ನವದೆಹಲಿ: ಕೇಂದ್ರ ಪ್ರವಾಸೋದ್ಯಮ ಸಚಿವ ಗಜೆಂದ್ರ ಸಿಂಗ್ ಶೇಖಾವತ್ ಅವರನ್ನು ಸಂಸದ ಯದುವೀರ್ ಒಡೆಯರ್ ಭೇಟಿ ಮಾಡಿ ಮೈಸೂರಿನ ಪ್ರವಾಸೋದ್ಯಮ ಯೋಜನೆಗಳ ಬಗ್ಗೆ ಚರ್ಚಿಸಿದರು.
ಕೇಂದ್ರ ಪ್ರವಾಸೋದ್ಯಮ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಮಾತನಾಡಿದ ಯದುವೀರ್ ಒಡೆಯರ್, ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಸ್ವದೇಶ ದರ್ಶನ 2.0 ಯೋಜನೆಯಡಿ ಮೈಸೂರಿನಲ್ಲಿ ಎರಡು ಪ್ರಮುಖ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ದೊರೆತಿದೆ ಎಂದು ತಿಳಿಸಿದ್ದಾರೆ.
ಈ ಎರಡೂ ಯೋಜನೆಗಳನ್ನು ಕರ್ನಾಟಕ ಪ್ರವಾಸೋದ್ಯಮ ಮೂಲ ಸೌಲಭ್ಯ ನಿಗಮ ಅನುಷ್ಠಾನಕ್ಕೆ ತರಲಿದೆ ಎಂದು ಹೇಳಿದರು ಮೈಸೂರಿನಲ್ಲಿ ಇಕಾಲಜಿಕಲ್ ಎಕ್ಸ್‌ಪೀರಿಯನ್ಸ್ ಝೋನ್ ಅಭಿವೃದ್ಧಿಗೆ 18.47 ಕೋಟಿ ರೂ. ಹಾಗೂ ಮೈಸೂರಿನ ಟಾಂಗಾ ರೈಡ್ ಎಕ್ಸ್‌ಪೀರಿಯನ್ಸ್ ಝೋನ್ ಅಭಿವೃದ್ಧಿಗೆ 271.60 ಲಕ್ಷ ರೂಪಾಯಿ ಅನುಮೋದನೆ ನೀಡಲಾಗಿದೆ ಎಂದು ಸಂಸದರು ಮಾಹಿತಿ ನೀಡಿದರು.
ಈ ಯೋಜನೆಗೆ ಅಂತಿಮ ಅನುಮೋದನೆ ದೊರಕಿರುವುದು ಸಂತಸ ತಂದಿದೆ, ಈ ಯೋಜನೆಗಳಿಂದ ಮೈಸೂರಿನಲ್ಲಿ ಪ್ರವಾಸೋದ್ಯಮ ಮತ್ತಷ್ಟು ವೃದ್ಧಿಯಾಗಲಿದೆ. ಯೋಜನೆಗಳ ಅನುಷ್ಠಾನಕ್ಕಾಗಿ ಭೂಮಿ ಪೂಜೆ ನಡೆಸಲು ಶೀಘ್ರ ದಿನಾಂಕ ನಿಗದಿಪಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಸಚಿವರಾದ ಗಜೆಂದ್ರ ಸಿಂಗ್ ಶೇಖಾವತ್ ಅವರು ಯೋಜನೆಗೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಮೈಸೂರಿನ ಇನ್ನೂ ಕೆಲವು ಪ್ರವಾಸೋದ್ಯಮ ಯೋಜನೆಗಳ ಬಗ್ಗೆ ಅನುಮತಿ ಪಡೆಯಲು ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಲಾಗುತ್ತದೆ ಎಂದು ತಿಳಿಸಿದರು.
ಮೈಸೂರಿನ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಪ್ರವಾಸೋದ್ಯಮ ಕ್ಷೇತ್ರ ಉತ್ತೇಜನಕ್ಕೆ ಎಲ್ಲ ರೀತಿಯಿಂದಲೂ ನಮ್ಮ ಕೇಂದ್ರ ಬಿಜೆಪಿ ಸರ್ಕಾರ ಸಹಕಾರ ನೀಡಲಿದೆ. ಈ ಸಂಬಂಧ ನಾನು ಕೂಡ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಉನ್ನತಿಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತೇನೆ ಎಂದು ಯದುವೀರ್ ಒಡೆಯರ್ ಭರವಸೆ ನೀಡಿದರು
ನಾಗ್ಪುರ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರದ ನಿವಾಸಕ್ಕೆ ವ್ಯಕ್ತಿಯೊಬ್ಬ ಬಾಂಬ್ ಬೆದರಿಕೆ ಕರೆ ಮಾಡಿದ್ದು ಕೆಲಕಾಲ ಆತಂಕ ವುಂಟಾಯಿತು.
ಆ ವ್ಯಕ್ತಿ ಬೆಳಿಗ್ಗೆ ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ತುರ್ತು ಸಂಖ್ಯೆ 112ಕ್ಕೆ ಕರೆ ಮಾಡಿ ಬೆದರಿಕೆಯೊಡ್ಡಿದ್ದ ಇದರಿಂದ ಅಧಿಕಾರಿಗಳೇ ಶಾಕ್ ಗೆ ಒಳಗಾದರು.
ತನಿಖೆ ಸಮಯದಲ್ಲಿ, ಕರೆ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿದ್ದು, ನಾಗ್ಪುರ ನಗರದ ಸಕ್ಕರ್ದಾರ ಪ್ರದೇಶದ ವಿಮಾ ದವಾಖಾನಾ ಬಳಿಯ ತುಳಸಿ ಬಾಗ್ ರಸ್ತೆಯ ನಿವಾಸಿ ಉಮೇಶ್ ವಿಷ್ಣು ರಾವುತ್ ಎಂಬಾತ ಕರೆ ಮಾಡಿದ್ದಾನೆಂದು ಗೊತ್ತಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊಬೈಲ್ ಲೊಕೇಶನ್ ಮತ್ತು ತಾಂತ್ರಿಕ ನೆರವಿನಿಂದ ಪೊಲೀಸರು ವಿಮಾ ದವಾಖಾನಾದ ಆವರಣದಿಂದ ರಾವುತ್ ನನ್ನು ವಶಕ್ಕೆ ಪಡೆದು ಪ್ರಕರಣ ದಾಳಲಿಸಿ,ವಿಚಾರಣೆಗೆ ಒಳಪಡಿಸಿದ್ದಾರೆ.
