ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಉಗ್ರರ ದಾಳಿ:ಸೇನಾ ಕ್ಯಾಪ್ಟನ್‌,8 ಸೈನಿಕರು ಸಾವು

Spread the love

ಇಸ್ಲಮಾಬಾದ್: ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಸೇನಾ ಕ್ಯಾಪ್ಟನ್ ಸೇರಿ ಒಂಬತ್ತು ಪಾಕಿಸ್ತಾನಿ ಸೈನಿಕರು ಮೃತರಾಗಿದ್ದಾರೆ.

ವಾಶುಕ್ ಜಿಲ್ಲೆ, ಬಸಿಮಾ ಪ್ರದೇಶದ ಗ್ರೀನ್ ಚೌಕ್ ಬಳಿ ದಾಳಿ ನಡೆದಿದೆ.

ಚಲಿಸುತ್ತಿದ್ದ ಮಿಲಿಟರಿ ಪೊಲೀಸ್ ವ್ಯಾನ್ ಮತ್ತು ಕ್ವಿಕ್ ರೆಸ್ಪಾನ್ಸ್ ಫೋರ್ಸ್ ಘಟಕದ ಮೇಲೆ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ.

ಬಲೂಚಿಸ್ತಾನ್ ಪ್ರಾಂತ್ಯವನ್ನು ಪಾಕಿಸ್ತಾನಿ ಆಡಳಿತದಿಂದ ಮುಕ್ತಗೊಳಿಸಲು ಚಳವಳಿ ನಡೆಸುತ್ತಿರುವ ಬಲೂಚಿಸ್ತಾನ್ ಹೋರಾಟಗಾರರು ದಾಳಿಯ ಹಿಂದೆ ಇದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ತಿಂಗಳ ಕೊನೆಯಲ್ಲಿ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯಲ್ಲಿ ಬಂದೂಕುಧಾರಿಗಳು ಮೂವರು ಫ್ರಾಂಟಿಯರ್ ಕಾರ್ಪ್ಸ್ ಸಿಬ್ಬಂದಿಯನ್ನು ಕೊಂದಿದ್ದರು. ಈ ತಿಂಗಳ ಆರಂಭದಲ್ಲಿ ಬಲೂಚಿಸ್ತಾನದ ವಿವಿಧ ಭಾಗಗಳಲ್ಲೂ ಹೋರಾಟಗಾರರು ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸಿ 8 ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದರು.

ಬಲೂಚಿಸ್ತಾನದಲ್ಲಿ ಹಿಂಸಾತ್ಮಕ ದಾಳಿಗಳು ಹೆಚ್ಚುತ್ತಿವೆ. ಇತ್ತೀಚೆಗೆ, ಕರಾಚಿಯಿಂದ ಕ್ವೆಟ್ಟಾಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಬಸ್ ಮೇಲೂ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿದ್ದರು.

ಕಲಾತ್ ಪ್ರದೇಶದಲ್ಲಿ ಮೂವರು ಸಾವನ್ನಪ್ಪಿದರು ಮತ್ತು 7 ಮಂದಿ ಗಾಯಗೊಂಡರು. ಮತ್ತೊಂದು ಘಟನೆಯಲ್ಲಿ, ಕಿಲ್ಲಾ ಅಬ್ದುಲ್ಲಾ ಜಿಲ್ಲೆಯಲ್ಲಿ ನಡೆದ ಮಾರಕ ಮಾರುಕಟ್ಟೆ ಬಾಂಬ್ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದರು.

2 ದಶಕಗಳಿಂದ ಬಲೂಚಿಸ್ತಾನ್ ಪಾಕಿಸ್ತಾನಿ ಆಡಳಿತದ ವಿರುದ್ಧ ಉಗ್ರ ಚಳವಳಿಗೆ ನೆಲೆಯಾಗಿದೆ.