ಕುರ್ಚಿಗಾಗಿ ಕಿತ್ತಾಡೋದೇ ಅಭಿವೃದ್ಧಿ ಅಂದುಕೊಂಡಿದ್ದಾರೆ ಕಾಂಗ್ರೆಸಿಗರು-ಅಶೋಕ

ಬೆಂಗಳೂರು: ಸರ್ಕಾರ ನಡೆಸುವುದು, ಅಭಿವೃದ್ಧಿ ಮಾಡುವುದು ಅಂದರೆ 3 ತಿಂಗಳಿಗೋ, 6 ತಿಂಗಳಿಗೋ ಒಮ್ಮೆ ಗೃಹಲಕ್ಷ್ಮಿ ಹಣ ಅಕೌಂಟಿಗೆ ಹಾಕೋದು, ಬಾಕಿ ಸಮಯದಲ್ಲಿ ರಾಜಕೀಯ ಮಾಡೋದು, ಕುರ್ಚಿಗಾಗಿ ಕಿತ್ತಾಡೋದು ಅಂದುಕೊಂಡಿದ್ದಾರೆ ಕಾಂಗ್ರೆಸ್ ನಾಯಕರು ಎಂದು ಆರ್.ಅಶೋಕ್ ಜರಿದಿದ್ದಾರೆ.

ರಸ್ತೆ, ಚರಂಡಿ, ಮೂಲಸೌಕರ್ಯ ನಿರ್ಮಾಣದಿಂದ ಬಡವರು ಉದ್ಧಾರ ಆಗಿಲ್ಲ ಅನ್ನೋ ಮನಸ್ಥಿತಿ ಇರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಜನತೆ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ ಎಂದು ‌ಟ್ವೀಟ್ ಮಾಡಿ ಪ್ರತಿಪಕ್ಷ ನಾಯಕ ಪ್ರಶ್ನಿಸಿದ್ದಾರೆ.

ರಸ್ತೆ, ಚರಂಡಿ ಬೇಡ ಅಂದಮೇಲೆ, ತುಮಕೂರಿನವರೆಗೂ ಮೆಟ್ರೋ ಯಾಕೆ ಬೇಕು ಪರಮೇಶ್ವರ್ ಅವರೇ,ಎಸ್ ಸಿ ಎಸ್ ಪಿ- ಟಿ ಎಸ್ ಪಿ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವಂತೆ, ಮೆಟ್ರೋ ಕಾಮಗಾರಿಯ ಹಣವನ್ನೂ ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡು ಬಿಡಿ ಎಂದು ಅಶೋಕ್ ವ್ಯಂಗ್ಯವಾಗಿ‌ ಚಾಟಿ ಬೀಸಿದ್ದಾರೆ‌.

ಒಟ್ಟಿನಲ್ಲಿ ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ತೊಲಗೊವರೆಗೂ ರಾಜ್ಯದಲ್ಲಿ ಅಭಿವೃದ್ಧಿ ಅಸಾಧ್ಯ ಅದಂತೂ ಗ್ಯಾರೆಂಟಿ ಎಂದು ಅಶೋಕ್ ಟೀಕಿಸಿದ್ದಾರೆ.

ಕುರ್ಚಿಗಾಗಿ ಕಿತ್ತಾಡೋದೇ ಅಭಿವೃದ್ಧಿ ಅಂದುಕೊಂಡಿದ್ದಾರೆ ಕಾಂಗ್ರೆಸಿಗರು-ಅಶೋಕ Read More

ಸಿಎಂ ಸ್ಥಾನದ ಕಚ್ಚಾಟದಿಂದ ಆಡಳಿತ ಯಂತ್ರ ನಿಷ್ಕ್ರಿಯ:ಅಶೋಕ್ ಟೀಕೆ

ಬೆಂಗಳೂರು: ಸಿಎಂ ಸ್ಥಾನಕ್ಕಾಗಿ ನಡೆಯುತ್ತಿರುವ ಕಚ್ಚಾಟದಿಂದಾಗಿ ಆಡಳಿತ ಯಂತ್ರ ನಿಷ್ಕ್ರಿಯವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್ ಆರೋಪಿಸಿದ್ದಾರೆ.

ಶಾಸಕರ ಕಚೇರಿ ಮುಂಭಾಗ ಆಯೋಜಿಸಿದ್ದ ವಂದೇ ಮಾತರಂ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕೂಡಲೇ ಕಾಂಗ್ರೆಸ್‌ ಹೈಕಮಾಂಡ್‌ ಯಾರು ಮುಖ್ಯಮಂತ್ರಿ ಯಾರು ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಒತ್ತಾಯಿಸಿದರು.

ಡಿ.ಕೆ.ಶಿವಕುಮಾರ್‌ ಅವರನ್ನು ಸಿಎಂ ಪದವಿಯಲ್ಲಿ ಕೂರಿಸಬೇಕು ಎಂದು ಅವರ ಪರ ಶಾಸಕರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟ ಅಂತಿಮ ಹಂತಕ್ಕೆ ಬಂದಿದೆ. ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ತೀರ್ಮಾನ ನೀಡಿಲ್ಲದಿದ್ದರೆ ಸರ್ಕಾರ ನಡೆಯುವುದಿಲ್ಲ,ಅಧಿಕಾರಿಗಳು ಕೆಲಸ ಮಾಡುವುದಿಲ್ಲ, ಆಡಳಿತಯಂತ್ರ ಕೋಮಾದಲ್ಲಿದೆ ಎಂದು ಲೇವಡಿ ಮಾಡಿದರು.

