ಪತ್ರಕರ್ತರ ಬೇಡಿಕೆಗಳು ಹಂತ,ಹಂತವಾಗಿ ಈಡೇರಲಿವೆ:ಕೆ.ವೆಂಕಟೇಶ್

Spread the love

(ವರದಿ:ಸಿದ್ದರಾಜು ಕೊಳ್ಳೇಗಾಲ)

ಕೊಳ್ಳೇಗಾಲ: ಸಿಎಂ ಸಿದ್ದರಾಮಯ್ಯ ಪತ್ರಕರ್ತರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು ಮುಂದಿನ ದಿನಗಳಲ್ಲಿ ಪ್ರಮುಖ ಬೇಡಿಕೆಗಳನ್ನು ಈಡೇರಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಭರವಸೆ ನೀಡಿದರು.

ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದ ಹೊರ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ, ತಾಲ್ಲೂಕು ಪರ್ತಕರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರವಧಿಯಲ್ಲಿ ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮನವಿ ಈಡೇರಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಪತ್ರಕರ್ತರ ಬೇಡಿಕೆಗಳನ್ನು ಹಂತ,ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯು ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟ ಕಟ್ಟಿಕೊಂಡಿದೆ, ಹಿಂದುಳಿದ ಜಿಲ್ಲೆಯ ಹಣೆಪಟ್ಟಿ ತೆಗೆಯಲು ಮಹದೇಶ್ವರಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಯಿತು. ಸುಮಾರು 3ಸಾವಿರ ಕೋಟಿಗೂ ಹೆಚ್ಚು ಅನುದಾನದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಬಂದು 75 ವರ್ಷಗಳಾದರು ಜಿಲ್ಲೆಯ ಅನೇಕ ಹಾಡಿಗಳಿಗೆ ವಿದ್ಯುತ್, ರಸ್ತೆ ಇರಲಿಲ್ಲ. ಆದರೆ ಈಗ ಅನೇಕ ಹಾಡಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ ಜಿಲ್ಲೆಯ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ ಎಂದು ಹೇಳಿದರು.

ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿ ತೆಗೆಯಲು ಸರ್ಕಾರ ಈಚೆಗೆ ಚಾಮರಾಜನಗರ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸಿ 3 ಸಾವಿರ ಕೋಟಿಗೂ ಹೆಚ್ಚು ಅನುದಾನ ಘೋಷಿಸಿದೆ‌ ಹಾಡಿಗಳು ಕೂಡಾ ಅಭಿವೃದ್ಧಿ ಕಾಣುತ್ತಿವೆ ಎಂದು ಸಚಿವ‌ ವೆಂಕಟೇಶ್ ತಿಳಿಸಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ಪರೀಕ್ಷಾ ಫಲಿತಾಂಶವೇ ಪ್ರತಿಭೆಯ ಮಾನದಂಡವಲ್ಲ; ಜ್ಞಾನ, ಸಾಧನೆ ಹಾಗೂ ಪರಿಶ್ರಮ ನಿಜವಾದ ಸಾಧನೆಯಾಗಿದೆ ಎಂದು ಹೇಳಿದರು.

ಶಿಕ್ಷಣ ವ್ಯವಸ್ಥೆ ದುಬಾರಿಯಾಗಿದ್ದು ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಸದಾ ಯೋಚಿಸಬೇಕಾದ ಪರಿಸ್ಥಿತಿ ಇದೆ, ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಎಲ್ಲ ವಿಚಾರಗಳಲ್ಲೂ ರಾಜಿ ಮಾಡಿಕೊಳ್ಳಬೇಕಾದ ಸಂದಿಗ್ಧತೆಯಲ್ಲಿ ಪೋಷಕರು ಸಿಲುಕಿದ್ದಾರೆ. ಮಕ್ಕಳು ಶೈಕ್ಷಣಿಕವಾಗಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದಾಗ ಪೋಷಕರ ಶ್ರಮಕ್ಕೆ ಬೆಲೆ ಸಿಗುತ್ತದೆ ಎಂದು ತಿಳಿಸಿದರು.

ಪ್ರತಿಭಾ ಪುರಸ್ಕಾರ ಕಣ್ಣುಂಬಿಕೊಳ್ಳುವಾಗ ಆಗುವ ಸಮಾಧಾನ, ಸಂತೋಷ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಮಕ್ಕಳು ಪರಿಶ್ರಮದಿಂದ ಕಲಿತರೆ ಪೋಷಕರ ಮೇಲಿನ ಆರ್ಥಿಕ ಹೊರೆ ತಗ್ಗಲಿದೆ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ದಾಟಿದ ನಂತರ ವಿದ್ಯಾರ್ಥಿಗಳ ಪರಿಶ್ರಮ, ಜ್ಞಾನದ ದಾಹ, ಕಲಿಕೆಯ ಹಸಿವು ಹೆಚ್ಚಾಗಬೇಕು. ಮಕ್ಕಳ ಏಳೆಗೆಗೆ ಬದುಕನ್ನೇ ಮೀಸಲಿರಿಸಿದ ಪೋಷಕರನ್ನು ಖುಷಿಯಾಗಿಡಬೇಕು, ಮಕ್ಕಳು ಪೋಷಕರನ್ನು ವೃದ್ದಾಶ್ರಮಗಳಿಗೆ ದೂಡದೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.

ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಸೌಲಭ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 1 ರಂದು ಚಾಲನೆ ನೀಡಲಿದ್ದಾರೆ ಪತ್ರಕರ್ತರಿಗೆ 5 ಲಕ್ಷದವರೆಗೆ ಆರೋಗ್ಯ ಚಿಕಿತ್ಸಾ ವೆಚ್ಚ ಭರಿಸುವ ಆರೋಗ್ಯ ಸಂಜೀವಿನಿ ಕಾರ್ಡ್ ಸೌಲಭ್ಯಕ್ಕೂ ಅಂದು ಸಿ.ಎಂ ಚಾಲನೆ ನೀಡಲಿದ್ದಾರೆ ಎಂದು ಪ್ರಭಾಕರ್ ಮಾಹಿತಿ ನೀಡಿದರು.

ಜಿಲ್ಲಾ ಪತ್ರಕರ್ತರ ಭವನ ಮತ್ತು ತಾಲೂಕು ಪತ್ರಕರ್ತರ ಭವನದ ನಿರ್ಮಾಣಕ್ಕೂ ಸರ್ಕಾರದ ಜೊತೆ ಮಾತನಾಡಿ ಆಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪತ್ರಕರ್ತರ ವೃತ್ತಿ ಹಾಗೂ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿದೆ. ಉಳಿದ ಬೇಡಿಕೆಗಳು ಶೀಘ್ರ ಈಡೇರಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದಾರೆ ಎಂದು ಕೆ.ವಿ.ಪ್ರಭಾಕರ್ ಹೇಳಿದರು.

ಪ್ರತಿಭೆ ಅಂದರೆ ಕೇವಲ ಪರೀಕ್ಷಾ ಫಲಿತಾಂಶ ಅಲ್ಲ, ಜ್ಞಾನ ಮತ್ತು ನಿರಂತರ ಸಾಧನೆ ಮತ್ತು ನೀವು ಪಟ್ಟ ಪರಿಶ್ರಮ ಮೂರು ಬೆರೆತ ಮಿಶ್ರಣ. ಇಂದು ಪ್ರತಿಭಾ ಪುರಸ್ಕಾರ ಸ್ವೀಕರಿಸುತ್ತಿರುವ ಎಲ್ಲ ಮಕ್ಕಳಿಗೂ ಎಲ್ಲ ಪೋಷಕರ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸತತ ಐದನೇ ವರ್ಷ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಚಿಸಿದೆ. ಇದಕ್ಕಾಗಿ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ಪದಾಧಿಕಾರಿಗಳನ್ನು ನಾನು ಅಭಿನಂದಿಸುತ್ತೇನೆ ಎಂದು ಪ್ರಭಾಕರ್ ಹೇಳಿದರು.

100ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ: ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 100ಕ್ಕೂ ಹೆಚ್ಚು ಮಕ್ಕಳಿಗೆ ನೆನಪಿನ ಕಾಣಿಕೆ, ಬ್ಯಾಗ್, ಪ್ರಮಾಣಪತ್ರ, ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕರಾದ ಎಂ.ಆರ್. ಮಂಜುನಾಥ್, ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಸ್‌ಪಿ ಬಿ.ಟಿ.ಕವಿತಾ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್, ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಭವಾನಿಸಿಂಗ್, ಕಾರ್ಯದರ್ಶಿಗಳಾದ ಮತ್ತಿಕೆರೆ ಜಯರಾಮ, ಸೋಮಶೇಖ‌ರ್ ಕೆರೆಗೋಡು, ನಿಂಗಪ್ಪ ಚಾವಡಿ,ಖಜಾಂಚಿ ವಾಸುದೇವ ಹೊಳ್ಳ, ಜಿಲ್ಲಾ ಸಂಘದ ಅಧ್ಯಕ್ಷ ದೇವರಾಜ ಕಪ್ಪಸೋಗೆ, ಪ್ರಧಾನ ಕಾರ್ಯದರ್ಶಿ ಎಸ್.ಪ್ರಸಾದ್ ಲಕ್ಕೂರು, ಹನೂರು ತಾಲ್ಲೂಕು ಅಧ್ಯಕ್ಷ ಮಹದೇಶ್, ಮಲೆ-ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು, ಬಿಜೆಪಿ ಮುಖಂಡ ನಿಶಾಂತ್ ಮತ್ತಿತರರು ಉಪಸ್ಥಿತರಿದ್ದರು.