ನವದೆಹಲಿ: ರಾಜ್ಯದ ಮನವಿಗಳಿಗೆ ಕೇಂದ್ರ ರಕ್ಷಣಾ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬುಧವಾರ ರಕ್ಷಣಾ ಸಚಿವ ರಾಜನಾಥಸಿಂಗ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು.
ಮೈಸೂರು ದಸರಾ ಉತ್ಸವದಲ್ಲಿ ವೈಮಾನಿಕ ಪ್ರದರ್ಶನ ಹಾಗೂ ಬೆಂಗಳೂರಿನಲ್ಲಿ ಡಿಫೆನ್ಸ್ ಕಾರಿಡಾರ್ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ರಕ್ಷಣಾ ಇಲಾಖೆಯ ಜಾಗ ನೀಡಬೇಕೆಂಬ ಸರ್ಕಾರದ ಮನವಿಗಳಿಗೆ ಕೇಂದ್ರ ರಕ್ಷಣಾ ಸಚಿವರು ಸ್ಪಂದಿಸಿದರೆಂದು ತಿಳಿಸಿದರು.
ಉತ್ತರಪ್ರದೇಶ ಹಾಗೂ ತಮಿಳುನಾಡು ಮಾದರಿಯಲ್ಲಿ ಕರ್ನಾಟಕದಲ್ಲಿಯೂ ರಕ್ಷಣಾ ಕಾರಿಡಾರ್ ಸ್ಥಾಪನೆ ಹಾಗೂ ಟನಲ್ ಯೋಜನೆ, ಬಳ್ಳಾರಿ ರಸ್ತೆಯಲ್ಲಿ ಲಿಂಕ್ ರೋಡ್ ಯೋಜನೆ, ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆಯ ನಿರ್ಮಾಣಕ್ಕೆ ಅವಶ್ಯವಿರುವ ಕೇಂದ್ರ ರಕ್ಷಣಾ ಇಲಾಖೆಗೆ ಸೇರಿದ ಜಾಗವನ್ನು ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ನೀಡುವಂತೆ ಕೋರಿ ಮನವಿ ಸಲ್ಲಿಸಿರುವ ಬಗ್ಗೆ ಇಎಂ ವಿವರಿಸಿದರು.
ರಾಹುಲ್ ಗಾಂಧಿಯನ್ನು ಭೇಟಿಯಾಗುವ ಕಾರ್ಯಕ್ರಮವಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ರಾಹುಲ್ ಗಾಂಧಿಯವರನ್ನು ಸಾಧ್ಯವಾದರೆ ಭೇಟಿಯಾಗುವುದಾಗಿ ತಿಳಿಸಿದರು.
ಕಾಂಗ್ರೆಸ್ ನ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ನಾಳೆ ನವದೆಹಲಿಗೆ ಆಗಮಿಸಲಿದ್ದು, ಅವರೊಂದಿಗೆ ವಿಧಾನಪರಿಷತ್ ಸದಸ್ಯರು ಹಾಗೂ ನಿಗಮಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಬಗ್ಗೆ ಚರ್ಚಿಸಲಾಗುವುದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭೇಟಿಗೆ ಸಮಯ ಕೋರಲಾಗಿದ್ದು, ನಾಳೆ ಭೇಟಿಯಾಗುವ ಸಾಧ್ಯತೆಯಿದೆ ಎಂದು ಸಿದ್ದರಾಮಯ್ಯ ಹೇಳಿದರು.
ದುಬೈ: ಹೊರ ದೇಶದಲ್ಲಿ ನೆಲೆಸಿ ತಾಯ್ನಾಡಿಗೆ ಅನನ್ಯ ಕೊಡುಗೆ ನೀಡುತ್ತಿರುವ ಚೈತನ್ಯಶೀಲ ಕನ್ನಡಿಗರ ಸಾಧನೆ ಅತ್ಯಂತ ಶ್ಲಾಘನೀಯ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದರು.
ಉಕ್ಕು ಸಚಿವಾಲಯದ ಕಾರ್ಯಕ್ರಮದ ನಿಮಿತ್ತ ದುಬೈ ಪ್ರವಾಸದಲ್ಲಿರುವ ಅವರು ಅಲ್ಲಿನ ಅನಿವಾಸಿ ಕನ್ನಡಿಗರನ್ನು ಭೇಟಿ ಮಾಡಿ ಸೌಹಾರ್ದ ಯುತ ಮಾತುಕತೆ ನಡೆಸಿದರು ಮತ್ತು ಅವರ ಕಾರ್ಯಗಳನ್ನು ಶ್ಲಾಘಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಜಗತ್ತಿನ 4ನೇ ದೈತ್ಯ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ,ಈಗ 3ನೇ ಸ್ಥಾನದತ್ತ ನಮ್ಮ ದೇಶ ನಾಗಾಲೋಟದಲ್ಲಿದೆ. ಈ ಹಿನ್ನೆಲೆಯಲ್ಲಿ ಬಲಿಷ್ಠ, ಸಮೃದ್ಧ ಭಾರತ ನಿರ್ಮಾಣಕ್ಕೆ ಕನ್ನಡಿಗರ ಕೊಡುಗೆ ನನಗೆ ಸಂತಸ ಉಂಟು ಮಾಡಿದೆ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು: ರಾಷ್ಟ್ರೀಯ ಭದ್ರತೆ, ರಾಷ್ಟ್ರ ರಕ್ಷಣೆ ವಿಚಾರದಲ್ಲಿ ನರೇಂದ್ರ ಮೋದಿ ಅವರ ಸರಕಾರ ದೃಢ ಹೆಜ್ಜೆಗಳನ್ನು ಇಟ್ಟಿದ್ದು, ಪಾಕಿಸ್ತಾನಕ್ಕೆ ನಮ್ಮ ಸೇನಾಪಡೆಗಳು ತಕ್ಕ ಪಾಠ ಕಲಿಸಿವೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪಹಲ್ಗಾಮ್ ನಲ್ಲಿ ಪಾಕಿಸ್ತಾನದ ಭಯೋತ್ಪಾದಕರು ನಮ್ಮ ದೇಶದ ಪ್ರವಾಸಿಗರ ಮೇಲೆ ಪೈಶಾಚಿಕ ದಾಳಿ ನಡೆಸಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನಾಪಡೆಗಳು ಆ ದೇಶದಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಿವೆ. ನೆರೆ ದೇಶದ ಸೇನೆಯು ಉಗ್ರ ಪೋಷಣೆ ಮಾಡುತ್ತಾ ಭಾರತದ ಮೇಲೆ ದಾಳಿ ನಡೆಸಿತ್ತು. ಅದಕ್ಕೆ ಭಾರತ ಪ್ರಬಲ ತಿರುಗೇಟು ನೀಡಿದೆ ಎಂದು ತಿಳಿಸಿದರು.
