post

ಮೈಸೂರಲ್ಲಿ ಮೈ ಕೊರೆಯುವ ಚಳಿ!ಬೆಳೆ,ಜಾನುವಾರು ಸಂರಕ್ಷಣೆಗೆ ಸಲಹೆ

ಮೈಸೂರು: ಜಿಲ್ಲೆಯಲ್ಲಿ ಕಳೆದ ಕೆಲವು ದಿನ ಗಳಿಂದ ಮೈ ಕೊರೆಯುವ ಚಳಿ ಪ್ರಾರಂಭವಾಗಿದ್ದು, ವಾತಾವರಣದಲ್ಲಿ ದಿಢೀರ್ ಉಷ್ಣಾಂಶ ಕುಸಿತವಾಗಿದೆ.
ಶೀತ ಮಾರುತದಿಂದ ಜನರು ಕಂಗೆಟ್ಟಿದ್ದಾರೆ.

ನವೆಂಬರ್‌ನಲ್ಲಿ ಆಗಿಂದಾಗ್ಗೆ ಮಳೆ ಹಾಗೂ ಮೋಡ ಕವಿದ ವಾತಾವರಣ ಇರುತ್ತಿತ್ತು,ಆದರೆ ಚಳಿ ವಾತಾವರಣ ಕಂಡು ಬರಲಿಲ್ಲ.
ಈಗ ಮಳೆ ಹಾಗೂ ಮೋಡ ಕವಿದ ವಾತಾವರಣ ದೂರವಾಗಿದೆ, ಚಳಿಯು ತೀವ್ರಗುತ್ತಿದೆ.

ಜಿಲ್ಲೆಯಲ್ಲಿ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್, ತಾಪಮಾನ ದಾಖಲಾಗಿದ್ದು,ಮಧ್ಯಾಹ್ನದ ವೇಳೆಯಲ್ಲೂ ಚಳಿ ಅನುಭವವಾಗುತ್ತಿದೆ.
ಹಾಗಾಗಿ ಜನರು ಬೆಚ್ಚನೆಯ ಉಡುಪು ಧರಿಸಿ ಸಂಚರಿಸುವುದು ಸಾಮಾನ್ಯವಾಗಿ ಬಿಟ್ಟಿದೆ.

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಜಿಲ್ಲೆಯಲ್ಲಿ ಡಿ. ೧ ರಿಂದ ೩ರವರೆಗೆ ಕನಿಷ್ಠ 16ರಿಂದ 17 ಹಾಗೂ ಗರಿಷ್ಟ 28 ರಿಂದ 29 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಜಿಲ್ಲೆಯಲ್ಲಿ ಚಳಿಯ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೈತಾಪಿ ವರ್ಗದವರು ಜಾನುವಾರುಗಳ ರಕ್ಷಣೆ ಹಾಗೂ ಬೆಳೆಗಳ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ. ಎನ್. ಉಮಾಶಂಕರ್ ಸಲಹೆಗಳನ್ನು ನೀಡಿದ್ದಾರೆ.

ಬೆಳಿಗ್ಗೆ ಕಡಿಮೆ ತಾಪಮಾನ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಬೆಳೆಗಳು ಮತ್ತು ಜಾನುವಾರುಗಳಿಗೆ ಶೀತದ ಒತ್ತಡವನ್ನು ಉಂಟು ಮಾಡಬಹುದು. ಹಾಗಾಗಿ ತರಕಾರಿ ಹೊಲಗಳಲ್ಲಿ ಮಣ್ಣಿನ ಉಷ್ಣತೆ ಯನ್ನು ಕಾಪಾಡಿಕೊಳ್ಳಲು ಸಂಜೆ ಲಘು ನೀರಾವರಿ ಒದಗಿಸುವುದು ಉತ್ತಮ.

ರಾತ್ರಿಯಲ್ಲಿ ನರ್ಸರಿಗಳು ಮತ್ತು ಎಳೆಯ ಸಸಿಗಳನ್ನು (ಟೊಮೆಟೊ, ಮೆಣಸಿನಕಾಯಿ, ಎಲೆಕೋಸು) ಒಣ ಹುಲ್ಲು ಅಥವಾ ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಬೇಕು ಎಂದು ಸಲಹೆ ನೀಡಿದ್ದಾರೆ.

ಮಳೆಯ ನಿರೀಕ್ಷೆ ಇಲ್ಲದ ಕಾರಣ ೫ ರಿಂದ ೭ ದಿನಗಳಿಗೊಮ್ಮೆ ಬೆಳೆಗಳಿಗೆ ನೀರು ಹಾಕುವುದು ಉತ್ತಮ. ತೇವಾಂಶ
ಮಧ್ಯಮವಾಗಿರುವುದರಿಂದ ಹೆಚ್ಚುವರಿ ನೀರಾವರಿಯನ್ನು ತಪ್ಪಿಸಬೇಕು.

ಭತ್ತ (ಹಾಲುಕರೆಯುವ ಹಂತ), ರಾಗಿ, ಕೆಂಪು ಬೇಳೆ ಮತ್ತು ತರಕಾರಿ ಬೆಳೆಗಳಿಗೆ ನೀರಾವರಿಗೆ ಆದ್ಯತೆ ನೀಡಬೇಕು. ಕಳೆ ಕೀಳಲು, ಮಣ್ಣು ತೆಗೆಯಲು ಮತ್ತು ಗೊಬ್ಬರ ಅಥವಾ ಕೀಟನಾಶಕ ಅನ್ವಯಿಕೆಗೆ ಅನುಕೂಲಕರ ಹವಾಮಾನ ಹೊಂದಿದೆ.