ಸಾರ್ವಜನಿಕರು, ರೈತ ಸಮುದಾಯ, ವಿದ್ಯಾರ್ಥಿಗಳು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಕಾಳಜಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಇಲ್ಲ,ಇತ್ತ
ಸಿದ್ದರಾಮಯ್ಯ‌ ಅವರನ್ನು ಉಳಿಸಲು ಒಂದು ಗ್ಯಾಂಗ್‌, ಇಳಿಸಲು ಮತ್ತೊಂದು ಗ್ಯಾಂಗ್‌ ಕೆಲಸ ಮಾಡುತ್ತಿದೆ. ಡಿ.ಕೆ.ಶಿವಕುಮಾರ್‌ ಸಿಎಂ ಆಗಬೇಕೆಂದು ಒಂದು ತಂಡ, ಆಗಬಾರದೆಂದು ಮತ್ತೊಂದು ತಂಡ ತಂತ್ರ- ಕುತಂತ್ರ ಮಾಡುತ್ತಿವೆ ಎಂದು ಅಶೋಕ್ ಟೇಕಾಪ್ರಹಾರ ನಡೆಸಿದರು.

ರಾಜ್ಯದಲ್ಲಿ ಅಪರಾಧ ಕೃತ್ಯಗಳು ಹೆಚ್ಚಿವೆ. ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರಾಜಕೀಯ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಯಾರು ಮುಖ್ಯಮಂತ್ರಿ ಅಂತಾ ಗೊತ್ತಾಗಿಲ್ಲ, ರಾಹುಲ್‌ ಗಾಂಧಿ ವೀಕ್‌ ಲೀಡರ್‌, ಇಡೀ ರಾಜ್ಯದಲ್ಲಿ ವೀಕ್‌ ನಾಯಕತ್ವ ಎದ್ದು ಕಾಣುತ್ತಿದೆ. ಈ ಗೇಮ್‌ಗಳ ನಡುವೆ ರಾಜ್ಯದ ಜನರು ಪರಿತಪಿಸುತ್ತಿದ್ದಾರೆ, ಕೂಡಲೇ ಕಾಂಗ್ರೆಸ್‌ ಹೈಕಮಾಂಡ್‌ ಸಿಎಂ ಬಗ್ಗೆ ತನ್ನ ತೀರ್ಮಾನ ನೀಡಬೇಕು ಎಂದು ಒತ್ತಾಯಿಸಿ ದರು.

ಕಾಂಗ್ರೆಸ್‌ನ ಇಬ್ಬರು ಶಾಸಕರು ಜೈಲಲ್ಲಿದ್ದಾರೆ. ಅವರ ಮತಗಳನ್ನು ಕೇಳಲು ಡಿಕೆಶಿ ಜೈಲಿಗೆ ಹೋಗಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಇಂತಹ ಪಾಡು ಬಂದಿರುವುದು ಶೋಚನೀಯ,
136 ಶಾಸಕರನ್ನು ನಿಯಂತ್ರಣದಲ್ಲಿಟ್ಟು
ಕೊಳ್ಳಲು ಸಾಧ್ಯವಾಗುತ್ತಿಲ್ಲ, ವಿರೋಧ ಪಕ್ಷದ ಕಾಟ ತಡೆದುಕೊಳ್ಳಲು ಆಗುತ್ತಿಲ್ಲ ಎಂದು ಹೇಳುವುದಾದರೆ, ನಮ್ಮ ವಿರೋಧ ಪಕ್ಷ ಬಲವಾಗಿದೆ ಎಂದರ್ಥ ಎಂದು ಅಶೋಕ ಟಾಂಗ್ ನೀಡಿದರು.

ಸಿಎಂ ಸ್ಥಾನದ ಕಚ್ಚಾಟದಿಂದ ಆಡಳಿತ ಯಂತ್ರ ನಿಷ್ಕ್ರಿಯ:ಅಶೋಕ್ ಟೀಕೆ Read More

ಕಾಂಗ್ರೆಸ್ ಸರ್ಕಾರದ ಉದ್ಧಟತನಕ್ಕೆ ಮತ್ತೋರ್ವ ರೈತ ಬಲಿ:ಅಶೋಕ್ ಕಿಡಿ

ಬೆಂಗಳೂರು: ಸಮಸ್ಯೆ ಪರಿಹಾರಕ್ಕಾಗಿ ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ಸುತ್ತಿ ಬೇಸತ್ತು ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಮೃತಪಟ್ಟಿರುವುದು ಘಾಸಿ ಉಂಟುಮಾಡಿದೆ ಎಂದು ‌ಪ್ರತಿಪಕ್ಷ ನಾಯಕ ಆರ್.ಅಶೋಕ್ ನೊಂದು ನುಡಿದಿದ್ದಾರೆ.

ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕು ಮೂಡನಹಳ್ಳಿ ಗ್ರಾಮದ ಮಂಜೇಗೌಡ ಎಂಬ ಬಡ ರೈತ ಸಾವು ಬದುಕಿನ ಹೋರಾಟದಲ್ಲಿ ಸೋತು ಇಂದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮನಸಿಗೆ ಘಾಸಿಯಾಗಿದೆ ಎಂದು ಟ್ವೀಟ್ ಮಾಡಿ ಅವರು ಹೇಳಿದ್ದಾರೆ.

ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ಕಾಟಾಚಾರಕ್ಕೆ ಒಂದು ದಿನ ಜನಸ್ಪಂದನ ಕಾರ್ಯಕ್ರಮ ನಡೆಸಿ ಫೋಟೋ ತೆಗೆಸಿಕೊಂಡು ಪುಟಗಟ್ಟಲೆ ಜಾಹೀರಾತು ಕೊಟ್ಟು ಬಿಟ್ಟಿ ಪ್ರಚಾರ ಪಡೆದುಕೊಂಡಿರಲ್ಲ ಇದರಿಂದ ರೈತರು, ಜನಸಾಮಾನ್ಯರಿಗೆ ಏನು ಪ್ರಯೋಜನವಾಗಿದೆ ಎಂದು ಕಾರವಾಗಿ ಪ್ರಶ್ನಿಸಿದ್ದಾರೆ.

ಪ್ರತಿ ತಿಂಗಳು ಜನಸ್ಪಂದನ ಮಾಡಿ ಜನರ ಅಹವಾಲು ಸ್ವೀಕರಿಸಿ ಎಂದು ತಾವು ಕೊಟ್ಟ ಆದೇಶ ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ನಿಮ್ಮ ಮಾತಿಗೆ ಸಚಿವರು, ಶಾಸಕರು, ಅಧಿಕಾರಿಗಳು ಯಾರೂ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಬಡವರು, ರೈತರು ಸರ್ಕಾರಿ ಕಚೇರಿಗಳಿಗೆ ಬಂದರೆ ಅವರನ್ನು ಒಳಗೆ ಕರೆದು ಅವರ ಅಹವಾಲು ಕೇಳುವ, ಅವರ ಅರ್ಜಿ ಸ್ವೀಕರಿಸುವ ಕನಿಷ್ಠ ಸೌಜನ್ಯವೂ ಇಲ್ಲದಂತಾಗಿದೆ ನಿಮ್ಮ ಸಂವೇದನಾರಹಿತ ಸರ್ಕಾರಕ್ಕೆ ಎಂದು ‌ಅಶೋಕ್ ಚಾಟಿ ಬೀಸಿದ್ದಾರೆ‌

ನಿಮ್ಮ ಈ ದುರಾಡಳಿತಕ್ಕೆ, ಬೇಜವಾಬ್ದಾರಿತನಕ್ಕೆ, ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಅಮಾಯಕ ಜೀವಗಳು ಬಲಿಯಾಗಬೇಕು, ಜನರ ಪಾಲಿಗೆ ನಿಮ್ಮ ಸರ್ಕಾರ ಎಂದೋ ಸತ್ತು ಹೋಗಿದೆ, ಸಾಕು ಈ ಭಂಡ ಬಾಳು. ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಉದ್ಧಟತನಕ್ಕೆ ಮತ್ತೋರ್ವ ರೈತ ಬಲಿ:ಅಶೋಕ್ ಕಿಡಿ Read More

ರಾಜ್ಯ ಸರ್ಕಾರದ ವಿರುದ್ಧ ಸಿ.ಟಿ.ರವಿ ಕಿಡಿ

ಬೆಳಗಾವಿ: ಆಡಳಿತ ವ್ಯವಸ್ಥೆ ಭ್ರಷ್ಟತೆಯಿಂದ
ಕೂಡಿದರೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ನಿರೀಕ್ಷಿಸುವುದು ಅಸಾಧ್ಯ ಎಂದು ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ, ವಿಜಯಪುರ, ರಾಯಚೂರು, ಬೀದರ್, ಕಲಬುರಗಿಯಲ್ಲಿ ಸಾಕಷ್ಟು ಬೆಳೆ ಹಾನಿಯಾಗಿದೆ. ಅತಿವೃಷ್ಟಿಯಿಂದ ತೀವ್ರ ಸಂಕಷ್ಟಕ್ಕೆ‌ ರೈತರು ಸಿಲುಕಿದ್ದಾರೆ ಅವರ ನೆರವಿಗೆ ಬಾರದೆ‌ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ ತಾಳಿದೆ ಎಂದು ಕಿಡಿಕಾರಿದರು.

ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಚುನಾವಣೆ ಪ್ರತಿಷ್ಠೆಯ ಮುಖ್ಯ ವಿಷಯವಾಗಿದೆ. ಜನರ ಸಂಕಷ್ಟ ಕೇಳಿ ಪರಿಹರಿಸುವ ಸಂವೇದನೆ ಆಡಳಿತ ಪಕ್ಷದ ಶಾಸಕ ಸಚಿವರಿಗೆ ಇಲ್ಲ. ಈಗಲಾದರೂ ಜಿಲ್ಲೆಯ ಸಚಿವರು ಸಂವೇದನೆ ತೋರಿಸಿ ರೈತರ ಸಹಾಯಕ್ಕೆ ಬರಬೇಕು ಎಂದು ಸಿ.ಟಿ.ರವಿ ಒತ್ತಾಯಿಸಿದರು.

ರಾಜ್ಯದಲ್ಲಿ ನಾನು ಮುಖ್ಯಮಂತ್ರಿ, ತಾನು ಮುಖ್ಯಮಂತ್ರಿ ಎಂಬ ಯುದ್ಧ ಶುರುವಾಗಿದೆ. ಯಾರು ಮುಖ್ಯಮಂತ್ರಿಯಾಗಿರುತ್ತಾರೊ ಅದು ಮುಖ್ಯವಲ್ಲ. ಜನ ಅಧಿಕಾರ ಕೊಟ್ಟಿದ್ದಾರೆ ಅವರ ಸಂಕಷ್ಟಕ್ಕೆ ಸ್ಪಂದಿಸಿ ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಸಿ.ಟಿ.ರವಿ ಕಿಡಿ Read More

ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ:ಅಶೋಕ್‌ ವ್ಯಂಗ್ಯ ಸಲಹೆ

ಬೆಂಗಳೂರು: ಅಭಿವೃದ್ಧಿಗೆ ದುಡ್ಡಿಲ್ಲ,ರಾಜ್ಯದ ಪ್ರಗತಿಗೆ ಯಾವುದೇ ದೂರದೃಷ್ಟಿ ಇಲ್ಲ,ಹೂಡಿಕೆದಾರರನ್ನು, ಉದ್ಯಮಿಗಳನ್ನು ಆಕರ್ಷಿಸುವ, ಹಿಡಿದಿಟ್ಟುಕೊಳ್ಳುವ ಆಸಕ್ತಿ ಇಲ್ಲದ ಕಾಂಗ್ರೆಸ್ ಸರ್ಕಾರ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಾಪ್ರಹಾರ ನಡೆಸಿದ್ದಾರೆ.

ಹಿಂದೆಂದೂ ಕಂಡರಿಯದ ದುರಾಡಳಿತ, ಭ್ರಷ್ಟಾಚಾರದ ಕೂಪದಲ್ಲಿ ರಾಜ್ಯವನ್ನು ಮುಳುಗಿಸಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಮುಜುಗರಕ್ಕೊಳಗಾದಾಗಲೆಲ್ಲ ಜನರ ದಿಕ್ಕು ತಪ್ಪಿಸಲು, ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಜಾತಿಗಣತಿ ಎಂಬ ಮೆಗಾ ಸೀರಿಯಲ್ ನ ಒಂದೊಂದೇ ಸಂಚಿಕೆ ಹೊರಬಿಡುವ ನಾಟಕ ಮಾಡುತ್ತಿದೆ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ‌

ಸಿಎಂ ಸಿದ್ದರಾಮಯ್ಯನವರೇ, ಇನ್ನೆಷ್ಟು ದಿನ ಈ ಭಂಡ ಬಾಳು. ನೀವು ಹೇಳಿದ್ದನ್ನ ನಿಮ್ಮ ಸಂಪುಟ ಸದಸ್ಯರೆ ಒಪ್ಪುವುದಿಲ್ಲ, ಶಾಸಕರೂ ಒಪ್ಪುವುದಿಲ್ಲ, ಹೈಕಮಾಂಡ್ ಅಂತೂ ನಿಮ್ಮ ಮಾತಿಗೆ ಕವಡೆ ಕಿಮ್ಮತ್ತು ಕೊಡುತ್ತಿಲ್ಲ, ಈ ಭಂಡ ಬಾಳು ಸಾಕು ಮಾಡಿ ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ ಎಂದು ಅಶೋಕ್ ಹೇಳಿದ್ದಾರೆ.

ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ:ಅಶೋಕ್‌ ವ್ಯಂಗ್ಯ ಸಲಹೆ Read More

ಮದ್ದೂರು ಘಟನೆಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ-ಅಶೋಕ್

ಬೆಂಗಳೂರು: ಧರ್ಮಸ್ಥಳ ಆಯ್ತು, ಚಾಮುಂಡೇಶ್ವರಿ ಆಯ್ತು, ಈಗ ಮದ್ದೂರು. ಈ ಘಟನೆಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ ಕುರಿತು‌ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಮದ್ದೂರು ಕಲ್ಲೆಸೆತ ಮತ್ತು ಲಾಠಿಚಾರ್ಜ್ ಹೇಯಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಲ್ಲೆಸೆತಕ್ಕೆ ಸರ್ಕಾರದ ಕುಮ್ಮಕ್ಕಿದೆ. ಈ ಘಟನೆಗೆ ನೇರ ಕಾರಣ ಪೊಲೀಸ್ ಅಲ್ಲ, ಸರ್ಕಾರದ ಕುಮ್ಮಕ್ಕಿಲ್ಲದೇ ಈ ಘಟನೆಗಳು ನಡೆಯುತ್ತಿರಲಿಲ್ಲ ಎಂದು ದೂರಿದರು.

