ಮೈಸೂರು,ಮೇ.2: ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಫೆಲೋಗಳು ಹಾಗೂ ಪ್ರಶಸ್ತಿ ಪುರಸ್ಕೃತರ ಸಂಗೀತ ಮತ್ತು ನೃತ್ಯ ಉತ್ಸವ ಅಮೋಘವಾಗಿತ್ತು.
ಮೈಸೂರಿನಲ್ಲಿ ಕೇಂದ್ರ ಸಂಗೀತ ಮತ್ತು ನಾಟಕ ಆಕಾಡೆಮಿಯ ಪ್ರಶಸ್ತಿ ಪುರಸ್ಕೃತರ ಸಂಗೀತ ಮತ್ತು ನೃತ್ಯ ಉತ್ಸವದ ನಾಲ್ಕನೇ ದಿನವಾದ ಇಂದಿನ ಕಾರ್ಯಕ್ರಮವು ಸಂಪ್ರದಾಯ ಬದ್ಧವಾಗಿ ಉದ್ಘಾಟನೆಗೊಂಡಿತು.

ನಂತರ ಅಂತರಾಷ್ಟ್ರೀಯ ಮಟ್ಟದ ಸುಗಮ ಸಂಗೀತ ಗಾಯಕರಾದ ಸೀತಾರಾಮ್ ಸಿಂಗ್ ಪಾಟ್ನಾ ಅವರ ತಂಡದವರು ಲಘು ಸಂಗೀತವನ್ನು ಹಾಡುವುದರ ಮೂಲಕ ಸಂಗೀತ ಕಛೇರಿಗೆ ಚಾಲನೆ ನೀಡಿದರು. ಜೊತೆಗೆ ಭಜನೆಗಳನ್ನು ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು.

ಆಂಧ್ರಪ್ರದೇಶದ ಸುಪ್ರಸಿದ್ಧ ಗಾಯಕರಾದ ಎಲ್ ವಿ ಗಂಗಾಧರ ಶಾಸ್ತ್ರಿಯವರು ಪ್ರಮುಖ ಸಂಗೀತ ಪರಂಪರೆ ಮತ್ತು ಸುಗಮ ಸಂಗೀತ ಪರಂಪರೆಯ ಗೀತೆಗಳನ್ನು ಪ್ರಸ್ತುತಪಡಿಸಿ ಜನರ ಮೆಚ್ಚುಗೆಗೆ ಪಾತ್ರರಾದರು.

ಇದರ ಜೊತೆಗೆ ಭಜೀನ್ ಬೋರ್ಬಯನ್ ಅವರು ಸತ್ತರಿಯ ನೃತ್ಯ ಮಾಡುವುದರ ಮೂಲಕ ತಮ್ಮ ಪರಂಪರೆ ಕಲೆಗಳನ್ನು ಪರಿಚಯಿಸಿದರು,ಈ ನೃತ್ಯವು ಪ್ರೇಕ್ಷಕರನ್ನು ಮೋಹಗೊಳಿಸಿತು.

ಸಂಜೆ ನಡೆದ ಕಾರ್ಯಕ್ರಮವು ಮಂದ ಸುಧಾರಾಣಿ, ವಿಶಾಖಪಟ್ಟಣಂ (ವೇನುಕೊಂಡ ಸುಬ್ರಹ್ಮಣ್ಯಂ ಅವರೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ, ಗಾಯನ ತವಿಲ್ ಮತ್ತು ನೈವೆಲಿ ಆರ್ ನಾರಾಯಣನ್ ಚೆನ್ನೈ -ಮೃದಂಗ), ವಿನೋದ್ ಕುಮಾರ್ ದ್ವಿವೇದಿ, ಕಾನ್ನೂರ್ (ಹಿಂದುಸ್ತಾನಿ ಸಂಗೀತ ಗಾಯನ – ದ್ರುಪದ್) ಲತಾಸನದೇವಿ ಮಣಿಪುರಿ ನೃತ್ಯ, ಸ್ನೇಹಪ್ರವ ಸಮಂತ್ ರೇ (ಒಡಿಸ್ಸಿ ನೃತ್ಯ) ಮಾರ್ಗಿ ವಿಜಯಕುಮಾರ್ (ಕಥಕಳಿ ನೃತ್ಯ), ನಳಿನಿ ಮತ್ತು ಕಮಲಿನಿ ಕಥಕ್ ನೃತ್ಯ ಕಲಾ ಪ್ರಕಾರಗಳನ್ನು ಅದ್ಭುತವಾಗಿ ಪ್ರಸ್ತುತ ಪಡಿಸಿ ಉತ್ಸವಕ್ಕೆ ಮೆರಗು ತಂದರು.

ನಾಲ್ಕನೇ ದಿನದ ಉತ್ಸವವು ಶಾಸ್ತ್ರೀಯ ಸಂಪ್ರದಾಯಗಳು ಮತ್ತು ಅಪರೂಪದ ಪ್ರಾದೇಶಿಕ ಕಲಾ ಪ್ರಕಾರಗಳನ್ನು ಗೌರವಿಸುವ ಮೂಲಕ ಪ್ರೇಕ್ಷಕರಿಗೆ ಸೌಂದರ್ಯ ಮತ್ತು ಭಾವನಾತ್ಮಕ ವಾತಾವರಣವನ್ನು ಸೃಷ್ಟಿಸಿತು.