ಧಾನ್ಯಗಳು, ಅರಿಶಿನ, ಶುಂಠಿ ಮತ್ತು ದ್ವಿದಳ ಧಾನ್ಯಗಳನ್ನು ಕೊಯ್ಲು ಮಾಡಲು ಮತ್ತು ಒಣಗಿಸಲು ಒಣ ಮತ್ತು ಬಿಸಿಲಿನ ವಾತಾವರಣ ಸೂಕ್ತವಾಗಿದೆ.

ಕೊಯ್ಲಿನ ನಂತರದ ನಷ್ಟವನ್ನು ತಪ್ಪಿಸಲು ಉತ್ಪನ್ನಗಳನ್ನು ಸಂಗ್ರಹಿಸಿ ಬಿಸಿಲಿನಲ್ಲಿ ಒಣಗಿಸ ಬೇಕು. ಬಾಳೆ, ತೆಂಗು ಮತ್ತು ಅಡಕೆಯ ಜಲಾನಯನ ಪ್ರದೇಶಗಳ ಸುತ್ತಲೂ ಮಲ್ಚಿಂಗ್ ಮಾಡುವುದರಿಂದ ಮಣ್ಣಿನ ತೇವಾಂಶವನ್ನು ಸಂರಕ್ಷಿಸಲು ಸಹಾಯವಾಗುತ್ತದೆ.

ಬಾಳೆ, ಪಪ್ಪಾಯಿ ಮತ್ತು ಸಪೋಟಾದಂತಹ ಹಣ್ಣಿನ ಬೆಳೆಗಳಿಗೆ ನಿಯಮಿತವಾಗಿ ನೀರು ಒದಗಿಸಬೇಕು. ಗಾಳಿಯ ಪ್ರಸರಣವನ್ನು ಸುಧಾರಿಸಲು ಅನಗತ್ಯ ಚಿಗುರುಗಳನ್ನು ಕತ್ತರಿಸಬೇಕು.

ಚಳಿಯಿಂದ ಜಾನುವಾರುಗಳನ್ನು ರಕ್ಷಿಸಿ ಚಳಿಯ ವಾತಾವರಣ ಇರುವ ಹಿನ್ನೆಲೆಯಲ್ಲಿ ಜಾನುವಾರು ಮತ್ತು ಕೋಳಿಗಳಿಗೆ ರಾತ್ರಿ ಮತ್ತು ಮುಂಜಾನೆ ಬೆಚ್ಚಗಿನ ಮತ್ತು ಒಣ ಆಶ್ರಯಗಳನ್ನು ಒದಗಿಸಬೇಕು ಎಂದು ತಿಳಿಸಿದ್ದಾರೆ.

ಕೊಟ್ಟಿಗೆಗಳಿಗೆ ಶೀತ ಗಾಳಿ ಪ್ರವೇಶಿಸುವುದನ್ನು ತಪ್ಪಿಸಬೇಕು. ರೇಷ್ಮೆ ಹುಳು ಸಾಕುವ ಮನೆಗಳಲ್ಲಿ ಸೂಕ್ತವಾದ ಉಷ್ಣಾಂಶ ಮತ್ತು ತೇವಾಂಶವನ್ನು ಕಾಪಾಡ ಬೇಕು, ರೇಷ್ಮೆ ಹುಳುಗಳು ಬೆಳಗಿನ ತಂಪಾದ ಗಾಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಡಾ. ಎನ್. ಉಮಾಶಂಕರ್ ಸೂಚಿಸಿದ್ದಾರೆ.

hi

ಮೈಸೂರಲ್ಲಿ ಮೈ ಕೊರೆಯುವ ಚಳಿ!ಬೆಳೆ,ಜಾನುವಾರು ಸಂರಕ್ಷಣೆಗೆ ಸಲಹೆ Read More

ಸಿಸಿಬಿ ಕಾರ್ಯಾಚರಣೆ:17 ಲಕ್ಷ ಮೌಲ್ಯದ 176 ಗ್ರಾಂ ಹೈಡ್ರೋ ಗಾಂಜಾ ವಶ

ಮೈಸೂರು: ಮೈಸೂರು ನಗರ ಸಿಸಿಬಿ ತಂಡ ನಾಯ್ಡು ನಗರ, ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎನ್ ಡಿ ಪಿ‌ ಎಸ್ ಸಂಬಂಧಿತ ಕಾರ್ಯಾಚರಣೆ ನಡೆಸಿದರು.

ಈ ವೇಳೆ ಸಿಸಿಬಿ ತಂಡವು ಸುಮಾರು 17 ಲಕ್ಷ ರೂ. ಮೌಲ್ಯದ 176 ಗ್ರಾಂ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದೆ.

ಪ್ರಕರಣದಲ್ಲಿ ಅಫ್ತಾಬ್ ಅಲಿ ಬೇಗ್ ಮತ್ತು ಪ್ರತಾಪ್ ಕುಮಾರ್ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಎನ್. ಆರ್ ಪೊಲೀಸ್ ಠಾಣೆಯಲ್ಲಿ ಎನ್‌ ಡಿ ಪಿಎಸ್ ಕಾಯ್ದೆ,1989 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಸಿಸಿಬಿ ಕಾರ್ಯಾಚರಣೆ:17 ಲಕ್ಷ ಮೌಲ್ಯದ 176 ಗ್ರಾಂ ಹೈಡ್ರೋ ಗಾಂಜಾ ವಶ Read More

ಜಪಾನ್​ನಲ್ಲಿ ಮತ್ತೆ 6.7 ತೀವ್ರತೆಯ ಪ್ರಬಲ ಭೂಕಂಪನ

ಟೋಕಿಯೋ: ಉತ್ತರ ಜಪಾನ್​ ಕರಾವಳಿಯಲ್ಲಿ ಮತ್ತೆ ಪ್ರಬಲ ಭೂಕಂಪನ ಸಂಭವಿಸಿದೆ.

