ಮೈಸೂರು: ಪ್ಲಾಸ್ಟಿಕ್ ಮುಕ್ತ ದೇಶವನ್ನಾಗಿಸಲು ಮನೆಗೊಂದು ಮರ ಬೆಳೆಸುವ ಮೂಲಕ ಪ್ರತಿಯೊಬ್ಬರೂ ಪರಿಸರವನ್ನು ಉಳಿಸಿ ಬೆಳೆಸಬೇಕೆಂದು ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಸಲಹೆ ನೀಡಿದರು.
ನಗರದ ದೇವರಾಜ ಮಾರುಕಟ್ಟೆಯಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ, ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರದ ವತಿಯಿಂದ ಪ್ಲಾಸ್ಟಿಕ್ ಬ್ಯಾಕ್ ಬಿಡಿ ಬಟ್ಟೆ ಬ್ಯಾಗ್ ಹಿಡಿ ಎಂಬ ಜಾಗೃತಿ ಅಭಿಯಾನದಲ್ಲಿ ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೆ ಉಚಿತ ಬಟ್ಟೆ ಬ್ಯಾಗ್ ವಿತರಿಸಿದ ವೇಳೆ ಅವರು
ಮಾತನಾಡಿದರು.

ಪ್ಲಾಸ್ಟಿಕ್ ಮುಕ್ತ ಭಾರತ ಪ್ರತಿಯೊಬ್ಬರ ಕರ್ತವ್ಯವಾಗಲಿ,ಅಂಗಡಿ ಮಾರುಕಟ್ಟೆಗೆ ತೆರಳುವಾಗ ಪ್ಲಾಸ್ಟಿಕ್ ಕವರ್ ಬದಲಾಗಿ ಪರಿಸರಸ್ನೇಹಿ ವಸ್ತುಗಳಿಂದ, ಬಟ್ಟೆಗಳಿಂದ ಮಾಡಿದ ಚೀಲಗಳನ್ನು ಬಳಸಬೇಕು, ಕಸದ ನಿರ್ವಹಣೆ ಮನೆಯಿಂದಲೇ ಆರಂಭವಾಗಬೇಕು,ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸುವ ಮೂಲಕ ಮಾಲಿನ್ಯವನ್ನು ತಡೆಯಬೇಕು, ನಾವು ನೆಟ್ಟ ಗಿಡವನ್ನು ಪೋಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಎನ್ನುವುದು ಮರೆಯಬಾರದು, ಹತ್ತಿರದ ಸ್ಥಳಗಳಲ್ಲಿ ವಾಹನ ಬಿಟ್ಟು ನಡೆದುಕೊಂಡು ಹೋಗುವುದು ಹಾಗೂ ಬೈಸಿಕಲ್ ಬಳಕೆ ಮಾಡಬೇಕು ಎಂದು ಗಿರೀಶ್ ತಿಳಿಹೇಳಿದರು.

ನಗರ ಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್,ಮಾತನಾಡಿ,ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ವಿದ್ಯಾವಂತರೇ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಪರಿಸರದ ಮಹತ್ವ ತಿಳಿದಿದ್ದರೂ ಅನಕ್ಷರಸ್ಥರ ರೀತಿಯಲ್ಲಿ ಪರಿಸರವನ್ನು ನಾಶ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸರವನ್ನು ಕಾಪಾಡಿ, ಅದನ್ನು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು ಎಂದು ತಿಳಿಸಿದರು.

ಗಿಡ ಬೆಳೆಸಿ ನಾಡು ಬೆಳೆಸಿ, ఎంబ ಘೋಷಣೆ ಜಾರಿಯಾಗಬೇಕು. ನಾವು ಇರುವ ಜಾಗದ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸುತ್ತಮುತ್ತ ಇರುವ ಜಾಗದಲ್ಲಿ ಹಸಿರು ಇರುವ ರೀತಿಯಲ್ಲಿ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು ಎಂದು ಹೇಳಿದರು.

ಅಭಿಯಾನದಲ್ಲಿ ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ರಾಜ್ಯ ಸಂಚಾಲಕ ರವಿಶಂಕರ್, ಎಸ್ ಎನ್ ರಾಜೇಶ್, ಚರಣ್, ಮೈಸೂರು ಮಹಾ ನಗರ ಪಾಲಿಕೆ ವಲಯ ಕಚೇರಿ 06 ರ ಪರಿಸರ ಅಭಿಯಂತರರು ಮೈತ್ರಿ, ಹೆಲ್ತ್ ಇನ್ಸ್ಪೆಕ್ಟರ್ ಮಂಜುಕುಮಾರ್ ಎಸ್, ಸೂಪರ್ ವೈಸರ್ ಗಳು , ದೇವರಾಜ ಮಾರುಕಟ್ಟೆಯ ಬೀದಿಬದಿ ವ್ಯಾಪಾರಿಗಳು ಪಾಲ್ಗೊಂಡಿದ್ದರು.