ಬಿ.ಆರ್.ಟಿ ವನ್ಯಜೀವಿ ವಲಯಕ್ಕೂ ತಟ್ಟಿದ ಬಿರು ಬಿಸಿಲಿನ ತಾಪ-ಬರಡಾಗುತ್ತಿದೆ ಕಾಡು

Spread the love

(ವಿಶೇಷ ವರದಿ: ಡಿ.ಸಿದ್ದರಾಜು ಕೊಳ್ಳೇಗಾಲ)

ಕೊಳ್ಳೇಗಾಲ,ಏ.1: ಬೇಸಿಗೆ ಆರಂಭಗೊಂಡಿದ್ದು ರಣಬಿಸಿಲಿನ ತಾಪಮಾನ ತಡೆಯಲಾಗುತ್ತಿಲ್ಲ.

ತಾಲ್ಲೂಕಿನ ಬಿ.ಆರ್.ಟಿ ವನ್ಯಜೀವಿ ವಲಯಕ್ಕೂ ಬಿರು ಬಿಸಿಲಿನ ತಾಪ ತಟ್ಟಿದ್ದು ಕಾಡಿನ ಪರಿಸರ ಒಣಗಿ ಬರಡಾಗಿಬಿಟ್ಟಿದೆ.

ತಾಪಮಾನ 28 ಡಿಗ್ರಿ ಸೆಲ್ಸಿಯಸ್‌ನಿಂದ 39 ಡಿಗ್ರಿ ತನಕ ವ್ಯತ್ಯಯವಾಗುತ್ತಿದೆ. ಈ ಬಾರಿ ಏಪ್ರಿಲ್‌ಗೂ ಮುನ್ನವೇ ಬಿರು ಬೇಸಿಗೆಗೆ ಕಾಡು ನಲುಗಿ ಹೋಗಿದೆ.

ಅರಣ್ಯ ಇಲಾಖೆಯು ಅಗ್ನಿ ಶಾಮಕ ಇಲಾಖೆಯವರ ಉತ್ತಮ ಸಮನ್ವಯತೆಯಿಂದ ಅರಣ್ಯದಲ್ಲಿ ಬೆಂಕಿ ಅವಘಡ ಸಂಭವಿಸದ ಹಾಗೆ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಅನಿವಾರ್ಯ ಸಂದರ್ಭದಲ್ಲಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡರೆ ತಕ್ಷಣ ನಂದಿಸಲು ಅಧಿಕಾರಿಗಳು, ಸಿಬ್ಬಂದಿ ಸಜ್ಜಾಗಿದ್ದಾರೆ.

ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ಹನೂರು ತಾಲ್ಲೂಕುಗಳಲ್ಲಿ ಹಬ್ಬಿರುವ ಬಿಳಿಗಿರಿಯ ಶೃಂಗ, ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಸಂಗಮ.

ನೈರುತ್ಯ ಮತ್ತು ಈಶಾನ್ಯ ಮಾರುತ ಎರಡರಿಂದಲೂ ಮಳೆ ಪಡೆಯುವ ಬಿಆರ್‌ಟಿಯಲ್ಲಿ ವಾರ್ಷಿಕ 250 ಮಿ.ಮೀಟರ್ ಮಳೆ ಸುರಿದರೆ, ಸದಾ ಜೀವ ತಳೆಯುವ ಹಲವು ನದಿ, ಜಲಮೂಲಗಳಿಗೆ ಜನ್ಮ ನೀಡುತ್ತದೆ. ವನ ವೈವಿಧ್ಯ ಅರಳುತ್ತದೆ. ಮರ, ಗಿಡಗಳು ನೀರಿನ ಕಣಗಳನ್ನು ಹಿಡಿದಿಟ್ಟು, ಬೇಸಿಗೆಯಲ್ಲೂ ನಳನಳಿಸುತ್ತವೆ.

