7 ವರ್ಷಗಳ ನಂತರ ಚೀನಾಗೆ ಮೋದಿ ಭೇಟಿ

Spread the love

ಬೀಜಿಂಗ್: ಏಳು ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚೀನಾಕ್ಕೆ ಭೇಟಿ ನೀಡಿದ್ದಾರೆ.

ಶನಿವಾರ ಟಿಯಾಂಜಿನ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರಿಗೆ ಅಲ್ಲಿನ ಆಡಳಿತದಿಂದ ಭವ್ಯ ಸ್ವಾಗತ ನೀಡಲಾಯಿತು. ಪ್ರಧಾನಿ ಮೋದಿ 2018ರಲ್ಲಿ ಚೀನಾ ಪ್ರವಾಸ ಕೈಗೊಂಡಿದ್ದರು.

ವಾಷಿಂಗ್ಟನ್‌ನ ಸುಂಕ ನೀತಿಗಳಿಂದ ಉಂಟಾದ ಭಾರತ-ಅಮೆರಿಕ ಸಂಬಂಧಗಳಲ್ಲಿನ ಹಠಾತ್ ಕುಸಿತದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರ ಚೀನಾದ ಈ ಭೇಟಿ ಹೆಚ್ಚು ಮಹತ್ವ ಪಡೆದಿದೆ.

ಎರಡು ದಿನಗಳ ಜಪಾನ್ ಭೇಟಿ ಮುಗಿಸಿದ ಪ್ರಧಾನಿ ಮೋದಿ ಅವರು, ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ನಡೆಯಲಿರುವ ಶಾಂಘೈ ಸಹಕಾರ ಒಕ್ಕೂಟ ಎಸ್‌ಸಿ ಒ ದ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.ಈ ಹಿನ್ನೆಲೆಯಲ್ಲಿಯೇ ಅವರು ಇಲ್ಲಿಗೆ ಆಗಮಿಸಿದ್ದಾರೆ.

ಅಮೆರಿಕದ ಸುಂಕ ಸಂಘರ್ಷ ಪ್ರಪಂಚದಾದ್ಯಂತದ ಬಹುತೇಕ ಎಲ್ಲಾ ಪ್ರಮುಖ ಆರ್ಥಿಕತೆಗಳ ಮೇಲೆ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಭಾನುವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಪ್ರಧಾನಿ ಮೋದಿಯವರ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಮಾತುಕತೆಯಲ್ಲಿ, ಮೋದಿ ಮತ್ತು ಕ್ಸಿ ಭಾರತ-ಚೀನಾ ಆರ್ಥಿಕ ಸಂಬಂಧಗಳನ್ನು ಪರಿಶೀಲಿಸುವ ನಿರೀಕ್ಷೆಯಿದೆ.