post

ಪತಿಯ‌ ಮುಂದೆಯೇ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ

ತಮಿಳುನಾಡು: ಮಹಿಳೆಯ ಮೇಲೆ ಆಕೆಯ ಪತಿಯ ಮುಂದೆಯೇ ಸಾಮೂಹಿಕ ಅತ್ಯಾಚಾರ ಎಸಗಿದ ಪೈಶಾಚಿಕ ಘಟನೆ
ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ
ನಡೆದಿದೆ.

ಶ್ರೀವೈಕುಂಠಂ ಬಳಿ ಅಸ್ಸಾಂ ಮೂಲದ ವಲಸೆ ಕಾರ್ಮಿಕ ಮಹಿಳೆಯ ಮೇಲೆ ಆಕೆಯ ಪತಿಯ ಎದುರೇ ಸಾಮೂಹಿಕ ಅತ್ಯಾಚಾರ ಮಾಡಲಾಗಿದ್ದು,
ಪ್ರಕರಣಕ್ಕೆ ಸಂಬಂಧ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ಸಂತ್ರಸ್ತ ದಂಪತಿಗಳು ಎರಡು ವಾರಗಳ ಹಿಂದೆ ಶ್ರೀವೈಕುಂಠಂ ಸಮೀಪದ ಅರಸರ್ಕುಳಂ ಪ್ರದೇಶಕ್ಕೆ ವಲಸೆ ಬಂದಿದ್ದರು.

ಅಲ್ಲಿ ಕಲ್ಲು ಗಣಿಯೊಂದರಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದರು. ಆದರೆ, ಕಡಿಮೆ ವೇತನ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದ ದಂಪತಿ ಕೆಲಸವನ್ನು ತ್ಯಜಿಸಿ, ಕೇರಳಕ್ಕೆ ಹೋಗಲು ನಿರ್ಧರಿಸಿದರು.

ತಮ್ಮ ಊರಿಗೆ ತೆರಳಲು ರೈಲ್ವೆ ನಿಲ್ದಾಣದ ಕಡೆಗೆ ಆಟೋ ರಿಕ್ಷಾದಲ್ಲಿ ಹೊರಟಿದ್ದರು.
ದಂಪತಿ ಕೆಲಸ ಬಿಟ್ಟು ಹೋಗುತ್ತಿರುವ ವಿಷಯ ಕಲ್ಲು ಗಣಿ ಮಾಲೀಕರಿಂದ ಕಮಿಷನ್ ಆಧಾರದ ಮೇಲೆ ಅವರಿಗೆ ಕೆಲಸ ಕೊಡಿಸಿದ್ದ ಮೊಹಮ್ಮದ್ ಮಹ್ಬೂಲ್ ಹುಸೇನ್ (27) ಎಂಬಾತನಿಗೆ ತಿಳಿಯಿತು.
ಇದರಿಂದ ಕೋಪಗೊಂಡ ಹುಸೇನ್, ತಕ್ಷಣ ಅವರಿಗೆ ಕರೆ ಮಾಡಿ ಕೆಲಸ ಬಿಟ್ಟು ಹೋಗದಂತೆ ಬೆದರಿಕೆ ಹಾಕಿದ್ದಾನೆ.

ಬಳಿಕ, ಆತ ಇಬ್ಬರು ಅಪ್ರಾಪ್ತ ಬಾಲಕರೊಂದಿಗೆ ದ್ವಿಚಕ್ರ ವಾಹನದಲ್ಲಿ ಶಿವಂತಿಪಟ್ಟಿಯ ಬಳಿ ದಂಪತಿಗಾಗಿ ಕಾಯುತ್ತಿದ್ದನು. ಹುಸೇನ್ ಕೂಡ ಅಸ್ಸಾಂ ಮೂಲದವನಾಗಿದ್ದು, ತಿರುನಲ್ವೇಲಿಯಲ್ಲಿ ವಲಸೆ ಕಾರ್ಮಿಕರಿಗೆ ಕೆಲಸ ಕೊಡಿಸುವ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ.
ದಂಪತಿ ಶಿವಂತಿಪಟ್ಟಿಗೆ ತಲುಪುತ್ತಿದ್ದಂತೆ, ಹುಸೇನ್ ಮತ್ತು ಇಬ್ಬರು ಬಾಲಕರು ಅವರನ್ನು ತಡೆದು, ಬಲವಂತವಾಗಿ ಬಳಿಯಿರುವ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.

ಅಲ್ಲಿ, ಕಲ್ಲು ಗಣಿಯಿಂದ ಹಣ ಕದ್ದಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿ ದಂಪತಿಗೆ ಹಲ್ಲೆ ನಡೆಸಿದ್ದಾರೆ.

ಬಳಿಕ, ಮೂವರು ಆರೋಪಿಗಳು ಪತಿಯ ಎದುರೇ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಮಾಹಿತಿ ತಿಳಿದ ಪೊಲೀಸರು, ತಕ್ಷಣವೇ ಸ್ಥಳಕ್ಕಾಗಮಿಸಿ ಸಂತ್ರಸ್ತೆಯನ್ನು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ತಿರುನಲ್ವೇಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಶ್ರೀವೈಕುಂಠಂ ಎಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ.