ನರೇಂದ್ರ ಮೋದಿ ಅವರ ಧೃಢ ನಾಯಕತ್ವ ಹಾಗೂ ನಮ್ಮ ಹೆಮ್ಮೆಯ ಸೇನಾಪಡೆಗಳ ಶಕ್ತಿಯ ಮುಂದೆ ಪಾಕಿಸ್ತಾನ ಮಂಡಿಯೂರಿದೆ. ಭಾರತ ಎಲ್ಲ ಕಡೆ ಮೇಲುಗೈ ಸಾಧಿಸಿದೆ, ಉಗ್ರರ ಚಟುವಟಿಕೆಗಳಿಗೆ ಇತಿಶ್ರೀ ಹಾಡುವ ದೃಷ್ಟಿಯಿಂದ ಮೋದಿ ಅವರು ಅನೇಕ ಕ್ರಮಗಳನ್ನು ತೆಗೆದುಕೊಂಡದ್ದಾರೆ ಎಂದು ಹೆಚ್ ಡಿ ಕೆ ಹೇಳಿದರು.
ಅಮೆರಿಕದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಅನ್ನುವುದು ಸರಿಯಲ್ಲ. ಜಾಗತಿಕ ಮಟ್ಟದಲ್ಲಿ ತನ್ನ ಮುಖ ಉಳಿಸಿಕೊಳ್ಳಲು ಪಾಕಿಸ್ತಾನ ನಾನಾ ಸರ್ಕಸ್ ಮಾಡಿದೆ, ಭಾರತ ಕಾಶ್ಮೀರ ವಿಷಯದಲ್ಲಿ ಮೂರನೇ ರಾಷ್ಟ್ರದ ಮಧ್ಯಸ್ಥಿಕೆಗೆ ಒಪ್ಪಿಲ್ಲ. ಅದಕ್ಕೆ ಅವಕಾಶವನ್ನು ಕೂಡ ಕೊಟ್ಟಿಲ್ಲ. ಪ್ರಧಾನಿಗಳು ಕೂಡ ಇದೇ ಮಾತನ್ನು ಸ್ಪಷ್ಟವಾಗಿ ಹೇಳಿದ್ದಾರೆ. ರಾಷ್ಟ್ರದ ಹಿತಾಸಕ್ತಿ ವಿಷಯದಲ್ಲಿ ಮೋದಿ ಅವರು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಮರ್ಥಿಸಿದರು.
ಉಗ್ರ ಪೋಷಕ ಪಾಕಿಸ್ತಾನವನ್ನು ಮಟ್ಟ ಹಾಕುವ ದೃಷ್ಟಿಯಿಂದ ಪೂರ್ಣ ಪ್ರಮಾಣದ ಯುದ್ದ ಆಗಲೇಬೇಕಿತ್ತು ಎಂಬ ನಿಲುವು ಒಂದು ಕಡೆ ಇದೆ. ಮತ್ತೊಂದು ಕಡೆ ರಷ್ಯಾ, ಉಕ್ರೇನ್ ಯುದ್ಧದಿಂದ ಇವತ್ತು ಯಾವ ಸ್ಥಿತಿ ಉಂಟಾಗಿದೆ ಎನ್ನುವ ವಾದವೂ ವಾದವೂ ಇದೆ,ಆ ದೃಷ್ಟಿಯಲ್ಲಿ ಕೇಂದ್ರ ಸರ್ಕಾರ ಆಲೋಚನೆ ಮಾಡುತ್ತಿದೆ. ಆದರೆ, ಈಗಲೂ ಪಾಕಿಸ್ತಾನ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ನಾಶವಾಗಲಿದೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.
ಉಗ್ರರಿಗೆ ಶಿಕ್ಷೆ ಕೊಡಬೇಕು ಎಂಬ ದೃಷ್ಟಿಯಿಂದ ನಮ್ಮ ಸೈನಿಕರು ದೇಶಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ. ಕೇವಲ ಎರಡೇ ದಿನಗಳಲ್ಲಿ ಪಾಕಿಸ್ತಾನ ಶರಣಾಗುವಂತೆ ಸೇನಾಪಡೆಗಳು ತಮ್ಮ ಪರಾಕ್ರಮ ಮೆರೆದಿವೆ ಎಂದು ಹೆಚ್ ಡಿ ಕೆ ಶ್ಲಾಘಿಸಿದರು.
