ಮೈಸೂರು: ಮೈಸೂರಿನ ಅಧಿದೇವತೆ ಶ್ರೀ ತಾಯಿ ಚಾಮುಂಡೇಶ್ವರಿಯ ಸೇವೆಗಳ ಶುಲ್ಕವನ್ನು ಏಕಾಏಕಿ ಶೇಕಡ 90ರಷ್ಟು ಹೆಚ್ಚಳ ಮಾಡಿರುವುದನ್ನು ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್ ತೀವ್ರವಾಗಿ ಖಂಡಿಸಿದ್ದಾರೆ.

ಹೀಗೆ ಶುಲ್ಕ ಹೆಚ್ಚಳ ಮಾಡಿ ಜನರ ಧಾರ್ಮಿಕ ಆಚರಣೆಯ ಮೇಲೆ ಕಣ್ಣಿಟ್ಟು ಗ್ಯಾರೆಂಟಿ ಯೋಜನೆಗಾಗಿ ಹಣ ಸಂಗ್ರಹಿಸುವ ಸರ್ಕಾರದ ನಡೆ ಸರಿಯಲ್ಲ ಎಂದು ಅವರು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏಕವಾರ ಅಭಿಷೇಕ ಸೇವಾ ಶುಲ್ಕವನ್ನು 300 ರಿಂದ 550 ರೂ ಗೆ ಏರಿಕೆ ಮಾಡಲಾಗಿದೆ, ಸರ್ಕಾರ ಕೂಡಲೇ ಈ ಹಿಂದೆ ಇದ್ದ ಸೇವಾದರಗಳನ್ನೇ ಮುಂದುವರೆಸುವಂತೆ ಎಸ್.ಪ್ರಕಾಶ್ ಪ್ರಿಯದರ್ಶನ್ ಆಗ್ರಹಿಸಿದ್ದಾರೆ.

ಈಗಾಗಲೇ ಗ್ಯಾರೆಂಟಿ ಯೋಜನೆಗಾಗಿ ಅಬಕಾರಿ, ಸಾರಿಗೆ, ವಿದ್ಯುತ್, ನೊಂದಣಿ ಶುಲ್ಕ ಹೀಗೆ ಅನೇಕ ರೀತಿಯ ಶುಲ್ಕವನ್ನು ಹೆಚ್ಚಳ ಮಾಡಿರುವ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗೆ ಹಣ ಪೂರೈಸಲು ಆಗದೆ ಧಾರ್ಮಿಕ ಕ್ಷೇತ್ರಗಳ ಮೇಲೆ ಕಣ್ಣಿಟ್ಟು ಹಣ ಸಂಗ್ರಹಿಸುವ ಏಕೈಕ ಉದ್ದೇಶದಿಂದ ಶೇಕಡ 90ರಷ್ಟು ಶುಲ್ಕ ಹೆಚ್ಚಳ ಮಾಡಿ ಹಿಂದೂ ಸಮಾಜದ ಧಾರ್ಮಿಕ ಆಚರಣೆಗೆ ಧಕ್ಕೆ ತಂದಿರುವುದನ್ನು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.
ತಕ್ಷಣ ಸರ್ಕಾರ ಸೇವಾ ಶುಲ್ಕವನ್ನು ಯಥಾಸ್ಥಿತಿ ಮುಂದುವರಿಸುವಂತೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಒತ್ತಾಯಿಸಿದ್ದಾರೆ.