು ಎಂದು ಬ್ಯಾಂಕ್‌ಗಳು ತೀರ್ಮಾನಿಸಿದ್ದವು.

ಅಲ್ಲದೆ ಬ್ರಿಟನ್‌ನಲ್ಲಿಯೂ ಕೂಡ ಬ್ಯಾಂಕ್‌ಗಳ ಒಕ್ಕೂಟ ಕಾನೂನು ಹೋರಾಟ ನಡೆಸಿದ್ದವು. 2021ರಲ್ಲಿ ಮಲ್ಯರನ್ನು ಬ್ರಿಟನ್‌ ಕೋರ್ಟ್ ದಿವಾಳಿ ಎಂದು ಘೋಷಿಸಿತ್ತು. ಅದನ್ನು ಪ್ರಶ್ನಿಸಿ ಮಲ್ಯ ಮೇಲ್ಮನವಿ ಸಲ್ಲಿಸಿದ್ದರು.

ಬ್ಯಾಂಕ್‌ಗಳು ಈಗಾಗಲೇ ಸಾಲದ ಮೊತ್ತಕ್ಕೆ ಸರಿದೂಗುವಷ್ಟು ಮಲ್ಯ ಅವರ ಆಸ್ತಿಯನ್ನು ವಶಪಡಿಸಿಕೊಂಡಿವೆ.

ವಿಜಯ ಮಲ್ಯಗೆ ಲಂಡನ್‌ ಹೈಕೋರ್ಟ್‌ನಲ್ಲಿ ಭಾರೀ ಹಿನ್ನಡೆ Read More

ಮಹಿಳೆ ಮೇಲೆ ಹಲ್ಲೆ ನಡೆಸಿ ಕರಿಮಣಿ ಸರ ದೋಚಿದ್ದವನಿಗೆ ಕಠಿಣ ಶಿಕ್ಷೆ

ಕೊಡಗು: ಮಹಿಳೆಯ ಮನೆಗೆ ನುಗ್ಗಿ ಹಲ್ಲೆ ಮಾಡಿ ಮಾಂಗಲ್ಯ ಸರ ದೋಚಿದ್ದ ಅಪರಾಧಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.

ಕೊಡಗು ಜಿಲ್ಲೆ,ಮಡಿಕೇರಿಯ ಐ ಡಿಬಿಐ ಬ್ಯಾಂಕ್ ಎದುರಿಗಿನ ಮನೆಯಲ್ಲಿ ವಾಸವಾಗಿದ್ದ ಒಂಟಿ ಮಹಿಳೆ ಮನೆಗೆ ನುಗ್ಗಿ ಹಲ್ಲೆ ಮಾಡಿ, ಚಿನ್ನದ ಕರಿಮಣಿ ಸರ, ಉಂಗುರ ದೋಚಿದ್ದ ಆರೋಪಿಗೆ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.

15 ಸಾವಿರ ದಂಡ ಕೂಡಾ ವಿಧಿಸಿದ್ದು, ಒಂದು ವೇಳೆ ದಂಡದ ಮೊತ್ತವನ್ನು ಪಾವತಿಸದಿದ್ದಲ್ಲಿ 3 ತಿಂಗಳ ಅಧಿಕ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಇಬ್ಬನಿ ರೆಸಾರ್ಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ರಾಜಸ್ಥಾನ ಮೂಲದ ವಿಕಾಸ್ ಜೋರ್ಡಿಯಾ (35) ಎಂಬಾತ ಶಿಕ್ಷೆಗೊಳಗಾದ ಆರೋಪಿ.

5-11-2023 ರಂದು ಮಡಿಕೇರಿ ನಗರದ ಐಡಿಬಿಐ ಬ್ಯಾಂಕ್ ಎದುರು ಮನೆಯಲ್ಲಿ ಒಂಟಿಯಾಗಿ ಸಾಕಮ್ಮ ಪ್ರಭಾಕರ್ ಎಂಬ ಮಹಿಳೆ ವಾಸವಿದ್ದರು.