ಬೆಂಗಳೂರು,ಏ.5: ನನ್ನ ಹತ್ರ ಟನ್ ಗಟ್ಟಲೆ ದಾಖಲೆಗಳಿವೆ,ಸುಮ್ಮನೆ ನನ್ನನ್ನು ಕೆಣಕಬೇಡಿ ಎಂದು ರಾಜ್ಯ ಕಾಂಗ್ರೆಸ್ ಸರಕಾರಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಠಿಣ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್ ಡಿ ಕೆ,ನಾನು ಕನಕಪುರದಲ್ಲಿ ಮಾತ್ರ ಬಂಡೆ ಒಡೆದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಳ್ಳಾರಿಗಿ ನನಗೂ ಏನು ಸಂಬಂಧ ಎಂದು ಹೇಳಿಕೊಂಡಿದ್ದಾರೆ,ಅದಕ್ಕೆ ನನ್ನ ಬಳಿ ಟನ್ ಗಟ್ಟಲೆ ದಾಖಲೆಗಳಿವೆ. ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ ನಾನು, ಸತ್ಯವನ್ನೇ ಹೇಳುತ್ತಿದ್ದೇನೆ ಎಂದು ತಿಳಿಸಿದರು.
ನನ್ನ ಮೇಲಷ್ಟೇ ರಾಜಕೀಯ ಹಗೆತನ ಸಾಧಿಸುತ್ತಿರುವುದಷ್ಟೇ ಅಲ್ಲ, ರಾಜ್ಯದ ಜನರನ್ನು ಕಿತ್ತು ತಿನ್ನುತ್ತಿರುವ ಈ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡುತ್ತಿದ್ದೇನೆ ಸವಾಲು ಹಾಕಲು ಇಲ್ಲಿಗೆ ಬಂದಿದ್ದೇನೆ, ಇಂದಿನಿಂದ ಈ ಜನ ವಿರೋಧಿ ಸರ್ಕಾರದ ವಿರುದ್ಧ ನೇರ ಯುದ್ದ ಆರಂಭ ಮಾಡುತ್ತಿದ್ದೇನೆ ಎಂದು ತಿಳಿಸಿದರು.
2003- 2004ರಲ್ಲಿ ಡಿ.ಕೆ.ಶಿವಕುಮಾರ್ ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು. ಅದಿರಿನ ಮಣ್ಣಿನ ನೆಪದಲ್ಲಿ ಸಾವಿರಾರು ಟನ್ ಕಬ್ಬಿಣದ ಅದಿರನ್ನು ಬಳ್ಳಾರಿಯಲ್ಲಿ ಕದ್ದು ಸಾಗಿಸಿದರು. ಆ ಅದಿರು ಎಲ್ಲಿಗೆ ಹೋಯಿತು, ಏನು ಮಾಡಿದರು. ಅವರು ಯಾರಿಗೆಲ್ಲ ಪತ್ರ ಬರೆದು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ ಎಂದು ವಾಗ್ದಾಳಿ ನಡೆಸಿದರು.
ಈ ಉಪ ಮುಖ್ಯಮಂತ್ರಿ ನನ್ನನ್ನು ಕೆಣಕುತ್ತಿದ್ದಾರೆ ಸುಮ್ಮನೆ ನನ್ನ ವಿರುದ್ಧ ರಾಜಕೀಯ ಹಗೆತನ ಸಾಧಿಸುತ್ತಿದ್ದಾರೆ ನಾನು ಸುಮ್ಮನಿರಲು ಸಾಧ್ಯ ಇಲ್ಲ, ಅವರ ಒಂದೊಂದೇ ಹಗರಣಗಳನ್ನು ಬಯಲಿಗೆ ಎಳೆಯುತ್ತೇನೆ ಎಂದು ಸವಾಲು ಹಾಕಿದರು.
ನಾನು ಯುವಕನಾಗಿದ್ದಾಗ ಜೀವನೋಪಾಯಕ್ಕಾಗಿ ಬೆಂಗಳೂರಿನ ಹೊಂಬೇಗೌಡನಗರ, ಸುಧಾಮನಗರ ಮತ್ತು ವಿಲ್ಸನ್ ಗಾರ್ಡನ್ ವಾರ್ಡುಗಳಲ್ಲಿ ಕಸ ಎತ್ತುವ ಗುತ್ತಿಗೆ ತೆಗೆದುಕೊಂಡಿದ್ದೆ. ಆಮೇಲೆ ನಮ್ಮ ತಂದೆಯವರು ಬೇಡ ಎಂದು ತಾಕೀತು ಮಾಡಿದ ಮೇಲೆ ಅದನ್ನು ಬಿಟ್ಟೆ. ಯಾವುದೇ ಕಾರಣಕ್ಕೂ ಸರ್ಕಾರಿ ಗುತ್ತಿಗೆ ತೆಗೆದುಕೊಳ್ಳ ಕೂಡದು ಎಂದು ಅವರು ಹೇಳಿದ್ದರು ಎಂದು ಈ ವೇಳೆ ಹೆಚ್ ಡಿ ಕೆ ಸ್ಮರಿಸಿದರು.
ಬಿಬಿಎಂಪಿ ಕಸದ ಗುತ್ತಿಗೆ ನೀಡುವುದರಲ್ಲಿಯೂ ಕೋಟ್ಯಾಂತರ ರೂಪಾಯಿ ಲೂಟಿ ಮಾಡಲು ಹೊರಟಿದ್ದರು. ಮೂವತ್ತು ವರ್ಷಗಳಷ್ಟು ಸುದೀರ್ಘ ಅವಧಿಗೆ ಬೆಂಗಳೂರಿನ ಕಸ ಎತ್ತಲು ಚೆನ್ನೈನ ಒಬ್ಬ ವ್ಯಕ್ತಿಗೆ ಗುತ್ತಿಗೆ ನೀಡುವ ಹಗರಣಕ್ಕೆ ಮುಂದಾಗಿದ್ದರು. ಪ್ರತಿ ಟನ್ ಕಸ ಎತ್ತಲು 6500 ಕ್ಕಿಂತ ಹೆಚ್ಚು ಮೊತ್ತವನ್ನು ಪಾವತಿ ಮಾಡಿ ಅಲ್ಲಿಂದ ಕಮಿಷನ್ ಹೊಡೆಯಲು ಮುಂದಾಗಿದ್ದರು. ಇಲ್ಲಿ ಕಡಿಮೆ ಎಂದರೂ 15,000 ಕೋಟಿ ಹೊಡೆಯಲು ಹೊರಟಿದ್ದರು ಎಂದು ನಾನು ಹೇಳಿದ ಮೇಲೆ 6500 ಮೊತ್ತವನ್ನು 3,000ಕ್ಕೆ ಕಡಿಮೆ ಮಾಡಿದರು. ಎರಡೂ ಮೊತ್ತಗಳ ನಡುವೆ ಎಷ್ಟು ಅಂತರ ಇದೆ ಎಂಬುದನ್ನು ನೀವು ಗಮನಿಸಬೇಕು ಎಂದು ಕುಮಾರಸ್ವಾಮಿ ಮಾಧ್ಯಮದವರಿಗೆ ಹೇಳಿದರು.