ಮೊಹಮ್ಮದ್ ಮಹ್ಬೂಲ್ ಹುಸೇನ್ ಮತ್ತು ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಪತಿಯ‌ ಮುಂದೆಯೇ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ Read More

ಕುರ್ಚಿಗಾಗಿ ಕಿತ್ತಾಡೋದೇ ಅಭಿವೃದ್ಧಿ ಅಂದುಕೊಂಡಿದ್ದಾರೆ ಕಾಂಗ್ರೆಸಿಗರು-ಅಶೋಕ

ಬೆಂಗಳೂರು: ಸರ್ಕಾರ ನಡೆಸುವುದು, ಅಭಿವೃದ್ಧಿ ಮಾಡುವುದು ಅಂದರೆ 3 ತಿಂಗಳಿಗೋ, 6 ತಿಂಗಳಿಗೋ ಒಮ್ಮೆ ಗೃಹಲಕ್ಷ್ಮಿ ಹಣ ಅಕೌಂಟಿಗೆ ಹಾಕೋದು, ಬಾಕಿ ಸಮಯದಲ್ಲಿ ರಾಜಕೀಯ ಮಾಡೋದು, ಕುರ್ಚಿಗಾಗಿ ಕಿತ್ತಾಡೋದು ಅಂದುಕೊಂಡಿದ್ದಾರೆ ಕಾಂಗ್ರೆಸ್ ನಾಯಕರು ಎಂದು ಆರ್.ಅಶೋಕ್ ಜರಿದಿದ್ದಾರೆ.

ರಸ್ತೆ, ಚರಂಡಿ, ಮೂಲಸೌಕರ್ಯ ನಿರ್ಮಾಣದಿಂದ ಬಡವರು ಉದ್ಧಾರ ಆಗಿಲ್ಲ ಅನ್ನೋ ಮನಸ್ಥಿತಿ ಇರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಜನತೆ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ ಎಂದು ‌ಟ್ವೀಟ್ ಮಾಡಿ ಪ್ರತಿಪಕ್ಷ ನಾಯಕ ಪ್ರಶ್ನಿಸಿದ್ದಾರೆ.

ರಸ್ತೆ, ಚರಂಡಿ ಬೇಡ ಅಂದಮೇಲೆ, ತುಮಕೂರಿನವರೆಗೂ ಮೆಟ್ರೋ ಯಾಕೆ ಬೇಕು ಪರಮೇಶ್ವರ್ ಅವರೇ,ಎಸ್ ಸಿ ಎಸ್ ಪಿ- ಟಿ ಎಸ್ ಪಿ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವಂತೆ, ಮೆಟ್ರೋ ಕಾಮಗಾರಿಯ ಹಣವನ್ನೂ ಗ್ಯಾರೆಂಟಿ ಯೋಜನೆಗಳಿಗೆ ಬಳಸಿಕೊಂಡು ಬಿಡಿ ಎಂದು ಅಶೋಕ್ ವ್ಯಂಗ್ಯವಾಗಿ‌ ಚಾಟಿ ಬೀಸಿದ್ದಾರೆ‌.

ಒಟ್ಟಿನಲ್ಲಿ ಈ ನಾಲಾಯಕ್ ಕಾಂಗ್ರೆಸ್ ಸರ್ಕಾರ ತೊಲಗೊವರೆಗೂ ರಾಜ್ಯದಲ್ಲಿ ಅಭಿವೃದ್ಧಿ ಅಸಾಧ್ಯ ಅದಂತೂ ಗ್ಯಾರೆಂಟಿ ಎಂದು ಅಶೋಕ್ ಟೀಕಿಸಿದ್ದಾರೆ.

ಕುರ್ಚಿಗಾಗಿ ಕಿತ್ತಾಡೋದೇ ಅಭಿವೃದ್ಧಿ ಅಂದುಕೊಂಡಿದ್ದಾರೆ ಕಾಂಗ್ರೆಸಿಗರು-ಅಶೋಕ Read More

ಬ್ರೆಜಿಲ್​ನಲ್ಲಿ ಬಿರುಗಾಳಿ ಚಂಡಮಾರುತ:ನೆಲಕ್ಕುರುಳಿದ ಲಿಬರ್ಟಿ ಪ್ರತಿಮೆ

ಬ್ರೆಜಿಲ್: ದಕ್ಷಿಣ ಬ್ರೆಜಿಲ್​ನ ಗುವಾಯ್ಬಾದಲ್ಲಿ ಭಾರಿ ಚಂಡಮಾರುತ,ಬಲವಾದ ಗಾಳಿಯಿಂದಾಗಿ ಲಿಬರ್ಟಿ ಪ್ರತಿಮೆ ನೆಲಕ್ಕುರುಳಿದೆ.

ಪ್ರತಿಮೆ ನೆಲಕ್ಕುರುಳಯವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದು ಲಿಬರ್ಟಿ ಪ್ರತಿಮೆಯ ಪ್ರತಿಕೃತಿಯಾಗಿದ್ದು, ಮೊದಲ ಪ್ರತಿಮೆ ಅಮೆರಿಕದ ನ್ಯೂಜರ್ಸಿಯಲ್ಲಿದೆ.
ಅತ್ಯಂತ ವೇಗವಾಗಿ ಗಾಳಿ ಬೀಸುತ್ತಿದ್ದರಿಂದ ಲಿಬರ್ಟಿ ಪ್ರತಿಮೆ ಓರೆಯಾಗುತ್ತಾ ಉರುಳಿ ಬಿದ್ದಿದೆ.

