ಪಾಕಿಸ್ತಾನದಲ್ಲಿ ರೈಲು ಹೈಜಾಕ್‌: 27 ಉಗ್ರರ ಹತ್ಯೆ,150 ಪ್ರಯಾಣಿಕರ ರಕ್ಷಣೆ

Spread the love

ಕ್ವೆಟ್ಟಾ: ಪಾಕಿಸ್ತಾನದ ಬಲೂಚಿಸ್ತಾನದ ಸುರಂಗ ಮಾರ್ಗದಲ್ಲಿ ನಿನ್ನೆ ಬಲೂಚಿ ಬಂಡುಕೋರರು ಪ್ರಯಾಣಿಕ ರೈಲನ್ನು ಹೈಜಾಕ್‌ ಮಾಡಿದ್ದ ಘಟನೆ ಸಂಬಂಧ 27 ಉಗ್ರರನ್ನು ಹತ್ಯೆ ಮಾಡಲಾಗಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಪಡೆಗಳು, 27 ಉಗ್ರರನ್ನು ಹತ್ಯೆ ಮಾಡಿ,150 ಪ್ರಯಾಣಿಕರನ್ನು ರಕ್ಷಿಸಿವೆ. ಇನ್ನೂ 300 ಮಂದಿಯ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿನ್ನೆ ಮಧ್ಯಾಹ್ನ 9 ಬೋಗಿಗಳಿದ್ದ ಜಾಫರ್ ಎಕ್ಸ್‌ಪ್ರೆಸ್ 450 ಪ್ರಯಾಣಿಕರನ್ನು ಹೊತ್ತು ಕ್ವೆಟ್ಟಾದಿಂದ ಪೇಶಾವರಕ್ಕೆ ತೆರಳುತ್ತಿತ್ತು.ಆಗ ಶಸ್ತ್ರಸಜ್ಜಿತ ಉಗ್ರರು ಪರ್ವತ ಪ್ರದೇಶವಾಗಿರುವ ಗುಡಲರ್ ಮತ್ತು ಪಿರು ಕುನ್ರಿ ಎಂಬಲ್ಲಿನ ಸುರಂಗ ಮಾರ್ಗದಲ್ಲಿ ರೈಲು ತಡೆದು ದಾಳಿ ನಡೆಸಿದ್ದರು.

ಬಲೂಚಿಸ್ತಾನ ಲಿಬರೇಶನ್ ಆರ್ಮಿ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ಭದ್ರತಾ ಪಡೆಗಳು ನೀಡಿದ ಮಾಹಿತಿ ಪ್ರಕಾರ ಉಗ್ರರ ಜೊತೆ ಗುಂಡಿನ ಚಕಮಕಿ ಮುಂದುವರಿದಿದೆ. 150 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಈ ಪೈಕಿ ಮಹಿಳೆಯರು ಮತ್ತು ಮಕ್ಕಳಿದ್ದಾರೆ.

ಉಗ್ರರು ಕೆಲವು ಪ್ರಯಾಣಿಕರನ್ನು ಪರ್ವತ ಪ್ರದೇಶಕ್ಕೆ ಕೊಂಡೊಯ್ದಿರುವ ಕುರಿತು ಮಾಹಿತಿ ಇದೆ. ಭದ್ರತಾ ಪಡೆಗಳು ಕಳೆದ ರಾತ್ರಿಯೂ ಕಾರ್ಯಾಚರಣೆ ನಡೆಸಿವೆ. ಇದಕ್ಕೂ ಮುನ್ನ ರಕ್ಷಿಸಲಾಗದ 58 ಪ್ರಯಾಣಿಕರ ಪೈಕಿ 31 ಮಂದಿ ಮಹಿಳೆಯರು ಮತ್ತು 15 ಮಂದಿ ಮಕ್ಕಳಿದ್ದಾರೆ. ಇವರನ್ನು ಮತ್ತೊಂದು ರೈಲಿನ ಮೂಲಕ ಬಲೂಚಿಸ್ತಾನದ ಮಚ್ ಎಂಬ ಪಟ್ಟಣಕ್ಕೆ ರವಾನಿಸಲಾಗಿತ್ತು.

ಉಗ್ರರು ಕತ್ತಲಲ್ಲಿ ಪರಾರಿಯಾಗಲು ಸಣ್ಣ ಸಣ್ಣ ಗುಂಪುಗಳಾಗಿ ರಚಿಸಿಕೊಂಡಿದ್ದಾರೆ. ಆದರೆ ಸುರಂಗ ಮಾರ್ಗವನ್ನು ಭದ್ರತಾ ಪಡೆಗಳು ಸುತ್ತುವರೆದಿವೆ. ಉಳಿದ ಪ್ರಯಾಣಿಕರನ್ನೂ ಸದ್ಯದಲ್ಲೇ ರಕ್ಷಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ಭದ್ರತಾ ಪಡೆಗಳು 80 ಮಂದಿ ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದವು. ಇದರಲ್ಲಿ 43 ಮಂದಿ ಪುರುಷರು, 26 ಮಹಿಳೆಯರು ಮತ್ತು 11 ಮಂದಿ ಮಕ್ಕಳಿದ್ದರು ಎಂದು ಬಲೂಚಿಸ್ತಾನ ಸರ್ಕಾರದ ವಕ್ತಾರ ಶಹೀದ್ ರಿಂದ್ ಹೇಳಿದ್ದಾರೆ.

ಸಂಕಷ್ಟದಲ್ಲಿ ಸಿಲುಕಿರುವ ಪ್ರಯಾಣಿಕರ ಸಂಬಂಧಿಕರು ತಮ್ಮವರ ಬಗ್ಗೆ ಮಾಹಿತಿ ಪಡೆಯಲು ಮುಗಿಬಿದ್ದಿದ್ದು ಪೇಶಾವರ ಮತ್ತು ಕ್ವೆಟ್ಟಾ ರೈಲು ಸ್ಟೇಷನ್‌ನಲ್ಲಿ ಪಾಕಿಸ್ತಾನ ರೈಲ್ವೆ ಈಗಾಗಲೇ ತುರ್ತು ಸಹಾಯವಾಣಿ ಡೆಸ್ಕ್‌ಗಳನ್ನು ಸ್ಥಾಪಿಸಿದೆ.

ಜನರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಊಹಾಪೋಹಗಳಿಗೆ ಕಿವಿಗೊಡಬಾರದು ಎಂದು ಪೇಶಾವರ ರೈಲ್ವೇ ಸ್ಟೇಷನ್‌ನ ಹಿರಿಯ ಅಧಿಕಾರಿ ತಾರಿಕ್ ಮೊಹಮ್ಮದ್ ಮನವಿ ಮಾಡಿದ್ದಾರೆ.

ಕಳೆದ ವರ್ಷದ ನವೆಂಬರ್‌ನಲ್ಲಿ ಕ್ವೆಟ್ಟಾ ರೈಲ್ವೇ ಸ್ಟೇಷನ್‌ನಲ್ಲಿ ನಡೆದ ಆತ್ಮಹತ್ಯಾ ಬಾಂಬ್‌ ಸ್ಫೋಟದಲ್ಲಿ 26 ಜನರು ಸಾವನ್ನಪ್ಪಿದ್ದು 62ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.