ಆದರೆ ಬಿಆರ್‌ಟಿ ವ್ಯಾಪ್ತಿಯಲ್ಲಿ ಕಳೆದ ಮುಂಗಾರು ಋತುವಿನಲ್ಲಿ ವಾಡಿಕೆಯಂತೆ ವರ್ಷಧಾರೆ ಆಗಿದ್ದರೆ, ಗಿಡ ಮರಗಳಲ್ಲಿ ಹಸಿರು ಲಾಸ್ಯವಾಡುತ್ತಿತ್ತು. ವನ್ಯ ಜೀವಿಗಳು ಅಭಯಾರಣ್ಯದ ಜಲಾವರಗಳಲ್ಲಿ ಸುಳಿದಾಡುತ್ತಿದ್ದವು.

ಆದರೆ ಎರಡು ವರ್ಷಗಳಿಂದ ಸರಿಯಾಗಿ ಮಳೆ ಬರಲಿಲ್ಲ. ಐದಾರು ಸಾವಿರ ಅಡಿ ಎತ್ತರದ ಬೆಟ್ಟ ಗುಡ್ಡಗಳಿಂದ ಜಿನುಗುತ್ತಿದ್ದ ಒರತೆಯೂ ಬತ್ತಿದೆ. ಪುಟ್ಟ ಜಲಾವರಗಳಲ್ಲಿ ಅಲ್ಪಸ್ವಲ್ಪ ನೀರು ಬರಿದಾಗುವ ಮಟ್ಟ ತಲುಪಿದೆ. ಕಾಡಂಚಿನ ಕೆರೆಗಳಲ್ಲಿ ಶೇ 50 ರಷ್ಟು ಮಾತ್ರ ನೀರು ಉಳಿದಿದೆ.

ಉಷ್ಣ ವಲಯದ ಕಾನು ವೃಕ್ಷಗಳು ಒಣಗುತ್ತಿವೆ. ಬಿಸಿಲಿನ ಝಳ ಇದೇ ರೀತಿ ಮುಂದುವರಿದಲ್ಲಿ ಜಲಾವೃತ ಪ್ರದೇಶ ಬಿರುಕು ಬಿಡಲಿದೆ. ಕಾಡು ಕಪ್ಪಾಗಿ, ನೀರು ಹಿಡಿದಿಟ್ಟುಕೊಳ್ಳವ ಸಾಮರ್ಥ್ಯ ಕಳೆದುಕೊಳ್ಳಲಿದೆ.

ಬೆಂಕಿ ಕಾಣಿಸಿಕೊಂಡರೆ ಆರಿಸಲು ನೀರು ಅತ್ಯಗತ್ಯ. ಆದ್ದರಿಂದ ನೀರು ಲಭ್ಯವಿರುವ ಸ್ಥಳಗಳನ್ನು ಗುರುತಿಸಿಕೊಳ್ಳಲಾಗಿದೆ. ಅರಣ್ಯ ಬೆಂಕಿಯನ್ನು ತಡೆಯಲು ವಾಚ್ ಟವರ್ ಗಳನ್ನು ನಿರ್ಮಿಸಲಾಗಿದೆ.

ಕೊಳ್ಳೇಗಾಲ ತಾಲ್ಲೂಕು ಕೇಂದ್ರದ ಆಗ್ನೇಯ ದಿಕ್ಕಿನಲ್ಲಿ ಹರಡಿರುವ ಬಿ.ಆರ್.ಟಿ ವನ್ಯಜೀವಿ ವಲಯ ತಾಲ್ಲೂಕಿನ ಅರೆಪಾಳ್ಯ, ಕುಣಗಳ್ಳಿಯಿಂದ ಹನೂರು ತಾಲ್ಲೂಕಿನ ಕೆ.ಕೆ ಡ್ಯಾಮ್ (ಕೌಳಿಹಳ್ಳ ಡ್ಯಾಮ್) ಬೂದಿಪಡಗದ ವರೆಗೆ 14300 ಹೆಕ್ಟರ್ ವಿಸ್ತೀರ್ಣ ಹೊಂದಿದೆ.