ಈ ಪ್ರತಿಮೆಯನ್ನು 2020 ರಲ್ಲಿ ಸ್ಥಾಪಿಸಲಾಗಿತ್ತು. ಪ್ರತಿಮೆಯ 11 ಮೀಟರ್ ಎತ್ತರದ ಸ್ತಂಭ ಬಲಿಷ್ಠವಾಗಿತ್ತು,ಆದರೂ ಪ್ರತಿಮೆ ಉರುಳಿದೆ.

ಗಾಳಿಯ ವೇಗ ಗಂಟೆಗೆ 80 ರಿಂದ 90 ಕಿ.ಮೀ ವೇಗದಲ್ಲಿತ್ತು,ಕೂಡಲೇ ಸಿಬ್ಬಂದಿ ಅಲ್ಲಿದ್ದ ಜನರನ್ನು ಸ್ಥಳಾಂತರಿಸಿದರು.
ಯಾರಿಗೂ ತೊಂದರೆಯಾಗಿಲ್ಲ ಎಂದು ‌ವರದಿಯಾಗಿದೆ.

ಬ್ರೆಜಿಲ್​ನಲ್ಲಿ ಬಿರುಗಾಳಿ ಚಂಡಮಾರುತ:ನೆಲಕ್ಕುರುಳಿದ ಲಿಬರ್ಟಿ ಪ್ರತಿಮೆ Read More

ಪ್ರೀತಿ, ಅನುಕಂಪವೇ ಎಲ್ಲ ಧರ್ಮಗಳ ತಿರುಳು- ಸಿದ್ದರಾಮಯ್ಯ

ಬೆಳಗಾವಿ: ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ,ಪ್ರೀತಿ ಮತ್ತು ಅನುಕಂಪಗಳೇ ಎಲ್ಲ ಧರ್ಮಗಳ ತಿರುಳು ಎಂದು ಮುಖ್ಯಮಂತ್ರಿ‌ ಸಿದ್ದರಾಮಯ್ಯ ಹೇಳಿದರು.

ಬೆಳಗಾವಿ ಧರ್ಮಪ್ರಾಂತ್ಯಕ್ಕೆ ಭೇಟಿ ನೀಡಿ ಆರ್ಚ್ ಬಿಷಪ್ ಡೆರೆಕ್ ಫೆರ್ನಾಂಡೀಸ್ ಅವರಿಂದ ಗೌರವ ಸ್ವೀಕರಿಸಿ ಸಿಎಂ ಮಾತನಾಡಿದರು.

ನಮ್ಮ ದೇಶದಲ್ಲಿ ಹಲವು ಜಾತಿಧರ್ಮಗಳ ಜನರಿದ್ದರೂ, ಎಲ್ಲರೂ ಐಕ್ಯತೆ ಹಾಗೂ ಸಾಮರಸ್ಯದಿಂದ ಬಾಳುವ ಅವಶ್ಯಕತೆಯಿದೆ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಮಾನವೀಯ ಸಮಾಜವನ್ನು ನಿರ್ಮಿಸಬೇಕು ಎಂದು ತಿಳಿಸಿದರು.

ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು, ಜಾತ್ಯಾತೀತ ಸಮಾಜ ನಿರ್ಮಾಣಕ್ಕೆ ನಮ್ಮ ಸಂವಿಧಾನ ಹೆಚ್ಚು ಒತ್ತು ನೀಡಿದ್ದು, ಶಿಕ್ಷಣ ವ್ಯವಸ್ಥೆ ಅದಕ್ಕೆ ಪೂರಕವಾಗಿರಬೇಕು ಎಂದು ಸಿಎಂ‌‌ ಸಲಹೆ ನೀಡಿದರು.

ಸಮಾನ ಅವಕಾಶಗಳನ್ನು ನೀಡುವ ಸಮಾಜವಾದವನ್ನು ಪ್ರತಿಪಾದಿಸುವ ಸಮಾಜ ನಿರ್ಮಿಸುವ ದಿಕ್ಕಿನಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಇದಕ್ಕೆ ಪೂರಕವಾಗಿ ಕ್ರಿಶ್ಚಿಯನ್ ಸಮುದಾಯ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಯಾವ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಆದರೆ ಕೆಲವು ಪಟ್ಟಭದ್ರಹಿತಾಸಕ್ತಿಗಳು ದ್ವೇಷ ಬಿತ್ತುವ ಕೆಲಸದಲ್ಲಿ ನಿರತವಾಗಿದೆ. ಎಲ್ಲ ಧರ್ಮಗಳ ತಿರುಳು , ಪ್ರೀತಿ ಮತ್ತು ಅನುಕಂಪ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಎಲ್ಲ ಕ್ರಿಶ್ಚಿಯನ್ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು ಎಂದು ಸಿದ್ದರಾಮಯ್ಯ ತಿಳಿಸಿದರು.

