ಒಟ್ಟಾವ: ಕೆನಡಾದಲ್ಲಿ ನಡೆದ ಚುನಾವಣೆಯಲ್ಲಿ ಲಿಬರಲ್ ಪಕ್ಷ ಗೆಲುವು ಸಾಧಿಸಿದೆ, ಮಾರ್ಕ್ ಕಾರ್ನೇ ಪ್ರಧಾನಿಯಾಗಿದ್ದು ಜಗತ್ತಿನ ಹಲವು ರಾಷ್ಟ್ರಗಳ ಮುಖಂಡರು ಅಭಿನಂದನೆ ಸಲ್ಲಿಸಿದ್ದಾರೆ.
ಅಮೆರಿಕ ಹೇರಿದ ಪ್ರತಿಸುಂಕದ ನಂತರ ಉಂಟಾದ ವ್ಯಾಪಾರ ಯುದ್ಧದ ನಂತರ ಲಿಬರಲ್ ಪಕ್ಷವು ಗೆಲುವು ಸಾಧಿಸಿರುವುದು ಸಾಕಷ್ಟು ಸದ್ದು ಮಾಡಿದೆ.
‘ಜಿ7 ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ಮತ್ತು ಜತೆಗೂಡಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ. ನಮ್ಮ ಪ್ರಜಾತಾಂತ್ರಿಕ ಮೌಲ್ಯಗಳನ್ನು ಹಂಚಿಕೊಂಡು ಕೆಲಸ ಮಾಡಲು ಸಿದ್ಧ. ಮುಕ್ತ ವ್ಯಾಪಾರಕ್ಕೆ ಬದ್ಧ. ಯುರೋಪ್‌ನೊಂದಿಗೆ ಕೆನಡಾ ಉತ್ತಮ ಬಾಂಧವ್ಯ ಹೊಂದಿದೆ. ಅದು ಇನ್ನಷ್ಟು ವೃದ್ಧಿಸುತ್ತಿದೆ ಎಂದು ಕಾರ್ನೆ ಹೇಳಿದ್ದಾರೆ.
ಕಾರ್ನೇಗೆ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ದೇಶದ ಜನರ ಹಿತಕ್ಕಾಗಿ ನಮ್ಮ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸುವ ನಿಟ್ಟಿನಲ್ಲಿ ಸಂಬಂಧವನ್ನು ಗಟ್ಟಿಗೊಳಿಸೋಣ. ಆ ನಿಟ್ಟಿನಲ್ಲಿ ಕೆನಡಾದೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಎಂದಿದ್ದಾರೆ.
ಚೀನಾ ಕೂಡಾ ಕಾರ್ನೇಗೆ ಅಭಿನಂದನೆ ಸಲ್ಲಿಸಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಫ್ರಾನ್ಸ್ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರಾನ್ ಸೇರಿದಂತೆ ಹಲವು ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.
ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಬ್ಯಾಂಕ್ ಆಫ್ ಕೆನಡಾದ ಗವರ್ನರ್ ಆಗಿದ್ದ ಕಾರ್ನೇ ಈಗ ಪ್ರಧಾನಿ ಹುದ್ದೆಗೇರಿದ್ದಾರೆ.