ಅಜ್ಞಾನದ ಕತ್ತಲ ದೂರ ಮಾಡುವುದೇ ದೀಪಾವಳಿ: ನಾರಾಯಣ ಗೌಡ

Spread the love

ಮೈಸೂರು: ಅಜ್ಞಾನದ ಕತ್ತಲ ದೂರ ಮಾಡಿ ಜ್ಞಾನದ ಬೆಳಕು ಬೀರುವುದೇ ದೀಪಾವಳಿ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣಗೌಡ ತಿಳಿಸಿದರು.

ಮಲೆ ಮಾದೇಶ್ವರ ಸೇವಾ ಸಂಸ್ಥೆ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ನಗರದ ಸಿಟಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ
ಹಣತೆ ವಿತರಿಸುವ ಮೂಲಕ ಬೆಳಕಿನ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೀಪಾವಳಿ ಹಬ್ಬವನ್ನು ದೀಪಗಳನ್ನು ಬೆಳಗಿಸುವ ಮೂಲಕ ಮಾಲಿನ್ಯ ರಹಿತವಾಗಿ ಆಚರಿಸೋಣ ಎಂದು ಮನವಿ ಮಾಡಿದರು.

ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಉಂಟಾಗುತ್ತದೆ. ಪಟಾಕಿಯಿಂದ ಉಂಟಾಗುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಪೌರಕಾರ್ಮಿಕರಿಗೆ ದೊಡ್ಡ ಸವಾಲು. ಪಟಾಕಿ ಸಿಡಿಸುವ ಬದಲು ರಂಗೋಲಿ ಹಾಕಿ ದೀಪ ಬೆಳಗುವ ಮೂಲಕ ದೀಪಾವಳಿ ಆಚರಿಸಿದಲ್ಲಿ ಪ್ರಾಣಿ ಸಂಕುಲಕ್ಕೆ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ಹಾನಿ ಇರುವುದಿಲ್ಲ ಎಂದು ಹೇಳಿದರು.

ಯುವಪೀಳಿಗೆ ಹಸಿರು ದೀಪಾವಳಿ ಆಚರಿಸುವ ಪಣ ತೊಡಬೇಕು ಎಂದು ನಾರಾಯಣಗೌಡ ಮನವಿ ಮಾಡಿದರು.

ಮನೆ-ಮನೆಯಲ್ಲೂ ಪ್ರತಿಯೊಬ್ಬರ ಮನ-ಮನದಲ್ಲೂ ಜ್ಞಾನವೆಂಬ ದೀಪವು ನಿರಂತರವಾಗಿ ಬೆಳೆಯುತ್ತಿರಲಿ ಎಂಬುದೇ ದೀಪಾವಳಿ ಹಬ್ಬದ ಉದ್ದೇಶ

ಹಬ್ಬಗಳ ಹೆಸರೇ ಮನುಷ್ಯನ್ನು ಶ್ರೇಷ್ಠ ಜೀವನ ರೂಪಿಸಿಕೊಳ್ಳಲು ಪ್ರೇರಣೆ ನೀಡುತ್ತದೆ. ಹಬ್ಬಗಳ ಹಿಂದೆ ಉನ್ನತವಾದ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ. ನಮ್ಮ ಹಿರಿಯರು ಪ್ರತಿ ಹಬ್ಬಕ್ಕೂ ಅದಕ್ಕೆ ಸರಿಹೊಂದುವಂತೆ ಒಂದು ಪುರಾಣ, ಪುಣ್ಯ ಕಥೆಯನ್ನು ಬೆಸೆದು ಹಬ್ಬದ ಮೆರಗು ಹೆಚ್ಚಿಸಿದ್ದಾರೆ. ಆದರೆ ಅದು ಕ್ರಮೇಣವಾಗಿ ಆಧ್ಯಾತ್ಮಿಕತೆಯ ಅರ್ಥ ಕಳೆದುಕೊಂಡು ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ ಎಂದು ಬೇಸರ ಪಟ್ಟರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಜಿ. ರಾಘವೇಂದ್ರ,ಮಲೆ ಮಾದೇಶ್ವರ ಸೇವಾ ಸಂಸ್ಥೆ ಅಧ್ಯಕ್ಷ ಮಹಾನ್ ಶ್ರೇಯಸ್, ಎಸ್ ಎನ್ ರಾಜೇಶ್, ಚಾಮರಾಜ ಕ್ಷೇತ್ರದ ಬಿಜೆಪಿ ಸಂಚಾಲಕರಾದ ಎಂ ಪಿ ಸಚಿನ್ ನಾಯಕ ಮತ್ತಿತರರು ಹಾಜರಿದ್ದರು.