ಮೈಸೂರು: ಪವರ್ ಫೈನಾನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ ಸೆಸ್ಕ್ ಕಾರ್ಯವೈಖರಿಗೆ “ಎ” ಶ್ರೇಣಿ ರೇಟಿಂಗ್ ಮನ್ನಣೆ ದೊರೆತಿದ್ದು,ಎ ಶ್ರೇಣಿ ಪಡೆದ ರಾಜ್ಯದ ಮೊದಲ ಎಸ್ಕಾಂ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಜತೆಗೆ ವಿದ್ಯುತ್ ಉಳಿತಾಯ, ಫೀಡರ್ ನಿರ್ವಹಣೆ ಹೀಗೆ ಹಲವು ವಿಭಾಗಗಳಲ್ಲಿ ಬದ್ಧತೆಯೊಂದಿಗೆ ಕಾರ್ಯನಿರ್ವಹಣೆ ಮಾಡಿರುವ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್)ವು ಪವರ್ ಫೈನಾನ್ಸ್ ಕಾರ್ಪೊರೇಷನ್ (PFC) ಆಫ್ ಇಂಡಿಯಾ ನೀಡುವ ರೇಟಿಂಗ್‌ನಲ್ಲಿ “ಎ” ಶ್ರೇಣಿಗೆ ಉನ್ನತೀಕರಣಗೊಂಡಿದೆ.
ನಗರದ ವಿಜಯನಗರ 2ನೇ ಹಂತದಲ್ಲಿರುವ ನಿಗಮದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಅವರು, “ಸೆಸ್ಕ್ ನ ನಿರಂತರ ಪರಿಶ್ರಮ, ಉತ್ಕೃಷ್ಟತೆಯ ಬದ್ಧತೆಯಿಂದ ರಾಷ್ಟ್ರೀಯ ಮಟ್ಟದಲ್ಲಿ ಕಂಪನಿಗಳ ಶ್ರೇಯಾಂಕ ನೀಡುವ ಪವರ್ ಫೈನಾನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಅವರು ನೀಡುವ ರೇಟಿಂಗ್‌ನಲ್ಲಿ ಸೆಸ್ಕ್ “ಬಿ” ಶ್ರೇಣಿಯಿಂದ “ಎ” ಶ್ರೇಣಿಗೆ ಉನ್ನತೀಕರಣಗೊಂಡಿದೆ. ಆ ಮೂಲಕ “ಎ” ಶ್ರೇಯಾಂಕ ಪಡೆದಿರುವ ರಾಜ್ಯದ ಏಕೈಕ ಎಸ್ಕಾಂ ನಮ್ಮದು ಎಂದು ಹೆಮ್ಮೆಯಿಂದ ನುಡಿದರು.
ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುವ ಮೂಲಕ ಎ- ಪ್ಲಸ್ ಶ್ರೇಣಿ ಪಡೆಯುವ ಗುರಿ ಇದೆ ಎಂದು ತಿಳಿಸಿದರು.
ಸೆಸ್ಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಉತ್ತಮ ಕಾರ್ಯನಿರ್ವಹಣೆಯಿಂದಾಗಿ ಈ ಶ್ರೇಯಾಂಕ ಪಡೆಯಲು ಸಾಧ್ಯವಾಗಿದೆ. ದೇಶದ ಎಲ್ಲಾ ಎಸ್ಕಾಂಗಳ ಸೇವೆಯನ್ನು ಪವರ್ ಫೈನಾನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಪ್ರತಿ ವರ್ಷವೂ ಗಮನಿಸಿ ಶ್ರೇಯಾಂಕನೀಡುತ್ತದೆ.
