ಬೀಜಿಂಗ್: ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ನಮ್ಮ ಸಂಬಂಧಗಳನ್ನು ಮುನ್ನಡೆಸಲು ನಾವು ಬದ್ಧರಾಗಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಸಹಕಾರವು ಉಭಯ ರಾಷ್ಟ್ರಗಳಿಗೆ ಮಾತ್ರವಲ್ಲದೆ 2.8 ಶತಕೋಟಿ ಜನರ ಕಲ್ಯಾಣಕ್ಕೂ ಅತ್ಯಗತ್ಯ ಎಂದು ಒತ್ತಿ ಹೇಳಿದರು.
ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಉನ್ನತ ಮಟ್ಟದ ಮಾತುಕತೆಯ ಸಂದರ್ಭದಲ್ಲಿ ಮೋದಿ ಈ ಸಂದೇಶ ನೀಡಿದರು.
ಭಯೋತ್ಪಾದನೆಯ ವಿಷಯವನ್ನು ದೃಢವಾಗಿ ಪ್ರಸ್ತಾಪಿಸಿದ ಮೋದಿ, ಅದನ್ನು ಜಾಗತಿಕ ಪಿಡುಗು ಎಂದು ಬಣ್ಣಿಸಿ, ಈ ಬೆದರಿಕೆಯನ್ನು ಎದುರಿಸುವಲ್ಲಿ ಚೀನಾ ಒಟ್ಟಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು.
ವಿವಾದಿತ ಗಡಿಯಲ್ಲಿ ಇತ್ತೀಚೆಗೆ ಸೈನ್ಯವನ್ನು ವಾಪಸ್ ಕರೆಸಿಕೊಂಡಿರುವುದು ಶಾಂತಿ ಮತ್ತು ಸ್ಥಿರತೆಯ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
2026 ರಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಆಹ್ವಾನಿಸಿದ್ದಾರೆ.
ಭಾರತ ಮತ್ತು ಚೀನಾ ಪ್ರತಿಸ್ಪರ್ಧಿಗಳಲ್ಲ ಅಭಿವೃದ್ಧಿ ಪಾಲುದಾರರು ಎಂದು ಪ್ರಧಾನಿ ಮೋದಿ ಮತ್ತು ಷಿ ಪುನರುಚ್ಚರಿಸಿದ್ದಾರೆ .
ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವಲ್ಲಿ ನೇರ ವಿಮಾನಗಳ ಪುನರಾರಂಭ ಮತ್ತು ಕೈಲಾಸ ಮಾನಸ ಸರೋವರ ಯಾತ್ರೆ ನಿರ್ಣಾಯಕವಾಗಿದೆ ಎಂದು ಬಣ್ಣಿಸಲಾಗುತ್ತಿದೆ.