ಮೈಸೂರು: ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ) ಮತ್ತು ಬಣ್ಣ ಲೇಪಿತ ಗೌರಿ,ಗಣೇಶ ವಿಗ್ರಹಗಳನ್ನು ತಯಾರಿಸುವಂತಿಲ್ಲ ಹಾಗೂ
ಮಾರಾಟ ಮಾಡುವಂತಿಲ್ಲ.
ಅಲ್ಲದೆ ಯಾವುದೇ ಜಲ ಮೂಲಗಳಲ್ಲೂ ಗೌರು,ಗಣೇಶ ಮೂರ್ತಿಗಳನ್ನು ವಿಸರ್ಜಿಸುವುದನ್ನು ಕೂಡಾ ನಿಷೇಧಿಸಲಾಗಿದೆ
ಒಂದು ವೇಳೆ ಈ ಆದೇಶವನ್ನು ಉಲ್ಲಂಘಸಿದ್ದಲ್ಲಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜು ಎಚ್ಚರಿಕೆ ನೀಡಿದ್ದಾರೆ.
ಗೌರಿ -ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ
ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು,ನಿಷೇಧಿತ ಪಿ.ಒ.ಪಿ. ಗಣೇಶ ಮೂರ್ತಿಗಳಿರುವ ಬಗ್ಗೆ ಮಾಹಿತಿ, ದೂರು ಸ್ವೀಕೃತವಾದರೆ, ಪ್ರತಿದಿನ ಅಧಿಕಾರಿಗಳು ಗಸ್ತು ತಿರುಗಿ ಕ್ರಮಕೈಗೊಳ್ಳಬೇಕು. ಪಿ.ಒ.ಪಿ. ವಿಗ್ರಹಗಳೆಂದು ಖಚಿತಪಟ್ಟರೆ ನಿಯಮದ ಪ್ರಕಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದಂತೆ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ಸಾರ್ವಜನಿಕರಿಗೆ ದೂರದರ್ಶನ ಜಾಹಿರಾತು ಮತ್ತು ಜನ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಬೇಕು.
ವಿಗ್ರಹ ತಯಾರಕರು, ಮಾರಾಟಗಾರರು ಮತ್ತು ಗಣಪತಿ ಕೂರಿಸುವ ಸಂಘ ಸಂಸ್ಥೆಗಳಿಗೆ ಅನುಮತಿ ನೀಡಲು ಪೋಲಿಸ್ ಇಲಾಖೆ, ಮೈಸೂರು ಮಹಾನಗರ ಪಾಲಿಕೆ, ಜಿಲ್ಲಾ ನಗರಾಭಿವೃದ್ಧಿ ಕೋಶ ಮತ್ತು ಅಗ್ನಿಶಾಮಕದಳ ಇಲಾಖೆಗಳನೊಳಗೊಂಡ ಏಕಗವಾಕ್ಷಿ ಸಮಿತಿಯನ್ನು ರಚಿಸಲು ಸೂಚಿಸಿದರು.
ವಿಗ್ರಹ ತಯಾರಕರು ಮತ್ತು ಮಾರಾಟಗಾರರು ಕಡ್ಡಾಯವಾಗಿ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿಗಳಿಗೆ ಪೂರಕ ದಾಖಲೆಗಳನ್ನು ಸಲ್ಲಿಸಿದ್ದಲ್ಲಿ ಷರತ್ತುಬದ್ಧ ಪ್ರಮಾಣ ಪತ್ರ ನೀಡಬೇಕು.
ತಾಲ್ಲೂಕು ಮಟ್ಟದ ಕಾರ್ಯಪಡೆಯಲ್ಲಿ ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು, ಮುಖ್ಯಾಧಿಕಾರಿಗಳು, ಸರ್ಕಲ್ ಇನ್ಸ್‌ಪೆಕ್ಟರ್ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿದ್ದು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಪಿ.ಒ.ಪಿ. ವಿಗ್ರಹಗಳನ್ನು ಪರಿಶೀಲಿಸಿ ಮುಟ್ಟುಗೋಲು ಹಾಕಿಕೊಳ್ಳ ಬೇಕು ಎಂದು ಹೇಳಿದರು.
ಗೌರಿ ಗಣೇಶ ಮೂರ್ತಿಗಳನ್ನು ಮೈಸೂರು ಮಹಾನಗರ ಪಾಲಿಕೆ , ನಗರಸಭೆ, ಪುರಸಭೆ ವತಿಯಿಂದ ನಿಗಧಿಪಡಿಸಿರುವ ಸ್ಥಳಗಳಲ್ಲಿ ವಿಸರ್ಜಿಸುವುದು ಹಾಗೂ ಈ ಸಂಬಂಧ ಜಾಹಿರಾತು ಹೊರಡಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆವರೆಗೆ ಧ್ವನಿವರ್ಧಕಗಳ ಬಳಕೆ ನಿಷೇಧಿಬೇಕು ಎಂದು ಶಿವರಾಜು ತಿಳಿಸಿದರು.
ಗಣೇಶ ಹಬ್ಬದ ಆಚರಣೆಯ ಸಮಯದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶುಭಾ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.