ನ್ಯೂಯಾರ್ಕ್: ನ್ಯೂಯಾರ್ಕ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು,ಐದು ಮಂದಿ ಮೃತಪಟ್ಟಿದ್ದಾರೆ.
ಭಾರತೀಯರು ಸೇರಿದಂತೆ 54 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರವಾಸಿ ಬಸ್ ನ್ಯೂಯಾರ್ಕ್ ಸಮೀಪ ಉರುಳಿಬಿದ್ದಿದೆ.
ನಯಾಗರಾ ಜಲಪಾತವನ್ನು ವೀಕ್ಷಿಸಿದ ನಂತರ ಪ್ರವಾಸಿಗರು ನ್ಯೂಯಾರ್ಕ್ ನಗರಕ್ಕೆ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಅಪಘಾತಕ್ಕೀಡಾದ ಬಸ್ಸಿನಲ್ಲಿ ಭಾರತೀಯ, ಚೀನೀ ಮತ್ತು ಫಿಲಿಪಿನೋ ಮೂಲದವರು ಇದ್ದರು ಎಂದು ತಿಳಿದುಬಂದಿದೆ.
ಅಪಘಾತದ ವೇಳೆ ಹಲವರು ಬಸ್ಸಿನಿಂದ ಹೊರಗೆ ಬಿದ್ದಿದ್ದಾರೆ. ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಎಲ್ಲರೂ ವಯಸ್ಕರೆಂದು ಪೊಲೀಸ್ ಅಧಿಕಾರಿ ಮೇಜರ್ ಆಂಡ್ರೆ ರೇ ಅವರು ತಿಳಿಸಿದ್ದಾರೆ.
ಹಲವರನ್ನು ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಪಘಾತದವೇಳೆ ಹೆಚ್ಚಿನ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.