ಬೋಳುಗುಡ್ಡ, ಎದ್ದಿನ್ನಿ ಬೆಟ್ಟ, ಸೂಜಿಗಲ್ಲು ಮುಂಟಿ, ಕರಿಯನ ಗುಡ್ಡ, ಬಿಲ್ಲಂಬಾರೆ, ಹೊನ್ನಬಾರೆ ಬೆಟ್ಟ ಗುಡ್ಡಗಳನ್ನು ಹೊಂದಿದೆ. ಅರೆಪಾಳ್ಯ, ಮಧುವನಹಳ್ಳಿ, ಸೂರಪುರ, ಗುಂಡಲ್ ಎ, ಗುಂಡಲ್ ಬಿ, ಕಣ್ಣೂರು ಹಾಗೂ ಲೊಕ್ಕನಹಳ್ಳಿ ಪಶ್ಚಿಮ ಬೀಟುಗಳಿವೆ.

ಹಾಗೆಯೇ ಪುಣ್ಯಪುರುಷರು ಐಕ್ಯವಾಗಿರುವ ಪ್ರಸಿದ್ದ ಧಾರ್ಮಿಕ ತಾಣಗಳಾದ ರೇವಣ್ಣ ಸಿದ್ದೇಶ್ವರ ಬೆಟ್ಟ, ಮಂಟೇಸ್ವಾಮಿ ಶಿಷ್ಯರಾದ ಲಿಂಗಯ್ಯ ಚನ್ನಯ್ಯ ನೆಲೆಸಿರುವ ಕುರುಬನಕಟ್ಟೆ ಕ್ಷೇತ್ರ ಹಾಗೂ ಪ್ರವಾಸಿ ತಾಣವಾದ ಗುಂಡಾಲ್ ಜಲಾಶಯವಿದೆ.

ಕೊಳ್ಳೇಗಾಲ ತಾಲ್ಲೂಕು ಕೇಂದ್ರದಿಂದ 27 ಕಿ.ಮೀ. ಕ್ರಮಿಸಿದರೆ ಲೊಕ್ಕನಹಳ್ಳಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಎದುರಾಗುವುದೇ ಗುಂಡಲ್ ಅರಣ್ಯ.

ಬಿ.ಆರ್.ಟಿ ವನ್ಯಜೀವಿ ವಲಯ ವ್ಯಾಪ್ತಿಗೆ ಬರುವ ಈ ಅರಣ್ಯದೊಳಗೆ ಎತ್ತರದ ಬೆಟ್ಟ ಗುಡ್ಡಗಳಿವೆ, ಬೆಟ್ಟ ಗುಡ್ಡಗಳ ನಡುವೆ ಅಡ್ಡಲಾಗಿ ಆಕರ್ಷಕವಾಗಿ ಜಲಾಶಯವನ್ನು ನಿರ್ಮಿಸಲಾಗಿದೆ. ಸುಂದರ ಪರಿಸರ ಬಯಸುವವರಿಗೆ ಇದು ಅಚ್ಚುಮೆಚ್ಚಿನ ತಾಣವಾಗಿದೆ.

ಈ ದಟ್ಟಾರಣ್ಯದೊಳಗೆ ಬುರುಡೆ ಫಾರೆಸ್ಟ್ ಇದ್ದು ವಾಸ್ತವ್ಯಕ್ಕೆ ಬ್ರಿಟಿಷರ ಕಾಲದ ಪ್ರವಾಸಿ ಬಂಗಲೆಯಿದೆ. ಬಿ.ಆರ್.ಟಿ ಹುಲಿಸಂರಕ್ಷಿತಾರಣ್ಯ ಪ್ರದೇಶವಾಗಿ ಘೋಷಿತವಾದ ನಂತರ ಇಲ್ಲಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಈ ವನ್ಯಜೀವಿ ವಲಯದಲ್ಲಿ ಆನೆ, ಹುಲಿ, ಚಿರತೆ, ಕಾಡುಕೋಣ, ಸೀಳುನಾಯಿ, ಚುಕ್ಕಿ ಜಿಂಕೆ, ಸಾಂಬಾರ್ ಜಿಂಕೆ, ಕರಡಿ, ಸಾರಂಗ, ಸಿಂಗಳೀಕ, ನವಿಲು, ಹೆಬ್ಬಾವು ಹಾಗೂ ಇನ್ನಿತರ ವನ್ಯ ಪ್ರಾಣಿಗಳು ವಾಸಿಸುತ್ತಿವೆ. ಹಾಗೂ ಅಪರೂಪದ ಕೀಟ ಪ್ರಭೇದವನ್ನು ಒಳಗೊಂಡಿದೆ.