ನಾವು ಪಾಕಿಸ್ತಾನದಲ್ಲಿದ್ದೇವೋ ಕರ್ನಾಟಕದಲ್ಲಿದ್ದೀವೋ ಅನಿಸುತ್ತಿದೆ, ತಿಮರೋಡಿ ಗ್ಯಾಂಗ್ ಸಿದ್ದರಾಮಯ್ಯ ಸುತ್ತ ಸುತ್ತಿಕೊಂಡಿದ್ದಾರೆ. ಗಣಪತಿ ವಿಸರ್ಜನೆಗೆ ಮೆರವಣಿಗೆ ಮಾಡುವುದು ಸಾರ್ವಜನಿಕ ರಸ್ತೆಯಲ್ಲಿ,ಅದೇನು ಇವರ ಅಪ್ಪನ ಆಸ್ತಿನಾ? ನಾವು ಟ್ಯಾಕ್ಸ್ ಕೊಟ್ಟಿರುವುದು ಎಂದು ತರಾಟೆಗೆ ತೆಗೆದುಕೊಂಡರು.

ಅಲ್ಲಿ ಒಂದು ಮೀಸಲು ಪಡೆ ಇಟ್ಟಿದ್ದರೆ ಲಾಠಿ ಚಾರ್ಜ್ ಅವಶ್ಯಕತೆ ಇತ್ತಾ ಹಿಂದೂಗಳ ಮೇಲೆ ಲಾಠಿ ಚಾರ್ಜ್, ದುಷ್ಕರ್ಮಿಗಳಿಗೆ ಯಾಕೆ ಬಡಿದಿಲ್ಲ? ಕಲ್ಲು ಎಸೆದವರಿಗೆ ಯಾಕೆ ಬಡಿದಿಲ್ಲ? ಮದ್ದೂರು ಘಟನೆಗೆ ಸಿಎಂ, ಡಿಸಿಎಂ ಕ್ಷಮೆ ಕೇಳಬೇಕು ಎಂದು ಅಶೋಕ್ ಆಗ್ರಹಿಸಿದರು.

ವಿಧಾನಸೌಧದಲ್ಲೆ ಪಾಕಿಸ್ತಾನ ಪರ ಕೂಗಿದ ಮೇಲೆ ನಮ್ಮನ್ನು ಏನೂ ಮಾಡಲ್ಲ ಅಂತಾ ಟಿಪ್ಪು ಗ್ಯಾಂಗ್‌ಗೆ ಅನ್ನಿಸಲು ಶುರುವಾಯಿತು. ಈಗ ಎಲ್ಲಾ ಕಡೆ ಗಲಭೆಗಳನ್ನು ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಹಿಂದೂಗಳು ಒಗ್ಗಟ್ಟಾಗಿಲ್ಲ ಅಂದರೆ ಇನ್ನುಮುಂದೆ ಇದೇ ಗತಿ. ವೋಟಿಗೋಸ್ಕರ ಸಿದ್ದರಾಮಯ್ಯ ಏನು ಬೇಕಾದರೂ ಮಾಡುತ್ತಾರೆ. ಅಧಿಕಾರ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುತ್ತಾರೆ.ಮುಂದೆ ನಿಮ್ಮ ಮನೆಯಲ್ಲೇ ಬಂದು ಹೊಡೆಯುತ್ತಾರೆ, ಎಚ್ಚರಿಕೆಯಿಂದಿರಿ ಎಂದು ವಿಪಕ್ಷ ನಾಯಕ ಸಲಹೆ ನೀಡಿದರು.

ಬೆಂಕಿ ಇಡುವುದೇ ಕಾಂಗ್ರೆಸ್ ಕೆಲಸ. ಹಿಂದೂಗಳು ಸಹಿಷ್ಣುಗಳು. ಕಾಂಗ್ರೆಸ್ ಸರ್ಕಾರ ಇರುವುದರಿಂದ ಹಿಂದೂ ಮೆರವಣಿಗೆ ವೇಳೆ ಗಲಾಟೆ ಆಗುತ್ತದೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂದು ಅಶೀಕ್ ಕಿಡಿಕಾರಿದರು.

ಮದ್ದೂರು ಘಟನೆಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ-ಅಶೋಕ್ Read More

ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಸಾಲದ ಸುಳಿಗೆ ತಳ್ಳುತ್ತಿದೆ;ಸಿಎಜಿ ಎಚ್ಚರಿಕೆ-ಅಶೋಕ್

ಬೆಂಗಳೂರು: ಸ್ವಯಂಘೋಷಿತ ಆರ್ಥಿಕ ತಜ್ಞ ಸಿಎಂ ಸಿದ್ದರಾಮಯ್ಯಅವರ ದುರಾಡಳಿತ ಮತ್ತು ತಪ್ಪು ಹಣಕಾಸಿನ ನಿರ್ವಹಣೆಯಿಂದ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಯಾವ ಅಧೋಗತಿಗೆ ತಲುಪುತ್ತಿದೆ ಎನ್ನುವುದನ್ನ ಮಹಾಲೇಖಪಾಲರ (ಸಿಎಜಿ) ವರದಿ ಎಳೆಎಳೆಯಾಗಿ ಬಿಚ್ಚಿಟ್ಟಿದೆ ಎಂದು ಪ್ರತಿಪಕ್ಷ ನಾಯಕ‌ ಅಶೋಕ್ ಹೇಳಿದ್ದಾರೆ.