ಸೆಸ್ಕ್ ಉತ್ತಮ ಕಾರ್ಯನಿರ್ವಹಣೆ ಮಾಡಿರುವ ಹಿನ್ನಲೆಯಲ್ಲಿ ಬಿ ಗ್ರೇಡ್ ನಿಂದ ಎ ಗ್ರೇಡ್‌ಗೆ ಉನ್ನತೀಕರಣಗೊಂಡಿದೆ. ಅಲ್ಲದೇ ರಾಷ್ಟ್ರಮಟ್ಟದಲ್ಲಿ 16ನೇ ಶ್ರೇಯಾಂಕವನ್ನು ಸೆಸ್ಕ್ ಪಡೆದಿದ್ದು, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ಇದರಿಂದ ಸೆಸ್ಕ್‌ಗೆ ಕೇಂದ್ರ ಮತ್ತು ರಾಜ್ಯದಿಂದ ಅಗತ್ಯ ಅನುದಾನ ಸಿಗುವುದರೊಂದಿಗೆ ಬ್ಯಾಂಕ್ ನಿಂದ ಸಾಲ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.
ಸಮರ್ಪಕ ಹಾಗೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆಯ ಪರಿಣಾಮ ವಿದ್ಯುತ್ ನಷ್ಟ ತಡೆಯುವಲ್ಲಿಯೂ ಸೆಸ್ಕ್ ಪ್ರಗತಿ ಸಾಧಿಸಿದೆ. ಕಳೆದ ಬಾರಿ 10.3ರಷ್ಟಿದ್ದ ವಿದ್ಯುತ್ ನಷ್ಟದ ಪ್ರಮಾಣ ಇದೀಗ 9.03ಕ್ಕೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದನ್ನು 7ರಷ್ಟಕ್ಕೆ ಇಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದು ರಮೇಶ್ ತಿಳಿಸಿದರು.
ರೈತರಿಗೆ ನಿರಂತರ ವಿದ್ಯುತ್ ಪೂರೈಕೆಗೆ ಆದ್ಯತೆ ನೀಡಲಾಗಿದ್ದು, ಟ್ರಾನ್ಸ್‌ಫಾರ್ಮರ್‌ಗಳ ತ್ವರಿತ ದುರಸ್ತಿ ಮಾಡುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲಾಗಿದೆ. 23,061 ಅಪಾಯಕಾರಿ ಸ್ಥಳ ಗುರುತಿಸಿ ಸರಿಪಡಿಸಲಾಗಿದೆ ಎಂದು ಹೇಳಿದರು.
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಜಿ. ಶೀಲಾ ಅವರು ಮಾತನಾಡಿ,ಸೆಸ್ಕ್ ವತಿಯಿಂದ ಪಿಎಂ ಕುಸುಮ್-ಸಿ ಯೋಜನೆಯಡಿ 500 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ಯೋಜನೆ ರೂಪಿಸಲಾಗಿದ್ದು, ಅದಕ್ಕಾಗಿ 110 ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ರಾಜ್ಯ ಸರ್ಕಾರದ ನೆರವಿನಿಂದ ಅಗತ್ಯ ಸರಕಾರಿ ಭೂಮಿ ಸಿಕ್ಕಿದ್ದು, ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ಯೋಜನೆ ಅನುಷ್ಠಾನವಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸೆಸ್ಕ್‌ನ ವಿದ್ಯುತ್ ಕಂಬಗಳನ್ನು ಬಳಸಿಕೊಂಡು ಖಾಸಗಿ ಟಿವಿ ಕೇಬಲ್ ಮತ್ತು ಇಂಟರ್‌ನೆಟ್ ಕೇಬಲ್‌ಗಳ ವೈರ್‌ಗಳನ್ನು ಎಳೆಯಲಾಗಿದೆ. ಶುಲ್ಕ ಪಾವತಿಸಿ ಅನುಮತಿ ಪಡೆದವರಿಂದ ಡಿಸೆಂಬರ್ ಅಂತ್ಯಕ್ಕೆ 78.78 ಲಕ್ಷ ರೂ. ಸಂಗ್ರಹವಾಗಿದ್ದು, ಯಾರಾದರೂ ಅನುಮತಿ ಪಡೆಯದೇ ವಿದ್ಯುತ್ ಕಂಬಗಳನ್ನು ಬಳಸುತ್ತಿದ್ದರೆ ಅಂತಹ ಕಂಪನಿಗಳ ಕೇಬಲ್‌ಗಳನ್ನು ತೆರವುಗೊಳಿಸಲಾಗುವುದು ಎಂದು ತಾಂತ್ರಿಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಎಚ್ಚರಿಕೆ ನೀಡಿದರು.