ಆರ್ಚ್ ಬಿಷಪ್ ಡೆರಿಕ್ ಫೆರ್ನಾಂಡೀಸ್, ಸಚಿವರಾದ ಕೆ.ಜೆ.ಜಾರ್ಜ್, ಬೈರತಿ ಸುರೇಶ್, ವಿಧಾನಸಭೆ ಆಡಳಿತ ಪಕ್ಷದ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್, ವಿಧಾನ‌ ಪರಿಷತ್ ಸದಸ್ಯರಾದ ಐವಾನ್ ಡಿಸೋಜಾ ಸೇರಿದಯ ಹಲವು ಗಣ್ಯರು ಉಪಸ್ಥಿತರಿದ್ದರು.‌

ಪ್ರೀತಿ, ಅನುಕಂಪವೇ ಎಲ್ಲ ಧರ್ಮಗಳ ತಿರುಳು- ಸಿದ್ದರಾಮಯ್ಯ Read More

ಗಾಂಧಿ ಹೆಸರನ್ನೇ ನಾಮಾವಶೇಷ ಮಾಡಲು ಹೊರಟಿರುವ ಬಿಜೆಪಿ ಸರ್ಕಾರ:ಆಪ್

ಬೆಂಗಳೂರು: ದೇಶದ ಪ್ರತಿ ಹಳ್ಳಿ ಹಾಗೂ ರೈತರು ಸರ್ವತೋಮುಖ ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಸಂಪೂರ್ಣ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಾಕಾರಗೊಳಿಸುವಲ್ಲಿ ತನ್ನದೇ ಪಾತ್ರ ವಹಿಸಿದ್ದ ಮನರೇಗಾ ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಎಳ್ಳುನೀರು ಬಿಟ್ಟಿದೆ ಎಂದು ಆಪ್ ಕಿಡಿಕಾರಿದೆ.

ನರೇಂದ್ರ ಮೋದಿ ಪ್ರಧಾನಮಂತ್ರಿ ನೇತೃತ್ವದ ಬಿಜೆಪಿ ಸರ್ಕಾರವು ಗಾಂಧೀಜಿಯವರ ಹೆಸರನ್ನೇ ನಾಮಾವಶೇಷ ಮಾಡುವ ಮೂಲಕ ಮರುನಾಮಕರಣ ಮಾಡಲು ಹೊರಟಿರುವುದನ್ನು ಆಮ್ ಆದ್ವಿ ಪಕ್ಷವು ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಮಂತ್ರಿಮಂಡಲವು ಈಗಾಗಲೇ ಈ ಯೋಜನೆಗೆ ಪೂಜ್ಯ ಬಾಪು ಗ್ರಾಮೀಣ ರೋಜಗಾರ್ ಖಾತರಿ ಎಂದು ಮರುನಾಮಕರಣ ಮಾಡಲು ನಿರ್ಧರಿಸಿತ್ತು. ಆದರೆ ಏಕಾಏಕಿ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸುವ ಮೂಲಕ ಗಾಂಧೀಜಿಯವರ ಹೆಸರನ್ನು ಹೊರಗಿಟ್ಟು ಜನಪ್ರಿಯ ಕಲ್ಯಾಣ ಕಾರ್ಯಕ್ರಮದ ಯಶಸ್ಸನ್ನು ತನ್ನದಾಗಿಸಿಕೊಳ್ಳುವ ದುರುದ್ದೇಶದಿಂದ ವಿಬಿ–ಜಿ– ರಾಮ್ ಜಿ ಎಂಬಂತಹ ಜನತೆಗೆ ಗೊಂದಲವನ್ನುಂಟು ಮಾಡುವ ನಾಮಾಂಕಿತವನ್ನು ಇಡುತ್ತಿರುವುದು ಪೂಜ್ಯ ಗಾಂಧೀಜಿಯವರಿಗೆ ಮಾಡಿದಂತಹ ಪರಮ ದ್ರೋಹ ಎಂದು ಮುಖ್ಯಮಂತ್ರಿ ಚಂದ್ರು ಮಾಧ್ಯಮ ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಾಂಧೀಜಿಯವರ ಸ್ವರಾಜ್ಯ ಕಲ್ಪನೆಗೆ, ಅವರ ತ್ಯಾಗ ಬಲಿದಾನಕ್ಕೆ, ಅವರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವಂತಹ ಕೋಮುವಾದಿ ಸಂಘಟನೆಗಳ ಮೂಲ ಅಜೆಂಡಾವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರವು ದುಷ್ಟ ಪ್ರಯತ್ನವನ್ನು ಮಾಡುತ್ತಿರುವುದನ್ನು ಭಾರತೀಯರು ಎಂದಿಗೂ ಸಹಿಸುವುದಿಲ್ಲ ಎಂದಿದ್ದಾರೆ.

ಇಡೀ ವಿಶ್ವದೆದುರು ತಲೆತಗ್ಗಿಸುವಂತಹ ಇಂತಹ ನೀಚ ಕೆಲಸಗಳಿಗೆ ಕೈ ಹಾಕುತ್ತಿರುವ ಪ್ರಧಾನಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ ತೀವ್ರ ಖಂಡನೆ ವ್ಯಕ್ತಪಡಿಸುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಾಂಧಿ ಹೆಸರನ್ನೇ ನಾಮಾವಶೇಷ ಮಾಡಲು ಹೊರಟಿರುವ ಬಿಜೆಪಿ ಸರ್ಕಾರ:ಆಪ್ Read More

ಮಹದೇಶ್ವರ ಅ. ಪ್ರಾ. ರಾಜ್ಯ, ಜಿಲ್ಲಾ ಸಮಿತಿಗೆ ಸಾಲೂರು ಮಠದ ಶ್ರೀ ನೇಮಕಕ್ಕೆ ಶ್ರೀವತ್ಸ ಆಗ್ರಹ

ಬೆಳಗಾವಿ: ಸಾಲೂರು ಮಠದ ಶ್ರೀಗಳನ್ನು ಮಲೈ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ, ಜಿಲ್ಲಾ ಸಮಿತಿಯ ಖಾಯಂ ಸಮಿತಿ ಸದಸ್ಯರನ್ನಾಗಿ ನೇಮಿಸಬೇಕೆಂದು ಮೈಸೂರು ಕೆ ಆರ್.ಕ್ಷೇತ್ರದ ಶಾಸಕ‌‌ ಶ್ರೀವತ್ಸ ಆಗ್ರಹಿಸಿದರು.

