ಕೌಶಲ್ಯಗಳನ್ನು ಉನ್ನತೀಕರಿಸಿಕೊಳ್ಳಲುನಿರಂತರ ಶ್ರಮ ಅಗತ್ಯ: ಡಾ. ಶಾಲಿನಿ ರಜನೀಶ್

Spread the love

ಮೈಸೂರು: ನಿಮ್ಮಲ್ಲಿರುವ ಕೌಶಲ್ಯಗಳನ್ನು ಉನ್ನತೀಕರಿಸಿ ಕೊಳ್ಳಬೇಕೆಂದರೆ ನಿರಂತರವಾಗಿ ಶ್ರಮಿಸಬೇಕೆಂದು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿ ಹೇಳಿದರು.

ಮೈಸೂರಿನ ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ 7ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

ನಾಯಕತ್ವ ಗುಣ ಬೆಳೆಸಿಕೊಂಡು ನವ ಉದ್ಯಮಿಗಳಾಗಿ ಉದ್ಯೋಗ ಸೃಷ್ಟಿಸಿದರೆ ದೇಶ ಇನ್ನಷ್ಟು ಸದೃಢ ಆರ್ಥಿಕ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಶಿಕ್ಷಣ ವ್ಯವಸ್ಥೆ ಮತ್ತು ಕೈಗಾರಿಕಾ ಅಗತ್ಯತೆಯ ನಡುವೆ ಹೊಂದಾಣಿಕೆ ಕೊರತೆ ಹೆಚ್ಚಾಗಿದ್ದು ವಿವಿಗಳು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಶಾಲಿನಿ ರಜನೀಶ್ ಸಲಹೆ ನೀಡಿದರು.

ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಕುಲಾಧಿಪತಿಗಳು ಆದ ಸುತ್ತೂರು ಮಠಾಧೀಶ್ವರ ಶ್ರೀ ಶಿವರಾತ್ರಿ ದೇಶಕೇಂದ್ರ ಸ್ವಾಮೀಜಿಯವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ 1678 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಸಿಜೆ ಬೆಟ್ಸೂರ್ ಮಠ, ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಸುರೇಶ್, ಕುಲಪತಿ ಪ್ರೊ. ಎ ಎನ್ ಸಂತೋಷ್ ಕುಮಾರ್, ಪರೀಕ್ಷಾ ನಿಯಂತ್ರಣಧಿಕಾರಿ ಪಿ ನಂಜುಂಡಸ್ವಾಮಿ, ಕುಲಸಚಿವ ಎಸ್ ಎ ಧನರಾಜ್ ಉಪಸ್ಥಿತರಿದ್ದರು.