ಆರೋಪಿ ಬಹುದಿನಗಳಿಂದ ಹೊಂಚು ಹಾಕಿ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿ, ತೀವ್ರವಾಗಿ ಗಾಯಗೊಳಿಸಿ ಕತ್ತಿನಲ್ಲಿದ್ದ ಚಿನ್ನದ ಕರಿಮಣಿ ಸರ ಮತ್ತು ಉಂಗುರವನ್ನು ದೋಚಿ ಪರಾರಿಯಾಗಿದ್ದ.

ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರು 6-11-2023 ರಂದು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.

ಪ್ರಕರಣದ ತನಿಖಾಧಿಕಾರಿಯಾಗಿದ್ದ ಮಡಿಕೇರಿ ನಗರ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಹೆಡ್ ಕಾನ್ಸ್ ಟೇಬಲ್ ಗಳಾದ ಎ.ವಿ. ಕಿರಣ್ ಮತ್ತು ಡಿ. ಹೆಚ್. ಸುಮಿತಾ ಹಾಗೂ ಸಿಬ್ಬಂದಿ ಪ್ರಕರಣಕ್ಕೆ ಸಂಭಂಧಿಸಿದಂತೆ ತನಿಖೆ ಕೈಗೊಂಡು 2-01-2024 ರಂದು ಮಡಿಕೇರಿಯ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ. ಪ್ರಶಾಂತಿ ಅವರು ಆರೋಪ ಸಾಬೀತು ಆದ ಹಿನ್ನೆಲೆಯಲ್ಲಿ ದಿನಾಂಕ ಆರೋಪಿ ವಿಕಾಸ್ ಜೋರ್ಡಿಯಾನನಿಗೆ ಕಠಿಣ ಶಿಕ್ಷೆ ವಿಧಿಸಿದ್ದಾರೆ.

ಮಹಿಳೆ ಮೇಲೆ ಹಲ್ಲೆ ನಡೆಸಿ ಕರಿಮಣಿ ಸರ ದೋಚಿದ್ದವನಿಗೆ ಕಠಿಣ ಶಿಕ್ಷೆ Read More

ಚೆಕ್‌ಬೌನ್ಸ್‌ ಪ್ರಕರಣ:ಮಾಜಿ ಸಚಿವ ಬಿ.ನಾಗೇಂದ್ರಗೆ ಶಿಕ್ಷೆ ಪ್ರಕಟ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಕೇಸ್​ನ ಆರೋಪಿ, ಮಾಜಿ ಸಚಿವ ಬಿ.ನಾಗೇಂದ್ರಗೆ ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿದೆ.

ಚೆಕ್​​ಬೌನ್ಸ್​ ಪ್ರಕರಣದಲ್ಲಿ ಒಂದು ಕೋಟಿ 25 ಲಕ್ಷ ದಂಡ ಪಾವತಿಸುವಂತೆ
ಬಿ.ನಾಗೇಂದ್ರ ಸೇರಿದಂತೆ ಬಿ.ಸಿ.ಇನ್ಫ್ರಾಸ್ಟ್ರಕ್ಚರ್, ಅನಿಲ್ ರಾಜಶೇಖರ್ ಚಂಡೂರು ಭಾಸ್ಕರ್ ಗೆ ಸೂಚಿಸಿದೆ.

ಒಂದು ವೇಳೆ ದಂಡ ಪಾವತಿಸದಿದ್ದರೆ ಒಂದು ವರ್ಷ ಸೆರೆವಾಸ ಅನುಭವಿಸಬೇಕೆಂದು 42ನೇ ಎಸಿಜೆಎಂ ನ್ಯಾಯಾಧೀಶರಾದ ಕೆ.ಎನ್.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.

ದೂರುದಾರ ವಿಎಸ್‌ಎಲ್ ಸ್ಟೀಲ್ಸ್ ಲಿಮಿಟೆಡ್ ಹಾಗೂ ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ಅನಿಲ್ ರಾಜಶೇಖರ್ ಚುಂಡೂರು ಭಾಸ್ಕರ್ ಪಾಲುದಾರಿಕೆಯ ಬಿ.ಸಿ. ಇನ್ಫ್ರಾಸ್ಟ್ರಕ್ಚರ್ ಅಂಡ್ ರಿಸೋರ್ಸ್ ಕಂಪನಿ ನಡುವೆ 2013 ರಿಂದಲೂ ಹಣಕಾಸು ವಿವಾದವಿತ್ತು.

