ಮೈಸೂರು: ಬಂಟರ ಸಮುದಾಯ ಎಲ್ಲಾ ಕ್ಷೇತ್ರದಲ್ಲಿ ಪ್ರಗತಿ ಹೊಂದಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ವಿಜಯನಗರ ಬಂಟರ ಸಂಘದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಜಿಟಿಡಿ, ರಾಜ್ಯದ ನಾನಾ ಕಡೆಗಳಲ್ಲಿ ನೆಲೆಸಿರುವ ಬಂಟರು ತಮ್ಮ ಆಚಾರಗಳು,ಬದ್ದತೆ ಮೂಲಕ ಗಮನ ಸೆಳೆಯುತ್ತಾರೆ ಎಂದು ನುಡಿದರು.
ಬಂಟರ ಸಮುದಾಯ ಕಡಿಮೆ ಇರಬಹುದು ಇದಕ್ಕೆ ಯಾರೂ ಬೇಸರ ಪಟ್ಟಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಪ್ರತಿಯೊಂದು ಕ್ಷೇತ್ರದಲ್ಲಿ ಬಂಟ ಸಮುದಾಯ ತನ್ನದೇ ಛಾಪು ಮೂಡಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷಿ ಹಿನ್ನೆಲೆ ಹೊಂದಿರುವ ಬಂಟರ ಸಮುದಾಯ ದೇಶಕ್ಕಾಗಿ ಪ್ರಮಾಣಿಕ ಸೇವೆ ಸಲ್ಲಿಸಿದೆ, ಬ್ಯಾಂಕಿಂಗ್, ಶಿಕ್ಷಣ, ಉದ್ಯಮ ಕ್ಷೇತ್ರಗಳಲ್ಲಿ ಕೀರ್ತಿ, ಶಕ್ತಿಯನ್ನು ಹೊಂದಿದೆ. ಧೈರ್ಯ, ದಕ್ಷತೆ, ದೈವಭಕ್ತರು ಸಮುದಾಯದವರು ಬಂಟರು ಎಂದು ಬಣ್ಣಿಸಿದರು.
ರಮಾನಾಥ ರೈ ಅವರು ಮನ ಬಿಚ್ಚಿ ಮಾತನಾಡಿದ್ದಾರೆ. ನುಡಿದಂತೆ ನಡೆಯುವ ರಾಜಕಾರಣಿ ರಮಾನಾಥ ರೈ. ಸಮುದಾಯಕ್ಕಾಗಿ ಹೆಮ್ಮೆ ತರುವ ಕೆಲಸವನ್ನು ಅವರು ಮಾಡಿದ್ದಾರೆ. ಹೀಗಾಗಿ ಪ್ರಮಾಣಿಕ ಕೆಲಸದಿಂದ ಮುಂದೆ ಶಾಸಕರಾಗಿ ಮಂತ್ರಿಗಳಾಗಬೇಕು ಜಿ.ಟಿ.ದೇವೇಗೌಡ ಆಶಿಸಿದರು.
ಪ್ರಭಾಕರ ಶೆಟ್ಟರು ೧೯೮೩ರಿಂದ ಆತ್ಮೀಯ ಸ್ನೇಹಿತರು. ಪ್ರಕಾಶ ಶೆಟ್ಟಿ ಅವರು ಕೂಡ ಆಪ್ತ ಗೆಳೆಯರು ಶಿಕ್ಷಣ ಕ್ಷೇತ್ರದಲ್ಲಿ ಮೋಹನ್ ಆಳ್ವಾ ಕ್ರಾಂತಿಯನ್ನೆ ಮಾಡಿದ್ದಾರೆ ಎಂದು ಜಿ.ಟಿ.ಡಿ ಹೇಳಿದರು.
ಭಾರತ-ಪಾಕಿಸ್ತಾನದ ಗಡಿಯಲ್ಲಿ ನಡೆಯುತ್ತಿರುವ ಘರ್ಷಣೆಯಲ್ಲಿ ನಮ್ಮೆಲ್ಲರನ್ನು ರಕ್ಷಿಸುತ್ತಿರುವ ನಮ್ಮ ಭಾರತೀಯ ಸೇನೆಯ ಸೈನಿಕರಿಗೆ ಶಕ್ತಿ ತುಂಬುವ ಕೆಲಸವಾಗಬೇಕು. ಜಾತಿ, ಧರ್ಮ, ಪಕ್ಷಗಳನ್ನು ಬಿಟ್ಟು ಸೈನಿಕರ ಒಳಿತಿಗಾಗಿ ಮತ್ತು ಅವರ ಕುಟುಂಬಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು
ಜಿ.ಟಿ.ದೇವೇಗೌಡ ಕರೆ ನೀಡಿದರು.