ಮೈಸೂರು: ತಂಪಾದ ಇಳಿ ಸಂಜೆಯಲ್ಲಿ ಅರಮನೆ ಆವರಣದಲ್ಲಿ ನೆರೆದ್ದಿದ್ದ ಪ್ರೇಕ್ಷಕರು ಹಾಗೂ ಪ್ರವಾಸಿಗರನ್ನು ತಮ್ಮ ಸುಮಧುರ ಗಾನಸುಧೆಯ ಮೂಲಕ ಗಾಯಕಿ ಸಿಂಚನ ದಿಕ್ಷಿತ್ ಅವರು ರಂಜಿಸಿದರು.
ನಗರದ ಅರಮನೆ ಆವರಣದಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2025ರ ಅಂಗವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸರಿಗಮ ತಂಡದ ಸಿಂಚನ ದಿಕ್ಷೀತ್ ಅವರು ಕಾಯೋ ಶ್ರೀ ಗೌರಿ ಕರುಣ ಲಹರಿ,ಐಗಿರಿ ನಂದಿನಿ ನಂದಿತಾ ವೇದಿನಿ…ಮಹಿಷಾಸುರ ಮರ್ದಿನಿ ಹಾಡಿನ ಮೂಲಕ ಬೆಟ್ಟದ ಚಾಮುಂಡಿ ದರ್ಶನ ಮಾಡಿಸಿ, ದೇವ ಶ್ರೀ ಗಣೇಶ…ಎಂದು ಏಕದಂತ ಹಾಗೂ ಸೂಜುಗಾದ ಸೂಜು ಮಲ್ಲಿಗೆ…ಮಹದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ…ಹಾಡಿನ ಮೂಲಕ ಮಹದೇಶ್ವರರನ್ನು ಭಜಿಸಿ ಪ್ರೇಕ್ಷಕರು ಭಕ್ತಿಯ ಕಡಲಲ್ಲಿ ತೇಲುವಂತೆ ಮಾಡಿದರು.
ಡೆನ್ನಾನಾ ಡೆನ್ನಾನಾ ಹಾಡಿಗೆ ಪ್ರೇಕ್ಷಕರು. ಸೂಪರ್ ಎಂದು ಕೂಗಿ ಸಂಭ್ರಮಿಸಿದರೆ, ಎಲ್ಲಿ ಕಾಣೆ ಎಲ್ಲಿ ಕಾಣೆ ಯಲ್ಲವ್ವ ನಿನ್ನ ಎಲ್ಲಿ ಕಾಣೆ…ಹಾಡಿನ ಮೂಲಕ ನೆರೆದಿದ್ದವರನ್ನು ರಂಜಿಸಿ, ಮೈಸೂರು ಅನಂತಸ್ವಾಮಿ ಅವರ ಎದೆ ತುಂಬಿ ಹಾಡಿದೆನು ಅಂದು ನಾನು… ಹಾಡಿದರು.
ಡಾ.ರಾಜ್ ಕುಮಾರ್ ಹಾಗೂ ಕಲ್ಪನ ಜೋಡಿಯ ಬಾಳ ಬಂಗಾರ ನೀನು… ಹಣೆಯ ಸಿಂಗಾರ ನೀನು… ಹಾಡನ್ನು ಹಾಡಿಕೊಂಡು ಪ್ರೇಕ್ಷರ ಬಳಿಗೆ ಹೋಗಿ ಹುರಿದುಂಬಿಸಿದರು.
ಬೊಂಬೆ ಹೇಳುತೈತೆ ಮತ್ತೇ ಹೇಳುತೈತೆ ನೀನೇ ರಾಜ ಕುಮಾರ ಹಾಡಿನನೊಂದಿಗೆ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿ…ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಎಂದು ಕನ್ನಡದ ಕಂಪಿನ ಗಾನಸುಧೆ ಮೊಳಗಿಸುವ ಮೂಲಕ ಪ್ರೇಕ್ಷಕರು ಹಾಗೂ ಪ್ರವಾಸಿಗರು ಶಿಳ್ಳೆ ಚಪ್ಪಾಳೆಯೊಂದಿಗೆ ಪ್ರೋತ್ಸಾಹಿಸಿದರು.
ಶ್ರೀ ನೀಲಾದ್ರಿ ಕುಮಾರ್ ಅಮೋಘವಾಗಿ ಸಿತಾರ್ ನುಡಿಸಿ ಪ್ರೇಕ್ಷಕರ ಮನ ಗೆದ್ದರೆ, ತಮ್ಮ ತಂಡದ ಡ್ರಮ್ಸ್ ನಲ್ಲಿ ಲೂಹಿ ಜಿನೊ ಬ್ಯಾಂಕ್ಸ್, ತಬಲ ಪಂಡಿತ್ ಸತ್ಯಜೀತ್ ತಲವಲ್ಕರ್, ಬಾಸೂರಿಯಲ್ಲಿ ರಿಷಿಕೇಶ್ ಮಜೊಂಧಾರ್, ಕೀ ಬೋರ್ಡ್, ಕೊಳಲು ವಾದಕರು ತಮ್ಮ ಝಲಕ್ ಪ್ರದರ್ಶಿಸಿ ಪ್ರೇಕ್ಷಕರಿಂದ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ವಿಧಾನಪರಿಷತ್ ಸದಸ್ಯ ಶಿವಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್ ರೆಡ್ಡಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್ ಕುಮಾರ್ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ಖುಷಿ ಪಟ್ಟರು.