ವಾಷಿಂಗ್ಟನ್ : ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಸಂಘರ್ಷವನ್ನು ನಾನೇ ಇತ್ಯರ್ಥಪಡಿಸಿದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
ನಾವು ಪಾಕಿಸ್ತಾನ ಮತ್ತು ಭಾರತದೊಂದಿಗೆ ಏನು ಮಾಡಿದ್ದೇವೆ ಎಂಬುದನ್ನು ನೀವು ನೋಡಿದ್ದೀರಿ. ನಾನು ಅದನ್ನು ವ್ಯಾಪಾರದ ಮೂಲಕ ಇತ್ಯರ್ಥಪಡಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದು ಟ್ರಂಪ್ ಮತ್ತೆ ಹೇಳಿದ್ದಾರೆ.
ತಮ್ಮ ಓವಲ್ ಕಚೇರಿಯಲ್ಲಿ ಬುಧವಾರ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಎರಡರೊಂದಿಗೂ ಅಮೆರಿಕ ದೊಡ್ಡ ಪ್ರಮಾಣದಲ್ಲಿ ವ್ಯವಹಾರ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಈ ಸಂಘರ್ಷದಲ್ಲಿ ಯಾರಾದರೂ ಕೊನೆಯದಾಗಿ ಗುಂಡು ಹಾರಿಸಬೇಕಾಗಿತ್ತು. ಆದರೆ ಗುಂಡಿನ ದಾಳಿ ಇನ್ನಷ್ಟು ಕೆಟ್ಟದಾಗುತ್ತಾ, ದೊಡ್ಡದಾಗುತ್ತಾ, ದೇಶಗಳ ಮಧ್ಯ ಆಳವಾದ ಕಂದಕಕ್ಕೆ ಕಾರಣವಾಗುತ್ತಿತ್ತು. ಹೀಗಾಗಿ ನಾವು ಅವರೊಂದಿಗೆ ಮಾತನಾಡಿದೆವು. ಆದರೆ ನಾನೇ ಇದನ್ನು ಸರಿ ಮಾಡಿದೆ ಎಂದು ಹೇಳಲು ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.
ಪಾಕಿಸ್ತಾನವು ಕೆಲವು ಅತ್ಯುತ್ತಮ ಜನರನ್ನು ಮತ್ತು ಕೆಲವು ಒಳ್ಳೆಯ ನಾಯಕರನ್ನು ಹೊಂದಿದೆ. ಇನ್ನು ಭಾರತ ಹಾಗೂ ನನ್ನ ಸ್ನೇಹಿತ ಮೋದಿ ಎಂದು ಟ್ರಂಪ್ ಹೇಳಿದರು.
ಈ ವೇಳೆ ದಕ್ಷಿಣ ಆಫ್ರಿಕಾದ ಅಧ್ಯಕ್ಷರು ಮೋದಿ, ಪರಸ್ಪರ ಸ್ನೇಹಿತ ಎಂದು ಉತ್ತರಿಸಿದರು. ಈ ವೇಳೆ ಮತ್ತೆ ಮಾತು ಮುಂದುವರಿಸಿದ ಟ್ರಂಪ್, ಅವರು ಒಬ್ಬ ಒಳ್ಳೆಯ ವ್ಯಕ್ತಿ ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಇತ್ಯರ್ಥಗೊಳಿಸಲು ನಾನು ಸಹಾಯ ಮಾಡಿದೆ ಎಂದು ಪದೇ ಪದೇ ಟ್ರಂಪ್ ಹೇಳಿಕೊಳ್ಳುತ್ತಿದ್ದು, ಅವರ ಈ ಹೇಳಿಕೆ ಭಾರತದಲ್ಲಿ ಪ್ರತಿಪಕ್ಷಗಳು, ಮೋದಿ ಸರ್ಕಾರ ವಿರುದ್ಧ ಮುಗಿ ಬೀಳುವಂತೆ ಮಾಡಿದೆ.