ಮೈಸೂರು: ಕರ್ನಾಟಕ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತ ವಾಗದಿರಲಿ ಎಂದು ಜೆಡಿಎಸ್ ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ಹೇಳಿದರು.
ನಗರದ ರಾಮಾನುಜ ರಸ್ತೆಯಲ್ಲಿರುವ ಜ್ಯೋತಿರ್ಗಮಯ ಉಚಿತ ವಿದ್ಯಾರ್ಥಿನಿಯರ ನಿಲಯದ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯದರ್ಶನ್ ಸ್ನೇಹ ಬಳಗದ ವತಿಯಿಂದ ಪುಸ್ತಕ ಹಾಗೂ ಹಣ್ಣು ಹಂಪಲು ವಿತರಿಸುವ ಮೂಲಕ 70ನೇ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ ವೇಳೆ ಅವರು ಮಾತನಾಡಿದರು.
ತಾವು ಕನ್ನಡಿಗರೆಂದು ಹೇಳಿಕೊಳ್ಳುವ ಪೋಷಕರು ತಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿಯೇ ಕಲಿಯಬೇಕು. ಇಂಗ್ಲಿಷ್ ಸಂಸ್ಕೃತಿಯನ್ನೇ ಮೈಗೂಡಿಸಿಕೊಳ್ಳಬೇಕು ಎಂಬ ಸಂಕುಚಿತ ಭಾವನೆಗೆ ಒಳಗಾಗದೇ, ಕನ್ನಡ ನಾಡಿನ ಹಿರಿಮೆಯನ್ನು ಅರಿತು ತಮ್ಮ ಮಕ್ಕಳಿಗೂ ತಿಳಿಸಬೇಕು. ಆ ಮೂಲಕ ಅವರಿಗೆ ಕನ್ನಡ ಸಾಹಿತ್ಯದ ಭವ್ಯ ಪರಂಪರೆಯನ್ನು ಪರಿಚಯಿಸಿಕೊಡ ಬೇಕು ಎಂದು ಸಲಹೆ ನೀಡಿದರು.
ನಾಡಿನ ಭವ್ಯ ಇತಿಹಾಸದಿಂದ ಇಂದಿನ ಮಕ್ಕಳು ವಂಚಿತರಾಗಿದ್ದಾರೆ. ಕೇವಲ ಮಾಧ್ಯಮಗಳಲ್ಲಿ ಬರುವ ಚಿತ್ರಗಳು, ಘಟನೆಗಳೇ ನಮ್ಮ ನಾಡಿನ ಪರಂಪರೆ ಎಂದು ಭಾವಿಸಿದ್ದಾರೆ. ಕನ್ನಡ ನಾಡಿನಿಂದಲೇ ಕನ್ನಡ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಕನ್ನಡದ ಹಿರಿಮೆ ಸಂಪೂರ್ಣ ಇಲ್ಲದಂತಾಗುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ ಎಂದು ಪ್ರಕಾಶ್ ಪ್ರಿಯದರ್ಶನ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಜ್ಯೋತಿರ್ಗಮಯ ವಿದ್ಯಾರ್ಥಿನಿಯರ ನಿಲಯದ ಮಾದೇಶ್,ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷರಾದ ಜಿ ರಾಘವೇಂದ್ರ, ಕಾಂಗ್ರೆಸ್ ಯುವ ಮುಖಂಡ ಎಂ. ರವಿಚಂದ್ರ , ಕರುಣಾಮಯಿ ವಿಷ್ಣುವರ್ಧನ್ ಸಂಘದ ಅಧ್ಯಕ್ಷ ಎಸ್ ಎನ್ ರಾಜೇಶ್, ಬಿಜೆಪಿ ಮುಖಂಡ ಪುರುಷೋತ್ತಮ್, ಅಮಿತ್, ಹಿರಿಯ ಕ್ರೀಡಾಪಟು ಮಹದೇವ್,ಛಾಯ,ಗಾಯಕ ಯಶವಂತ್ ಕುಮಾರ್, ಭವ್ಯ,ಸುಬ್ರಮಣ್ಯ,ರಾಜೇಶ್ ಕುಮಾರ್,ಮಹೇಶ, ಸತ್ಯ ಪ್ರಕಾಶ್, ಶ್ರೀಧರ್, ಎಸ್. ಪಿ.ಅಕ್ಷಯ್ ಪ್ರಿಯಾದರ್ಶನ್, ದತ್ತ,ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಹಾಜರಿದ್ದರು.