ಈ ಪ್ರದೇಶದಲ್ಲಿ ಇದಕ್ಕೂ ಮುನ್ನಾ ದಿನ ಸಂಭವಿಸಿದ ಭೂಕಂಪಕ್ಕಿಂತ ಇದು ಪ್ರಬಲವಾಗಿದ್ದು,50 ಜನರು ಗಾಯಗೊಂಡಿದ್ದಾರೆ.

ಶುಕ್ರವಾರ ಸಂಭವಿಸಿದ ಭೂಕಂಪನದ ತೀವ್ರತೆ 6.7ರಷ್ಟಿದ್ದು, ಒಂದು ಮೀಟರ್​ ಎತ್ತರದ ಸುನಾಮಿ ಅಲೆಗಳು ಉತ್ತರ ಫೆಸಿಫಿಕ್​ ಕರಾವಳಿಗೆ ಅಪ್ಪಳಿಸಬಹುದೆಂದು ಜಪಾನ್​ ಹವಾಮಾನ ಸಂಸ್ಥೆ ತಿಳಿಸಿದೆ.
ಹೊಕ್ಕೈಡೊದ ಮುಖ್ಯ ಉತ್ತರ ದ್ವೀಪ ಮತ್ತು ಅಮೋರಿ ಪ್ರದೇಶದಲ್ಲಿ 20 ಸೆಂ.ಮೀ ಅಲೆಗಳು ದಾಖಲಾಗಿವೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಕೂಡ ಭೂಕಂಪನ 6.7ರಷ್ಟು ತೀವ್ರತೆಯಲ್ಲಿ ಸಂಭವಿಸಿದ್ದು, ಕೇಂದ್ರಬಿಂದು ಹೊನ್ಶು ಮುಖ್ಯದ್ವೀಪದ ಇವಾಟೆ ಪ್ರಾಂತ್ಯದ ಕುಜಿ ನಗರದಿಂದ 130 ಕಿಲೋ ಮೀಟರ್​ ದೂರದಲ್ಲಿದೆ ಎಂದು ತಿಳಿಸಿದೆ.

ಗುರುವಾರ ಸಂಭವಿಸಿದ ಭೂಕಂಪನದ ಬೆನ್ನಲ್ಲೇ ಜನರ ಸ್ಥಳಾಂತರಕ್ಕೆ ಆದೇಶ ನೀಡಲಾಗಿತ್ತು. ಅಒಮೊರಿಯಲ್ಲಿನ ಹೈ ಸ್ಟೀಟ್​ ಟವರ್​ 70ಮೀಟರ್​​ನಷ್ಟು ಹಾನಿಗೊಂಡಿದೆ. ಇದರಿಂದ ಟವರ್ ಕುಸಿಯುವ ಅಪಾಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಾದೇಶಿಕ ಪರಮಾಣು ಸೌಲಭ್ಯದಲ್ಲಿ ತಕ್ಷಣಕ್ಕೆ ಯಾವುದೇ ವ್ಯತ್ಯಯ ಕಂಡುಬಂದಿಲ್ಲ ಎಂದು ಪರಮಾಣು ನಿಯಂತ್ರಣ ಪ್ರಾಧಿಕಾರ ಹೇಳಿದೆ.

ಭೂಕಂಪದ ನಂತರ ಇನ್ನೊಂದು ವಾರದವರೆಗೆ ಇದೇ ರೀತಿಯ ಅಥವಾ ಹೆಚ್ಚಿನ ಗಾತ್ರದ ಮತ್ತೊಂದು ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ಜೆಎಂಎ ಎಚ್ಚರಿಕೆ ನೀಡಿದೆ.

ಮುಖ್ಯ ದ್ವೀಪ ಹೊನ್ಶುವಿನ ಈಶಾನ್ಯ ತುದಿಯಲ್ಲಿರುವ ಸ್ಯಾನ್ರಿಕು ಪ್ರದೇಶ ಮತ್ತು ಪೆಸಿಫಿಕ್‌ಗೆ ಎದುರಾಗಿರುವ ಉತ್ತರ ದ್ವೀಪ ಹೊಕ್ಕೈಡೊ ಕೂಡ ಈ ಎಚ್ಚರಿಕೆಯ ವ್ಯಾಪ್ತಿಯಲ್ಲಿವೆ.

ಜಪಾನ್​ನಲ್ಲಿ ಮತ್ತೆ 6.7 ತೀವ್ರತೆಯ ಪ್ರಬಲ ಭೂಕಂಪನ Read More

ನಕಲಿ ದಾಖಲೆ ಸೃಷ್ಟಿಸಿ ಐಸಿಐಸಿಐ ಬ್ಯಾಂಕ್ ಗೆ ವಂಚನೆ

ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ಐಸಿಐಸಿಐ ಬ್ಯಾಂಕ್ ಗೆ ಮೂರು ಪ್ರತ್ಯೇಕ ಪ್ರಕರಣದಲ್ಲಿ 2.33 ಕೋಟಿ ವಂಚಿಸಿರುವ ಘಟನೆ ನಡೆದಿದೆ.

ಮೂರು ಪ್ರಕರಣಗಳಿಂದ ಇಬ್ಬರು ಮಧ್ಯವರ್ತಿಗಳು ಸೇರಿದಂತೆ 8 ಮಂದಿ ವಿರುದ್ದ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಐಸಿಐಸಿಐ ಬ್ಯಾಂಕ್ ನ ವಸಂತ್ ಎಂಬುವರು ದೂರು ದಾಖಲಿಸಿದ್ದಾರೆ.
ಮೊದಲನೆ ಪ್ರಕರಣದಲ್ಲಿ ಸಾಲಗಾರ ಚಂದ್ರಶೇಖರ್, ಸಹ ಸಾಲಗಾರ ಸಂದೀಪ್ ಹಾಗೂ ಮಧ್ಯವರ್ತಿ ಪ್ರತಾಪ್ ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.

