ಚಾಮರಾಜನಗರ: ಚಾಮರಾಜನಗರ ಪಟ್ಟಣದಲ್ಲಿ ಪ್ರತಿಷ್ಟಾಪಿಸಿರುವ ಶ್ರೀ ವಿದ್ಯಾಗಣಪತಿ ವಿಗ್ರಹದ ವಿಸರ್ಜನಾ ಕಾರ್ಯಕ್ರಮದಲ್ಲಿ ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿಗಳು ಕೆಲ ಕ್ರಮಗಳನ್ನು ಕೈಗೊಂಡಿದ್ದಾರೆ.
ಅಕ್ಟೋಬರ್ ೧೩ರ ವಿಸರ್ಜನಾ ಕಾರ್ಯಕ್ರಮ ಮುಗಿಯುವವರೆಗೆ ವಿಸರ್ಜನಾ ಮೆರವಣೆಗೆ ಸಾಗುವ ಬೀದಿಗಳಲ್ಲಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದ ಸ್ಥಳಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಫ್ಲವರ್ ಬ್ಲಾಸ್ಟಿಂಗ್, ಪೇಪರ್ ಬ್ಲಾಸ್ಟಿಂಗ್, ಪಟಾಕಿ ಎಲೆಕ್ಟ್ರಿಕ್ ಸ್ಪಾರ್ಕರ್, ಇತ್ಯಾದಿಗಳನ್ನು ಸಿಡಿಸದಂತೆ ನಿರ್ಬಂಧಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಆದೇಶ ಹೊರಡಿಸಿದ್ದಾರೆ.
ವಿದ್ಯಾಗಣಪತಿ ವಿಗ್ರಹದ ವಿಸರ್ಜನಾ ಮೆರವಣಿಗೆಯು ಚಾಮರಾಜನಗರ ಪಟ್ಟಣದ ಪ್ರಮುಖ ಬೀದಿಗಳಾದ ಖಡಕ್‌ಪುರ ಮೊಹಲ್ಲಾ-ಅಂಬೇಡ್ಕರ್ ಬಡಾವಣೆ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ರಸ್ತೆ, ದೇವಾಂಗ ೩ನೇ ಬೀದಿ, ನಾಗಪ್ಪ ಶೆಟ್ಟಿ ವೃತ್ತ, ದೊಡ್ಡ ಅಂಗಡಿ ಬೀದಿ, ಗುಂಡ್ಲುಪೇಟೆ ವೃತ್ತ, ಗಾಡಿಖಾನೆ ಮೊಹಲ್ಲಾ ಬೀದಿ, ಮೇಗಲ ಪರಿವಾರ ನಾಯಕರ ಬೀದಿ, ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಮಾರ್ಕೆಟ್ ವೃತ್ತ, ಸಂತೇಮರಹಳ್ಳಿ ವೃತ್ತ, ಆದಿಶಕ್ತಿ ದೇವಾಸ್ಥಾನ, ಬಣಜಿಗರ ಬೀದಿ, ಭ್ರಮರಾಂಭ ಬಡಾವಣೆಯ ೧ನೇ, ೨ನೇ ಕ್ರಾಸ್, ಕುರುಬರ ಬೀದಿ, ಹಳ್ಳದ ಬೀದಿ, ಅಗ್ರಹಾರ ಬೀದಿ, ಪೊಲೀಸ್ ಕಚೇರಿ ರಸ್ತೆ, ಖಾಸಗಿ ಬಸ್ ನಿಲ್ದಾಣ, ವೀರಭದ್ರಸ್ವಾಮಿ ದೇವಸ್ಥಾನ, ಜೈನರ ಬೀದಿ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನದ ಮಾರ್ಗವಾಗಿ ಸಾಗಿ ದೊಡ್ಡ ಅರಸನ ಕೊಳದಲ್ಲಿ ವಿಗ್ರಹ ವಿಸರ್ಜನೆ ಮಾಡಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಅಕ್ಟೋಬರ್ ೧೩ರ ವಿಸರ್ಜನಾ ಕಾರ್ಯಕ್ರಮ ಮುಗಿಯುವವರೆಗೆ ವಿಸರ್ಜನಾ ಮೆರವಣೆಗೆ ಸಾಗುವ ಬೀದಿಗಳಲ್ಲಿ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದ ಸ್ಥಳಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಪ್ಲವರ್ ಬ್ಲಾಸ್ಟಿಂಗ್, ಪೇಪರ್ ಬ್ಲಾಸ್ಟಿಂಗ್, ಪಟಾಕಿ ಎಲೆಕ್ಟ್ರಿಕ್ ಸ್ಪಾರ್ಕರ್, ಇತ್ಯಾದಿಗಳನ್ನು ಸಿಡಿಸದಂತೆ ನಿರ್ಬಂಧಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಆದೇಶ ಹೊರಡಿಸಿದ್ದಾರೆ.