ಅಕ್ಕಿ ವಿತರಿಸದ ರಾಜ್ಯ ಸರ್ಕಾರ: ಹೇಮಾ ನಂದೀಶ್ ಆಕ್ರೋಶ

Spread the love

ಮೈಸೂರು: ರಾಜ್ಯಕ್ಕೆ ಕೇಂದ್ರ ಸರ್ಕಾರ ನಿರಂತರವಾಗಿ ಅಕ್ಕಿ ಪೂರೈಸುತ್ತಿದ್ದರೂ ಅದನ್ನು ಜನರಿಗೆ ವಿತರಿಸದೆ ಅನ್ಯಾಯ ಮಾಡಲಾಗಿದೆ ಎಂದು ಬಿಜೆಪಿ ಉಪಾಧ್ಯಕ್ಷೆ ಹೇಮಾ ನಂದೀಶ್ ಆರೋಪಿಸಿದ್ದಾರೆ.

ಚುನಾವಣೆಗೆ ಮುನ್ನ ರಾಜ್ಯದ ಜನರಿಗೆ ಉಚಿತ ಗ್ಯಾರಂಟಿ ನೀಡುವುದಾಗಿ ನಂಬಿಸಿ, ಈಗ ಜನರ ಹಿತವನ್ನೇ ರಾಜ್ಯ ಸರ್ಕಾರ ಮರೆತಿದೆ. ರಾಜ್ಯದ ಅಭಿವೃದ್ಧಿಗೆ ಒಂದು ಬಿಡಿಗಾಸೂ ಬಿಡುಗಡೆ ಮಾಡಿಲ್ಲ, ಸರ್ಕಾರಿ ನೌಕರರಿಗೆ ಸಂಬಳವಿಲ್ಲ, ಗ್ರಾಮ ಮಟ್ಟದ ಅಧಿಕಾರಿಗಳಾದ ಪಿಡಿಒ, ವಿ.ಎ ಗಳಿಗೆ ವೇತನ ನೀಡಿಲ್ಲ,ಹಾಗಾಗಿ ಅವರುಗಳು ಸರ್ಕಾರದ ವಿರುದ್ಧ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಮಾ ನಂದೀಶ್ ಹೇಳಿದ್ದಾರೆ.

ಆಶಾ ಕಾರ್ಯಕರ್ತೆಯರಿಗೆ ಮಾಸಿಕ ವೇತನವಿಲ್ಲ, ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರಿಗೆ ಸಿಗುತ್ತಿಲ್ಲ, ಎಲ್ಲಾ ಗ್ಯಾರಂಟಿ ಯೋಜನೆಗಳು ಮರೀಚಿಕೆಯಾಗಿವೆ, ಆಡಳಿತ ಯಂತ್ರ ಸಂಪೂರ್ಣ ಸ್ಥಗಿತವಾಗಿದೆ ಎಂದು ಟೀಕಿಸಿದ್ದಾರೆ.

ಲಕ್ಷಾಂತರ ಜನರ ಪಡಿತರ ಚೀಟಿ ರದ್ದುಗೊಳಿಸಿ ಸರ್ಕಾರ ಬಡ ಜನರ ಒಂದು ಹೊತ್ತಿನ ಊಟಕ್ಕೂ ಕಲ್ಲು ಹಾಕಿದೆ ಎಂದು ಹೇಮಾ ಆರೋಪಿಸಿದ್ದಾರೆ.

ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂಪಡೆದು ತಾನೇ ಗಲಭೆಕೋರರಿಗೆ ಪರವಾನಗಿ ನೀಡುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.