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯ ಕುರಿತು ಸಭಾಧ್ಯಕ್ಷರಾದ‌ ಯು.ಟಿ.ಖಾದರ್ ಅವರ ಗಮನ ಸೆಳೆದರು.

ಬೆಳಗಾವಿ ಅಧಿವೇಶನದಲ್ಲಿ ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗರೆಡ್ಡಿ ಅವರು ಶ್ರೀ ಮಲೈ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಮಟ್ಟದ ಜಿಲ್ಲಾ ಮಟ್ಟದ ಸಮಿತಿ 2025ರ ವಿಧೇಯಕ ರಚನೆಯ ವಿಷಯ ಪ್ರಸ್ತಾಪಿಸಿದಾಗ ಶಾಸಕ ಟಿ.ಎಸ್ ಶ್ರೀವತ್ಸ ಅವರು ಮಾತನಾಡಿ ಮಲೈ ಮಹದೇಶ್ವರ ಬೆಟ್ಟದಲ್ಲಿರುವ ಪುರಾತನ ಸಾಲೂರು ಮಠದ ನೇತೃತ್ವದಲ್ಲಿಯೇ ಹಲವಾರು ವರ್ಷಗಳಿಂದ ಪೂಜಾವಿಧಾನ ಧಾರ್ಮಿಕ ಕಾರ್ಯಕ್ರಮಗಳು ಜರಗುತ್ತಾ ಬಂದಿವೆ. ಹಾಗಾಗಿ ಸಾಲೂರು ಮಠದ ಸ್ವಾಮೀಜಿಯವರನ್ನೇ ಶ್ರೀ ಮಲೈ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಹಾಗೂ ರಾಜ್ಯ ಜಿಲ್ಲಾ ಮಟ್ಟದ ಖಾಯಂ ಸಮಿತಿಯ ಸದಸ್ಯರನ್ನಾಗಿ ನೇಮಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿ ರವರು ಸದನದಲ್ಲೇ ಒಪ್ಪಿಗೆ ಸೂಚಿಸಿದ್ದಾರೆ.

ಮಹದೇಶ್ವರ ಅ. ಪ್ರಾ. ರಾಜ್ಯ, ಜಿಲ್ಲಾ ಸಮಿತಿಗೆ ಸಾಲೂರು ಮಠದ ಶ್ರೀ ನೇಮಕಕ್ಕೆ ಶ್ರೀವತ್ಸ ಆಗ್ರಹ Read More

ಅಪರಿಚಿತ ವಾಹನ ಡಿಕ್ಕಿ:ಕೆರೆಗೆ ಗೂಡ್ಸ್ ಆಟೋ ಉರುಳಿ ಎಳನೀರು ವ್ಯಾಪಾರಿ ಸಾವು

ಹುಣಸೂರು: ಅಪರಿಚಿತ ವಾಹನ ಹಿಂದಿನಿಂದ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೆರೆಗೆ ಉರುಳಿ ಎಳನೀರು ವ್ಯಾಪಾರಿ ಮೃತಪಟ್ಟಿರುವ ಘಟನೆ ಹುಣಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.

ಹುಣಸೂರು ಗ್ರಾಮಾಂತರ ವ್ಯಾಪ್ತಿಯ ಎಳನೀರು ವ್ಯಾಪಾರಿ ರಾಜು ಮೃತಪಟ್ಟ ದುರ್ದೈವಿ.

ವಿಷಯ ತಿಳಿಯುತ್ತಿದ್ದಂತೆ ಹುಣಸೂರು ಪಟ್ಟಣ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು.

ಸ್ಥಳಕ್ಕೆ ಮಾಜಿ ಶಾಸಕ ಮಂಜುನಾಥ್ ಮತ್ತು ಉದ್ದೂರು ತಾಲೂಕು ಪಂಚಾಯಿತಿ‌ ಮಾಜಿ ಉಪಾಧ್ಯಕ್ಷ ಪ್ರೇಮೇಗೌಡ ಹಾಗೂ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಸೇರಿದಂತೆ ಅನೇಕ ಮುಖಂಡರು ಧಾವಿಸಿ ಕೆರೆಯಿಂದ ಮೃತ ರಾಜು ದೇಹವನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲು ಪೊಲೀಸರಿಗೆ ನೆರವಾದರು.

ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಾಪಾರಿಯ ಮೃತದೇವನ್ನು ಇರಿಸಲಾಗಿದ್ದು ಕುಟುಂಬಸ್ಥರು ಧಾವಿಸಿದರು.
ಅವರ ದುಃಖದ ಕಟ್ಟೆ ಒಡೆದಿತ್ತು.