ಇವರುಗಳು ನಕಲಿ ದಾಖಲೆಗಳನ್ನ ಸೃಷ್ಟಿಸಿ ಬ್ಯಾಂಕ್ ಗೆ 45 ಲಕ್ಷ ವಂಚಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಕಲಿ ದಾಖಲೆ ಸೃಷ್ಟಿಸಿ ಐಸಿಐಸಿಐ ಬ್ಯಾಂಕ್ ಗೆ ವಂಚನೆ Read More

ಬಿಬಿಎಂಪಿಗೆ ಚುನಾವಣೆ ನಡೆಸದೆ ನಾಮನಿರ್ದೇಶನ-ಆಪ್ ಖಂಡನೆ

ಬೆಂಗಳೂರು: ಬೆಂಗಳೂರು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸದೆ ನಾಮನಿರ್ದೇಶನ ಮಾಡುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಮ್ ಆದ್ಮಿ ಪಾರ್ಟಿ ಕಿಡಿಕಾರಿದೆ.

ಬೆಳಗಾವಿ ವಿಧಾನಸಭೆಯಲ್ಲಿ ಮಂಡಿಸಿರುವ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ 2025 ರಲ್ಲಿ ಸರ್ಕಾರಕ್ಕೆ ಬೆಂಗಳೂರಿನ 5 ನಗರ ಪಾಲಿಕೆಗಳಿಗೆ ನಾಮ ನಿರ್ದೇಶನ ಮಾಡುವ ಅಧಿಕಾರ ಪಡೆದುಕೊಳ್ಳಲು ಹೊರಟಿರುವುದು ನಿಜಕ್ಕೂ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಕಟುವಾಗಿ ಖಂಡಿಸಿದರು.

ಕಳೆದ ಐದು ವರ್ಷಗಳಿಂದ ಚುನಾವಣೆಗಳನ್ನು ನಡೆಸಲು ಹೆದರಿ ಬೆಂಗಳೂರಿನ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಈಗಾಗಲೇ ನುಂಗಿ ನೀರು ಕುಡಿದಿದ್ದಾರೆ. ಇಂತಹ ಭ್ರಷ್ಟ ವ್ಯವಸ್ಥೆಯನ್ನು ಮತ್ತಷ್ಟು ಅವಧಿಯ ಕಾಲ ಮುಂದುವರಿಸಲು ಈ ರೀತಿಯ ಕರಾಳ ಮಸೂದೆಯನ್ನು ಮಂಡಿಸುತ್ತಿದ್ದಾರೆ. ಇದು ಬೆಂಗಳೂರಿಗರಿಗೆ ಮಾಡುತ್ತಿರುವ ಅನ್ಯಾಯ ಎಂದು ಹೇಳಿದರು.
ಬೆಂಗಳೂರಿನ ಜನತೆಗೆ ಈ ರಾಷ್ಟ್ರದ ಸಂವಿಧಾನ ಕೊಡ ಮಾಡಿರುವ ಹಕ್ಕಿನಂತೆ ಚುನಾವಣೆಯನ್ನು ನಡೆಸಿ ತಮ್ಮ ತಮ್ಮ ನಗರ ಪಾಲಿಕೆ ಸದಸ್ಯರುಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲ ಅವಕಾಶವನ್ನು ತಪ್ಪಿಸುವುದೇ ಇವರ ಉದ್ದೇಶವಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರವು ಈ ಮೂಲಕ ಕಾನೂನನ್ನೇ ತಿರುಚಲು ಹೊರಟಿರುವುದನ್ನು ಬೆಂಗಳೂರಿನ ಪ್ರತಿ ಮನೆಮನೆಗಳಿಗೆ ತಿಳಿಸಿ ಸರ್ಕಾರದ ವಿರುದ್ಧ ಆಂದೋಲನವನ್ನು ರೂಪಿಸುತ್ತೇವೆ ಎಂದು ಸೀತಾರಾಮ್ ಗುಂಡಪ್ಪ ತಿಳಿಸಿದರು.

ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ತನ್ನ ಕಾರ್ಯಕರ್ತರುಗಳನ್ನು ಜೀತದಾಳುಗಳಂತೆ ದುಡಿಸಿಕೊಂಡು ಪಕ್ಷದ ವಿರುದ್ಧ ತಿರುಗಿ ಬೀಳುವ ಸಮಯದಲ್ಲಿ ಇವರೆಲ್ಲರಿಗೂ ಬೆಂಗಳೂರಿನ ಎಲ್ಲಾ ಐದು ಪಾಲಿಕೆಗಳಲ್ಲಿಯ ಆಡಳಿತದಲ್ಲಿ ಮೂಗು ತೂರಿಸಿ, ಭ್ರಷ್ಟ ದುಷ್ಟ ಕೂಟಗಳನ್ನು ತಯಾರು ಮಾಡುವ ಹುನ್ನಾರವೇ ಈ ಮಸೂದೆಯ ಮೂಲ ಉದ್ದೇಶವಾಗಿದೆ. ಆಮ್ ಆದ್ಮಿ ಪಕ್ಷವು ಯಾವುದೇ ಕಾರಣಕ್ಕೂ ಇದನ್ನು ಸಹಿಸುವುದಿಲ್ಲ. ಬೆಂಗಳೂರಿಗರನ್ನು ಒಟ್ಟುಗೂಡಿಸಿ ಈ ಕರಾಳ ಮಸೂದೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ಸೀತಾರಾಮ್ ಗುಂಡಪ್ಪ ಎಚ್ಚರಿಸಿದರು.

