ರಷ್ಯಾ- ಉಕ್ರೇನ್​ ನಡುವೆ ಯುದ್ಧ ಅಂತ್ಯಗೊಳಿಸಲು ಅಮೆರಿಕ ಮಧ್ಯಸ್ಥಿಕೆ

ಉಕ್ರೇನ್: ರಷ್ಯಾ ಮತ್ತು ಉಕ್ರೇನ್​ ನಡುವಿನ ಯುದ್ಧ ಅಂತ್ಯಗೊಳಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಿದ್ದು ಶಾಂತಿ ಪ್ರಸ್ತಾವನೆಯನ್ನು ಎರಡು ರಾಷ್ಟ್ರಗಳು ಒಪ್ಪಿವೆ. ಆದರೆ, ಈ ಶಾಂತಿ ಪ್ರಸ್ತಾವಕ್ಕೆ ಸಹಿ ಹಾಕಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಿದ್ಧರಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇಸರ ಪಟ್ಟಿದ್ದಾರೆ.
ಅಮೆರಿಕ ಆಡಳಿತದ ಶಾಂತಿ ಪ್ರಸ್ತಾವನೆಯನ್ನು ಮಾರ್ಪಡಿಸುವಂತೆ ಈ ಹಿಂದೆಯೂ ಕೂಡ ಉಕ್ರೇನ್​ ಒತ್ತಾಯಿಸಿತ್ತು. ಹಾಗಾಗಿ ತಿದ್ದುಪಡಿಯ ಬಳಿಕ ಪ್ರಸ್ತಾವನೆಯ ಮೇಲಿನ ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಅಮೆರಿಕ ಮತ್ತು ಉಕ್ರೇನ್ ಸಮಾಲೋಚಕರು ಮೂರು ದಿನಗಳ ಮಾತುಕತೆ ನಡೆಸಿದ ನಂತರವೂ ಝೆಲೆನ್ಸ್ಕಿ ಒಪ್ಪಿಗೆ ನೀಡಿಲ್ಲ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಟ್ರಂಪ್​, ಉಕ್ರೇನ್ ನಾಯಕ ಮಾತುಕತೆಗಳು ಮುಂದುವರಿಯುವುದನ್ನು ತಡೆಹಿಡಿಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಝೆಲೆನ್ಸ್ಕಿ ನಮ್ಮ ಪ್ರಸ್ತಾವನೆಯನ್ನು ಇನ್ನೂ ಓದಿಲ್ಲ ಎಂಬುದು ನಿರಾಶೆಯಾಗುತ್ತಿದೆ. ಈ ಪ್ರಸ್ತಾವನೆಯನ್ನು ಅವರ ಜನರು ಮೆಚ್ಚಿದ್ದಾರೆ. ರಷ್ಯಾ ಪ್ರಸ್ತಾವನೆಗೆ ಒಪ್ಪಿದೆ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.
ಆದರೆ, ಈ ಪ್ರಸ್ತಾವಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಕೂಡ ಸಾರ್ವಜನಿಕವಾಗಿ ಅನುಮೋದನೆ ನೀಡಿಲ್ಲ.
ಫ್ಲೋರಿಡಾದಲ್ಲಿ ಉಕ್ರೇನಿಯನ್ ನಿಯೋಗದೊಂದಿಗೆ ಅಮೆರಿಕದ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಝೆಲೆನ್ಸ್ಕಿ ಅವರಿಗೆ ಅಮೆರಿಕ ಮತ್ತು ಉಕ್ರೇನ್ ಅಧಿಕಾರಿಗಳು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಝೆಲೆನ್ಸ್ಕಿ ಪೋಸ್ಟ್ ಹಾಕುದ್ದು,ಉಕ್ರೇನ್ ಶಾಂತಿ ಸಾಧಿಸಲು ಅಮೆರಿಕದೊಂದಿಗೆ ದೃಢನಿಶ್ಚಯ ಹೊಂದಿದೆ ಎಂದು ತಿಳಿಸಿದ್ದಾರೆ.