ತಡೆಗೋಡೆ ನಿರ್ಮಿಸಲು ಚೆಲುವರಾಜು ಆಗ್ರಹ:
ಮೈಸೂರು-ಮಡಿಕೇರಿ ಹೆದ್ದಾರಿ ಹುಣಸೂರು ಸಮೀಪ ಕೆರೆ ರಸ್ತೆಗೆ ಹೊಂದಿಕೊಂಡಿದೆ. ಇದಕ್ಕೆ ಯಾವುದೇ ತಡೆಗೋಡೆಇಲ್ಲ. ಹಾಗಾಗಿ ಇಲ್ಲಿ ಪದೇ ಪದೇ ಅಪಘಾತಗಳು ನಡೆಯುತ್ತಲೇ ಇರುತ್ತವೆ. ನಾವು ಬಹಳ ವರ್ಷಗಳಿಂದ ತಾಲೂಕು ಆಡಳಿತವನ್ನು ಒತ್ತಾಯಿಸುತ್ತಲೇ ಬಂದಿದ್ದೇವೆ. ಸರ್ಕಾರದ ಗಮನಕ್ಕೂ ತಂದಿದ್ದೇವೆ ಆದರೂ ಏನೂ ಪ್ರಯೋಜನವಾಗಿಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೂಡಲೇ ಹುಣಸೂರಿನ ಶಾಸಕರ ಈ ದೊಡ್ಡ ಕೆರೆಗೆ ತಡೆಗೋಡೆ ನಿರ್ಮಿಸಲೇಬೇಕೆಂದು ಮತ್ತು ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕೆಂದು ಚೆಲುವರಾಜು ಆಗ್ರಹಿಸಿದ್ದಾರೆ.

ಅಪರಿಚಿತ ವಾಹನ ಡಿಕ್ಕಿ:ಕೆರೆಗೆ ಗೂಡ್ಸ್ ಆಟೋ ಉರುಳಿ ಎಳನೀರು ವ್ಯಾಪಾರಿ ಸಾವು Read More

ಕುಣಿಗಲ್ ಗೆ ಅನುದಾನ: ಮುಂದಿನ ವರ್ಷ ತಾರತಮ್ಯ ನಿವಾರಣೆ- ಸಿಎಂ ಭರವಸೆ

ಬೆಳಗಾವಿ: ಕುಣಿಗಲ್ ತಾಲ್ಲೂಕಿನ ಸಹಕಾರಿ ರಂಗಕ್ಕೆ ಅನುದಾನ ನೀಡಿಕೆಯಲ್ಲಿ ತಾರತಮ್ಯವಾಗಿದ್ದಲ್ಲಿ, ಮುಂದಿನ ವರ್ಷದಿಂದ ಸರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನದ ವಿಧಾನಸಭಾ ಕಲಾಪದಲ್ಲಿ ಶಾಸಕ ಡಾ. ಎಚ್.ಡಿ.ರಂಗನಾಥ್ ಅವರ ಚುಕ್ಕೆ ಗುರುತಿನ ಪ್ರಶ್ನೆ ಸಿಎಂ ಉತ್ತರ ನೀಡಿದರು.

2024-25ರಲ್ಲಿ ನಬಾರ್ಡ್ ನಿಂದ 5600 ಕೋಟಿ ಕಮ್ಮಿ ಬಡ್ಡಿದರದಲ್ಲಿ ಬರಬೇಕಾಗಿತ್ತು. ಅದರಲ್ಲಿ 3415 ಕೋಟಿ ರೂ. ಬಂದಿದ್ದು, 2185 ಕೋಟಿ ರೂ.ಗಳ ಕೊರತೆಯಾಗಿದೆ. ಮಧುಗಿರಿ ತಾಲ್ಲೂಕಿಗೆ ಹೆಚ್ಚು ಅನುದಾನ ನೀಡಿ, ಕುಣಿಗಲ್ ತಾಲ್ಲೂಕಿಗೆ ಕಡಿಮೆಯಾಗಿರುವ ಬಗ್ಗೆ ಶಾಸಕರು ತಿಳಿಸಿದ್ದಾರೆ. ಆದರೆ ಮಧುಗಿರಿಯಲ್ಲಿ ಶೇ. 26 ರಷ್ಟು ಎಸ್ ಸಿ ಎಸ್ ಟಿ ಸಮುದಾಯದವರಿದ್ದಾರೆ. ಕುಣಿಗಲ್ ನಲ್ಲಿ ಕೇವಲ ಶೇ. 8 ರಷ್ಟು ಮಾತ್ರ ಎಸ್ ಸಿ ಎಸ್ ಟಿ ಗೆ ಸೇರಿದ ಸಮುದಾಯಗಳಿವೆ. ಆದ್ದರಿಂದ ಅನುದಾನದ ಹೆಚ್ಚಿನ ಪಾಲು ಮಧುಗಿರಿಗೆ ನೀಡಿರಬಹುದು. ಆದರೆ ಮುಂದಿನ ವರ್ಷದಿಂದ ಈ ತಾರತಮ್ಯವನ್ನು ಕಾನೂನು ಪ್ರಕಾರ ನಿವಾರಣೆ ಮಾಡಲಾಗುವುದು ಎಂದು ‌ಭರವಸೆ ನೀಡಿದರು.

