ಗಣಪತಿ ಶ್ರೀಗಳ‌ ವರ್ಧಂತಿ: ಶೋಭಾಯಾತ್ರೆ ಪ್ರಚಾರ ಪೋಸ್ಟರ್ ಬಿಡುಗಡೆ

ಮೈಸೂರು: ಅವಧೂತ ದತ್ತಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 83ನೇ ವರ್ಧಂತಿ ಅಂಗವಾಗಿ ದತ್ತಸೇನೆ ವತಿಯಿಂದ ಜೂನ್ 1ರಂದು ಬೃಹತ್ ಶೋಭಾಯತ್ರೆ ಹಮ್ಮಿಕೊಳ್ಳಲಾಗಿದೆ.

ಜೂನ್ 1 ರಂದು ಬೆಳಗ್ಗೆ 10ಘಂಟೆಗೆ ಮೈಸೂರಿನ ಚಾಮುಂಡಿಪುರಂ ವೃತ್ತದಿಂದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ವರೆಗೂ ಬೃಹತ್ ಶೋಭಾಯತ್ರೆಯನ್ನು ಹಮ್ಮಿಕೊಂಡಿದ್ದು ಇದರ ಪ್ರಚಾರ ಭಿತ್ತಿಪತ್ರವನ್ನ ಇಂದು ಶಾಸಕ ಟಿಎಸ್. ಶ್ರೀವತ್ಸ ರವರು ಬಿಡುಗಡೆ ಮಾಡಿದರು.

ಈ ವೇಳೆ ಟಿ.ಎಸ್. ಶ್ರೀವತ್ಸ ಅವರು ಮಾತನಾಡಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಯವರು ಮೈಸೂರಿಗೆ ಆಧ್ಯಾತ್ಮಿಕ ಧಾರ್ಮಿಕ ಸಾಮಾಜಮುಖಿ ಜೊತೆಯಲ್ಲೆ ಸಾಂಸ್ಕೃತಿಕವಾಗಿ ಸಾಕಷ್ಟು ಕೊಡುಗೆಯನ್ನ ನೀಡಿದ್ದಾರೆ ಎಂದು ತಿಳಿಸಿದರು.

ಕೋವಿಡ್ ಸಂಧರ್ಭದಲ್ಲಿ ಶ್ರೀಗಳು ಪ್ರತಿದಿನ ಮೈಸೂರು ನಗರಪಾಲಿಕೆ ವ್ಯಾಪ್ತಿಯಲ್ಲಿ ವೈದ್ಯಕೀಯ ನೆರವು ಅನ್ನದಾಸೋಹ ನೆರವನ್ನ ನೀಡಿದ್ದರು ಎಂದು ಸ್ಮರಿಸಿದರು.

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಹುಟ್ಟುಹಬ್ಬದ ಪ್ರಯುಕ್ತ ಚಾಮುಂಡಿಪುರಂ ವೃತ್ತದಿಂದ ಗಣಪತಿ ಸಚ್ಚಿದಾನಂದ ಆಶ್ರಮದ ವರೆಗೂ ನಡೆಯುವ ಶೋಭಾಯಾತ್ರೆಯಲ್ಲಿ ಮಂಗಳವಾದ್ಯ ನಾದಸ್ವರ, ವೇದಬಳಗ, ಭಜನಾಮಂಡಳಿ, ಸ್ವಾಮೀಜಿ ಅವರ ಸಾರೋಟು ರಥ ಸಾಗಲಿದ್ದು ಮೈಸೂರಿನ ಸಂಘ ಸಂಸ್ಥೆಗಳು ಭಾಗವಹಿಸಬೇಕೆಂದು ಶ್ರೀವತ್ಸ ಮನವಿ ಮಾಡಿದರು.

ಈ ಸಂಧರ್ಭದಲ್ಲಿ ಮುಖಂಡರಾದ ಜೋಗಿ ಮಂಜು, ಜಿ. ರಾಘವೇಂದ್ರ, ದತ್ತಸೇನೆ ಅಧ್ಯಕ್ಷ ಕೆ.ಆರ್ ಸತ್ಯನಾರಾಯಣ, ನಿರೂಪಕ ಅಜಯ್ ಶಾಸ್ತ್ರಿ, ಶ್ರೀಕಾಂತ್ ಕಶ್ಯಪ್, ಹರೀಶ್ ನಾಯ್ಡು ಮತ್ತಿತರರು ಹಾಜರಿದ್ದರು.