ರಾಜಭವನ ರಾಜಕೀಯ ಪಕ್ಷದ ಕಚೇರಿಯಾಗಬಾರದು:ಡಿಕೆಶಿ

Spread the love

ಬೆಂಗಳೂರು: ರಾಜಭವನ ರಾಜಕೀಯ ಪಕ್ಷದ ಕಚೇರಿಯಾಗಬಾರದು ಎಂಬ ಉದ್ದೇಶದಿಂದ ರಾಜಭವನ ಚಲೋ
ಪಾದಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ನಾಯಕರು ರಾಜಭವನ ಚಲೋ ನಡೆಸಿ, ಕೇಂದ್ರ ಸಚಿವ ಎಚ್. ಡಿ ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ ಹಾಗೂ ಶಶಿಕಲಾ ಜೊಲ್ಲೆ ಅವರ ವಿರುದ್ಧವೂ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವಂತೆ ರಾಜ್ಯಪಾಲ ಥಾವರ್ ಚಂದ್‌ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದ ನಂತರ ‌ಡಿಕೆಶಿ ಮಾಧ್ಯಮದವರೊಂದಿಗೆ ಮಾತನಾಡಿದರು.

ನಾವು ರಾಜಭವನ ಚಲೋ ಹಮ್ಮಿಕೊಂಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಅಲ್ಲ. ಈ ವಿಷಯ ನ್ಯಾಯಾಲಯದಲ್ಲಿದೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ’ ಎಂದು ಒತ್ತಿ ಹೇಳಿದರು.

ರಾಜ್ಯಪಾಲರ ಕಚೇರಿಯು ಒಂದು ಪಕ್ಷದ ಕಚೇರಿಯಾಗಬಾರದು ಎಂಬ ಉದ್ದೇಶದಿಂದ ಈ ರಾಜಭವನ ಚಲೋ ಹಮ್ಮಿಕೊಂಡಿದ್ದು, ರಾಜ್ಯಪಾಲರು ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ. ರಾಜ್ಯಪಾಲರ ಕಚೇರಿ ರಾಜಕೀಯ ಪಕ್ಷದ ಕಚೇರಿ ಆಗಬಾರದು. ಇಲ್ಲಿ ಯಾರೂ ಕೂಡ ಶಾಶ್ವತ ಅಲ್ಲ ಎಂದು ಡಿಕೆಶಿ ತಿಳಿಸಿದರು.

ರಾಜ್ಯಪಾಲರ ಪೀಠ ಪವಿತ್ರವಾದದ್ದು ಅದು ಸಂವಿಧಾನ ರಕ್ಷಿಸುವ ಪೀಠ. ರಾಜ್ಯಪಾಲರ ಕಚೇರಿ ಸರ್ಕಾರವನ್ನು ರಕ್ಷಿಸುವ ಪೀಠವಾಗಿದೆ, ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ನಡೆಯುತ್ತಿದೆ. ಈ ಕಚೇರಿಯಿಂದ ಸರ್ಕಾರ ಅಸ್ಥಿರಗೊಳಿಸುವ ಕೆಲಸ ಆಗಬಾರದು, ಹಾಗಾಗಿ ನಾಲ್ವರ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದೇವೆ. ನಮ್ಮ ಸಚಿವ ಸಂಪುಟದ ವಿಚಾರದ ಬಗ್ಗೆಯೂ ಮನವರಿಕೆ ಮಾಡಿದ್ದೇವೆ. ಎಲ್ಲಾ ವಿಚಾರಗಳಲ್ಲೂ ಪಕ್ಷಾತೀತವಾಗಿ ನಡೆದುಕೊಳ್ಳುವಂತೆ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಮೊದಲು ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಸಚಿವರು, ಶಾಸಕರು ಮತ್ತು ಸಂಸದರು,ನಾಯಕರು ರಾಜ್ಯಪಾಲರ ನಡೆ ಖಂಡಿಸಿ ಧರಣಿ ನಡೆಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣದಲ್ಲಿ ಸಿಎಂ ವಿರುದ್ಧ ತನಿಖೆ ನಡೆಸಲು ಮತ್ತು ಕಾನೂನು ಕ್ರಮ ಜರುಗಿಸಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ. ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ನಡೆಯುತ್ತಿದೆ.