ಸಿಎಂ ಗೆ ಮತ್ತೊಂದು ಸಂಕಷ್ಟ

Spread the love

ಮೈಸೂರು: ಮುಡಾ ಹಗರಣ ಶುರುವಾದಾಗಿನಿಂದ ಸಿಎಂ ಸಿದ್ದರಾಮಯ್ಯ
ಅವರಿಗೆ ಒಂದಲ್ಲ ಒಂದು ಕಂಟಕ ಎದುರಾಗುತ್ತಲೇ ಇದೆ.

ಸಿದ್ದು ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದರ ಸಂಬಂಧ ಹೈಕೋರ್ಟ್ ನಲ್ಲಿ ಗುರುವಾರ ವಿಚಾರಣೆ ನಡೆಯಲಿದೆ.

ಇದೀಗ ಮೈಸೂರಿನಲ್ಲಿ ಸಿದ್ದು ಪತ್ನಿ ಪಾರ್ವತಿ ಅವರ ವಿರುದ್ಧ ದೂರು ದಾಖಲಾಗಿದ್ದು ಸಿಎಂ ಮತ್ತೊಂದು ಸಂಕಷ್ಟ ಎದುರಿಸಬೇಕಾಗಿದೆ.

ನಕಲಿ ಸಹಿ ವಿಚಾರವಾಗಿ ಪಾರ್ವತಿ ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಬುಧವಾರ ದೂರು ನೀಡಿದ್ದಾರೆ.

ನಕಲಿ ದಾಖಲೆ ಸೃಷ್ಟಿ ಹಾಗೂ ಕಡತ ನಾಶದ ಬಗ್ಗೆ ಸ್ನೇಹಮಯಿ ಕೃಷ್ಣ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪಾರ್ವತಿ ಅವರು ಬರೆದಿದ್ದ ಮೂಲ ಪತ್ರ ನಾಶ ಮಾಡಿ, ಇತ್ತೀಚಿಗೆ ಸೃಷ್ಟಿಸಿರುವ ಪತ್ರವನ್ನು ಕಡತಕ್ಕೆ ಸೇರಿಸಿದ್ದಾರೆ ಎಂದು ದೂರಿನಲ್ಲಿ ಸ್ನೇಹಮಯಿ ಕೃಷ್ಣ ಉಲ್ಲೇಖಿಸಿದ್ದಾರೆ.

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹಾಗೂ ಸಹಚರರ ವಿರುದ್ಧವೂ ಕ್ರಮ ವಹಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.

ಸಿಎಂ ಬಿಡುಗಡೆ ಮಾಡಿದ್ದ ಪತ್ರದಲ್ಲಿ ವೈಟ್ನರ್ ಹಿಂದಿನ ಅಕ್ಷರ ತೋರಿಸಲಾಗಿತ್ತು. ದೇವನೂರು 3ನೇ ಹಂತದ ಬಡಾವಣೆಯಲ್ಲಿ ಅಥವಾ ನಂತರ ಎಂಬ ಅಕ್ಷರಗಳ ಮೇಲೆ ವೈಟ್ನರ್ ಹಾಕಲಾಗಿತ್ತು. ಈಗ ಆ ಮೂಲ ಪತ್ರ ತೋರಿಸಿರುವ ಬಗ್ಗೆಯೇ ದೂರು ದಾಖಲಾಗಿದೆ.

ಪತ್ರದಲ್ಲಿರುವ ಪಾರ್ವತಿ ಅವರ ಸಹಿ ಹಾಗೂ ಮಾಹಿತಿ ಹಕ್ಕಿನಲ್ಲಿ ಪಡೆದ ಪತ್ರದಲ್ಲಿ ಇರುವ ಸಹಿ ಬದಲಾವಣೆ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವೈಟ್ನರ್ ಹಿಂದಿನ ಪದಗಳನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಎಂ.ಲಕ್ಷ್ಮಣ್ ಹಾಗೂ ಪಾರ್ವತಿ ಸಂಚು ರೂಪಿಸಿ ಸುಳ್ಳು ಪತ್ರ ಸೃಷ್ಟಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಪಾರ್ವತಿ ಅವರು ಮಾಡಿರುವ ಸಹಿಯಲ್ಲಿ ಒಟ್ಟು ಒಂಬತ್ತು ವ್ಯತ್ಯಾಸಗಳನ್ನು ದೂರುದಾರರು ಗುರುತಿಸಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.