ಕೀಟಭಕ್ಷಕ ಸಸ್ಯವರ್ಗ ಒಳಗೊಂಡಂತೆ ಶ್ರೀಗಂಧ, ಬೀಟೆ, ಹೊನ್ನೆ, ನೀಲಗಿರಿ ಮತ್ತು ಸಿಂಕೋನ ವೃಕ್ಷಗಳ ಜೀವ-ವೈವಿದ್ಯತಾ ಆವಾಸಗಳ ನಡುವೆ ಕಾಣಬರುತ್ತದೆ. ಈ ಭಾಗದಲ್ಲಿ ದಟ್ಟವಾದ ಅರಣ್ಯಗಳಿದ್ದು ಇಲ್ಲಿನ ಪ್ರಮುಖ ವನ್ಯಜೀವಿಗಳು ಆನೆ, ಹುಲಿ, ಕರಡಿ, ಜಿಂಕೆ, ಇತ್ಯಾದಿ.

ಬೇಸಿಗೆಯ ರಣಬಿಸಿಲಿನ ತಾಪಮಾನದ ತೀವ್ರತೆಯಿಂದಾಗಿ ಪ್ರಾಣಿ ಪಕ್ಷಿ ಸಂಕುಲ ಬಳಲುತ್ತಿವೆ. ಕುಡಿಯುವ ನೀರು ಆಹಾರಕ್ಕಾಗಿ ಪರಿತಪಿಸುತ್ತಿವೆ. ಪ್ರಾಣಿ ಪಕ್ಷಿಗಳು ತಮ್ಮ ಅಸ್ಥಿತ್ವಕ್ಕಾಗಿ ಹೋರಾಟ ನಡೆಸಬೇಕಿದೆ, ಈಗಾಗಲೇ ಕೆಲವು ವನ್ಯಜೀವಿಗಳ ಸಂತತಿ ಕ್ಷೀಣಿಸುತ್ತಿದೆ, ಹಲವಾರು ಪಕ್ಷಿಗಳು ನಶಿಸಿ ಹೋಗುತ್ತಿವೆ. ಆದ್ದರಿಂದ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಮನುಷ್ಯನ ಒಡನಾಡಿಯಾಗಿರುವ ಪ್ರಾಣಿ ಪಕ್ಷಿಗಳ ಜೀವ ಸಂಕುಲವನ್ನು ಉಳಿಸಬೇಕಿದೆ.  

ಆದ್ದರಿಂದ ಅರಣ್ಯ ಬೆಂಕಿ ತಡೆಯಲು ಮುಂಜಾಗ್ರತೆ ವಹಿಸಿ ಅರಣ್ಯ ಬೆಂಕಿ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ವಾಚ್ ಟವರ್ ಗಳನ್ನು ಮಾಡಿಕೊಂಡು ಅಲ್ಲಿ ಸಿಬ್ಬಂದಿ ಇದ್ದು ವಾಚ್ ಮಾಡುತ್ತಾರೆ. ಬೆಂಕಿರೇಖೆ, ಬೆಂಕಿತಡೆ ವಾಚರ್‌ಗಳ ನೇಮಕ ಮಾಡಿಕೊಳ್ಳಲಾಗಿದೆ, 3 ಮಂದಿ ಡಿ.ಆರ್.ಎಫ್, 10 ಮಂದಿ ಗಾರ್ಡುಗಳು, 4 ಮಂದಿ ವಾಚರ್, ಒಬ್ಬ ರೇಂಜರ್ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ 43 ಮಂದಿ ಸಿಬ್ಬಂದಿಗಳನ್ನು ನೇಮಿಸಿ ಕೊಳ್ಳಲಾಗಿದೆ.