2022–23ರಲ್ಲಿ 46,623 ಕೋಟಿ ಇದ್ದ ವಿತ್ತೀಯ ಕೊರತೆ, 2023–24ರಲ್ಲಿ 65,522 ಕೋಟಿಗೆ ಏರಿದೆ. ಏರುತ್ತಿರುವ ಈ ವಿತ್ತೀಯ ಕೊರತೆಗೆ ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಅವೈಜ್ಞಾನಿಕ ಗ್ಯಾರೆಂಟಿಗಳು ಕರ್ನಾಟಕವನ್ನು ಹೇಗೆ ದಿವಾಳಿತನದತ್ತ ತಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಅಶೋಕ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರವು ಮಾರುಕಟ್ಟೆಯಿಂದ 63,000 ಕೋಟಿ ಸಾಲ ಪಡೆದಿದ್ದು, ಇದು ಕಳೆದ ವರ್ಷಕ್ಕಿಂತ 37,000 ಕೋಟಿ ಹೆಚ್ಚು. ಇದು ಮುಂದಿನ ತಲೆಮಾರಿನ ಮೇಲೆ ಭಾರಿ ಬಡ್ಡಿ ಹೊರೆ ಹಾಕುತ್ತದೆ ಎಂದು ಸಿಎಜಿ ವರದಿ ಎಚ್ಚರಿಕೆ ನೀಡಿದೆ.

ರಸ್ತೆ, ನೀರಾವರಿ, ಮೂಲಸೌಕರ್ಯ ಹೂಡಿಕೆಯಲ್ಲಿ 5,229 ಕೋಟಿ ಕಡಿತವಾಗಿದ್ದು, ಇದರಿಂದ ಅಪೂರ್ಣ ಯೋಜನೆಗಳು ಶೇ 68 ಏರಿಕೆ ಕಂಡಿವೆ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ. ರಾಜ್ಯದ ಭವಿಷ್ಯವೇ ಅಪಾಯದಲ್ಲಿದೆ ಎಂದು ಎಚ್ಚರಿಕೆ ನೀಡಿದೆ.

ಹಿಂದಿನ ಬಿಜೆಪಿ ಸರ್ಕಾರದ ಸಮರ್ಪಕ ಆಡಳಿತ ಮತ್ತು ಹಣಕಾಸಿನ ನಿರ್ವಹಣೆಯಿಂದ ಕೋವಿಡ್ ನಂತರ 2022–23ರಲ್ಲಿ ಚೇತರಿಸಿಕೊಂಡಿದ್ದ ಕರ್ನಾಟಕ, 2023–24ರಲ್ಲಿ ಮತ್ತೊಮ್ಮೆ 9,271 ಕೋಟಿ ಆದಾಯ ಕೊರತೆಯ ಸುಳಿಗೆ ಸಿಕ್ಕಿದೆ. ಇದು ಕಾಂಗ್ರೆಸ್‌ನ ಅವೈಜ್ಞಾನಿಕ ಗ್ಯಾರೆಂಟಿಗಳು ಮತ್ತು ಹಣಕಾಸಿನ ತಪ್ಪು ನಿರ್ವಹಣೆಯ ನೇರ ಪರಿಣಾಮ ಎಂದು ಅಶೋಕ್ ದೂರಿದ್ದಾರೆ.

ವಿತ್ತೀಯ ಕೊರತೆಯನ್ನು ತಕ್ಷಣ ನಿಯಂತ್ರಿಸದಿದ್ದರೆ, ರಾಜ್ಯದ ಆರ್ಥಿಕತೆ ಇನ್ನಷ್ಟು ಹಿಂದುಳಿಯುತ್ತದೆ, ಸಾಲದ ಒತ್ತಡ ಹೆಚ್ಚುತ್ತದೆ, ಅಭಿವೃದ್ಧಿ ಕುಸಿಯುತ್ತದೆ. ಇಂದಿನ ಗ್ಯಾರೆಂಟಿ ಯೋಜನೆಗಳು ಭವಿಷ್ಯದ ಕಗ್ಗತ್ತಲಿನ ಗ್ಯಾರೆಂಟಿ ಎಂದು ಸಿಎಜಿ ಎಚ್ಚರಿಸಿದೆ.

ಇದು ಸ್ವಯಂ ಘೋಷಿತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಅವರ ಕಾರ್ಯವೈಖರಿ. ಕಾಂಗ್ರೆಸ್ ಸರ್ಕಾರದ ಕರ್ನಾಟಕ ಮಾಡೆಲ್.

