ಭಯೋತ್ಪಾದಕ ನಿರ್ವಾಹಕರ ನಿರ್ಮೂಲನೆಗೆ ನಿರ್ಧರಿಸುವತನಕ ಪಾಕ್ ಜತೆ ಮಾತುಕತೆ ಸಾಧ್ಯವಿಲ್ಲ:ತರೂರ್

Spread the love

ಕೊಲಂಬಿಯಾ: ಪಾಕಿಸ್ತಾನ ತನ್ನ ದೇಶದಲ್ಲಿನ ಭಯೋತ್ಪಾದಕ ನಿರ್ವಾಹಕರನ್ನು ನಿರ್ಮೂಲನೆ ಮಾಡಲು ನಿರ್ಧರಿಸುವತನಕ ಅದರೊಂದಿಗೆ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಸಂಸದ ಶಶಿ ತರೂರ್ ಹೇಳಿದ್ದಾರೆ.

ವಿದೇಶಗಳಿಗೆ ತೆರಳಿರುವ ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅಂತರರಾಷ್ಟ್ರೀಯ ಸಮುದಾಯಕ್ಕೆ ಈ ರೀತಿಯ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ವಿವಾದಗಳನ್ನು ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಬೇಕು ಎಂದು ಭಾರತ ಅರ್ಥಮಾಡಿಕೊಂಡಿದೆ, ಆದರೆ ಹಣೆಯ ಕಡೆಗೆ ಗನ್ ಹಿಡಿದಾಗಲೂ ಭಾರತ ಮಾತುಕತೆಯಲ್ಲಿ ನಂಬಿಕೆ ಇಡುವುದಿಲ್ಲ ಎಂದು ಶಶಿ ತರೂರ್ ಹೇಳಿದ್ದಾರೆ.

ಕೊಲಂಬಿಯಾ ಕೌನ್ಸಿಲ್ ಫಾರ್ ಇಂಟರ್ನ್ಯಾಷನಲ್ ರಿಲೇಶನ್ಸ್‌ನಲ್ಲಿ ಚಿಂತನಾ ನಾಯಕರೊಂದಿಗೆ ನಡೆದ ಚರ್ಚೆಯ ವೇಳೆ ಮಾತನಾಡಿದ ಶಶಿ ತರೂರ್, ಮಹಾತ್ಮಾ ಗಾಂಧಿಯವರು ಸಹ ಶಾಂತಿಯಲ್ಲಿ ನಂಬಿಕೆ ಇಟ್ಟಿದ್ದರು ಆದರೂ, ಅವರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದರು ಎಂದು ಹೇಳಿದ್ದಾರೆ.

ನಮ್ಮ ದೃಷ್ಟಿಕೋನವನ್ನು ನೀವು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ; ಶಾಂತಿಯ ಮಹತ್ವದ ಬಗ್ಗೆ ನಾವು ನಿಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿಲ್ಲ. ನಾವು ಮಹಾತ್ಮಾ ಗಾಂಧಿಯವರ ಭೂಮಿಗೆ ಸೇರಿದವರು, ಅವರು ನಮಗೆ ಶಾಂತಿ, ಅಹಿಂಸೆಯ ಮಹತ್ವವನ್ನು ಕಲಿಸಿದ್ದಾರೆ, ಆದರೆ ಅದೇ ಸಮಯದಲ್ಲಿ, ನಮಗೆ, ಶಾಂತಿಯು ಸ್ವಾಭಿಮಾನದೊಂದಿಗೆ ಇರಬೇಕು ಮತ್ತು ಸ್ವಾತಂತ್ರ್ಯ ಭಯ ಮುಕ್ತವಾಗಿರಬೇಕು ಎಂದೂ ಹೇಳಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಮಹಾತ್ಮಾ ಗಾಂಧಿಯವರು ಶಾಂತಿಯ ವ್ಯಕ್ತಿಯಾಗಿದ್ದರು, ಆದರೆ ಅವರು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟವನ್ನೂ ಮುನ್ನಡೆಸಿದರು ಎಂಬುದನ್ನು ನೆನಪಿಡಿ.

ವಿವಾದಗಳನ್ನು ಸಂಭಾಷಣೆಯ ಮೂಲಕ ಇತ್ಯರ್ಥಪಡಿಸಬೇಕು ಎಂದು ನಾವು ಅರ್ಥಮಾಡಿಕೊಂಡಿದ್ದರೂ, ನಮ್ಮ ಹಣೆಯ ಕಡೆಗೆ ಗುಂಡು ಹಾರಿಸಿದಾಗಲೂ ಮಾತುಕತೆಯಲ್ಲಿ ತೊಡಗಬೇಕು ಎಂಬುದನ್ನು ನಾವು ನಂಬುವುದಿಲ್ಲ ಎಂದು ತರೂರ್ ಸ್ಪಷ್ಟ
ಎಚ್ಚರಿಕೆಯನ್ನೂ ನೀಡಿದ್ದಾರೆ.

ಅಲ್ಲದೆ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ನಂತರ ಪ್ರಾರಂಭವಾದ ಬೆಳವಣಿಗೆಗಳ ಸರಣಿಯನ್ನು ಶಶಿ ತರೂರ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ವಿವರಿಸಿದ್ದಾರೆ.