ಕುಣಿಗಲ್ ತಾಲ್ಲೂಕಿನಲ್ಲಿ 4 ಲಕ್ಷ ಪಹಣಿ ಇದ್ದು,1 ಲಕ್ಷ ರೈತರಿದ್ದಾರೆ. ಆದರೆ ಡಿಸಿಸಿ ಬ್ಯಾಂಕ್ ಗಳ ಮೂಲಕ ಕೇವಲ 20 ರೈತರಿಗೆ ಮಾತ್ರ ಅಲ್ಪಾವಧಿ ಸಾಲ ಕೊಟ್ಟಿದ್ದಾರೆ, ರೈತರ ಹಣವನ್ನು ತಮ್ಮ ಕಪಿಮುಷ್ಟಿಯಲ್ಲಿ ಹಿಡಿದಿರುವ ಇಂತಹ ಸಂಘಗಳಿಂದ ರೈತರ ರಕ್ಷಣೆಗೆ ಸರ್ಕಾರ ಬರಬೇಕಿದೆ ಎಂದು ಕುಣಿಗಲ್ ಶಾಸಕ ಡಾ. ಎಚ್.ಡಿ.ರಂಗನಾಥ್ ಅವರು ಮುಖ್ಯಮಂತ್ರಿಗಳ ಗಮನ ಸೆಳೆದರು

ಕುಣಿಗಲ್ ಗೆ ಅನುದಾನ: ಮುಂದಿನ ವರ್ಷ ತಾರತಮ್ಯ ನಿವಾರಣೆ- ಸಿಎಂ ಭರವಸೆ Read More

ಪಿ ಜಿ ಆರ್ ಎಸ್ ಎಸ್ ಬೃಂದಾವನದಲ್ಲಿ ನೀಮಾ ಲೋಬೋ ಹುಟ್ಟುಹಬ್ಬ ಆಚರಣೆ

ಮೈಸೂರು: ಸರ್ವಕಲ ಸೇವಾ ಟ್ರಸ್ಟ್ ಅಧ್ಯಕ್ಷರು, ಸಮಾಜ ಸೇವಕರು, ಚಿತ್ರನಟಿ, ಗಾಯಕರೂ ಆದ ರಕ್ತದಾನಿ ನೀಮಾ ಲೋಬೋ ಅವರ ಹುಟ್ಟುಹಬ್ಬವನ್ನು ಪಿ ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದಲ್ಲಿ ಆಚರಿಸಲಾಯಿತು.

ಜಿ ಆರ್ ಎಸ್ ಎಸ್ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆಗೂಡಿ ಎಲ್ಲಾ ಹಿರಿಯ ತಾಯಂದಿರ ಸಮ್ಮುಖದಲ್ಲಿ ನೀಮಾ ಲೋಬೋ ಅವರ ಹುಟ್ಟು ಹಬ್ಬ ಆಚರಿಸಿ ಶುಭ ಕೋರಲಾಯಿತು.

ಬೃಂದಾವನದ ಅಧ್ಯಕ್ಷರಾದ ಯಾದವ್ ಹರೀಶ್, ಖಜಾಂಚಿ ಮಂಜುಳಾ, ರಾಜ್ಯ ಸಂಚಾಲಕರಾದ ರಕ್ತದಾನಿ ಮಂಜು, ಕಂಪ್ಯೂಟರ್ ಆಪರೇಟರ್ ಹರಿಣಿ ಮತ್ತು ಎಲ್ಲಾ ತಾಯಂದಿರು ಶುಭ ಕೋರಿದರು.

ಪಿ ಜಿ ಆರ್ ಎಸ್ ಎಸ್ ಬೃಂದಾವನದಲ್ಲಿ ನೀಮಾ ಲೋಬೋ ಹುಟ್ಟುಹಬ್ಬ ಆಚರಣೆ Read More

ಲೋಕ್ ಅದಾಲತ್‍ನಲ್ಲಿ 1,20,045 ಪ್ರಕರಣಗಳು ಇತ್ಯರ್ಥ: ನ್ಯಾ.ಜಿ. ಪ್ರಭಾವತಿ

ಚಾಮರಾಜನಗರ: ಈ ಬಾರಿಯ ಲೋಕ್ ಅದಾಲತ್‍ನಲ್ಲಿ 1,20,045 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಪ್ರಭಾವತಿ ತಿಳಿಸಿದರು.

ನಗರದ ಜಿಲ್ಲಾ ನ್ಯಾಯಾಲಯದ ವಾಜ್ಯಪೂರ್ವ ಪರಿಹಾರ ಕೇಂದ್ರದಲ್ಲಿ ಈ ವಿಷಯ ತಿಳಿಸಿದ ಅವರು ಕಳೆದ ಬಾರಿಯ ಲೋಕ್ ಅದಾಲತ್‍ನಲ್ಲಿ 1,04,649 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿತ್ತು. ಇತ್ತೀಚೆಗೆ ಅಂದರೆ ಡಿ.13ರಂದು ನಡೆದ ಅದಾಲತ್‍ನಲ್ಲಿ 2642 ನ್ಯಾಯಾಲಯ ಪ್ರಕರಣಗಳು ಹಾಗೂ 1,17,403 ವ್ಯಾಜ್ಯಪೂರ್ವ ಸೇರಿದಂತೆ ಒಟ್ಟು 1,20,045 ಪ್ರಕರಣಗಳು ಇತ್ಯರ್ಥವಾಗಿವೆ ಎಂದು ಹೇಳಿದರು.

ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳ ನಿರ್ದೇಶನದ ಮೇರೆಗೆ ‘ಸರ್ವರಿಗೂ ನ್ಯಾಯ’ ಪರಿಕಲ್ಪನೆಯಡಿ ಜನಸಾಮಾನ್ಯರ ಅನುಕೂಲಕ್ಕಾಗಿ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸೇರಿದಂತೆ ಜಿಲ್ಲೆಯ ತಾಲೂಕು ಕಾನೂನು ಸೇವಾ ಪ್ರಾಧಿಕಾರಗಳಲ್ಲಿ ಎಲ್ಲಾ ರೀತಿಯ ಸಿವಿಲ್, ರಾಜಿಯೋಗ್ಯ ಕ್ರಿಮಿನಲ್ ಪ್ರಕರಣಗಳು, ಇತರೆ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸಲು ಮೆಗಾ-ಲೋಕ್ ಅದಾಲತ್ ಏರ್ಪಡಿಸಲಾಗಿತ್ತು ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.

