ಬೆಂಗಳೂರು: ಕಳೆದ ಏಳೆಂಟು ವರ್ಷಗಳಿಂದ ಮೆಟ್ರೋ ದರವನ್ನು ಏರಿಸಿಲ್ಲವೆಂಬ ಕಾರಣ ನೀಡಿ ದಿಢೀರನೆ ಶೇ 40 ರಿಂದ 45 ರಷ್ಟು ದರ ಏರಿಕೆ ಮಾಡುತ್ತಿರುವ ಬಿ ಎಂ ಆರ್ ಸಿ ಎಲ್ ಕ್ರಮವನ್ನು ಅಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸಿದೆ.
ದರ ಏರಿಕೆ ವಿರುದ್ಧ ಬೆಂಗಳೂರಿನ ನಾಗರೀಕರ ಜೊತೆಗೂಡಿ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ ಎಂದು ಪಕ್ಷದ ರಾಜ್ಯ ಖಜಾಂಚಿ ಪ್ರಕಾಶ್
ನೆಡುಂಗಡಿ ಮಾಧ್ಯಮ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
ಸಂಚಾರ ಒತ್ತಡ ಸಮಸ್ಯೆಯಲ್ಲಿ ವಿಶ್ವ ಮಟ್ಟದಲ್ಲಿ ಮೂರನೇ ಸ್ಥಾನವನ್ನು ಪಡೆದು , ಬೆಂಗಳೂರಿನ ಆರ್ಥಿಕ ವ್ಯವಸ್ಥೆಗೆ ಧಕ್ಕೆ ಬರುವ ರೀತಿಯ ಕಳಂಕವನ್ನು ಹೊತ್ತಿರುವ ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಮೂಹ ಸಾರಿಗೆ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸಿ ಸಂಚಾರ ಒತ್ತಡವನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳದೆ ಈ ರೀತಿ ದರ ಏರಿಸಿ ಸಮೂಹ ಸಾರಿಗೆ ವ್ಯವಸ್ಥೆಯ ಕತ್ತುಹಿಸುಕುವ ಕೆಲಸಗಳನ್ನು ಮಾಡಬಾರದು ಎಂದು ಹೇಳಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರ ಕೆಎಸ್ ಆರ್ ಟಿ ಸಿ ಮತ್ತು ಬಿಎಂಟಿಸಿ ಬಸ್ ಟಿಕೆಟ್ ಬೆಲೆಗಳನ್ನು ಏರಿಸಿ ಜನತೆಯ ಜೇಬಿಗೆ ಬರೆ ಎಳೆದಿದೆ ಎಂದು ಪ್ರಕಾಶ್
ನೆಡುಂಗಡಿ ಕಿಡಿಕಾರಿದ್ದಾರೆ
ದೆಹಲಿಯಲ್ಲಿ ಎಎಪಿ ಸರ್ಕಾರ ಈಗಾಗಲೇ ವಿದ್ಯಾರ್ಥಿಗಳಿಗೆ ಮೆಟ್ರೋಗಳಲ್ಲೂ ಸಹ ಉಚಿತ ಸಾರಿಗೆ ವ್ಯವಸ್ಥೆ ಮಾಡಿದೆ,ಅದೇ ರೀತಿಯ ಪ್ರೋತ್ಸಾಹಗಳನ್ನು ನೀಡುವುದನ್ನು ಬಿಟ್ಟು ರಾಜ್ಯ ಸರ್ಕಾರ ಈ ರೀತಿ ಏಕಾಏಕಿ ಬೆಲೆ ಏರಿಸುವುದು ಸರಿಯಾದ ಕ್ರಮವಲ್ಲ ಎಂದು ಟೀಕಿಸಿದ್ದಾರೆ.
ಜನಸ್ನೇಹಿ ಸಾರಿಗೆ ವ್ಯವಸ್ಥೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೂಡಲೇ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೂಡಲೇ ದರ ಏರಿಕೆಯ ಪ್ರಸ್ತಾಪವನ್ನು ಕೈಬಿಡಬೇಕು ಇಲ್ಲದಿದ್ದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮೆಟ್ರೋ ಸಂಸ್ಥೆ ಹಾಗೂ ಸರ್ಕಾರದ ವಿರುದ್ಧ ತೀವ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಪ್ರಕಾಶ್ ನೆಡುಂಗಡಿ ಎಚ್ಚರಿಸಿದ್ದಾರೆ.