ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ 3270 ಮಂದಿಗೆ ನಿವೇಶನ:ಹರೀಶ್ ಗೌಡ ಭರವಸೆ

Spread the love

ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 3270 ಮಂದಿ ಅರ್ಜಿದಾರರಿಗೆ ಇನ್ನು ಒಂದು ವರ್ಷದೊಳಗೆ ನಿವೇಶನ ಅಥವಾ ಗುಂಪು ಮನೆ ಹಂಚಿಕೆಗೆ ಕ್ರಮ ವಹಿಸುವುದಾಗಿ ಶಾಸಕ ಕೆ. ಹರೀಶ್ ಗೌಡ ಭರವಸೆ ನೀಡಿದರು.

ಮೈಸೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೊದಲ ಆಶ್ರಯ ಸಮಿತಿ ಸಭೆ ನಡೆಸಿ ಅವರು ಮಾತನಾಡಿದರು.

ಸಭೆಯಲ್ಲಿ ಕ್ಷೇತ್ರದ ಜನರಿಗೆ ಎನೆಲ್ಲಾ ಆಗಬೇಕು, ಎನು ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ. ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಲು ಸಿದ್ದರಿದ್ದೇವೆ. ಅವರು ಪ್ರಾಮಾಣಿಕತೆಯಿಂದ ಸೂರು ಒದಗಿಸಿ, ಅರ್ಜಿ ಹಾಕಿರುವ ಎಲ್ಲರಿಗೂ ಸೂರು ಸಿಗುವಂತೆ ಮಾಡಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.

3270 ಮಂದಿ 2002ರಿಂದಲೂ ಹಣ ಕಟ್ಟಿದ್ದಾರೆ. 22 ವರ್ಷದಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾರಿಗೂ ಸೂರು ಅಥವಾ ನಿವೇಶನ ಕೊಟ್ಟಿಲ್ಲ. ಇದಕ್ಕಾಗಿ ಹಂಚ್ಯಾ ದಲ್ಲಿ 24.9 ಎಕರೆ, ಹೆಬ್ಬಾಳ ಗ್ರಾಮದಲ್ಲಿ 8.28, ದಟ್ಟಗಳ್ಳಿಯ ಐಯ್ಯಜ್ಜನಹುಂಡಿ 15 ಎಕರೆ ಜಾಗ ಗುರುತಿಸಲಾಗಿದೆ.

ಅಲ್ಕದೆ ಶ್ರೀರಾಪುಂರ ವ್ಯಾಪ್ತಿಯಲ್ಲಿ 36.24 ಎಕರೆ, ಶ್ಯಾದನಹಳ್ಳಿ 10 ಎಕರೆ ಮತ್ತು ಬಂಡಿಪಾಳ್ಯದಲ್ಲಿ 6.24 ಎಕರೆ ಜಾಗ ಹುಡುಕಾಟವೂ ಪ್ರಕ್ರಿಯೆಯಲ್ಲಿದೆ. ಈ ವರ್ಷದೊಳಗೆ ಅರ್ಜಿ ಸಲ್ಲಿಸಿರುವ ಅಷ್ಟು ಮಂದಿಗೂ ಮೊದಲ ಆದ್ಯತೆ ಮೇರೆಗೆ ನಿವೇಶನ ಅಥವಾ ಗುಂಪು ಮನೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಅರ್ಜಿದಾರರು ಮೈಸೂರು ಮಹಾನಗರ ಪಾಲಿಕೆಯ ಆಶ್ರಯ ಶಾಖೆಯ ಓ.ಎ. ಉಮೇಶ್ ಅವರ ಬಳಿ ತಾವು ಅರ್ಜಿ ಸಲ್ಲಿಸಿರುವ ಹಾಗೂ ಹಣ ಕಟ್ಟಿರುವ ಮಾಹಿತಿಯನ್ನು ತಂದು ನೀಡಬೇಕಾಗಿ ಇದೇ ವೇಳೆ ಹರೀಶ್ ಗೌಡ ಮನವಿ ಮಾಡಿದರು. ಚೆಲುವಾಂಬ ಪಾರ್ಕ್ ಪಕ್ಕದ ಪಾಲಿಕೆಯ ಕಚೇರಿಯಲ್ಲಿ ಅರ್ಜಿದಾರರು ಮಾಹಿತಿ ಪಡೆದುಕೊಳ್ಳುವಂತೆ ಕೋರಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ ನಿರ್ಮಿಸಿರುವ ನರ್ಮ್ ಮನೆಗಳು ಹಾಗೂ ನಬಾರ್ಡ್ ಯೋಜನೆಯ ಮನೆಗಳಲ್ಲಿ ಒಟ್ಟು 400 ಅಪಾರ್ಟ್ಮೆಂಟ್ ಗಳ ರಿಪೇರಿ ಕೆಲಸವು ಇದೇ ವೇಳೆ ಮಾಡಲಾಗುತ್ತಿದೆ. ಹೆಬ್ಬಾಳ್ ನಲ್ಲಿರುವ 8 ಎಕರೆ 28 ಕುಂಟೆ ಜಾಗದಲ್ಲಿ ಗುಂಪು ಮನೆ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಒಂದು ತಿಂಗಳಲ್ಲಿ ಈ ಎಲ್ಲಾ ಪ್ರಕ್ರಿಯೆ ಅನುಮೋದನೆಯಾಗಿ ಆರಂಭಗೊಳ್ಳಲಿವೆ ಎಂದು ಹೇಳಿದರು.

ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಆಫರ್ ಕೊಟ್ಟಿದೆಯಂತಲ್ಲ ಎಂಬ ಮಾದ್ಯಮದವರ ಪ್ರಶ್ನೆಗೆ ನನಗೆ ಯಾರು ಆಫರ್ ಕೊಟ್ಟಿಲ್ಲ.ಕೊಟ್ಟರೆ ಬಹಿರಂಗ ಪಡಿಸುತ್ತೇನೆ. ಬಿಜೆಪಿಯಲ್ಲಿ ನಿಜಕ್ಕೂ ಅಂತಹ ಮನಸ್ಥಿತಿಯಿದೆ. ಆಡಳಿತ ಪಕ್ಷವನ್ನು ಕಾನೂನು ಬಾಹಿರವಾಗಿ ಕೆಡವಿ ಅಧಿಕಾರಕ್ಕೇರುವ ಕನಸು ಕಾಣುತ್ತಿದ್ದಾರೆ. ಬಿಜೆಪಿ ತಲೆ ಕೆಳಗೆ ಮಾಡಿಕೊಂಡರೂ ನಮ್ಮನ್ನು ಎನೂ ಮಾಡಲಾಗದು ಎಂದು ಶಾಸಕ ತಿಳಿಸಿದರು.

ಯಾವುದೇ ಶಾಸಕರು ಅನುದಾನಕ್ಕೆ ಮನವಿ ಮಾಡಿಲ್ಲ. ಸರ್ಕಾರ ಕ್ಷೇತ್ರವಾರು ನೀಡಬೇಕಾದ ಅನುದಾನ ನೀಡಿದೆ.ಆಗಸ್ಟ್ ವೇಳೆಗೆ ಮತ್ತಷ್ಟು ಅಭಿವೃದ್ಧಿ ಹಣ ನೀಡಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಆಶ್ರಯ ಸಮಿತಿ ಸದಸ್ಯರಾದ ಅನಂತ ನಾರಾಯಣ, ಎಸ್.ಮಂಜುನಾಥ್, ಮಹಮ್ಮದ್ ಇಬ್ರಾಹಿಂ, ರಾಣಿ ಸಿದ್ದಪ್ಪಾಜಿ, ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್, ಕಂದಾಯ ವಿಭಾಗದ ಉಪಾಯುಕ್ತ ದಾಸೇಗೌಡ, ಎಸ್ ಇ ಸಿಂಧು, ಸಹಾಯಕ ಆಯುಕ್ತ ಸತ್ಯಮೂರ್ತಿ ಹಾಗೂ ವಿವಿದ ವಲಯ ಕಚೇರಿ ಅಧಿಕಾರಿಗಳು ಪಾಲ್ಗೊಂಡಿದ್ದರು.