ಕಾಂಗ್ರೆಸ್ ಸರ್ಕಾರ ಎಲ್ಲಾ ಅಕ್ರಮ, ಅನ್ಯಾಯ ಮಾಡಿ ಎಲ್ಲೆಂದರಲ್ಲಿ ಕಸ ಸೃಷ್ಟಿ ಮಾಡಿದೆ,ಅದನ್ನು ಎತ್ತುವ, ಆ ಮೂಲಕ ಜನರನ್ನು ರಕ್ಷಣೆ ಮಾಡುವ ಟೆಂಡರ್ ತೆಗೆದುಕೊಂಡಿದ್ದೇನೆ ಅದೇ ನಿಮ್ಮ ಇತಿಶ್ರೀ ಹಾಡಲಿದೆ ಎಂದು ಹೆಚ್ ಡಿ ಕೆ ಕಾಂಗ್ರೆಸ್ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ನಡೆಯುತ್ತಿರುವ ಈ ಸರ್ಕಾರದ ಅಕ್ರಮಗಳು, ದರೋಡೆಗಳು ಮಿತಿಮೀರಿವೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಘಜ್ನಿ ಮಹಮ್ಮದ್, ಘೋರಿ ಮಹಮ್ಮದ್ ಹಾಗೂ ಮಲ್ಲಿಕ್ ಖಫೂರ ಇದ್ದಾರೆ. ಅವರನ್ನು ನಾಚುವ ರೀತಿಯಲ್ಲಿ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
40 ವರ್ಷಗಳ ಹಿಂದೆಯೇ ನಾನು ಬಿಡದಿಯಲ್ಲಿ ಭೂಮಿ ಖರೀದಿ ಮಾಡಿದ್ದೆ. ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಾಲ್ಕೈದು ಜೆಸಿಬಿ , 25ರಿಂದ 30 ಅಧಿಕಾರಿಗಳು, ಪೊಲೀಸರು ಬಂದು ನನ್ನ ಭೂಮಿಯನ್ನು ಅಳತೆ ಮಾಡುತ್ತಾರೆ. ತೆರವಿನ ಹೈಡ್ರಾಮಾ ಮಾಡುತ್ತಾರೆ ರಾಜಕೀಯ ಸೇಡು ಸಾಧಿಸುತ್ತಿದ್ದರೆ ಅದೆಷ್ಟು ಬೇಕೋ ಅಷ್ಟು ಸಾಧಿಸಲಿ, ಅದಕ್ಕೆ ಉತ್ತರ ಕೊಡುವ ಸಮಯ ಬರುತ್ತದೆ ಎಂದು ಕುಮಾರಸ್ವಾಮಿ ಗುಡುಗಿದರು.
ನಾನು ಮಾಜಿ ಪ್ರಧಾನಿ ಮಗ, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ,ನಾನು ನಾಲ್ಕು ಎಕರೆ ಜಮೀನನ್ನ ಒತ್ತುವರಿ ಮಾಡಿಕೊಳ್ಳುಬೇಕಾ, 70 ಎಕರೆ ಒತ್ತುವರಿ ಎಂದು ಯಾರೋ ಸಮಾಜ ಪರಿವರ್ತನೆ ಮಾಡುವ ವ್ಯಕ್ತಿ ಹೇಳಿದ್ದಾನೆ, ಬಂದು ತೋರಿಸಲಿ ನಾನು ಅನುಭವದಲ್ಲಿ ಇರುವ ಭೂಮಿಯೇ 40 ರಿಂದ 42 ಎಕರೆ. ಅತಿಕ್ರಮಣ ಮಾಡಿಕೊಂಡಿದ್ದರೆ ದಾಖಲೆ ಬಿಡುಗಡೆ ಮಾಡಲಿ. ಈ ಸರ್ಕಾರದಲ್ಲಿರುವವರು ನಾನು ಅಪರಾಧಿ ಎಂದು ಅಪಪ್ರಚಾರ ಮಾಡುವುದಕ್ಕೆ ಹೊರಟ್ಟಿದ್ದಾರೆ ಇದಕ್ಕೆಲ್ಲ ಈ ಕುಮಾರಸ್ವಾಮಿ ಹೆದರಲ್ಲ ಎಂದು ಕಠಿಣವಾಗಿ ಹೇಳಿದರು
ನಾನು ಯಾವುದೇ ರೀತಿಯ ಒತ್ತುವರಿ ಮಾಡಿಲ್ಲ. ನನ್ನ ವ್ಯವಹಾರ ಕಾನೂನುದ್ಧವಾಗಿ ಆಗಿದೆ. ದಾಖಲೆಗಳ ಮುಖಾಂತರ ಕೆಲವು ತೀರ್ಮಾನಗಳು ಆಗಿವೆ. ಈ ವಿಚಾರದಲ್ಲಿ ಕೋರ್ಟ್ ಅನ್ನು ಮಿಸ್ ಲೀಡ್ ಮಾಡುವ ಕೆಲಸ ಆಗಿದೆ. ಸಾಯಿ ವೆಂಕಟೇಶ್ವರ ಮಿನರಲ್ಸ್ ಕೇಸ್ ಹದಿನೇಳು ವರ್ಷಗಳಿಂದ ನಡೆಯುತ್ತಿದೆ. ತಪ್ಪು ಮಾಡಿದ್ದಿದ್ದರೆ, ಇಷ್ಟು ವರ್ಷಗಳ ಕಾಲ ಬೇಕಿತ್ತಾ? ಕೇವಲ ನನ್ನ ಮೇಲೆ ರಾಜಕೀಯ ಹಗೆತನ ಸಾಧಿಸಲು ಇದನ್ನೆಲ್ಲ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವರು ಕಿಡಿಕಾರಿದರು.
