ಮ್ಯಾನ್ಮಾರ್: ಪ್ರಕೃತಿಯ ರಕ್ಕಸತನದಿಂದ ಸಾವಿರಕ್ಕೂ ಅಧಿಕ ಜನರು ಸಾವಿಗೀಡಾಗಿರುವ ಮ್ಯಾನ್ಮಾರ್‌ನಲ್ಲಿ ಶನಿವಾರ ಮತ್ತೆ ಭೂಮಿ ಕಂಪಿಸಿದ್ದು ಜನ ಭಯದಿಂದ ಹೊರಗೆ ಓಡಿ ಬಂದಿದ್ದಾರೆ.
ಇಂದು ಮಧ್ಯಾಹ್ನ 2.50 ರ ಸುಮಾರಿಗೆ ಭೂಮಿ ಅಲುಗಾಡಿದ್ದು, ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ ಎಂದು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
10 ಕಿಮೀ ಆಳದಲ್ಲಿ ಕಂಪನದ ಅಲೆಗಳು ಎದ್ದಿವೆ ಎಂದು ತನ್ನ ಎಕ್ಸ್ ಖಾತೆಯಲ್ಲಿ ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪೋಸ್ಟ್ ಹಂಚಿಕೊಂಡಿದೆ. ಶುಕ್ರವಾರವಷ್ಟೇ 7.7 ರ ತೀವ್ರತೆಯಲ್ಲಿ ಭೂಮಿ ಕಂಪಿಸಿ ಮುಗಿಲೆತ್ತರದ ಕಟ್ಟಡಗಳು, ಸೇತುವೆಗಳು ನೆಲಸಮವಾಗಿದ್ದವು, ಇದರ ಬೆನ್ನಲ್ಲೇ ಮತ್ತೆ ಭೂಮಿ ಕಂಪಿಸಿದೆ.
ಮ್ಯಾನ್ಮಾರ್‌ನಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1 ಸಾವಿರ ಗಡಿ ದಾಟಿದೆ. 2,376 ಜನರು ಗಾಯಗೊಂಡಿದ್ದಾರೆ. ಕುಸಿದ ಹಲವಾರು ಕಟ್ಟಡಗಳ ಅವಶೇಷಗಳಿಂದ ಶವಗಳನ್ನು ಹೊರತೆಗೆಯಲಾಗುತ್ತಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.