ಮೈಸೂರು ಪರಂಪರೆ, ಇತಿಹಾಸ ಬಿಂಬಿಸುವ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿ:ಡಿಸಿ

Spread the love

ಮೈಸೂರು: ಮೈಸೂರು ಕರ್ನಾಟಕದಲ್ಲಿ ಉತ್ತಮವಾಗಿ ನಿರ್ವಹಿಸಲ್ಪಟ್ಟ, ಸ್ವಚ್ಛ, ಸಾಂಸ್ಕೃತಿಕವಾಗಿ ಮತ್ತು ಪರಂಪರೆಯ ಶ್ರೀಮಂತ ನಗರವಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮಿಕಾಂತ ರೆಡ್ಡಿ ಅವರು ತಿಳಿಸಿದರು.

ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಸ್ವದೇಶ್ ದರ್ಶನ್ 2.0 ಯೋಜನೆ ಡಿಪಿಆರ್ 2 ಸಿದ್ಧಪಡಿಸುವ ಸಂಬಂಧ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾತನಾಡಿದರು.

ಈ ಯೋಜನೆಯಡಿ ಮೈಸೂರು ಸೇರಿದಂತೆ ಸುತ್ತಲಿನ ಕ್ಷೇತ್ರಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ದಿಂದ 70 ಕೋಟಿ ಅನುದಾನ ಬಿಡುಗಡೆಯಾಗಿದ್ದು
ಸ್ವದೇಶ್ ದರ್ಶನ್ ಯೋಜನೆಯಡಿ ಮೊದಲನೇ ಹಂತದಲ್ಲಿ ಟಾಂಗ್ ರೈಡ್ ಹಾಗೂ ಎಕೋಲಜಿಕಲ್ ಎಕ್ಸ್ ಪಿರಿಯನ್ಸ್ ವಲಯಕ್ಕೆ 21.17 ಕೋಟಿ ಅನುದಾನಕ್ಕೆ ಡಿಪಿಆರ್ ಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಈಗ ಎರಡನೇ ಹಂತದಲ್ಲಿ ಮೈಸೂರಿನ ಹೃದಯ ಭಾಗದಲ್ಲಿರುವ ಹಳೆಯ ಪಾರಂಪರಿಕ ಜಿಲ್ಲಾಧಿಕಾರಿ ಕಚೇರಿಯನ್ನು ವಸ್ತು ಸಂಗ್ರಹಾಲಯವಾಗಿ ಅಭಿವೃದ್ಧಿ ಮಾಡಲು ಮೈಸೂರು ರಾಜರು, ದಿವಾನರು, ಆಡಳಿತಗಾರರು ನೀಡಿರುವ ಆಡಳಿತ ಸುಧಾರಣೆ, ಕೊಡುಗೆಗಳು ಹಾಗೂ ಮೈಸೂರು ಗತವೈಭವ ಹಾಗೂ ಪರಂಪರೆಯನ್ನು ಬಿಂಬಿಸುವ ರೀತಿಯಲ್ಲಿ ಡಿಪಿಆರ್ ಸಿದ್ಧಪಡಿಸಿ ನೀಡುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಈ ವೇಳೆ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ಅವರು ಸ್ಥಳೀಯ ಪ್ರವಾಸೋದ್ಯಮ ಸಕ್ರ್ಯೂಟ್‌ ಮತ್ತು ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

ಸಭೆಯಲ್ಲಿ ಮೈಸೂರು ವಿಭಾಗದ ಉಪ ಅರಣ್ಯಾಧಿಕಾರಿ ಡಾ. ಬಸವರಾಜು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ರುದ್ರೇಶ್, ಅರಮನೆ ಮಂಡಳಿಯ ಉಪ ನಿರ್ದೇಶಕ ಟಿ.ಎಸ್ ಸುಬ್ರಹ್ಮಣ್ಯ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.