ಮುಸ್ಲಿಮರಿಗೆ ಗುತ್ತಿಗೆ ಮೀಸಲು ಸೇರಿದಂತೆ ಯಾರು ಯಾರಿಗೆ ಗುತ್ತಿಗೆ ಮೀಸಲು ನೀಡಿದ್ದಾರೋ, ಅದರಿಂದ ಅವರು ಎಷ್ಟು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂಬ ಜನರಿಗೆ ಮಾಹಿತಿ,ಆ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಕೇಂದ್ರ ಸಚಿವರು ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಬೆಂಗಳೂರು: ರಾಜ್ಯದಲ್ಲಿ ದರ ಬೀಜಾಸುರ ಸರಕಾರ ಜನರ ರಕ್ತ ಹೀರುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಇಂದಿನಿಂದ ಕಾಂಗ್ರೆಸ್ ಕಂಪನಿ ಸರಕಾರ ಕಸದ ಮೇಲೂ ಸೆಸ್ ವಿಧಿಸುವ ಮೂಲಕ ಜನರ ರಕ್ತ ಹೀರುತ್ತಿದೆ ಎಂದು ಟೀಕಿಸಿದ್ದಾರೆ.
ರಾಜ್ಯ ಸರಕಾರ ದಿನಕ್ಕೊಂದು ಸುಳ್ಳು ಹೇಳುತ್ತಿದೆ. ತಿಂಗಳಿಗೊಂದು ದರ ಏರಿಕೆ ಮಾಡುತ್ತಿದೆ. ಕರ್ನಾಟಕ ಈಸ್ಟ್ ಇಂಡಿಯಾ ಕಾಂಗ್ರೆಸ್ ಕಂಪನಿ ಸರಕಾರದ ಆಡಳಿತದ ವೈಖರಿ ಇದು ಎಂದು ಲೇವಡಿ ಮಾಡಿದ್ದಾರೆ.
ದರ ಏರಿಕೆಗೆ ಪಂಚ ಗ್ಯಾರೆಂಟಿಯನ್ನು ನೆಪ ಮಾಡಿಕೊಂಡಿದೆ. ಆದರೆ ಸರ್ಕಾರದ ದುರುದ್ದೇಶ ಜನರ ಲೂಟಿ ಮಾಡುವುದಷ್ಟೇ. ಭಾರತದ ಮೇಲೆ ಆಕ್ರಮಣ ನಡೆಸಿ ನಿರಂತರ ಲೂಟಿ ಮಾಡಿದ ಮಹಮ್ಮದ್ ಘಜ್ನಿ, ಮಹಮ್ಮದ್ ಘೋರಿ ಅವರಿಬ್ಬರೂ ನಾಚುವಂತೆ ಕನ್ನಡಿಗರ ಮೇಲೆ ರಾಜ್ಯ ಕಾಂಗ್ರೆಸ್ ಸರಕಾರ ದರ ಏರಿಕೆ ದಂಡಯಾತ್ರೆ ನಡೆಸುತ್ತಿದೆ ಎಂದು ಕುಮಾರಸ್ವಾಮಿ ವ್ಯಂಗ್ಯ ವಾಡಿದ್ದಾರೆ
ನೀರು, ಮೆಟ್ರೋ ರೈಲು, ಬಸ್ ಟಿಕೆಟ್, ಹಾಲು (3 ಸಲ ದರ ಏರಿಕೆ), ವಿದ್ಯುತ್, ಮುದ್ರಾಂಕ, ಮಾರ್ಗದರ್ಶಿ ಮೌಲ್ಯ, ಅಬ್ಕಾರಿ ಸುಂಕ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಶುಲ್ಕ, ಶವದ ಮರಣೋತ್ತರ ಪರೀಕ್ಷೆ ಶುಲ್ಕ, ವೈದ್ಯಕೀಯ ಪ್ರಮಾಣ ಪತ್ರದ ದರ, ಲ್ಯಾಬ್ ನಲ್ಲಿ ಪರೀಕ್ಷೆ ಶುಲ್ಕ, ವೃತ್ತಿಪರ ತೆರಿಗೆ, ಬಿತ್ತನೆ ಬೀಜಗಳ ದರವನ್ನು ಏರಿಕೆ ಮಾಡಿದೆ. ಇದು ದರ ಬೀಜಾಸುರ ಕಾಂಗ್ರೆಸ್ ಸರಕಾರ ಎಂದು ಆರೋಪಿಸಿದ್ದಾರೆ.
ಇಷ್ಟು ಸಾಲದೆಂಬಂತೆ ಜನರ ಮೇಲೆ ಏಪ್ರಿಲ್ 1ರಿಂದ ಕಸದ ಸೆಸ್ ಹೇರುತ್ತಿದೆ ಈ ದರಬೀಜಾಸುರ ಸರಕಾರ ಕಸ ಹೆಸರಿನಲ್ಲಿ ಕೋಟಿ ಕೋಟಿ ಸುಲಿಗೆ ಗುರಿ ಹಾಕಿಕೊಂಡಿದೆ ಎಂದು ಹೆಚ್ ಡಿ ಕೆ ಟೀಕಿಸಿದ್ದಾರೆ.