ಬಿಬಿಎಂಪಿಗೆ ಚುನಾವಣೆ ನಡೆಸದೆ ನಾಮನಿರ್ದೇಶನ-ಆಪ್ ಖಂಡನೆ Read More

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರೂಪು-ರೇಷೆ ರೂಪಿಸಿ ಯದುವೀರ್‌

ನವದೆಹಲಿ: ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಇದನ್ನು ಸರಿದಾರಿಗೆ ತರಲು ಸೂಕ್ತ ಕಾನೂನು ರೂಪು-ರೇಷೆ ರೂಪಿಸಲು ಸಂಬಂಧಪಟ್ಟ ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್‌ ಒಡೆಯರ್‌ ಒತ್ತಾಯಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಚಳಿಗಾಲದ ಸಂಸತ್‌ ಅಧಿವೇಶನದ ಶುಕ್ರವಾರದ ಕಲಾಪದಲ್ಲಿ ಮಾತನಾಡಿದ ಯದುವೀರ್, ಮೈಸೂರಿನಲ್ಲಿ ಎಂಡಿಎಂಎ ವಶ ಹಾಗೂ ಗಣೇಶ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆದಿರುವುದು, ಪೊಲೀಸ್‌ ಠಾಣೆ ಮೇಲೆ ದಾಳಿ ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು.

ಕಳೆದ ಬಾರಿಯ ಕಲಾಪದಲ್ಲಿಯೂ ಈ ವಿಷಯವನ್ನು ಪ್ರಸ್ತಾಪಿಸಿದ್ದೆ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈಗಾಗಲೇ ಹಲವಾರು ಪ್ರಕರಣಗಳು ವರದಿಯಾಗಿದ್ದು, ಈ ಬಗ್ಗೆ ಕರ್ನಾಟಕ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ನನ್ನ ಕ್ಷೇತ್ರದ ಪ್ರಮುಖ ನಗರವಾದ ಮೈಸೂರಿನಲ್ಲಿ ಬೃಹತ್‌ ಎಂಡಿಎಂಎ ತಯಾರಿಕಾ ಘಟಕವನ್ನು ಪತ್ತೆ ಹಚ್ಚಲಾಗಿತ್ತು. ಇದನ್ನು ಕೂಡ ಪತ್ತೆ ಹಚ್ಚಿದ್ದು ನೆರೆ ರಾಜ್ಯದ ಪೊಲೀಸರು. ನಮ್ಮ ಪರಿಸ್ಥಿತಿ ಹೀಗಿದೆ. ಇಂತಹ ನಿರಂತರ ಘಟನೆಗಳಿಂದ ಸ್ಥಳೀಯ ಆರ್ಥಿಕತೆ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಎಂದು ಸಂಸದರು ತಿಳಿಸಿದರು.

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪಾರಂಪರಿಕ ಹಾಗೂ ಐತಿಹಾಸಿಕ ನಗರವಾದ ಹಂಪಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರಿಂದ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ, ಇದರಿಂದ ಸ್ಥಳೀಯ ವ್ಯಾಪಾರ ಕ್ಷೇತ್ರಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಯದುವೀರ್‌ ಹೇಳಿದರು.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವಾಲಯವು ಪ್ರವಾಸೋದ್ಯಮ ಕ್ಷೇತ್ರಕ್ಕಾಗಿ ಹೆಚ್ಚಿನ ಭದ್ರತೆ ಹಾಗೂ ಸೌಲಭ್ಯ ಒದಗಿಸುವ ರೀತಿಯಲ್ಲಿ ನೀತಿ ರೂಪಿಸಬೇಕಾದ ಅಗತ್ಯವಿದೆ ಈ‌ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರವಾಸೋದ್ಯಮ ತಾಣಗಳಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಲು ಸಹ ಕ್ರಮ ಕೈಗೊಳ್ಳಬೇಕು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂಬ ಭರವಸೆ ಇದೆ ಎಂದು ಯದುವೀರ್‌ ಒಡೆಯರ್‌ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರೂಪು-ರೇಷೆ ರೂಪಿಸಿ ಯದುವೀರ್‌ Read More

