ಸ್ವೀಡನ್: ಸ್ವೀಡಿಷ್ ನಗರದ ಓರೆಬ್ರೊದಲ್ಲಿರುವ ಶಾಲೆಯಲ್ಲಿ ಗುಂಡಿನ ದಾಳಿ ನಡೆದಿದ್ದು ಮಕ್ಕಳು,ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಶಾಲೆಯಲ್ಲಿ ನಡೆದ ಈ ಆಘಾತಕಾರಿ ಗುಂಡಿನ ದಾಳಿ ಇಡೀ ಪ್ರದೇಶದಲ್ಲಿ ಕಳವಳ ಹುಟ್ಟುಹಾಕಿದೆ.
ಮಂಗಳವಾರ ಮಧ್ಯಾಹ್ನ ಸುಮಾರು 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಗುಂಡಿನ ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ, ಆದರೆ ಅವರ ಸ್ಥಿತಿ ಹೇಗಿದೆ ಎಂಬುದು ಗೊತ್ತಾಗಿಲ್ಲ ಎಂದು ತಿಳಿಸಿದ್ದಾರೆ.
ಈ ಗುಂಡಿನ ದಾಳಿಯ ನಂತರ ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳು ಶಾಲೆಯ ಸುತ್ತ ಅತಿ ಹೆಚ್ವು ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ತನಿಖೆ ಮತ್ತು ಭದ್ರತಾ ಕಾರ್ಯಾಚರಣೆಗಳಿಗೆ ತೊಂದರೆಯಾಗದಂತೆ ಸ್ಥಳೀಯ ಜನರು ಶಾಲೆಯ ಬಳಿ ಹೋಗದಂತೆ ಮನವಿ ಮಾಡಲಾಗಿದೆ. ಸಾಮಾನ್ಯವಾಗಿ ಶಾಂತ ಮತ್ತು ಸುರಕ್ಷಿತ ಪ್ರದೇಶವೆಂದು ಪರಿಗಣಿಸಲಾದ ಒರೆಬ್ರೊದಲ್ಲಿ ದಾಳಿ ಜನರಲ್ಲಿ ಆತಂಕ ಸೃಷ್ಟಿಸಿದೆ.
ಐವರಿಗೆ ಗುಂಡು ಬಿದ್ದಿರುವ ಬಗ್ಗೆ ದೃಢಪಟ್ಟಿದೆ ಎಂದು ಒರೆಬ್ರೊ ನಗರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣವನ್ನು ಪ್ರಸ್ತುತ “ಕೊಲೆ ಯತ್ನ, ಗಂಭೀರ ಶಸ್ತ್ರಾಸ್ತ್ರ ಅಪರಾಧ” ಎಂದು ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಒರೆಬ್ರೊದಲ್ಲಿ ಹಿಂಸಾಚಾರದ ವರದಿಗಳು ಅತ್ಯಂತ ಗಂಭೀರವಾಗಿವೆ. ಪೊಲೀಸರು ಸ್ಥಳದಲ್ಲಿದ್ದು ಕ್ರಮ ಕೈಗೊಳ್ಳಲಾಗುತ್ತಿದೆ. ಸರ್ಕಾರವು ಕಾನೂನು ಜಾರಿ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ” ಎಂದು ಸ್ವೀಡನ್‌ನ ಕಾನೂನು ಸಚಿವ ಗುನ್ನಾರ್ ಸ್ಟ್ರೋಮರ್ ಸ್ವೀಡಿಷ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಶಾಲೆಯಲ್ಲಿದ್ದಾಗ ಈ ಘಟನೆ ಸಂಭವಿಸಿದೆ ಪೊಲೀಸರು ತನಿಖೆ ನಡೆಸುತ್ತಿದ್ದು, ದಾಳಿಗೆ ಕಾರಣಗಳನ್ನು ಹುಡುಕುತ್ತಿದ್ದಾರೆ.