ವಿಎಸ್‌ಎಲ್ ಕಂಪೆನಿ ಪರವಾಗಿ ಕೋರ್ಟ್ ಆದೇಶ ನೀಡಿದ್ದು, ಬಿ. ನಾಗೇಂದ್ರ ಪಾಲುದಾರಿಕೆಯ ಕಂಪೆನಿ ಒಟ್ಟು 2 ಕೋಟಿ 53 ಲಕ್ಷ ಪಾವತಿಸಬೇಕಿತ್ತು. ಇದರ ಭಾಗವಾಗಿ 1 ಕೋಟಿ ರೂಪಾಯಿಯ ಚೆಕ್ ಅನ್ನು ನೀಡಲಾಗಿತ್ತು.

ಆದರೆ, 2022 ರಲ್ಲಿ ಚೆಕ್​ಬೌನ್ಸ್ ಆದ ಹಿನ್ನಲೆಯಲ್ಲಿ ವಿಎಸ್‌ಎಲ್ ಸ್ಟೀಲ್ಸ್ ಲಿಮಿಟೆಡ್ ಕೇಸ್ ದಾಖಲಿಸಿತ್ತು. ವಿಚಾರಣೆ ಬಳಿಕ ಕೋರ್ಟ್ ತೀರ್ಪು ನೀಡಿದ್ದು, 1 ಕೋಟಿ 23 ಲಕ್ಷ ದಂಡ ಪಾವತಿಸುವಂತೆ ಆದೇಶ ನೀಡಿದೆ. ಇದರಲ್ಲಿ 10 ಸಾವಿರ ಸರ್ಕಾರಕ್ಕೆ ಉಳಿದ ಹಣ ದೂರುದಾರ ಕಂಪೆನಿಗೆ ಪಾವತಿಸುವಂತೆ ಕೋರ್ಟ್ ಆದೇಶ ನೀಡಿದೆ. ತಪ್ಪಿದಲ್ಲಿ 1 ವರ್ಷ ಸೆರೆವಾಸದ ಶಿಕ್ಷೆ ಅನುಭವಿಸಬೇಕೆಂದು ಸೂಚಿಸಿದೆ.

ಚೆಕ್‌ಬೌನ್ಸ್‌ ಪ್ರಕರಣ:ಮಾಜಿ ಸಚಿವ ಬಿ.ನಾಗೇಂದ್ರಗೆ ಶಿಕ್ಷೆ ಪ್ರಕಟ Read More

ಪೋಕ್ಸೋ ಕೇಸ್ ನಲ್ಲಿ ಯಡಿಯೂರಪ್ಪಾಗೆ ಮತ್ತೆ ಸಂಕಷ್ಟ

ಬೆಂಗಳೂರು: ಪೋಕ್ಸೋ ಕೇಸ್ ನಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಮಾರ್ಚ್ 15ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿ ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯ ಆದೇಶಿಸಿದ್ದು,ಇದೇ‌ ನ್ಯಾಯಾಲಯದಲ್ಲೇ
ವಿಚಾರಣೆ ನಡೆಯಲಿದೆ.

ಬಿ.ಎಸ್ ಯಡಿಯೂರಪ್ಪ ಮತ್ತು ಇತರೆ ಆರೋಪಿಗಳಿಗೆ ಸಮನ್ಸ್ ನೀಡಿದೆ. ಸಹ ಆರೋಪಿಗಳಾದ ವೈ.ಎಂ ಅರುಣ, ರುದ್ರೇಶ ,ಮರುಳಸಿದ್ದಯ್ಯ ಜಿ.ಮರಿಸ್ವಾಮಿಗೂ ಸಮನ್ಸ್ ಜಾರಿಗೆ ಕೋರ್ಟ್ ಆದೇಶ ಹೊರಡಿಸಿದೆ.

ಪೋಕ್ಸೋ ಕೇಸ್ ನಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಹೈಕೋರ್ಟ್ ಇತ್ತೀಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.