ಡಿ. 21 ರಂದು ಮೈಸೂರಿನಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ಮೈಸೂರು: ಇದೇ ಡಿ. 21 ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
5 ವರ್ಷದೊಳಗಿನ ಪ್ರತಿ ಮಗುವಿಗೆ ತಪ್ಪದೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಕರೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಡಿಸೆಂಬರ್ 21 ರಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆ ವರೆಗೆ ಬೂತ್ ಮಟ್ಟದಲ್ಲಿ ಲಸಿಕೆ ನೀಡಲಾಗುತ್ತದೆ. ಡಿಸೆಂಬರ್ 22 ರಿಂದ ಡಿಸೆಂಬರ್ 24 ರವರೆಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 21 ರಿಂದ 24 ರವರೆಗೆ 4 ದಿನಗಳು ಸಂಚಾರ ಕೇಂದ್ರಗಳು ಹಾಗೂ ಹೆಚ್ಚಿನ ಅಪಾಯ ಪ್ರದೇಶಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಡಿಸೆಂಬರ್ 21ಕ್ಕೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಂದು ಮಗುವಿಗೂ ತಪ್ಪಿದೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ. ಪಲ್ಸ್ ಪೋಲಿಯೋ ಲಸಿಕೆ ನೀಡಲು ಅಗತ್ಯವಿರುವ ಸಿಬ್ಬಂದಿಗಳಿಗೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಿ. ರೂಟ್ ಮ್ಯಾಪ್ ಗಳನ್ನು ಸಮರ್ಪಕವಾಗಿ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಾ.ಸುದೀರ್ ನಾಯಕ್ ಮಾತನಾಡಿ, ಕಳೆದ 14 ವರ್ಷಗಳಿಂದ ದೇಶದಲ್ಲಿ ಯಾವುದೇ ಪೋಲಿಯೋ ಪ್ರಕರಣಗಳು ಕಂಡು ಬಂದಿಲ್ಲ. ಕರ್ನಾಟಕದಲ್ಲಿ 2007ರಲ್ಲಿ ಕೊನೆಯದಾಗಿ ಒಂದು ಪೋಲಿಯೋ ಪ್ರಕರಣ ಕಂಡುಬಂದಿತ್ತು. ನಂತರ ಯಾವುದೇ ಪೋಲಿಯೋ ಪ್ರಕರಣಗಳು ಕಂಡು ಬಂದಿಲ್ಲ. ಪೋಲಿಯೋ ಲಸಿಕೆ ಹಾಕಿಸಿದ ಮಗುವಿನ ಬೆರಳಿಗೆ ಇಂಕ್ ಹಾಕಲಾಗುವುದು. ಇದರಿಂದ ಯಾರಿಗೆ ಲಸಿಕೆ ಹಾಕಲಾಗಿದೆ ಎಂಬುದನ್ನು ಹಾಗೂ ಎರಡೆರಡು ಬಾರಿ ಲಸಿಕೆ ಹಾಕಿಸುವುದನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 5 ವರ್ಷದೊಳಗಿನ 2,22,084 ಮಕ್ಕಳು ಇದ್ದಾರೆ.ಅವರೆಲ್ಲರಿಗೂ‌ ಲಸಿಕೆ ನೀಡುವ ಗುರಿ ಹೊಂದಲಾಗಿದೆ. 1648 ಬೂತ್ ಗಳಲ್ಲಿ ಲಸಿಕೆ ನೀಡಲಾಗುತ್ತದೆ. 50 ಮೊಬೈಲ್ ಟೀಮ್ ಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ ಕುಮಾರ್ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜು, ಆರ್.ಸಿ.ಹೆಚ್ ಅಧಿಕಾರಿ ಮಹಮ್ಮದ್ ಸಿರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಡಿ. 21 ರಂದು ಮೈಸೂರಿನಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ Read More

ಮಾಲೀಕರ ವಿರುದ್ಧ ಮಹಿಳಾ ಉದ್ಯೋಗಿ ನೀಡಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್

ಮೈಸೂರು: ಕೂರ್ಗಳ್ಳಿ ಕೈಗಾರಿಕಾ ಬಡಾವಣೆಯಲ್ಲಿರುವ ಪ್ರಿಸೈಸ್ ಗೇರ್ಸ್ ಅಂಡ್ ಟರ್ಬೈನ್ ಸಲ್ಯೂಷನ್ ಸಂಸ್ಥೆ ಮಾಲೀಕ ಮುರಳೀಧರ್ ವಿರುದ್ದ ಮಹಿಳಾ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದೆ.

ಒಂದು ತಿಂಗಳ ಹಿಂದೆ ಕಾರ್ಖಾನೆ ಮಾಲೀಕರಾದ ಮುರಳಿಧರ್ ಮಹಿಳಾ ಉದ್ಯೋಗಿ ಸೇರಿದಂತೆ ಮೂವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಗಿರೀಶ್ ಹಾಗೂ ಅಜಯ್ ಎಂಬುವರ ಜೊತೆ ಸೇರಿಕೊಂಡು ಮಹಿಳಾ ಉದ್ಯೋಗಿ ಸಂಸ್ಥೆಗೆ ಸೇರಿದ 27 ಲಕ್ಷ ಹಣ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.

ಅಲ್ಲದೆ ಸಂಸ್ಥೆಗೆ ಸೇರಿದ ಗೌಪ್ಯ ವ್ಯವಹಾರಗಳನ್ನ ಆಕೆ ಬಹಿರಂಗಪಡಿಸಿದ್ದಾರೆ,ಒಳಸಂಚು ನಡೆಸಿ ಸಂಸ್ಥೆಗೆ ನಂಬಿಕೆ ದ್ರೋಹ ಬಗೆದಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.

ಇದಾದ ನಂತರ ಮಹಿಳೆ ಮಾಲೀಕನ ವಿರುದ್ದ ಲೈಂಗಿಕ ಕಿರುಕುಳ ದಾಖಲಿಸಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಈ ಸಂಬಂಧ ಪೊಲೀಸರು ಕೂಲಂಕುಶವಾಗಿ ಪರಿಶೀಲನೆ ನಡೆಸಿ ನಿಜವಾದ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಮುರುಳೀಧರ್ ಮತ್ತು ಅವರ ಕಡೆಯವರು ಆಗ್ರಹಿಸಿದ್ದಾರೆ.

ಮಾಲೀಕರ ವಿರುದ್ಧ ಮಹಿಳಾ ಉದ್ಯೋಗಿ ನೀಡಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್ Read More