ಚಾಮರಾಜನಗರ: ಸಂಸದ ಸುನೀಲ್ ಬೋಸ್ ಅವರು ಕೈಗಾರಿಕಾ ಮತ್ತು ವಾಣಿಜ್ಯ ಸಚಿವರಾದ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಚಾಮರಾಜನಗರ ಜಿಲ್ಲೆಯನ್ನು ರಾಷ್ಟ್ರೀಯ ಅರಿಶಿನ ಮಂಡಳಿ ವ್ಯಾಪ್ತಿಗೆ ಸೇರಿಸಲು ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯವು ದೇಶದಲ್ಲಿ ಅರಿಶಿನ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ ಕರ್ನಾಟಕ ರಾಜ್ಯದಲ್ಲಿ ಚಾಮರಾಜನಗರ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ. ಸುಮಾರು 8260 ಹೆಕ್ಟೇರ್ ಪ್ರದೇಶದಲ್ಲಿ ಅರಿಶಿನ ಬೆಳೆಯನ್ನು ಬೆಳೆಯಲಾಗುತ್ತಿದ್ದು, ಅಂದಾಜು 49,564.80 ಮೆಟ್ರಿಕ್ ಟನ್ ಗಳಷ್ಟು ಅರಿಶಿಣ ಉತ್ಪಾದನೆ ಆಗುತ್ತಿದೆ ಎಂದು ಈ ವೇಳೆ ಸಂಸದರು ಮನದಟ್ಟು ಮಾಡಿದರು.
ಇದು ದೇಶದ ಶೇ. 4.2ರಷ್ಟು ಹಾಗೂ ರಾಜ್ಯದ ಶೇ.38.3ರಷ್ಟು. ಇಷ್ಟು ಉತ್ಪಾದನೆ ಇರುವ ಜಿಲ್ಲೆಯ ರೈತರಿಗೆ ಸೂಕ್ತ ಮಾರುಕಟ್ಟೆ ಸೌಕರ್ಯವಿಲ್ಲ, ಅರಿಸಿನ ಮೌಲ್ಯವರ್ಧನ ಚಟುವಟಿಕೆಗಳಿಗೆ ಅವಕಾಶವಿಲ್ಲ, ಬೆಳೆ ಇಳುವರಿ ಹೆಚ್ಚಿಸುವ ತಂತ್ರಜ್ಞಾನದ ಕೊರತೆ ಇದೆ, ಸಮರ್ಪಕ ಗೊಬ್ಬರ ಮತ್ತು ಕೀಟನಾಶಕ ಸಮರ್ಪಕ ಬಳಕೆ ಕುರಿತ ಮಾರ್ಗದರ್ಶನವಿಲ್ಲ, ಆದರು ಕೂಡ ದೇಶದ ಅರಿಶಿನ ಉತ್ಪಾದನೆಯಲ್ಲಿ ಚಾಮರಾಜನಗರದ ಕೊಡುಗೆ ಶೇಕಡ 4.2 ರಷ್ಟಿದೆ.ಚಾಮರಾಜನಗರ ಜಿಲ್ಲೆಯ ರೈತರಿಗೆ ಅರಿಶಿನ ಬೆಲೆಗೆ ಸಂಬಂಧಿಸಿದಂತೆ ನಾವಿನ್ಯ ತಂತ್ರಜ್ಞಾನಗಳ ಕೊರತೆ ಇದೆ, ವೈಜ್ಞಾನಿಕ ಬೆಳೆ ಪದ್ಧತಿ ಬಗ್ಗೆ ಅರಿವಿನ ಕೊರತೆ ಇದೆ ಆದ್ದರಿಂದ ರಾಷ್ಟ್ರೀಯ ಅರಿಶಿನ ಮಂಡಳಿ ಕಾರ್ಯ ಚಟುವಟಿಕೆಗಳನ್ನು ಚಾಮರಾಜನಗರ ಜಿಲ್ಲೆಗೆ ವಿಸ್ತರಿಸುವುದರಿಂದ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಿ ರೈತರ ಆದಾಯದಲ್ಲಿ ಸುಧಾರಣೆ ಆಗುತ್ತದೆ ಎಂದು ಸಚಿವ ಪಿಯೂಷ್ ಗೋಯಲ್ ಅವರಲ್ಲಿ ಸುನಿಲ್ ಬೋಸ್ ಮನವಿ ಮಾಡಿದರು.
ಬೆಂಗಳೂರು: ಮೀಸಲು ಧರ್ಮಾಧಾರಿತ ಅಲ್ಲ. ಅದು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ನಿಂತಿದೆ, ನಿಂತಿರಬೇಕು ಎನ್ನುವುದು ಜೆಡಿಎಸ್ ಅಚಲ ನಿಲುವು ಎಂದು ಕೇಂದ್ರ ಸಚಿವ ಹೆಚ್ ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು,ಮುಸ್ಲಿಮರಿಗೆ ಶೇ.4ರಷ್ಟು ಗುತ್ತಿಗೆ ಮೀಸಲು ಕುರಿತು ಜೆಡಿಎಸ್ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಮುಸ್ಲಿಮರಿಗೆ ಕಾಂಗ್ರೆಸ್ ಸರಕಾರ.ಶೇ.4ರಷ್ಟು ಗುತ್ತಿಗೆ ಮೀಸಲಾತಿ ನೀಡಿರುವುದರ ವಿರುದ್ಧದ ಹೋರಾಟದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ಇಲ್ಲ, ಗೊಂದಲವಿದೆ ಎನ್ನುವುದು ಸತ್ಯಕ್ಕೆ ದೂರ. ಕೆಲ ಪತ್ರಿಕೆ ಮತ್ತು ಸುದ್ದಿವಾಹಿನಿಗಳಲ್ಲಿ ಬಂದಿರುವ ವರದಿಗಳು ಸತ್ಯಕ್ಕೆ ದೂರ ಎಂದು ತಿಳಿಸಿದ್ದಾರೆ.