ಕರ್ನಾಟಕ ಸರ್ಕಾರವು ಇಂದಿನ ಕ್ಷಣಿಕ ರಾಜಕೀಯ ಲಾಭಕ್ಕಾಗಿ, ನಾಳಿನ ಕರ್ನಾಟಕದ ಭವಿಷ್ಯ ಬಲಿ ಕೊಡುತ್ತಿದೆ.
ಇದೇ ವ್ಯವಸ್ಥೆ ಮುಂದುವರಿದರೆ ಕರ್ನಾಟಕ ಆರ್ಥಿಕ ದಿವಾಳಿತನದಿಂದ ಚೇತರಿಸಿಕೊಳ್ಳಲಾಗದ ಸಾಲದ ಸುಳಿಗೆ ಸಿಲುಕಿ ಅಭಿವೃದ್ಧಿ ಶೂನ್ಯತೆ ಎದುರಿಸುವುದು ಮಾತ್ರ ಗ್ಯಾರೆಂಟಿ ಎಂದು ಅಶೋಕ್ ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಸಾಲದ ಸುಳಿಗೆ ತಳ್ಳುತ್ತಿದೆ;ಸಿಎಜಿ ಎಚ್ಚರಿಕೆ-ಅಶೋಕ್ Read More

ಸ್ಮಾರ್ಟ್‌ ಮೀಟರ್‌ ಹೆಸರಲ್ಲಿ ಮತ್ತೊಂದು ಸ್ಕ್ಯಾಮ್-ಅಶೋಕ್ ಆರೋಪ

ಬೆಂಗಳೂರು: ಸ್ಮಾರ್ಟ್‌ ಮೀಟರ್‌ ಹೆಸರಲ್ಲಿ ಮತ್ತೊಂದು ಸ್ಕ್ಯಾಮ್ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಆರ್ಥಿಕವಾಗಿ ದಿವಾಳಿಯಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಜನರನ್ನು ಸುಲಿಗೆ ಮಾಡಲು ಸ್ಮಾರ್ಟ್ ಮೀಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಶೇ.400-800ರಷ್ಟು ದರ ಏರಿಕೆ ಮಾಡಿದ್ದಾಗಿದೆ ಎಂದು ಟ್ವೀಟ್ ಮಾಡಿ ಟೀಕಿಸಿದ್ದಾರೆ.

ಈಗ ಸ್ಮಾರ್ಟ್ ಮೀಟರ್ ಜಾರಿ ಮಾಡುವ ನೆಪದಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ವಿಶೇಷ ತೆರಿಗೆ ವಿಧಿಸಲು ಹೊರಟಿದ್ದು, ಸಿಎಂ ಸಿದ್ದರಾಮಯ್ಯ ಸರ್ಕಾರ ಇಂಧನ ಇಲಾಖೆಯ ಮೂಲಕ ಮತ್ತೊಮ್ಮೆ ಹಗಲು ದರೋಡೆಗೆ ಇಳಿದಿದೆ ಎಂದು ಅಶೋಕ್ ಕಿಡಿಕಾರಿದ್ದಾರೆ.

ಸ್ಮಾರ್ಟ್‌ ಮೀಟರ್‌ ಹೆಸರಲ್ಲಿ ಮತ್ತೊಂದು ಸ್ಕ್ಯಾಮ್-ಅಶೋಕ್ ಆರೋಪ Read More

ಸಮೀಕ್ಷೆಯಲ್ಲೂ ಭ್ರಷ್ಟಾಚಾರ:ಸರ್ಕಾರದ ವಿರುದ್ಧ ಅಶೋಕ್ ಕಿಡಿ

ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುತ್ತೇವೆ ಎಂಬ ನೆಪವೊಡ್ಡಿ ಸಿಎಂ ಸಿದ್ದರಾಮಯ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಲ್ಲಿ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ ‌

ಯಾರ ಮನೆಯ ಬಾಗಿಲು ತಟ್ಟದೇ, ಸಾರ್ವಜನಿಕರನ್ನು ಮಾತನಾಡಿಸದೆ ಕೇವಲ ಸ್ಟಿಕ್ಕರ್ ಅಂಟಿಸಲು ಸೀಮಿತವಾಗಿರುವ ಸಮೀಕ್ಷೆಯಲ್ಲಿ ಈಗ ಸಿಟ್ಕರ್ ಮುದ್ರಣದಲ್ಲೂ ಲೂಟಿ ಹೊಡೆದ ಅಂಶ ಬೆಳಕಿಗೆ ಬಂದಿದೆ ಎಂದು ಅವರು ದೂರಿದ್ದಾರೆ.

ಬೇಕಾಬಿಟ್ಟಿಯಾಗಿ 87 ಲಕ್ಷ ರೂಪಾಯಿ ಮೌಲ್ಯದ ಸ್ಟಿಕ್ಕರ್ ಮುದ್ರಿಸಿ, ಈಗ 25 ಲಕ್ಷ ರೂಪಾಯಿ ಮೌಲ್ಯದ ಸ್ಟಿಕ್ಕರ್ ಗಳನ್ನು ಕಸದ ಬುಟ್ಟಿಗೆ ಎಸೆಯಲು ಹೊರಟಿರುವ
ಸರ್ಕಾರ, ಜನರ ತೆರಿಗೆ ಹಣವನ್ನು ಹಗಲು ದರೋಡೆ ಮಾಡುತ್ತಿದೆ ಎಂದು ಟ್ವೀಟ್ ಮಾಡಿ ಅಶೋಕ್ ಕಿಡಿಕಾರಿದ್ದಾರೆ.

