ನವದೆಹಲಿ: ಪಹಲ್ಲಾಮ್ ನಲ್ಲಿ ಉಗ್ರರ ದಾಳಿಗೆ ಬಲಿಯಾದ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿಯೇ ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.
ಇಂದು ಮನ್ ಕೀ ಬಾತ್ ನಲ್ಲಿ ಮಾತನಾಡಿದ ಮೋದಿ ಪಹಲ್ಗಾಮ್ ಉಗ್ರ ದಾಳಿಯ ಬಗ್ಗೆ ಮತ್ತೊಮ್ಮೆ ಆಕ್ರೋಶದಿಂದ ಮಾತನಾಡಿದ್ದಾರೆ. ದಾಳಿ ಮಾಡಿದವರಿಗೆ, ಸಂಚು ರೂಪಿಸಿದವರಿಗೆ, ಸಹಾಯ ಮಾಡಿದವರಿಗೆ ಪ್ರತಿಯೊಬ್ಬರಿಗೂ ತಕ್ಕ ಶಿಕ್ಷೆ ಕೊಟ್ಟೇ ಕೊಡುತ್ತೇವೆ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಪಹಲ್ಗಾಮ್ ನಲ್ಲಿ ಬಲಿಯಾದ ಅಮಾಯಕರ ಬಗ್ಗೆ ಈಗಲೂ ಬಹಳ ನೋವಿದೆ. ಘಟನೆ ನೆನೆದರೆ ರಕ್ತ ಕುದಿಯುತ್ತದೆ. ಈ ಸಂತ್ರಸ್ತರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ. ದಾಳಿಕೋರರು ಅತ್ಯುಗ್ರ ಶಿಕ್ಷೆ ಅನುಭವಿಸಲಿದ್ದಾರೆ ಎಂದು ಗುಡುಗಿದ್ದಾರೆ.
ಕಾಶ್ಮೀರ ಈಗಷ್ಟೇ ಸಹಜತೆಗೆ ಮರಳುತ್ತಿತ್ತು. ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದವು, ಪ್ರವಾಸೋದ್ಯಮ ಅರಳುತ್ತಿತ್ತು. ಇದನ್ನು ಶತ್ರುಗಳಿಗೆ ಸಹಿಸಲು ಸಾಧ್ಯವಾಗಲಿಲ್ಲ.ಹಾಗಾಗಿ ದಾಳಿ ಮಾಡಿದ್ದಾರೆ. ಇವರ್ಯಾರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿರುವ ಮೋದಿ, ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸೇಬು ಬೆಳೆಗಾರನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಕುಳಲಿ ಗ್ರಾಮದಲ್ಲಿ ಸೇಬು ಬೆಳೆದು ಸಾಧನೆ ಮಾಡಿರುವ ಶ್ರೀಶೈಲ್ ತೇಲಿ ಎಂಬ ರೈತನ ಬಗ್ಗೆ ಮೋದಿ ಪ್ರಶಂಸೆ ವ್ಯಕ್ತಪಡಿಸಿದರು.
ಮುಧೋಳ ತಾಲೂಕಿನ ಕುಳಲಿ ಗ್ರಾಮದ ರೈತ ತೇಲಿ ಅವರು ಬಯಲು ಸೀಮೆ ಪ್ರದೇಶದಲ್ಲಿ ಸೇಬು ಬೆಳೆದು ಸಾಧನೆ ಮಾಡಿರುವ ರೀತಿ ಮೆಚ್ಚುವಂತದ್ದು. ಸೇಬನ್ನು ಅತಿ ಹೆಚ್ಚಾಗಿ ಬೆಟ್ಟಗುಡ್ಡದಲ್ಲಿ ಬೆಳೆಯುತ್ತಾರೆ. ಆದ್ರೆ, ಶ್ರೀಶೈಲ್ ಅವರು ಸೇಬು ಬೆಳೆಯಲು ಯೋಗ್ಯವಲ್ಲದ ಪ್ರದೇಶದಲ್ಲಿ ಬೆಳೆದು, ಸಾಧಿಸಿ, ಇತರರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಕೊಂಡಾಡಿದ್ದಾರೆ.