ವಾಶಿಂಗ್ಟನ್: ಡೊನಾಲ್ಡ್ ಟ್ರಂಪ್ ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ವೆಸ್ಟ್ ಲಾನ್‌ನಲ್ಲಿರುವ ಬೃಹತ್ ವೇದಿಕೆಯಲ್ಲಿ ನೂತನ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಜೆಡಿ ವ್ಯಾನ್ಸ್ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಚುನಾವಣಾ ಪ್ರಚಾರದ ವೇಳೆ ಡೊನಾಲ್ಡ್ ಟ್ರಂಪ್ ಗುಂಡಿನ ದಾಳಿಯಿಂದ ಅದೃಷ್ಟವಶಾತ್ ಪಾರಾಗಿದ್ದರು. ಇದು ಅಮೆರಿಕ ರಾಜಕೀಯದ ಚಿತ್ರಣವನ್ನೇ ಬದಲಾಯಿಸಿತು. ಕಮಲಾ ಹ್ಯಾರಿಸ್‌ರನ್ನು ಮಣಿಸಿದ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷಾರಿ ಆಯ್ಕೆಯಾದರು.
ಯುಎಸ್‌ನಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ಗಡೀಪಾರು ಮಾಡುವುದಾಗಿ ಟ್ರಂಪ್ ಪ್ರತಿಜ್ಞೆ ಮಾಡಿದ್ದಾರೆ.
ರಾಜಕೀಯ ಶತ್ರುಗಳ ವಿರುದ್ಧ ಪ್ರತಿಕಾರ ತೀರಿಸುವ ಮತ್ತು ಜಗತ್ತಿನಲ್ಲಿ ಮತ್ತೆ ಅಮೆರಿಕದ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತೇನೆ ಎಂಬ ಭರವಸೆ ನೀಡಿದ್ದ ಟ್ರಂಪ್, ಸೋಮವಾರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ, ಇದೀಗ ಇಡೀ ವಿಶ್ವವೇ ಅಮೆರಿಕದತ್ತ ನೋಡುತ್ತಿದೆ.
ಅಮೆರಿಕ ಅಧ್ಯಕ್ಷರಾಗಿ 78 ವರ್ಷದ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾರತದಿಂದ ಸಚಿವ ಎಸ್. ಜೈಶಂಕರ್, ಉದ್ಯಮಿಗಳಾದ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಕೂಡ ಭಾಗಿಯಾಗಿದ್ದಾರೆ. ವಿಶ್ವದ ಮೂವರು ಶ್ರೀಮಂತ ವ್ಯಕ್ತಿಗಳಾದ ಎಲಾನ್ ಮಸ್ಕ್, ಜೆಫ್ ಬೆಜೋಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ಕೂಡ ಟ್ರಂಪ್ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.