ಪ್ರಾಕೃತಿಕವಾಗಿ ಯಾವುದೇ ಬೆಂಕಿ ಅನಾಹುತಗಳು ಆಗಲು ಅವಕಾಶವೇ ಇಲ್ಲ. ಆದರೆ ಕಿಡಿಗೇಡಿಗಳು ಬೆಂಕಿ ಹಚ್ಚಿದರೆ ಮಾತ್ರ ಅನಾಹುತ ಎನ್ನುತ್ತಾರೆ ಬಿ.ಆರ್.ಟಿ ವನ್ಯಜೀವಿ ವಲಯದ ವಲಯ ಅರಣ್ಯ ಸಂರಕ್ಷಣಾಧಿಕಾರಿ (ಆರ್‌ಎಫ್‌ಓ) ವಾಸು ಅವರು. 

ಅರಣ್ಯ ಇಲಾಖೆಯು ಅಗ್ನಿ ಶಾಮಕ ಇಲಾಖೆಯವರ ಉತ್ತಮ ಸಮನ್ವಯತೆಯಿಂದ ಅನಾಹುತ ಆಗದಂತೆ  ಅರಣ್ಯದಲ್ಲಿ ಬೆಂಕಿ ಅವಗಡ ಸಂಭವಿಸದ ಹಾಗೆ ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅನಿವಾರ್ಯ ಸಂದರ್ಭದಲ್ಲಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡರೆ ತಕ್ಷಣ ನಂದಿಸಲು ಅಧಿಕಾರಿಗಳು ಸಿಬ್ಬಂದಿಗಳು ಸಜ್ಜಾಗಿದ್ದಾರೆ. ಗುಂಡಲ್ ಜಲಾಶಯ ಸೇರಿದಂತೆ 61 ಕೆರೆಗಳಿದ್ದು ಎಲ್ಲಾ ಕೆರೆಗಳಲ್ಲೂ ಶೇ 50 ರಷ್ಟು ನೀರಿದೆ. ನೀರಿನ ಸರಬರಾಜಿಗೆ ಎರಡು ಸೋಲಾರ್ ಪಂಪ್ ಮಾಡಿಕೊಂಡಿದ್ದೇವೆ. ಅಗತ್ಯವಿದ್ದರೆ ಅವಶ್ಯಕತೆಗೆ ತಕ್ಕಂತೆ ಮತ್ತಷ್ಟು ಸೋಲಾರ್ ಪಂಪ್ ಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ಈಗಾಗಲೇ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಗಳ ಹೂಳು ತೆಗೆಸುವ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ವಾಸು ಮಾಹಿತಿ ನೀಡಿದರು.

ಬೆಂಕಿ ಕಂಡುಬರುವ ಪ್ರದೇಶಗಳನ್ನು ಗುರುತಿಸಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜನರು ಬೆಂಕಿ ಕಾಣಿಸಿಕೊಂಡರೆ ತಕ್ಷಣ ಅರಣ್ಯ ಇಲಾಖೆ ಹಾಗೂ ಅಗ್ನಿ ಶಾಮಕ ಇಲಾಖೆಗೆ ಮಾಹಿತಿ ನೀಡಬೇಕು. ಕಾಡಂಚಿನ ಪ್ರದೇಶಗಳ ಜನರು ಬೀಡಿ ಸಿಗರೇಟ್ ಸೇವನೆ ಮಾಡಿ ಬೆಂಕಿ ನಂದಿಸದೆ ಎಸೆಯಬಾರದು. ಇದರಿಂದ ಬೆಂಕಿ ಕಾಣಿಸಿಕೊಳ್ಳುವ ಸಂಭವ ಹೆಚ್ಚು ಇರುತ್ತದೆ. ಅರಣ್ಯ ಬೆಂಕಿ ಕಾಣಿಸಿಕೊಳ್ಳದ ಹಾಗೆ ತಡೆಯಲು ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕು ಎಂದು ವಾಸು ಅವರು ಮನವಿ ಮಾಡಿದರು.