ಮೈಸೂರಿನಲ್ಲಿ ಪತ್ರ ಬರಹಗಾರರ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ
ಮೈಸೂರು ನಗರ ಮತ್ತು ತಾಲೂಕು ಪತ್ರ ಬರಹಗಾರರ ಒಕ್ಕೂಟ ಮೈಸೂರು ಉತ್ತರ ಉಪನೋಂದಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಂತರ ಜಿಲ್ಲಾ ಉಪನೋಂದಣಾಧಿಕಾರಿ
ಹಾಗೂ ಮೈಸೂರು ತಾಲೂಕು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಮುದ್ರಾಂಕ ಹಾಗೂ ನೋಂದಣಿ ಇಲಾಖೆಯು ಈಗಾಗಲೇ ಕಾವೇರಿ 2.0 ತಂತ್ರಾಂಶದ ಮೂಲಕ ದಾಖಲಾತಿಗಳನ್ನು ರವಾನಿಸುವ ಬಗ್ಗೆ ಕ್ರಮ ಕೈಗೊಂಡಿದ್ದು, ಈ ಸಂಬಂಧ ಆಗಿದ್ದಾಂಗ್ಗೆ ಸುಧಾರಣೆ ವಿಷಯದಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ,ಆದರೆ ಸುಧಾರಣೆಗಳಿಂದಾಗಿ ಜನಸಾಮಾನ್ಯರ ನೋಂದಣಿ ಪ್ರಕ್ರಿಯೆಯ ವೇಗ ಕುಂಠಿತವಾಗುತ್ತಿದೆ ಎಂದು ಪ್ರತಿಭಟನಾ ನಿರತರು ತಿಳಿಸಿದರು.

ಜತೆಗೆ ಪತ್ರಬರಹಗಾರರಿಗೆ ಸಮರ್ಪಕ ಸೇವೆಯನ್ನು ಜನ ಸಾಮಾನ್ಯರಿಗೆ ನೀಡುವುದು ದುಸ್ಸಾಹಸವಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ಈಗಾಗಲೇ ವಿಭಾಗ ಪತ್ರ, ದಾನಪತ್ರ ಹಾಗೂ ಇನ್ನಿತರೆ ದಾಖಲಾತಿಗಳನ್ನು ಅಪ್‌ಲೋಡ್ ಮಾಡುವುದು ಸಹಾ ಸಾಧ್ಯವಾಗದ ಕಾರಣ ಜನಸಾಮಾನ್ಯರು ತಮ್ಮ ಕುಟುಂಬದ ಸ್ಥಿರಾಸ್ತಿಗಳನ್ನು ನೋಂದಣಿ ಮಾಡಿಕೊಳ್ಳುವುದು ಸಾಧ್ಯವಿಲ್ಲದಂತಾಗಿದೆ ಎಂದು ತಿಳಿಸಿದರು .

ಸುಧಾರಣೆಯ ನೆಪದಲ್ಲಿ ಪತ್ರಬರಹಗಾರರು, ವಕೀಲರು ಹಾಗೂ ಜನಸಾಮಾನ್ಯರಿಗೆ ಯಾವುದೇ ರೀತಿಯಲ್ಲಿ ವಿಷಯಗಳು ತಿಳಿಯದ ಕಾರಣ ಇಲಾಖೆಯಿಂದ ರಹದಾರಿ ಪಡೆದಿರುವ ಪತ್ರ ಬರಹಗಾರರು ಹಾಗೂ ಜನಸಾಮಾನ್ಯರು ತೀರ್ವ ತೊಂದರೆ ಅನುಭವಿಸುವಂತಾಗಿದೆ. ಆದ ಕಾರಣ ಸಂಬಂಧಪಟ್ಟ ಅಧಿಕಾರಿಗಳು ಈ ವಿಚಾರವನ್ನು ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸಚಿವರಿಗೆ ಮನದಟ್ಟು ಮಾಡುವ ಮೂಲಕ ಜನಸಾಮಾನ್ಯರ ನೋಂದಣಿ ಪ್ರಕ್ರಿಯೆಯನ್ನು ಪತ್ರ ಬರಹಗಾರರು ಸುಲಲಿತವಾಗಿ ನಡೆಸಲು ಅನುವು ಮಾಡಿಕೊಡಬೇಕೆಂದು ಪ್ರತಿಭಟನೆಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ನಿಸಾರ್ ಅಹಮದ್ ಖಾನ್, ಉಪಾಧ್ಯಕ್ಷ‌ ಎಂ ಎಸ್ ಧನಂಜಯ್,ಕಾರ್ಯದರ್ಶಿ ಕೆ ಆರ್ ಉದಯ್ ಕುಮಾರ್, ಖಜಾಂಜಿ ಎಂ ಎಸ್ ನರಸಿಂಹಮೂರ್ತಿ, ಸಂಚಾಲಕ ಎಂ ಗಣೇಶ್, ನಿರ್ದೇಶಕರುಗಳಾದ ಕೆ ಆರ್ ಸತ್ಯನಾರಾಯಣ್, ಎಂ ಎನ್. ದೇವರಾಜು, ನಾಗಭೂಷಣ ಆರಾಧ್ಯ, ಮಹಾದೇವ್, ಕುಮಾರ್, ಪಣಿರಾಜ್ ಎಸ್, ಚಂದ್ರಶೇಖರ್ ಎಸ್, ಎನ್ ದಿನೇಶ್ ಕುಮಾರ್, ಎಸ್ ಎಸ್ ವೇಣು, ಜಯಲಕ್ಷ್ಮಿ ಹಾಗೂ ಇನ್ನಿತರ ಪತ್ರ ಬರಹಗಾರರು ಪಾಲ್ಗೊಂಡಿದ್ದರು.

ಮೈಸೂರಿನಲ್ಲಿ ಪತ್ರ ಬರಹಗಾರರ ಪ್ರತಿಭಟನೆ Read More

ಪ್ರಜಾಪ್ರಭುತ್ವದ ಮೌಲ್ಯ ತಿಳಿಸಲುವಿದ್ಯಾರ್ಥಿಗಳಿಗೆ ತಾ.ಮಟ್ಟದ ಪ್ರಬಂಧ ಸ್ಪರ್ಧೆ

ನಂಜನಗೂಡು: ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ
“ಮತದಾರರಿಗೆ ಶಿಕ್ಷಣ ನೀಡುವಲ್ಲಿ ಹಾಗೂ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳ ಪಾತ್ರ” ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಯಿತು.

