ಮೈಸೂರು: ಯುವ ಸಮೂಹ ಸರ್ಕಾರಿ ಸೇವೆಗೆ ಬರಬೇಕು. ಸೇವಾ ಮನೋಭಾವ ಬೆಳೆಸಿಕೊಂಡು ನಾಡು- ನುಡಿಯ ಸೇವೆ ಮಾಡಬೇಕು ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಕರೆ ನೀಡಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ನಡೆಯುತ್ತಿರುವ 30 ದಿನಗಳ ಕೆಎಎಸ್ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಲು ನಿಷ್ಟೆ ಇರಬೇಕು.ಅಧಿಕಾರಿಗಳಾದ ಮೇಲೆ ನಿಮ್ಮ ನಿಲುವು ಬದಲಾಗಬಾರದು. ರಾಷ್ಟ್ರೀಯ ಐಕ್ಯತೆ, ಸಮಾನತೆ, ಸಾಮಾಜಿಕ ಕಳಕಳಿಯಲ್ಲಿ ತೊಡಗಿಸಿಕೊಳ್ಳಬೇಕು. ಜನರು ಅಧಿಕಾರಿಗಳ ಮೇಲೆ ವಿಶ್ವಾಸ ಇಟ್ಟಿರುತ್ತಾರೆ. ಜೊತೆಗೆ ನಮಗೆ ಸಹಾಯ ಮಾಡಿದವರಿಗೆ ಕೃತಜ್ಞತೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ನಾವೆಲ್ಲರೂ ಕೂಡ ವ್ಯವಸ್ಥೆಯನ್ನು ಟೀಕಿಸುತ್ತಿದ್ದೇವೆ, ಸ್ಥಳೀಯ ಸಂಸ್ಥೆಗಳನ್ನು ನಿಂದಿಸುತ್ತೇವೆ, ರಸ್ತೆ ಸರಿಯಿಲ್ಲವೆಂದರೆ ಸರ್ಕಾರವನ್ನು ಟೀಕಿಸುತ್ತೇವೆ.ಆದರೆ ನಾವು ವ್ಯವಸ್ಥೆಯೊಳಗೆ ಬಂದಾಗ ನಮ್ಮ ಜವಾಬ್ದಾರಿಯನ್ನು ಮರೆಯಬಾರದು ಎಂದು ಹೇಳಿದರು.
ಉನ್ನತ ಶಿಕ್ಷಣ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿದೆ. ಪದವಿ ಪಡೆದವರೆಲ್ಲ ಯುಪಿಎಸ್‌ಸಿ. ಕೆಪಿಎಸ್‌ಸಿ ಪರೀಕ್ಷೆ ಬರೆಯಬಹುದು. ನಿಮ್ಮಂತ ಯುವ ಸಮೂಹ ಸರ್ಕಾರಿ ಕೆಲಸಕ್ಕೆ ಸೇರಬೇಕು ಪರೀಕ್ಷೆ ಬಗ್ಗೆ ಭಯಬೇಡ. ಸಿದ್ಧತೆ ನಿರಂತರ ಇರಲಿ. ಪ್ರತಿದಿನ ಪತ್ರಿಕೆ ಓದಿ. ಪರೀಕ್ಷಾ ವೇಳೆಯಲ್ಲಿ ಸಮಯ ನಿರ್ವಹಣೆಯ ಬಗ್ಗೆ ಗಮನ ಹರಿಸಿ ಎಂದು ಶಿಲ್ಪಾ ನಾಗ್ ಸಲಹೆ ನೀಡಿದರು.
ಮೈಸೂರು ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ.ಪಿ ಶಿವರಾಜು ಮಾತನಾಡಿ, ಮನೋಧರ್ಮದಿಂದ ಜೀವನದಲ್ಲಿ ಯಶಸ್ಸು ಸಾಧ್ಯ. ಹೀಗಾಗಿ ಎಲ್ಲರೂ ಮನೋಧರ್ಮ ಬೆಳೆಸಿಕೊಂಡು ಜೀವನ ರೂಪಿಸಿಕೊಳ್ಳಿ, ಐಎಎಸ್ ಹಾಗೂ ಕೆಎಎಸ್ ಅಧಿಕಾರಿಯಾಗಬೇಕಾದರೆ ಅದು ನಮ್ಮಿಂದ ಏನನ್ನೊ ಬಯಸುತ್ತಿದೆ ಎಂಬುದನ್ನು ನಾವು ಮನಗಾಣಬೇಕು. ಜೊತೆಗೆ ಅದನ್ನ ಪೂರ್ಣಗೊಳಿಸುವ ಛಲ ವಿಶ್ವಾಸವಿರಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶರಣಪ್ಪ ಹಲಸೆ ಮಾತನಾಡಿ ಪ್ರತಿಯೊಬ್ಬರ ಯಶಸ್ಸಿಗೆ ಪರಿಶ್ರಮ ಇರಬೇಕು, ಜೊತೆಗೆ ನಿಮ್ಮೆಲ್ಲರ ಗೆಲುವಿಗೆ ನೀವೇ ಹೊಣೆಯಾಗುತ್ತೀರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕುಲಸಚಿವ ಕೆ.ಬಿ ಪ್ರವೀಣ, ಡೀನ್ ಗಳಾದ ಡಾ. ಎನ್. ಲಕ್ಷ್ಮಿ ಪ್ರೊ. ರಮಾನಾಥಂನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿಬ್ಬಂದಿಗಳಾದ ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ.ಕೊಪ್ಪಲ್ ಉಪಸ್ಥಿತರಿದ್ದರು.