ಲಾಹೋರ್: ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಮತ್ತಷ್ಟು ತೀವ್ರಗೊಂಡಿದ್ದು ಪಾಕ್ ನ ಲಾಹೋರ್‌ನಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ಧ್ವಂಸಗೊಳಿಸಲಾಗಿದೆ.
ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಮುಂದುವರೆದ ಭಾಗವಾಗಿ, ಭಾರತೀಯ ಸೇನೆಯು ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ದಾಳಿ ಮಾಡಿದೆ.
ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿದ್ದ ಪಾಕಿಸ್ತಾನ, ಭಾರತದ ಗಡಿ ಭಾಗದ 15 ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಆದರೆ ಪಾಕಿಸ್ತಾನದ ಕ್ಷಿಪಣಿ ದಾಳಿ ವಿಫಲಗೊಳಿಸಿರುವ ಭಾರತೀಯ ಸೇನೆ, ಈ ದಾಳಿಗೆ ಪ್ರತಿಯಾಗಿ ಲಾಹೋರ್‌ನಲ್ಲಿರುವ ಪಾಕಿಸ್ತಾನ ಏರ್ ಡಿಫೆನ್ಸ್ ಸಿಸ್ಟಮ್‌ಗಳನ್ನು ಧ್ವಂಸಗೊಳಿಸಿದೆ.
ಈ ಕುರಿತು ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಭಾರತೀಯ ಸೇನೆಯ ಪತ್ರಿಕಾ ಮಾಹಿತಿ ಹೆಚ್ಚುವರಿ ಮಹಾನಿರ್ದೇಶಕ, “ಪಾಕಿಸ್ತಾನದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಲಾಹೋರ್‌ನ ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತದ ರಕ್ಷಣಾ ಸಚಿವಾಲಯ ಕೂಡ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಪಾಕಿಸ್ತಾನದ ಪ್ರಚೋದನಾತ್ಮಕ ದಾಳಿಗಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು ಎಂದು ತಿಳಿಸಿದೆ.
ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಗೆ ಪ್ರತಿಕ್ರಿಯೆ ಎಂಬಂತೆ, ಉತ್ತರ ಮತ್ತು ಪಶ್ಚಿಮ ಭಾರತದ ಹಲವು ಮಿಲಿಟರಿ ನೆಲೆಗಳ ಮೇಲೆ, ಪಾಕಿಸ್ತಾನವು ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಆದರೆ ಭಾರತದ ಸಮಗ್ರ ಪ್ರತಿರೋಧ ವ್ಯವಸ್ಥೆ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು, ಈ ದಾಳಿಯನ್ನು ಸಂಪೂರ್ಣವಾಗಿ ವಿಫಲಗೊಳಿಸಿವೆ.
ಈ ದಾಳಿಗೆ ಪ್ರತಿಯಾಗಿ ಭಾರತೀಯ ಸಶಸ್ತ್ರ ಪಡೆಗಳು ಮೇ.8 ರಂದು ಬೆಳಗ್ಗೆ ಪಾಕಿಸ್ತಾನದ ಹಲವು ಸ್ಥಳಗಳಲ್ಲಿನ ವಾಯು ರಕ್ಷಣಾ ರಾಡಾರ್‌ಗಳು ಮತ್ತು ವ್ಯವಸ್ಥೆಗಳನ್ನು ಗುರಿಯಾಗಿಸಿ ದಾಳಿ ನಡೆಸಿವೆ. ಇದರಲ್ಲಿ ಲಾಹೋರ್ ಏರ್ ಡಿಫೆನ್ಸ್ ಸಿಸ್ಟಮ್ ಕೂಡ ಸೇರಿದೆ ಎಂದು ಸೇನಾ ಮೂಲಗಳು ಖಚಿತಪಡಿಸಿವೆ.
ಲಾಹೋರ್ ಏರ್ ಡಿಫೆನ್ಸ್ ಸಿಸ್ಟಮ್ ಮೇಲೆ ನಡೆದ ಕ್ಷಿಪಣಿ ದಾಳಿಯನ್ನು ಪಾಕಿಸ್ತಾನ ಕೂಡ ಅಧಿಕೃತಪಡಿಸಿದೆ.
ಲಾಹೋರ್‌ನಲ್ಲಿ ನಡೆದಿರುವ ದಾಳಿಯನ್ನು ಪಾಕಿಸ್ತಾನದ ದಾಳಿಗೆ ಪ್ರತಿಕ್ರಿಯೆ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ನಮ್ಮ ನಗರಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಲಾಹೋರ್ ಸೇರಿದಂತೆ ನೆರೆ ರಾಷ್ಟ್ರದ ಹಲವು ನಗರಗಳ ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ದಾಳಿ ಮಾಡಲಾಗಿದೆ ಎಂದು ಭಾರತೀಯ ಸೇನೆ ಎಡಿಜಿಪಿ-ಪಿಐ ಟ್ವೀಟ್ ಮಾಡಿದೆ.