ಬೆಲ್ಜಿಯಂ: ಭಾರತೀಯ ತನಿಖಾ ಸಂಸ್ಥೆಗಳ ಕೋರಿಕೆಯ ಮೇರೆಗೆ ತಲೆಮರೆಸಿಕೊಂಡಿದ್ದ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬಂಧಿಸಲಾಗಿದೆ ಎಂದು ಬೆಲ್ಜಿಯಂ ಫೆಡರಲ್ ಪಬ್ಲಿಕ್ ಸರ್ವಿಸ್ ತಿಳಿಸಿದೆ.
ಮೆಹುಲ್ ಚೋಕ್ಸಿ ಅವರನ್ನು ಏಪ್ರಿಲ್ 12 ರಂದು ಬಂಧಿಸಲಾಗಿದ್ದು, ಭಾರತೀಯ ಕೇಂದ್ರ ತನಿಖಾ ದಳ ಹಾಗೂ ಜಾರಿ ನಿರ್ದೇಶನಾಲಯ ಈಗಾಗಲೇ ಆತನನ್ನು ಬೆಲ್ಜಿಯನಿಂದ ಹಸ್ತಾಂತರಿಸುವಂತೆ ಮನವಿ ಸಲ್ಲಿಸಿದೆ ಎಂದು ಎಫ್ಪಿಎಸ್ ಬಹಿರಂಗಪಡಿಸಿದೆ.
ಮುಂದಿನ ನ್ಯಾಯಾಂಗ ಪ್ರಕ್ರಿಯೆಗಳಿಗಾಗಿ ಅವರನ್ನು ಬಂಧಿಸಲಾಗಿದೆ. ಅವರ ಕಾನೂನು ಸಲಹೆಗಾರರನ್ನು ಸಂಪರ್ಕಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಎಫ್ಪಿಎಸ್ ಹೇಳಿದೆ.
ಪ್ರಕರಣ ಕುರಿತು ಪ್ರಾಷಿಕ್ಯೂಷನ್ ಸೇವೆಗಳು ನಡೆಯುತ್ತಿರುವ ಕಾರಣ, ಈ ಹಂತದಲ್ಲಿ ಯಾವುದೇ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ನ 13,850 ಕೋಟಿ ರೂ. ಸಾಲ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಮೆಹುಲ್ ಚೋಕ್ಸಿ 2018 ಜನವರಿ 2 ರಂದು ಭಾರತದಿಂದ ಪಲಾಯನ ಮಾಡಿದ್ದರು.
ಪಿಎನ್ಬಿಗೆ 13000 ಕೋಟಿ ರೂ. ವಂಚನೆ ಆರೋಪ ಪ್ರಕರಣದಲ್ಲಿ ಮೆಹುಲ್ ಚೋಕ್ಸಿ ಹಾಗೂ ಅವರ ಸೋದರಳಿಯ ನೀರವ್ ಮೋದಿ ಅವರನ್ನು ಕೇಂದ್ರ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಹುಡುಕುತ್ತಿತ್ತು.
65 ವರ್ಷದ ಚೋಕ್ಸಿ ‘ರೆಸಿಡೆನ್ಸಿ ಕಾರ್ಡ್’ ಪಡೆದು ಬೆಲ್ಜಿಯಂನ ಆಂಟ್ವೆರ್ಪ್‌ನಲ್ಲಿ ತನ್ನ ಪತ್ನಿ, ಬೆಲ್ಜಿಯಂನ ಪ್ರಜೆಯಾಗಿರುವ ಪ್ರೀತಿ ಚೋಕ್ಸಿ ಅವರೊಂದಿಗೆ ವಾಸಿಸುತ್ತಿದ್ದರು. ಇದೀಗ ಉದ್ಯಮಿ ಅನಾರೋಗ್ಯ ಮತ್ತು ಇತರ ಕಾರಣಗಳನ್ನು ಉಲ್ಲೇಖಿಸಿ ಜಾಮೀನು ಪಡೆಯಲು ಪ್ರಯತ್ನ ನಡೆಸಿದ್ದಾರೆ.
ಭಾರತದಿಂದ ಪಾಲಾಯಾನ ಮಾಡಿದ್ದ ನೀರವ್ ಮೋದಿ ಯುಕೆ ಜೈಲಿನಲ್ಲಿದ್ದಾರೆ. 2019 ರಲ್ಲಿ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಲಾಗಿದೆ. ನೀರವ್ ಮೋದಿ ಅವರನ್ನು ಹಸ್ತಾಂತರಿಸುವಂತೆ ಭಾರತ ಮನವಿ ಸಲ್ಲಿಸಿದೆ. ಈ ಹಸ್ತಾಂತರ ಪ್ರಕ್ರಿಯೆಯನ್ನು ಪ್ರಶ್ನಿಸಿ ನೀರವ್ ಮೋದಿ ಸಲ್ಲಿಸಿರುವ ಅರ್ಜಿ ಕೋರ್ಟ್ನಲ್ಲಿದೆ.