ಪವಿತ್ರ ಪಾಮ್ ಸಂಡೆ ದಿನ 20 ಜನಬಲಿ;ಉಕ್ರೇನ್‌ ಸುಮಿ ಮೇಲೆ ರಷ್ಯಾದ ಕ್ಷಿಪಣಿ ದಾಳಿ

ಉಕ್ರೇನ್: ಉಕ್ರೇನಿಯನ್ ನಗರದ ಸುಮಿ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ 20ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ನಗರದ ಹಂಗಾಮಿ ಮೇಯರ್ ತಿಳಿಸಿದ್ದಾರೆ.

ಅದೂ ಪಾಮ್ ಸಂಡೆ ದಿನವೇ ಈ ದಾಳಿ ನಡೆದಿದೆ.

ಪಾಮ್ ಸಂಡೆ ಆಚರಿಸಲು ಸ್ಥಳೀಯರು ಒಟ್ಟಿಗೆ ಸೇರುತ್ತಿದ್ದಾಗ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ನಗರದ ಹೃದಯಭಾಗಕ್ಕೆ ಅಪ್ಪಳಿಸಿವೆ.

ಈ ಪವಿತ್ರ ಪಾಮ್ ಸಂಡೆಯಂದು, ನಮ್ಮ ಸಮುದಾಯವು ಭೀಕರ ದುರಂತವನ್ನು ಅನುಭವಿಸಿದೆ ಎಂದು ಆರ್ಟೆಮ್ ಕೊಬ್ಜಾರ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಇಂಧನ ಮೂಲಸೌಕರ್ಯದ ಮೇಲಿನ ದಾಳಿಯನ್ನು ನಿಲ್ಲಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಿಕೊಂಡ ತಾತ್ಕಾಲಿಕ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ರಷ್ಯಾ ಮತ್ತು ಉಕ್ರೇನ್‌ನ ಉನ್ನತ ರಾಜತಾಂತ್ರಿಕರು ಪರಸ್ಪರ ಆರೋಪ ಮಾಡಿಕೊಂಡ ಒಂದು ದಿನದ ಬಳಿಕ ಈ ದಾಳಿ ನಡೆದಿದೆ.

ಮೂರು ವರ್ಷಗಳ ಯುದ್ಧವನ್ನು ಕೊನೆಗೊಳಿಸಲು ಮಾತುಕತೆಗಳಲ್ಲಿನ ವಿಫಲತೆಯನ್ನು ಇದು ಎತ್ತಿ ತೋರಿಸಿದೆ.

ಶನಿವಾರ ಮುಂಜಾನೆ ಉಕ್ರೇನ್‌ನ ಕೀವ್‌ನಲ್ಲಿರುವ ಭಾರತೀಯ ಔಷಧ ಕಂಪನಿಯ ಗೋದಾಮಿನ ಮೇಲೂ ರಷ್ಯಾ ಕ್ಷಿಪಣಿ ದಾಳಿ ನಡೆಸಿತ್ತು.

ಭಾರತವನ್ನು ತಮ್ಮ ಆಪ್ತಮಿತ್ರ ಎಂದು ಹೇಳಿಕೊಳ್ಳುತ್ತಾ, ಉಕ್ರೇನ್‌ನಲ್ಲಿರುವ ಭಾರತೀಯ ವ್ಯವಹಾರಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದೆ ಎಂದು ಉಕ್ರೇನ್ ಆರೋಪಿಸಿದೆ.

ನಾಶವಾದ ಗೋದಾಮು ಉಕ್ರೇನ್‌ನ ಅತಿದೊಡ್ಡ ಔಷಧ ಕಂಪನಿಗಳಲ್ಲಿ ಒಂದಾದ ಕುಸುಮ್ ಎಂಬ ಔಷಧ ಕಂಪನಿಗೆ ಸೇರಿದ್ದು, ಕುಸುಮ್ ಹೆಲ್ತ್‌ಕೇರ್ ಮಾನವೀಯ ಉದ್ದೇಶಗಳಿಗಾಗಿ ಬಳಸಲಾಗುವ ಅಗತ್ಯ ವೈದ್ಯಕೀಯ ಸರಬರಾಜುಗಳನ್ನು ಸಂಗ್ರಹಿಸುತ್ತಿತ್ತು. ಭಾರತೀಯ ಉದ್ಯಮಿ ರಾಜೀವ್ ಗುಪ್ತಾ ಈ ಕಂಪನಿಯ ಮಾಲೀಕರಾಗಿದ್ದಾರೆ.