ವಿಧಾನಮಂಡಲ ಅಧಿವೇಶನ ಆರಂಭಕ್ಕೆ ಮೊದಲೇ ಬೆಂಗಳೂರಿನಲ್ಲಿ ಎನ್ ಡಿ ಎ ‘ಸಮನ್ವಯ ಸಮಿತಿ’ ಸಭೆ ನಡೆದು ಎಲ್ಲಾ ವಿಚಾರಗಳನ್ನೂ ಸಮಗ್ರವಾಗಿ ಚರ್ಚಿಸಲಾಗಿದೆ. ಸರಕಾರದ ವಿರುದ್ಧ ಹೋರಾಟದ ರೂಪುರೇಷೆ ರೂಪಿಸಲಾಗಿತ್ತು. ಆ ಸಭೆಯಲ್ಲಿ ಸ್ವತಃ ನಾನೂ ಭಾಗವಹಿಸಿದ್ದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸರಕಾರವು ಕೇವಲ ಚುನಾವಣಾ ಸ್ವಾರ್ಥಕ್ಕೆ, ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ‘ಸಾಮಾಜಿಕ ನ್ಯಾಯದ ಆದರ್ಶ ಪರಿಕಲ್ಪನೆ’ಯಾದ ಮೀಸಲಾತಿ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಮೀಸಲಾತಿಯನ್ನೇ ಓಲೈಕೆ ಅಸ್ತ್ರವನ್ನಾಗಿ ಮಾಡಿಕೊಂಡು ರಾಜ್ಯದ ಜನತೆಯ ದಿಕ್ಕು ತಪ್ಪಿಸುತ್ತಿದೆ. ರಾಷ್ಟ್ರದ ಉದ್ದಗಲಕ್ಕೂ ಕಾಂಗ್ರೆಸ್ ಮೀಸಲು ಅರಾಜಕತೆ ಸೃಷ್ಟಿಸುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.
ಜೆಡಿಎಸ್ – ಬಿಜೆಪಿ ಈಗಾಗಲೇ ಒಟ್ಟಾಗಿ ಅನೇಕ ಜನಪರ ಹೋರಾಟಗಳಲ್ಲಿ ಭಾಗಿಯಾಗಿವೆ, ಮುಂದೆಯೂ ಹೋರಾಡುತ್ತವೆ. ಈ ಬಗ್ಗೆ ರಾಜಿ ಪ್ರಶ್ನೆಯೇ ಇಲ್ಲ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ದುರ್ಬಲವಾಗಿರುವ ಎಲ್ಲಾ ಸಮುದಾಯಗಳಿಗೆ ಸಮಾನ ಅವಕಾಶಗಳು, ಸೌಲಭ್ಯಗಳು ಸಿಗಬೇಕು. ಆದರೆ, ಒಂದು ನಿರ್ದಿಷ್ಟ ಸಮುದಾಯದ ತುಷ್ಟೀಕರಣ, ಬಹು ಸಮುದಾಯಗಳ ತುಚ್ಚೀಕರಣ ನ್ಯಾಯ ಸಮ್ಮತವಲ್ಲ. ಇದು ಸಂವಿಧಾನಕ್ಕೆ ಎಸಗುವ ಅಪಚಾರ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ನವದೆಹಲಿ: ಸರಕು ಸಾಗಣೆ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಪ್ರಮಾಣದಲ್ಲಿ ಅಳವಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ನವದೆಹಲಿಯಲ್ಲಿ ಗುರುವಾರ ಎಲೆಕ್ಟ್ರಿಕ್ ಟ್ರಕ್ ಉದ್ಯಮದ ಮುಖ್ಯಸ್ಥರ ಜತೆ ಸಂವಾದ ನಡೆಸಿದ ಕುಮಾರಸ್ವಾಮಿ, ಸರಕು ಸಾಗಣೆಯ ಕ್ಷೇತ್ರದಲ್ಲಿ ವಾಯು ಮಾಲಿನ್ಯ ಕಡಿಮೆ ಮಾಡಿ ಸಾಗಾಣಿಕೆಯಲ್ಲಿ ಕ್ಷಮತೆ ಸಾಧಿಸುವ ಉದ್ದೇಶದಿಂದ ಕೇಂದ್ರ ಎಲ್ಲಾ ರೀತಿಯ ಉತ್ತೇಜನ ನೀಡುತ್ತಿದೆ,ಇದಕ್ಕಾಗಿ ಅನೇಕ ಉಪಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತವು ಎಲೆಕ್ಟ್ರಿಕ್ ವಾಹನ ವಲಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. 27,000 ಎಲೆಕ್ಟ್ರಿಕ್ ಬಸ್‌ಗಳ ನಿಯೋಜನೆಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಈಗಾಗಲೇ 10,500ಕ್ಕೂ ಹೆಚ್ಚು ಬಸ್ ಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ಉತ್ತೇಜನಗೊಂಡಿರುವ ಕೇಂದ್ರ ಸರ್ಕಾರವು ಇದೀಗ ಈಗ ತನ್ನ ಗಮನವನ್ನು ಸರಕು ಸಾಗಣೆ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ಟ್ರಕ್ ಗಳನ್ನು ರಸ್ತೆಗಳಿಗೆ ಇಳಿಸಲು ಉತ್ಸಾಹದಿಂದ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಟ್ರಕ್ ಉದ್ಯಮವು ಭಾರತದ ಪೂರೈಕೆ ಸರಪಳಿ ಮತ್ತು ಸಾಗಾಣಿಕೆಯ ಬೆನ್ನೆಲುಬಾಗಿದೆ, ಆದರೆ ಇದು ಇಂಧನ ಬಳಕೆ ಮತ್ತು ಇಂಗಾಲ ಹೊರಸೂಸುವಿಕೆಯ ಗಮನಾರ್ಹ ಪಾಲನ್ನು ಈ ಕ್ಷೇತ್ರವೇ ಹೊಂದಿದೆ ಎಂಬುದು ಕಳವಳಕಾರಿ ಸಂಗತಿ” ಎಂದು ಕುಮಾರಸ್ವಾಮಿ ಹೇಳಿದರು.
2070ರ ವೇಳೆಗೆ ಸಾರಿಗೆ ಕ್ಷೇತ್ರದಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಶೂನ್ಯಕ್ಕೆ ಇಳಿಸುವ ಬದ್ಧತೆಯನ್ನು ಈ ಉಪಕ್ರಮ ಎತ್ತಿ ತೋರಿಸುತ್ತದೆ. ಹಸಿರು ದಿಕ್ಕಿನತ್ತ ಟ್ರಕ್ ಉದ್ಯಮವನ್ನು ಮುನ್ನಡೆಸುವ ನಿಟ್ಟಿನಲ್ಲಿ ಇದು ಪರಿಣಾಮಕಾರಿ ಕ್ರಮ ಎಂದು ಹೇಳಿದರು.