ಬಿ.ಎಸ್ ಯಡಿಯೂರಪ್ಪಗೆ ಬಿಗ್ ರಿಲೀಫ್ ನೀಡಿದ್ದ ಹೈಕೋರ್ಟ್ ಯಡಿಯೂರಪ್ಪರನ್ನು ಬಂಧಿಸದಂತೆ ಸೂಚನೆ ನೀಡಿತ್ತು. ಬಳಿಕ ವಿಚಾರಣೆಯ ಖುದ್ದು ಹಾಜರಾತಿಗೆ ವಿನಾಯಿತಿ ನೀಡಲಾಗಿತ್ತು.

ಪೋಕ್ಸೋ ಕೇಸ್ ನಲ್ಲಿ ಯಡಿಯೂರಪ್ಪಾಗೆ ಮತ್ತೆ ಸಂಕಷ್ಟ Read More

ಕೋರ್ಟ್ ನಲ್ಲಿ ವಾದಿಸಲಿದ್ದಾರೆ‌ ಸ್ನೇಹಮಯಿ ಕೃಷ್ಣ

ಮೈಸೂರು:ಮುಡಾದಿಂದ ಪರಿಹಾರ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ಪ್ರಕರಣದಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ಸ್ವತಃ ‌ವಾದ ಮಂಡಿಸಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ, ಅವರ ಸೋದರ ಮಾವ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ದಾಖಲಾದ ಪ್ರಕರಣವನ್ನು ವೈಯಕ್ತಿಕವಾಗಿ ವಾದಿಸಲು ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.

ತನಿಖೆಯ ಬಗ್ಗೆ ಅಗತ್ಯ ದಾಖಲೆಗಳನ್ನು ಮತ್ತು ಅಂತಿಮ ವರದಿಯನ್ನು ಮಾರ್ಚ್ 1 ರೊಳಗೆ ಕೃಷ್ಣ ಅವರಿಗೆ ಸಲ್ಲಿಸುವಂತೆ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದೆ.

ಸ್ನೇಹಮಯಿ‌ ಕೃಷ್ಣ ಮತ್ತು ಲೋಕಾಯುಕ್ತ ಪೊಲೀಸರನ್ನು ಪ್ರತಿನಿಧಿಸುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟೇಶ್ ಅರಬಟ್ಟಿ ಅವರ ವಾದ ಆಲಿಸಿದ ನಂತರ ಹಾಲಿ ಮತ್ತು ಮಾಜಿ ಸಂಸದರು ಜಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಆದೇಶವನ್ನು ಹೊರಡಿಸಿ, ವಿಚಾರಣೆಯನ್ನು ಮಾರ್ಚ್ 7 ಕ್ಕೆ ಮುಂದೂಡಿದರು.

ಈ ಹಿಂದೆ, ಕೃಷ್ಣ ಅವರು ವೈಯಕ್ತಿಕವಾಗಿ ಪಕ್ಷಕಾರರಾಗಿ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡಬಹುದು ಎಂದು ಸಲ್ಲಿಸಿದರು. ಸಿಆರ್ಪಿಸಿಯ ಸೆಕ್ಷನ್ 173 ರ ಅಡಿಯಲ್ಲಿ ಅವರು ಅರ್ಜಿ ಸಲ್ಲಿಸಿದ್ದು, ಪ್ರಕರಣವನ್ನು ವಿಚಾರಣೆಗೆ ಒಳಪಡಿಸಲು ಅಂತಿಮ ವರದಿಯ ಪ್ರತಿಯನ್ನು ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.

ನ್ಯಾಯಾಲಯವು ಮೆಮೋ ಮತ್ತು ಅರ್ಜಿ ಎರಡಕ್ಕೂ ಅನುಮತಿ ನೀಡಿತು ಮತ್ತು ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಸಂಪೂರ್ಣ ಅಂತಿಮ ವರದಿಯ ಪ್ರತಿಯನ್ನು ಸಲ್ಲಿಸುವಂತೆ ರಿಜಿಸ್ಟ್ರಿಗೆ ನಿರ್ದೇಶನ ನೀಡಿತು.