ಈ ಬಾರಿಯ ಲೋಕ್ ಅದಾಲತ್‍ನಲ್ಲಿ ಚಾಮರಾಜನಗರದ 665, ಯಳಂದೂರು 230, ಕೊಳ್ಳೇಗಾಲ 1089 ಹಾಗೂ ಗುಂಡ್ಲುಪೇಟೆಯ 658 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ವ್ಯಾಜ್ಯಪೂರ್ವ ಹಾಗೂ ನ್ಯಾಯಾಲಯದ ಒಟ್ಟು 1,17,403 ಸೇರಿದಂತೆ 1,20,045 ಪ್ರಕರಣಗಳು ಇತ್ಯರ್ಥಗೊಂಡಿದೆ ಎಂದರು.ಒಟ್ಟು 2642 ಪ್ರಕರಣಗಳಲ್ಲಿ 10,89,73,167 ರೂ.ಗಳು ಹಾಗೂ 1,17,403 ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ 4,91,38,228 ರೂಪಾಯಿ ಒಟ್ಟು 15,81,11,395 ಮೊತ್ತವನ್ನ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೌಟುಂಬಿಕವಾಗಿ ವಿವಾಹ ವಿಚ್ಛೇಧನ, ಪತಿ ಅಥವಾ ಪತ್ನಿಯಿಂದ ಜೀವನಾಂಶ ಕೋರಿಕೆ ಹಾಗೂ ವಿಚ್ಚೇಧನಾ ಪ್ರಕರಣ ದಾಖಲಾಗುವ ದೂರುಗಳು ಸೇರಿದಂತೆ ಒಟ್ಟು ೧೧ ಪ್ರಕರಣಗಳನ್ನು ಇತ್ಯರ್ಥಪಡಿಸಿ ಪತಿ-ಪತ್ನಿಯರನ್ನು ಒಂದುಗೂಡಿಸಲಾಗಿದೆ ಎಂದು ಹೇಳಿದರು.

ನ್ಯಾಯಾಲಯದಲ್ಲಿದ್ದ ಬಾಕಿ ರಾಜಿಯೋಗ್ಯ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳ ಕಕ್ಷಿದಾರರು ನ್ಯಾಯಾಧೀಶರು, ವಕೀಲರು, ಸಂಧಾನಕಾರರಿಂದ ಲೋಕ್ ಅದಾಲತ್ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ 10-15 ವರ್ಷಗಳಿಂದ ಬಾಕಿ ಇದ್ದ 7 ಪ್ರಕರಣಗಳನ್ನು ರಾಜಿ ಮೂಲಕ ಹಾಗೂ ಅಪಘಾತ ವಿಮಾ ಪರಿಹಾರ ಸೇರಿದಂತೆ ಪ್ರಕರಣ ಇತ್ಯರ್ಥಪಡಿಸಲಾಗಿದೆ.
ಅಲ್ಲದೆ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಾಗುವ ಮೊದಲೆ ಸಾಕಷ್ಟು ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥವಾಗಿರುವುದು ಹರ್ಷದಾಯವಾಗಿದೆ. ಇದರಿಂದ ಕಕ್ಷಿದಾರರ ಸಮಯ, ಹಣ, ಉಳಿತಾಯವಾಗಿದೆ. ನ್ಯಾಯಾಲಯದ ಹೊರೆಯೂ ತಗ್ಗಿದೆ. ಅದಾಲತ್ ಯಶಸ್ಸಿಗೆ ಕಾರಣರಾದ ಜಿಲ್ಲಾಡಳಿತ, ವಿವಿಧ ಇಲಾಖೆಗಳು, ಬ್ಯಾಂಕ್‍ಗಳಿಗೆ ಅಭಿನಂದನೆಗಳನ್ನು ಜಿ. ಪ್ರಭಾವತಿ ಅವರು ತಿಳಿಸಿದರು.

ಚಾಮರಾಜನಗರ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಸಕ್ತ (2025) ವರ್ಷದಲ್ಲಿ ನಾಲ್ಕು ಲೋಕಾ ಅದಾಲತ್ ನಡೆದಿತ್ತು ನ್ಯಾಯಾಲಯದ ಒಟ್ಟು ಪ್ರಕರಣ10,183, ಪೂರ್ವ ವ್ಯಾಜ್ಯದ 3,90,249 ಒಟ್ಟು 400432 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಇದೇ ‌ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಜಿ. ಪ್ರಭಾವತಿ ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಈಶ್ವರ್, ಮುಖ್ಯ ನ್ಯಾಯಿಕ ದಂಡಾಧಿಕಾರಿ ಸಿ.ಡಿ. ಪ್ರಕಾಶ್ ಹಾಜರಿದ್ದರು.

ಲೋಕ್ ಅದಾಲತ್‍ನಲ್ಲಿ 1,20,045 ಪ್ರಕರಣಗಳು ಇತ್ಯರ್ಥ: ನ್ಯಾ.ಜಿ. ಪ್ರಭಾವತಿ Read More