ಮೈಸೂರು: ಖಾಸಗಿ ಶಾಲೆಗಳಲ್ಲಿ ಹೆಚ್ಚುವರಿ ಶುಲ್ಕ ವಸೂಲಿಗೆ ಕಡಿವಾಣ ಹಾಕಬೇಕು ಹಾಗೂ ವಾರ್ಷಿಕ ಶುಲ್ಕವನ್ನು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಬೇಕೆಂದು ಕರ್ನಾಟಕ ಹಿತ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಖಾಸಗಿ ಶಾಲೆಗಳಲ್ಲಿ ಪೋಷಕರಿಂದ ಹೆಚ್ಚುವರಿಯಾಗಿ ಶುಲ್ಕ ಸಂಗ್ರಹಿಸುತ್ತಿದ್ದು, ಸಂಗ್ರಹಿಸುವ ಶುಲ್ಕ ಹಾಗೂ ಶಾಲಾ ಮಂಡಳಿ ನಿಗದಿಪಡಿಸಿರುವ ಶುಲ್ಕವನ್ನು ಸೂಚನಾ ಫಲಕ ಹಾಗೂ ಶಾಲೆಯ ವೆಬ್‌ಸೈಟ್‌ನಲ್ಲಿ ಮೊದಲೇ ಪ್ರಕಟಿಸಬೇಕು ಎಂದು ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಆಗ್ರಹಿಸಿದ್ದಾರೆ.
ಮೈಸೂರಿನ ಸಿದ್ದಾರ್ಥ ಲೇಔಟ್ ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಅಪರ ಜಿಲ್ಲಾಧಿಕಾರಿ ಶಿವರಾಜು ರವರಿಗೆ ಈ ಬಗ್ಗೆ ಮನವಿ ಪತ್ರ ನೀಡಿ ಅವರು ಒತ್ತಾಯಿಸಿದರು.

ಕೆಲವು ಖಾಸಗಿ ಶಾಲೆಗಳು ಅನಧಿಕೃತವಾಗಿ ಶುಲ್ಕ ಪಡೆದುಕೊಳ್ಳುತ್ತಿದ್ದಾರೆ ಎಂಬ ದೂರು ಬಂದಿದೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಶಾಸಗಿ ಶಾಲೆಗಳಿಗೆ ಶುಲ್ಕ ನಿಗದಿಪಡಿಸುವ ಸಂಪೂರ್ಣ ಅಧಿಕಾರವಿದ್ದು, ಅದನ್ನು ಪ್ರಶ್ನಿಸುವುದಿಲ್ಲ. ಅವರು ಎಷ್ಟೇ ಶುಲ್ಕ ನಿಗದಿಪಡಿಸಿದರೂ ಕಟ್ಟಲು ಸಿದ್ಧ. ಆದರೆ ಅದನ್ನು ಮೊದಲೇ ಪ್ರಕಟಿಸಬೇಕು. ಅದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಅನುಮತಿ ಪಡೆದುಕೊಳ್ಳಬೇಕು ಎಂಬ ನಿಯಮವನ್ನು ಯಾವ ಶಾಲೆಗಳೂ ಪಾಲಿಸುತ್ತಿಲ್ಲ. ಆದ್ದರಿಂದ ಎಲ್ಲಾ ಶಾಲೆಗಳೂ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಒತ್ತಾಯಿಸಿದರು.
ಕೆಲವು ಖಾಸಗಿ ಶಾಲೆಗಳಲ್ಲಿ ನಿಗದಿಪಡಿಸಿದ ವಾರ್ಷಿಕ ಶುಲ್ಕವನ್ನು ಒಂದೇ ಬಾರಿ ಕಟ್ಟುವಂತೆ ಪೋಷಕರಿಗೆ ಒತ್ತಡ ಹೇರಲಾಗುತ್ತಿದೆ ಹಾಗಾಗಿ ಪೋಷಕರು ಶುಲ್ಕ ಕಟ್ಟಲು ಸಾಲ ಮಾಡುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ವಿಷಾದಿಸಿದರು.
ಪೋಷಕರಿಗೆ ವಾರ್ಷಿಕ ಶುಲ್ಕವನ್ನು 3 ಕಂತುಗಳಲ್ಲಿ ಕಟ್ಟಲು ಅನುವು ಮಾಡಿಕೊಡುವಂತೆ ಖಾಸಗಿ ಶಾಲೆಗಳಿಗೆ ನಿರ್ದೇಶ ನೀಡಬೇಕೆಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್ ಅವರಿಗೆ
ಕರ್ನಾಟಕ ಹಿತರಕ್ಷಣ ವೇದಿಕೆ ಪದಾಧಿಕಾರಿಗಳ ನಿಯೋಗ ಮನವಿ ಮಾಡಿತು.
ಕೆಲವು ಶಾಲೆಗಳಲ್ಲಿ ಶುಲ್ಕ ಪಡೆದು ಎರಡು ರಸೀದಿ ನೀಡಲಾಗುತ್ತಿದೆ. ಒಂದು ಶಾಲೆಯ ಹೆಸರಿನಲ್ಲಿದ್ದರೆ ಮತ್ತೊಂದು ಸಂಸ್ಥೆಯ ಹೆಸರಿನಲ್ಲಿರುತ್ತದೆ. ಈ ರೀತಿ ಎರಡು ರಸೀದಿ ನೀಡುವುದರ ಬದಲು ಅವರು ನಿಗದಿಪಡಿಸಿದ ಶುಲ್ಕಕ್ಕೆ ಒಂದೇ ರಸೀದಿ ನೀಡಬೇಕು. ಕೆಲವು ಶಾಲೆಗಳಲ್ಲಿ ಹಲವು ವರ್ಷದ ಶುಲ್ಕವನ್ನು ರಿಯಾಯಿತಿ ಮೇಲೆ ಒಂದೇ ಬಾರಿಗೆ ಪಡೆದುಕೊಳ್ಳುತ್ತವೆ. ಇದು ತಪ್ಪಬೇಕು ಎಂದು ಕರ್ನಾಟಕ ಹಿತರಕ್ಷಣಾ ವೇದಿಕೆ ಸದಸ್ಯರು ಆಗ್ರಹಿಸಿದರು.
ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ನೇತೃತ್ವದಲ್ಲಿ ಮಂಜುನಾಥ್, ಎಸ್ ಎನ್ ರಾಜೇಶ್, ರವಿಚಂದ್ರ, ಗುರುರಾಜ್ ಶೆಟ್ಟಿ,ಪ್ರಮೋದ್ ಗೌಡ, ಮತ್ತಿತರರು ಮನವಿ ಪತ್ರ ಸಲ್ಲಿಸಿದರು.