ಮೈಸೂರು: ಮುಡಾ ಹಗರಣದಲ್ಲಿ ಹಲವು ಸಾಕ್ಷಿ ಇದ್ದರೂ ಆರೋಪಿಗಳನ್ನು ರಕ್ಷಣೆ ಮಾಡಲು ಸುಳ್ಳು ವರದಿ ಸಲ್ಲಿಸಿದ್ದಾರೆಂದು ಆರೋಪಿಸಿ, ಲೋಕಾಯುಕ್ತದ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತಿ ಆಯೋಗಕ್ಕೆ ಸ್ನೇಹಮಯಿ ಕೃಷ್ಣ ದೂರು ಸಲ್ಲಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ,
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಕುಟುಂಬ ಭಾಗಿಯಾಗಿರುವ ಕುರಿತು ಸಾಕಷ್ಟು ಸಾಕ್ಷಿ ಇದ್ದರೂ, ಆರೋಪಿಗಳನ್ನು ರಕ್ಷಣೆ ಮಾಡಲು ಲೋಕಾಯುಕ್ತ ಪೊಲೀಸರು ಸುಳ್ಳು ವರದಿ ಸಲ್ಲಿಸಿದ್ದರು. ಈ ಬಗ್ಗೆ ಲೋಕಾಯುಕ್ತ ಎಡಿಜಿಪಿ ಮನೀಷ್ ಖರ್ಬೀಕರ್, ಐಜಿಪಿ ಸುಬ್ರಮಣ್ಯೇಶ್ವರ್ ರಾವ್ ಹಾಗೂ ಮೈಸೂರು ಲೋಕಾಯುಕ್ತ ಎಸ್‌ಪಿ ಉದ್ದೇಶ್ ವಿರುದ್ಧ ಕೇಂದ್ರದ ಜಾಗೃತ ಆಯೋಗಕ್ಕೆ ಮೂರು ಪುಟದ ದೂರನ್ನು ಇಮೇಲ್ ಹಾಗೂ ರಿಜಿಸ್ಟರ್ ಅಂಚೆ ಮೂಲಕ ಕಳುಹಿಸಿದ್ದೇನೆ ಎಂದು ತಿಳಿಸಿದರು.
ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದೇನೆ. ವರದಿಯಲ್ಲಿ ಲೋಕಾಯುಕ್ತ ಪೊಲೀಸರು ಯಾವುದೇ ದಾಖಲಾತಿ ಪರಿಶೀಲಿಸದೆ, ಯಾರನ್ನೋ ರಕ್ಷಣೆ ಮಾಡಲು ಸುಳ್ಳು ವರದಿ ತಯಾರಿಸಿ ದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿ 1998ರಲ್ಲಿ ಪ್ರಕರಣದ ಎ4 ಆರೋಪಿ ದೇವರಾಜ್ ಹೆಸರಿನಲ್ಲಿ ಸುಳ್ಳು ಪತ್ರ ಸೃಷ್ಟಿಸಿದ್ದ. ಆ ಪತ್ರಕ್ಕೆ ದೇವರಾಜು ಸಹಿಯನ್ನು ಮಲ್ಲಿಕಾರ್ಜುನ ಸ್ವಾಮಿ ಮಾಡಿ, ಅಪರಾಧವೆಸಗಿದ್ದಾರೆ. ಈ ದಾಖಲೆಗಳು ವರದಿಯಲ್ಲಿ ಇವೆ. ಇಂತಹ ಹಲವು ಸಾಕ್ಷಿಗಳಿದ್ದರೂ, ಲೋಕಾಯುಕ್ತದ ಅಧಿಕಾರಿಗಳು ಸಾಕ್ಷಿಯಿಲ್ಲ ಎಂದು ಸುಳ್ಳು ವರದಿ ನೀಡಿದ್ದಾರೆ. ಯಾರನ್ನೋ ರಕ್ಷಣೆ ಮಾಡಲು ಈ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಕೇಂದ್ರ ಜಾಗೃತಿ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.