ಚುನಾವಣಾ ಜಾಗೃತಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಯುವಜನರಲ್ಲಿ ಬೇರೂರಿಸುವ ಉದ್ದೇಶದಿಂದ ನಂಜನಗೂಡಿನ ನೋಡಲ್ ಕೇಂದ್ರವೂ ಆದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್.ದಿನೇಶ್ ಅವರು ಮಾತನಾಡಿ,ಮತದಾರರ ಪಟ್ಟಿ ನಿಖರವಾಗಿರುವುದು ಪ್ರಜಾಪ್ರಭುತ್ವದ ಶುದ್ಧತೆಯನ್ನು ಕಾಪಾಡುವ ಪ್ರಮುಖ ಹಂತ. ಈ ಕಾರ್ಯದಲ್ಲಿ ಬಿಎಲ್ಒ ಗಳು ನಿಷ್ಠೆಯಿಂದ ಮತ್ತು ತಳಮಟ್ಟದಲ್ಲಿ ದುಡಿಯುತ್ತಾರೆ,ವಿದ್ಯಾರ್ಥಿಗಳು ಇವರ ಕಾರ್ಯವನ್ನು ಅರ್ಥಮಾಡಿಕೊಳ್ಳುವುದ
ರಿಂದ ಮುಂದಿನ ದಿನಗಳಲ್ಲಿ ಜವಾಬ್ದಾರಿಯುತ ಮತದಾರರಾಗಿ ರೂಪಗೊಳ್ಳಬಹುದು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಾಲಕಿಯರ ಸರ್ಕಾರಿ ಪದವಿ ಪೂರ್ವಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ರಾಘವೇಂದ್ರ ಅವರು ಮಾತನಾಡಿ, “ಮತದಾನ ಪಟ್ಟಿ ಶುದ್ಧೀಕರಣ, ಮನೆಮನೆಗೆ ಸರ್ವೇ, ಹೊಸ ಮತದಾರ ನೋಂದಣಿ, ನಕಲು ಹೆಸರುಗಳು ಮತ್ತು ಮೃತರ ಹೆಸರುಗಳ ತಿದ್ದುಪಡಿ,ಇವುಗಳೆಲ್ಲವು ಚುನಾವಣೆ ಸುಗಮವಾಗಿ ನಡೆಯಲು ಅಗತ್ಯವಾದ ಮೂಲಭೂತ ಕಾರ್ಯಗಳು. ಜನರಿಗೆ ಚುನಾವಣೆ ಜಾಗೃತಿ ನೀಡುವುದು ಸಹ ಬಿಎಲ್ಒ ಗಳ ಮಹತ್ವದ ಹೊಣೆಗಾರಿಕೆ ಎಂದು ಹೇಳಿದರು.

ಪ್ರಬಂಧ ಸ್ಪರ್ಧೆಯ ವಿಷಯವನ್ನು ವಿದ್ಯಾರ್ಥಿಗಳಿಗೆ ಇನ್ನಷ್ಟು ಮನಮುಟ್ಟುವಂತೆ ಮಾಡುವ ವಿಧಾನವನ್ನು ಕಾರ್ಯಕ್ರಮದ ಸಂಯೋಜಕರಾದ ಹೆಚ್.ಕೆ.ಸ್ವಾಮಿ ಗೌಡ ಅವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ ಹೇಮಕುಮಾರ್,ಡಾ. ಬಿ.ಜೆ ಗೋಪಾಲಕೃಷ್ಣ, ಶ್ರೀಧರ್ ,ಸೌಮ್ಯ ಉಪಸ್ಥಿತರಿದ್ದರು.

ಮೊದಲ ಮೂರು ಸ್ಥಾನ ಗಳಿಸಿದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡ ಮಾದ್ಯಮ:
ಪ್ರಥಮ ಸ್ಥಾನ ಸೌಮ್ಯ. ಕಾರ್ಮಲ್ ಪಿಯು ಕಾಲೇಜ್ ನಂಜನಗೂಡು.
ದ್ವಿತೀಯ ಸ್ಥಾನ ಆರತಿ. ಬಾಲಕಿಯರ ಸ.ಪ.ಪೂ.ಕಾಲೇಜು ನಂಜನಗೂಡು,
ತೃತೀಯ ಸ್ಥಾನ ಶಾಲಿನಿ. ಜೆಎಸ್ಎಸ್ ಪ ಪೂ ಕಾ ನಂಜನಗೂಡು.

ಆಂಗ್ಲ ಮಾಧ್ಯಮ:
ಪ್ರಥಮ ಸ್ಥಾನ ಮರಿಯಾ ಸರ್ವತ್ ಪಿ.ಎನ್ ಬಾಲಕರ ಸರ್ಕಾರಿ ಪ ಪೂ. ಕಾಲೇಜು ನಂಜನಗೂಡು ,
ದ್ವಿತೀಯ ಸ್ಥಾನ ಐಶ್ವರ್ಯ ಎಂ, ಕಾರ್ಮಲ್ ಪ.ಪೂ. ಕಾಲೇಜು ನಂಜನಗೂಡು ,
ತೃತೀಯ ಸ್ಥಾನ ಪೂರ್ಣಿಮಾ ಡಿ.ಬಾಲಕರ ಸರ್ಕಾರಿ ಪ.ಪೂ. ಕಾಲೇಜು ನಂಜನಗೂಡು.

ಪ್ರಜಾಪ್ರಭುತ್ವದ ಮೌಲ್ಯ ತಿಳಿಸಲುವಿದ್ಯಾರ್ಥಿಗಳಿಗೆ ತಾ.ಮಟ್ಟದ ಪ್ರಬಂಧ ಸ್ಪರ್ಧೆ Read More