ಸಮೀಕ್ಷೆಯಲ್ಲೂ ಭ್ರಷ್ಟಾಚಾರ:ಸರ್ಕಾರದ ವಿರುದ್ಧ ಅಶೋಕ್ ಕಿಡಿ Read More

ಸರಕಾರದ ಪರಿಸ್ಥಿತಿ ಬಹಿರಂಗ;ಸಿಎಂ ರಾಜೀನಾಮೆಗೆ ಹೇಮಾನಂದೀಶ್ ಆಗ್ರಹ

ಮೈಸೂರು: ಸರಕಾರದ ಮನಸ್ಥಿತಿ ಮತ್ತು ಪರಿಸ್ಥಿತಿಯನ್ನು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರು,
ಬಹಿರಂಗ ಪಡಿಸಿದ್ದಾರೆ ಎಂದು ಬಿಜೆಪಿ ನಗರ ಉಪಾಧ್ಯಕ್ಷೆ ಹೇಮಾನಂದೀಶ್ ಟೀಕಿಸಿದ್ದಾರೆ.

ಬಸವರಾಜ ರಾಯರಡ್ಡಿ ಅವರು, ರಸ್ತೆ, ಶಾಲೆ, ಅಭಿವೃದ್ಧಿ ಕಾರ್ಯಗಳು ಬೇಕೆಂದರೆ, ಗ್ಯಾರಂಟಿಗಳನ್ನು ಬಿಡಬೇಕು, ನೀವು ಒಪ್ಪಿದರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಮುಖ್ಯಮಂತ್ರಿಗಳಿಗೆ ಹೇಳುತ್ತೇನೆ. ಆ ನಂತರ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಆಗುತ್ತೆ ಎಂದು ಹೇಳುವ ಮೂಲಕ
ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರಕಾರಕ್ಕೆ ಅಭಿವೃದ್ಧಿಗೆ ಹಣ ಇಲ್ಲ ಎಂಬುವುದನ್ನು ಬಹಿರಂಗವಾಗಿ ಹೇಳಿದ್ದಾರೆ. ಅಭಿವೃದ್ಧಿ ಬೇಕೆಂದರೆ ಗ್ಯಾರಂಟಿಗಳನ್ನು ತಿರಸ್ಕರಿಸಿ ಎನ್ನುವ ಮೂಲಕ ಸರಕಾರದ ವಾಸ್ತವತೆಯನ್ನು ತಿಳಿಸಿದ್ದಾರೆ ಎಂದು ಹೇಮಾ ಅವರು ಮಾಧ್ಯಮ ಪ್ರಕಟಣೆ ಮೂಲಕ‌ ವ್ಯಂಗ್ಯವಾಡಿದ್ದಾರೆ.

ಎರಡು ವರ್ಷದ ಹಿಂದೆ ಅಧಿಕಾರಕ್ಕಾಗಿ ಪೂರ್ವಾಪರ ಯೋಚಿಸದೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿ, ಜನರಿಗೆ ಆಮಿಷ ತೋರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಈಗ ಸಮರ್ಪಕವಾಗಿ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿಲ್ಲ, ಆದರೆ, ಗ್ಯಾರಂಟಿ ನೆಪದಲ್ಲಿ ಪ್ರತಿಯೊಂದರ ಬೆಲೆ ಏರಿಸಿದೆ. ಹಾಲಿನಿಂದ ಆಲ್ಕೋಹಾಲ್ ವರೆಗೆ ಎಲ್ಲ ವಸ್ತುಗಳ ಬೆಲೆ ಗಗನಕ್ಕೆ ಏರಿಸಿ ದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡೀ ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಭ್ರಷ್ಟಾಚಾರದಲ್ಲಿ ದಾಖಲೆ ಮಾಡಿದೆ. ಎಸ್‌ಟಿ ನಿಗಮದಲ್ಲಿ 187 ಕೋಟಿ ರೂ. ಭ್ರಷ್ಟಾಚಾರ, ವಸತಿ ಇಲಾಖೆ, ಅಬಕಾರಿ ಸೇರಿ ಸ್ವತಃ ಮುಖ್ಯಮಂತ್ರಿಗಳೇ ಮುಡಾ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಸರಕಾರ ಜನರಿಗೆ ಗ್ಯಾರಂಟಿ ಯೋಜನೆ ನೀಡಲು ಪರದಾಡುತ್ತಿದೆ,ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಹೇಮಾ ನಂದೀಶ್ ಆಗ್ರಹಿಸಿದ್ದಾರೆ.

ಸರಕಾರದ ಪರಿಸ್ಥಿತಿ ಬಹಿರಂಗ;ಸಿಎಂ ರಾಜೀನಾಮೆಗೆ ಹೇಮಾನಂದೀಶ್ ಆಗ್ರಹ Read More