ಪಂಜಾಬ್ ಮಾದರಿ ಹೆಲ್ಪ್ಲೈನ್ ಬಿಡುಗಡೆ ಮಾಡಲು ಆಮ್ ಆದ್ಮಿ ಪಕ್ಷದ ಆಗ್ರಹ

Spread the love

ಬೆಂಗಳೂರು: ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಕೂಡಲೇ ಪಂಜಾಬ್ ಮಾದರಿಯಲ್ಲಿ ಹೆಲ್ಪ್ಲೈನ್
ಬಿಡುಗಡೆ ಮಾಡಬೇಕೆಂದು ಆಮ್ ಆದ್ಮಿ ಪಕ್ಷ ಒತ್ತಾಯಿಸಿದೆ.

ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಹಿರಿಯ ಸೇನಾಧಿಕಾರಿಯೊಬ್ಬರು ತಮ್ಮ ತಾಯಿಯ ಮರಣದ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ದಿಂದಾಗಿ ಆಂಬುಲೆನ್ಸ್, ಸ್ಮಶಾನ , ಮರಣ ಪತ್ರ ಮುಂತಾದ ವಿಷಯಗಳಲ್ಲಿ ಅನುಭವಿಸಿದ ನರಕ ಯಾತನೆಯು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ,
ಸರ್ಕಾರದಲ್ಲಿನ ಕೆಳಹಂತದ ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ ಎಂದು ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ತಿಳಿಸಿದ್ದಾರೆ.

ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಪಂಜಾಬ್ ಮಾದರಿಯ ಭ್ರಷ್ಟಾಚಾರ ನಿಗ್ರಹದಳದ ಸಹಾಯವಾಣಿಯನ್ನು ಕೂಡಲೇ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಈ ಸಹಾಯವಾಣಿಯ ಉಸ್ತುವಾರಿಗೆ ಪೊಲೀಸ್ ಇಲಾಖೆಯ ಎಡಿಜಿಪಿ ದರ್ಜೆಯ ಉನ್ನತ ,ಪ್ರಾಮಾಣಿಕ ಪೊಲೀಸ್ ಅಧಿಕಾರಿಯನ್ನು ನೇಮಿಸಿ ಸಕಲ ರೀತಿಯ ವ್ಯವಸ್ಥೆಗಳನ್ನು ಈ ಸಹಾಯವಾಣಿಗೆ ಒದಗಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಇದರಿಂದಾಗಿ ಭ್ರಷ್ಟಾಚಾರವನ್ನು ತಡೆಗಟ್ಟಲು ಸಾಧ್ಯವಿದೆ. ಇದನ್ನು ನಮ್ಮ ಪಕ್ಷ ದೆಹಲಿ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಸ್ಥಾಪನೆ ಮಾಡಿದೆ,ರಾಜ್ಯ ಸರ್ಕಾರದ ಪ್ರತಿನಿಧಿಗಳು ಪಂಜಾಬ್ ರಾಜ್ಯಕ್ಕೆ ಭೇಟಿ ನೀಡಿ ಅಲ್ಲಿನ ಸಹಾಯವಾಣಿ ಯಾವ ರೀತಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಅಧ್ಯಯನ ಮಾಡಿ, ಸರ್ಕಾರದಲ್ಲಿನ ಕೆಳಹಂತದ ಅಧಿಕಾರಿಗಳ ಭ್ರಷ್ಟಾಚಾರದ ಕಿರುಕುಳವನ್ನು ತಪ್ಪಿಸಬೇಕು ಎಂದು ಸೀತಾರಾಮ್ ಗುಂಡಪ್ಪ ಆಗ್ರಹಿಸಿದ್ದಾರೆ.