ಕೊಳ್ಳೇಗಾಲದ ಸರ್ಕಾರಿ ನ್ಯಾಷನಲ್ ಶಾಲೆಯಲ್ಲಿ ಆಂಗ್ಲ ಮಾಧ್ಯಮ ದಾಖಲಾತಿ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದ ಸರ್ಕಾರಿ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯ ಆಂಗ್ಲ ಮಾಧ್ಯಮ ದಾಖಲಾತಿ ಆಂದೋಲನಕ್ಕೆ ತಾ.ಪಂ. ಇ.ಒ ಗುರುಶಾಂತಪ್ಪ ಬೆಳ್ಳುಂಡಗಿ ಚಾಲನೆ ನೀಡಿದರು‌.

ಈ ವೇಳೆ ಗುರುಶಾಂತಪ್ಪ ಬೆಳ್ಳುಂಡಗಿ ಅವರು, ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಪೋಷಕರಿಗೆ ತಿಳಿಸಿಕೊಟ್ಟರು.

ಈ ಶಾಲೆಗೆ ದಾಖಲಾಗುವ ಮಕ್ಕಳಿಗೆ ಒಂದು ರೂಪಾಯಿ ಶುಲ್ಕವಿಲ್ಲ ಹಾಗೂ ಯಾವುದೇ ರೀತಿಯ ಖರ್ಚು ವೆಚ್ಚಗಳಿಲ್ಲ ಆದ್ದರಿಂದ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಮನವಿ ಮಾಡಿದರು.

ಶಾಲೆಯ ಶಿಕ್ಷಕ ಶ್ರೀಧರ್ ಮಾತನಾಡಿ ಪಟ್ಟಣದ ಹೃದಯ ಭಾಗದಲ್ಲಿರುವ ಈ ಶಾಲೆ ಮೂರು ಮಾಧ್ಯಮದಲ್ಲಿ ಶಿಕ್ಷಣ ನೀಡುವ ಶಾಲೆಯಾಗಿದೆ. ಇಲ್ಲಿ ಕನ್ನಡ ಮಾಧ್ಯಮ ಇಂಗ್ಲಿಷ್ ಮಾಧ್ಯಮ ಹಾಗೂ ತಮಿಳು ಮಾಧ್ಯಮ ಹೀಗೆ ಮೂರು ಭಾಷೆಗಳಲ್ಲಿ ಬೋಧನೆ ಮಾಡಲಾಗುತ್ತದೆ. ಇವುಗಳ ಜೊತೆಗೆ ಸಂಸ್ಕೃತವನ್ನೂ ಸಹ ಭೋಧಿಸಲಾಗುತ್ತಿದೆ ಎಂದು ತಿಳಿಸಿದರು.

ಒಂದರಿಂದ ಎಂಟನೇ ತರಗತಿವರೆಗೆ ಕನ್ನಡ ಮಾಧ್ಯಮ, ಒಂದರಿಂದ ಏಳನೇ ತರಗತಿವರೆಗೆ ತಮಿಳು ಮಾಧ್ಯಮ, ಹಾಗೂ ಒಂದರಿಂದ ಐದನೇ ತರಗತಿವರೆಗೆ ಆಂಗ್ಲ ಮಾಧ್ಯಮ ತರಗತಿಗಳನ್ನು ನಡೆಸಲಾಗುತ್ತಿದೆ‌. ಇಲ್ಲಿ ಪ್ರಾರಂಭಿಸಲಾಗಿರುವ ಆಂಗ್ಲ ಮಾಧ್ಯಮ ತರಗತಿಗಳಿಗೆ ಪ್ರಸಕ್ತ ಸಾಲಿಗೆ ಒಂದೇ ದಿನದಲ್ಲಿ 20 ಮಕ್ಕಳು ದಾಖಲಾಗಿದ್ದಾರೆ ಸಂತಸ ವ್ಯಕ್ತಪಡಿಸಿದರು.

ಇಲ್ಲಿ ವ್ಯಾಸಂಗ ಮಾಡುವ ಎಲ್ಲಾ ಮಕ್ಕಳಿಗೂ ಸರ್ಕಾರಿ ಸೌಲಭ್ಯಗಳು ದೊರೆಯಲಿದೆ. ಈ ಶಾಲೆಯಲ್ಲಿ ಒಳ್ಳೆಯ ವಾತಾವರಣವಿದ್ದು ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಸುನೀತಾ ದೈಹಿಕ ಶಿಕ್ಷಕ ವೆಂಕಟ ಕೃಷ್ಣ, ಶಿಕ್ಷಕರಾದ ಪರಶಿವಮೂರ್ತಿ, ಸುಮತಿ, ಬಸವಯ್ಯ ಹಾಜರಿದ್ದರು.