ಹುಣಸೂರು: ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರ ತವರು ತಾಲೂಕು ಹುಣಸೂರನ್ನು ಕೇಳುವವರೇ ಇಲ್ಲದಂತಾಗಿದೆ.
ಡಿ ದೇವರಾಜ ಅರಸು ಅವರು ಆಳಿದ ಇಂತಹ ಹೆಸರಾಂತ ಹುಣಸೂರಿನ ರಸ್ತೆಗಳು ಗುಂಡಿಮಯವಾಗಿದೆ. ಇದು ಪಿರಿಯಾಪಟ್ಟಣ ಮಡಿಕೇರಿ ಸೇರಿದಂತೆ ಅನೇಕ ಪಟ್ಟಣ ಗಳಿಗೆ ಮುಖ್ಯರಸ್ತೆಯಾಗಿದೆ.
ಹುಣಸೂರಿನ ಬಸ್ ನಿಲ್ದಾಣದ ಮುಂಭಾಗದಲ್ಲೇ ಮೈಸೂರು ಕಡೆಯಿಂದ ಬಸ್ ಗಳು ತಿರುವು ಪಡೆಯುವ ಜಾಗದಲ್ಲಿ ದೊಡ್ಡ ಗುಂಡಿ ಆಗಿದೆ. ಒಂದು ವೇಳೆ ಯಾಮಾರಿ ಬಸ್ ವಾಲಿದರೆ ಅನಾಹುತ ಖಚಿತ.

ಇದು ಒಂದು ಸ್ಯಾಂಪಲ್ ಅಷ್ಟೇ. ಹುಣಸೂರು ಪಟ್ಟಣದ ಬಜಾರ್ ರಸ್ತೆ, ಕೋಟೆ ರಸ್ತೆ, ಮುನೇಶ್ವರ ರಸ್ತೆ ಕೂಡ ಗುಂಡಿಮಯವಾಗಿದೆ. ಇಲ್ಲಿನ ಸೇತುವೆ ಮೇಲೆ ಕೂಡ ಗುಂಡಿಗಳು ಬಿದ್ದಿದ್ದು ಇತ್ತೀಚಿಗೆ ಗರ್ಭಿಣಿಯೊಬ್ಬರು ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದು ಅಬಾರ್ಷನ್ ಆದ ಉದಾಹರಣೆಯು ಇದೆ.

ಮುನೇಶ್ವರ ರಸ್ತೆಯಲ್ಲೂ ಗುಂಡಿ ಬಿದ್ದಿರುವುದರಿಂದ ಸಾರ್ವಜನಿಕರು ಮತ್ತು ವಾಹನಗಳು ಓಡಾಡಲು ಬಹಳ ತೊಂದರೆಯಾಗುತ್ತಿದೆ. ಮಳೆ ಬಂದರಂತೂ ಕೇಳುವಂತೆಯೇ ಇಲ್ಲ, ಗುಂಡಿಗಳಲ್ಲಿ ನೀರು ತುಂಬಿಕೊಂಡು ಕೆಸರುಗದ್ದೆಯಾಗುತ್ತದೆ ನೀರು ತುಂಬಿದ ಗುಂಡಿಯಲ್ಲಿ ದ್ವಿಚಕ್ರವಾಹನಗಳ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡ ಘಟನೆಯು ನಡೆದಿದೆ.

ಕೋಟೆ ರಸ್ತೆ ಶಿವನ ದೇವಾಲಯದ ಮುಂಭಾಗವು ಇದೇ ಕಥೆ.ಹುಣಸೂರು ನಗರಸಭೆ ಐದಾರು ತಿಂಗಳ ಹಿಂದೆಯಷ್ಟೇ 40 ಲಕ್ಷ ರು ವೆಚ್ಚ ಮಾಡಿ ಬಹಳಷ್ಟು ರಸ್ತೆಗಳನ್ನು ಸರಿಪಡಿಸಿದ್ದರು ಆದರೆ ಪಟ್ಟಣದ ಜನರ ಗ್ರಹಚಾರವೇನೊ ತಿಳಿಯದು. ಸರಿಪಡಿಸಿ ಐದಾರು ತಿಂಗಳು ಕಳೆದಿಲ್ಲ ಒಂದು ವರ್ಷದೊಳಗೆ ಸರಿಪಡಿಸಿದ ಜಾಗದಲ್ಲೇ ಮತ್ತೆ ಮತ್ತೆ ಗುಂಡಿ ಬಿದ್ದಿರುವುದು ದುರ್ದೈವ.

ಇನ್ನು ಶನಿದೇವರ ಗುಡಿ ಬಳಿ ಕೂಡಾ ರಸ್ತೆ ಇದೇ ರೀತಿ ಆಗಿದೆ. ಇದಲ್ಲದೆ ಇತ್ತೀಚೆಗೆ ಯುಜಿಡಿ ಕೆಲಸಕ್ಕೆ ಡಕ್ಕುಗಳನ್ನು ಹಾಕಲಾಗಿತ್ತು ಆದರೆ ಮೂರು ತಿಂಗಳಿಗೆ ಅವು ಕಿತ್ತು ಹೋಗಿವೆ.

ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡಿಸಿ ಹೊಸದಾಗಿ ಬಿಲ್ ಹಾಕಿಸಿ ಗೋಲ್ಮಾಲ್ ಮಾಡಲಾಗುತ್ತಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕಿನ ಅಧ್ಯಕ್ಷ ಚೆಲುವರಾಜು ಮಾತ್ತಿತರರು ಗಂಭೀರ ಆರೋಪ ಮಾಡಿದ್ದಾರೆ.
ಹುಣಸೂರಿನ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ಇದೇ ಗುಂಡಿ ಬಿದ್ದ ರಸ್ತೆಯಲ್ಲೇ ಸಂಚರಿಸುತ್ತಾರೆ ಆದರೆ ಇವರುಗಳ ಕಣ್ಣಿಗೆ ಗುಂಡಿಗಳು ಕಾಣುತ್ತವೋ ಇಲ್ಲವೋ ಎಂಬುದು ಅನುಮಾನವಾಗಿದೆ.
ಹುಣಸೂರು ಶಾಸಕರು, ಹುಣಸೂರನ್ನು ಪ್ರತಿನಿಧಿಸುವ ಸಚಿವರು, ಮುಖ್ಯಮಂತ್ರಿಗಳು ಯಾರಿಗೂ ಈ ನಗರ ಬೇಡವಾಗಿದೆ. ಇದೊಂದು ಅನಾಥ ನಗರವಾಗಿಬಿಟ್ಟಿದೆ ಎಂದು ಚೆಲುವರಾಜು ವಿಷಾದಿಸಿದ್ದಾರೆ.
ಮುಂದೆ ಏನಾದರೂ ಅನಾಹುತಗಳಾದರೆ ಇದಕ್ಕೆ ಹೊಣೆ ಯಾರು? ಸಂಬಂಧ ಪಟ್ಟವರು ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.