ಎಸ್ ಪಿಪಿ ಪರವಾಗಿ, ತನಿಖಾ ಸಂಸ್ಥೆ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಒಂದು ವಾರದೊಳಗೆ ಮೈಸೂರಿನ ತನಿಖಾಧಿಕಾರಿಗಳ ಕಚೇರಿಯಲ್ಲಿ ದೂರುದಾರರಿಗೆ ಸಲ್ಲಿಸಲಿದೆ ಎಂದು ಮೆಮೋ ಸಲ್ಲಿಸಲಾಯಿತು

ದೂರುದಾರರು ಸಹ ಒಪ್ಪಿಕೊಂಡರು ಮತ್ತು ಮಾರ್ಚ್ 1 ರಂದು ಅಥವಾ ಅದಕ್ಕೂ ಮೊದಲು ದಾಖಲೆಗಳನ್ನು ಒದಗಿಸಬಹುದು ಎಂದು ವಿನಂತಿಸಿದರು.

ಲೋಕಾಯುಕ್ತ ಪೊಲೀಸರು ಇತ್ತೀಚೆಗೆ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಈ ನಡೆ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ತನಿಖಾ ಸಂಸ್ಥೆ ಪ್ರಭಾವಕ್ಕೆ ಒಳಗಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಆರೋಪಿಸಿದ್ದರು, ಇದೀಗ ತಾವೇ ಖುದ್ದು ಕೋರ್ಟ್‌ ನಲ್ಲಿ ಪ್ರಕರಣದ ಬಗ್ಗೆ ವಾದಿಸಲಿದ್ದಾರೆ.

ಕೋರ್ಟ್ ನಲ್ಲಿ ವಾದಿಸಲಿದ್ದಾರೆ‌ ಸ್ನೇಹಮಯಿ ಕೃಷ್ಣ Read More

ಮುಡಾ ಕೇಸ್ ಸಿಬಿಐಗೆ ವಹಿಸಲು ಕೋರ್ಟ್ ನಿರಾಕರಣೆ :ಸತ್ಯಕ್ಕೆ ಸಿಕ್ಕ ಜಯ- ತೇಜಸ್ವಿ

ಮೈಸೂರು:ಧಾರವಾಡ ಹೈಕೋರ್ಟ್ ಮುಡಾ ಕೇಸನ್ನು ಸಿಬಿಐ ತನಿಖೆಗೆ ವಹಿಸಲು ನಿರಾಕರಿಸಿರುವುದು ಸತ್ಯಕ್ಕೆ ಜಯ ಸಿಕ್ಕಿದಂತಾಗಿದೆ ಎಂದು
ಕೃಷ್ಣ ರಾಜ ಕ್ಷೇತ್ರದ ಯುವ ಕಾಂಗ್ರೆಸ್ ಮುಖಂಡ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.

ಸುಮಾರು 40 ವರ್ಷದ ರಾಜಕಾರಣದ ಇತಿಹಾಸದಲ್ಲಿ ಸಿದ್ದರಾಮಯ್ಯನವರು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿಕೊಂಡು ಬಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿ, ಉಪಮುಖ್ಯಮಂತ್ರಿಗಳಾಗಿ, ಸಚಿವರಾಗಿ ರಾಜ್ಯಕ್ಕೆ ಮತ್ತು ವಿಶೇಷವಾಗಿ ಮೈಸೂರಿಗೆ ಗಣನೀಯ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.

ಇಂತಹ ಧೀಮಂತ ನಾಯಕನ ವಿರುದ್ಧ ಬಿಜೆಪಿಯವರು ಮತ್ತು ಕಾಣದ ಕೈಗಳು ಎಷ್ಟೆ ಷಡ್ಯಂತ್ರ ಮಾಡಿದರೂ ಸತ್ಯಕ್ಕೆ ಜಯವಾಗಲಿದೆ ಎಂಬುದಕ್ಕೆ ಧಾರವಾಡ ಹೈಕೋರ್ಟ್ ತೀರ್ಪು ಸಾಕ್ಷಿ ಎಂದು ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ.

ಮುಡಾ ಕೇಸ್ ಸಿಬಿಐಗೆ ವಹಿಸಲು ಕೋರ್ಟ್ ನಿರಾಕರಣೆ :ಸತ್ಯಕ್ಕೆ ಸಿಕ್ಕ ಜಯ- ತೇಜಸ್ವಿ Read More